Thursday, June 11, 2020

ಪೂರ್ಣಕುಂಭದ ರಹಸ್ಯ ತಿಳಿಯೋಣ (Poornakumbhada Rahasya Tiliyona)

ಲೇಖಕರು: ವಾದಿರಾಜ. ಪ್ರಸನ್ನ
(ಪ್ರತಿಕ್ರಿಯಿಸಿರಿ lekhana@ayvm.in)

  

ಸಭೆ ಸಮಾರಂಭಗಳಿಗೆ, ದೇವಾಲಯಗಳಿಗೆ  ಹಿರಿಯರು ಆಗಮಿಸಿದಾಗ ಪೂರ್ಣಕುಂಭದ ಸ್ವಾಗತವು ರೂಢಿಯಲ್ಲಿದೆ. ಅದೇಕೆ ? ಬೆಲೆಬಾಳುವ ಚಿನ್ನ, ಬೆಳ್ಳಿಯೇ ಮುಂತಾದ ಬೇರೆ ಪದಾರ್ಥವನ್ನೇಕೆ ಕೊಡುವುದಿಲ್ಲ? ಬಂದವರನ್ನು ಎದುರುಗೊಳ್ಳುವುದು ಹೇಗೆ ? ಮಕ್ಕಳು ಬಂದರೆ "ಚಿನ್ನ", "ಪಾಪು" ಮುಂತಾದ ಮುದ್ದು ಮಾತು, ಮಿಠಾಯಿ, ಬಿಸ್ಕತ್ತಿನಿಂದ  ಸ್ವಾಗತ. ಆಪ್ತ ಬಂಧು ಬಾಂಧವರನ್ನು, ಹೃದಯಸ್ಪರ್ಶಿಯಾಗಿ ಮುಟ್ಟಿ ಕೈ ಹಿಡಿದು ಬರಮಾಡಿಕೊಳ್ಳುತ್ತೇವೆ. ಇತರರನ್ನು ದೂರದಿಂದಲೇ ಕೈ ಮುಗಿದು ಸ್ವಾಗತಿಸುತ್ತೇವೆ. ಸ್ವಾಗತ ಯಾರನ್ನು ಸ್ವಾಗತಿಸುತ್ತೆವೋ ಅವರ ಯೋಗ್ಯತೆಯನ್ನು ಅವಲಂಬಿಸಿರುತ್ತದೆ. ಅಂತೆಯೇ ಸನ್ಯಾಸಿಗಳು, ಜ್ಞಾನಿಗಳು ಆಗಮಿಸಿದರೆ ಅವರ ಯೋಗ್ಯತಾನುಸಾರ  ಪೂರ್ಣಕುಂಭ ಸ್ವಾಗತವನ್ನು ನೀಡುವುದುಂಟು.    

ಪೂರ್ಣಕುಂಭವು ಶುದ್ಧನೀರು ತುಂಬಿದ ಹೊಸ ಕೊಡದಿಂದ ಕೂಡಿರುತ್ತದೆ. ಕುಂಭದ ಮೇಲೆ ಮಾವಿನ ಚಿಗುರೆಲೆ ಮತ್ತು ಹಲಸಿನೆಲೆ, ದರ್ಭಕೂರ್ಚಗಳನ್ನಿಟ್ಟು ಅದರ ಮೇಲೆ ಶಿಖಾಸಹಿತವಾದ ತೆಂಗಿನ ಕಾಯಿಯನ್ನು ಮೇಲ್ಮುಖವಾಗಿ ಇರಿಸಿರುತ್ತಾರೆ. ಮಹರ್ಷಿಹೃದಯವೇದಿಗಳಾದ ಶ್ರೀರಂಗಮಹಾಗುರುಗಳು ಈ ಆಚಾರದ ಹಿಂದಿನ ಮಾರ್ಮಿಕ ವಿಚಾರವನ್ನು ತಿಳಿಸಿಕೊಟ್ಟಿದ್ದಾರೆ. ಕರ್ಮವನ್ನು ಮರ್ಮವರಿತು ಆಚರಿಸಬೇಕೆಂದು ಅವರ ಅಭಿಪ್ರಾಯವಾಗಿತ್ತು. ಪೂರ್ಣಕುಂಭವು ಬ್ರಹ್ಮಜ್ಞಾನಿಯ ಶಿರಸ್ಸನ್ನು ಪ್ರತಿನಿಧಿಸುತ್ತದೆ. ಪೂರ್ಣಕುಂಭದಲ್ಲಿಯೂ ಎರಡು ಕಪೋಲಗಳಿವೆ, ತಲೆ ಮತ್ತು ಕುಂಭ. ಕುಂಭದಲ್ಲಿರುವ ನೀರು 'ರಸೋವೈಸಃ' ಎಂದು ಶ್ರುತಿಮಾತೆ ಹೇಳುವಂತೆ, ಪರಬ್ರಹ್ಮಪರಮಾನಂದರಸವನ್ನೇ ಪ್ರತಿನಿಧಿಸುತ್ತದೆ. ಕಾಮಕ್ರೋಧಾದಿ ಬಗ್ಗಡ ಗುಣವಿಲ್ಲದ ಮತ್ತು ತಾಪತ್ರಯಗಳ ಉಷ್ಣತೆಯಿಲ್ಲದಿರುವಿಕೆಯನ್ನು ಸೂಚಿಸುತ್ತದೆ. ಪೂರ್ಣಕುಂಭದ ಮೇಲೆ ಮೇಲ್ಮುಖವಾಗಿ ಶಿಖೆಸಹಿತವಾಗಿರಿಸಿರುವ ತೆಂಗಿನಕಾಯಿಯು ಬ್ರಹ್ಮಜ್ಞಾನಿಯ ಶಿಖೆಯನ್ನು ಸೂಚಿಸುತ್ತದೆ. ತೆಂಗಿನಕಾಯಿಯ ಮೂರು ಕಣ್ಣುಗಳು, ಜ್ಞಾನಿಯ ಹೊರ ಎರಡು ಕಣ್ಣುಗಳು ಮತ್ತು ಹುಬ್ಬುಗಳ ಮಧ್ಯೆ ಜ್ಞಾನದೃಷ್ಟಿಯಂಬ ಅಗೋಚರ ಮೂರನೇ ಕಣ್ಣನ್ನು ಸೂಚಿಸುತ್ತದೆ. ತೆಂಗಿನಕಾಯಿಯ ತಲೆಯಲ್ಲಿರುವ ಕಣ್ಣಿನ ಒಳಗೆ ಮಧ್ಯದಲ್ಲಿರುವ ಶಿವಲಿಂಗಾಕಾರದ ಸಣ್ಣ ಹೂವು ಜ್ಞಾನಿಗಳಿಗೆ ಹುಬ್ಬುಗಳ ಮಧ್ಯೆ ಗೋಚರವಾಗುವ ಜ್ಯೋತಿರ್ಮಯವಾದ ದಿವ್ಯ ಲಿಂಗವನ್ನು ಪ್ರತಿನಿಧಿಸುತ್ತದೆ. ಇನ್ನು ಚಿಗುರು ಹಲಸಿನೆಲೆ, ಮಾವಿನೆಲೆಯು ಆಧ್ಯಾತ್ಮಿಕ ಮತ್ತು ಭೌತಿಕ ಸೃಷ್ಟಿಯನ್ನು ಸೂಚಿಸುತ್ತದೆ. ದರ್ಭಕೂರ್ಚವು ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣರಾದ ತ್ರಿಮೂರ್ತಿಗಳನ್ನು ಪ್ರತಿನಿಧಿಸುತ್ತದೆ. ದರ್ಭೆಯ ದರ್ಶನ-ಸ್ಪರ್ಶಗಳೆರಡೂ ಆಧ್ಯಾತ್ಮಿಕ, ಭೌತಿಕ ಪವಿತ್ರತೆಯನ್ನುಂಟುಮಾಡುವುದು.

ಪೂರ್ಣಕುಂಭವು ಪರಿಪೂರ್ಣವಾಗಿ " ಓಂ ಪೂರ್ಣಮದಃ ಪೂರ್ಣo " ಎಂದು ಶೋಭಿಸುತ್ತಿರುವ ಪರಮಾತ್ಮನನ್ನು ನೇರವಾಗಿ ಸಾರುತ್ತಿದೆ. ಬ್ರಹ್ಮಾನಂದವನ್ನು ಅನುಭವಿಸುತ್ತಾ ಮೌನವಾಗಿ, ನಿಶ್ಚಲನಾಗಿರುವ ಬ್ರಹ್ಮಜ್ಞಾನಿಗೆ ಕನ್ನಡಿಯನ್ನು ತೋರಿಸುವರೀತಿಯಲ್ಲಿದೆ. ಜ್ಞಾನಿಗಳ ಶಿರವು ಕುಂಭದಂತೆ ಊರ್ಧ್ವಮುಖವಾಗಿದ್ದರೆ, ಪಾಮರರ ತಲೆಯು ಅಧೋಮುಖವಾಗಿ ನೀರು ಕೆಳಕ್ಕೆ ಸೋರುವ ರಂಧ್ರಗಳಿಂದ ಕೂಡಿರುತ್ತದೆ. ಆದರೆ ಜ್ಞಾನಿಯು ಸಮಾಧಿಯಲ್ಲಿರುವುದರಿಂದ ಈ ರಂಧ್ರಗಳು ಮುಚ್ಚಿಹೋಗಿ ಪ್ರವೃತ್ತಿಯು ಊರ್ದ್ವಮುಖವಾಗಿರುತ್ತದೆ. ಬ್ರಹ್ಮಜ್ಞಾನಿಯ ಶಿರಸ್ಸು ಮತ್ತು ಜಾಲಂಧರ ಬಂಧದಿಂದ ಕೂಡಿದ ಕಂಠವನ್ನು ಹೋಲುವ ಈ ಪೂರ್ಣಕುಂಭವನ್ನು ಹೃದಯದ ನೇರದಲ್ಲಿ ಅಥವಾ ಶಿರಸ್ಸಿನ ಮೇಲಿರಿಸಿ ಸ್ವಾಗತಿಸುತ್ತಾರೆ. ಆದ್ದರಿಂದ ಪೂರ್ಣಕುಂಭದ ಸ್ವಾಗತ ನಿಜಾರ್ಥದಲ್ಲಿ ಕೇವಲ ಜ್ಞಾನಿಗಳಿಗೆ ಮಾತ್ರ ಸೂಕ್ತ. ಅದನ್ನು ಜ್ಞಾನಿಗಳಲ್ಲದವರಿಗೆ ನೀಡಿದರೆ ಕೇವಲ ಅದರ ಅಪಹಾಸ್ಯವಾಗುತ್ತದೆ. ಪೂರ್ಣಕುಂಭದ ಈ ಗಂಭೀರವಾದ ಮಹತ್ವವನ್ನು ಅರಿತು ವ್ಯವಹರಿಸುವಂತಾಗಲಿ.

ಸೂಚನೆ: 10/06/2020 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.