Tuesday, June 23, 2020

ಧರ್ಮೋ-ರಕ್ಷತಿ-ರಕ್ಷಿತಃ ! (Dharmo-Rakshati-Rakshitah!)

ಲೇಖಕರು : ಡಾII ಮೋಹನ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)ರ್ಮಪಾಲ ಮತ್ತು ಧನಪಾಲ ಕಾಶೀರಾಜ್ಯದ ಪ್ರಖ್ಯಾತ ಶ್ರೇಷ್ಠಿಗಳು. ಉತ್ತರ-ದಕ್ಷಿಣಪಥದಲ್ಲಿ ಸಾಗಿ ದೂರರಾಜ್ಯಗಳಲ್ಲಿ ವ್ಯಾಪಾರ ನಡೆಸುತ್ತಿದ್ದರು. ಧರ್ಮಪಾಲನೊಮ್ಮೆ ವ್ಯಾಪಾರಿಗಳ ತಂಡ, ಸಶಸ್ತ್ರ ಕಾವಲುಗಾರರು, ಮತ್ತು ತುಂಬಿದ ಸಾವಿರಾರು ಎತ್ತಿನಬಂಡಿಗಳಜೊತೆ  ವ್ಯಾಪಾರಕ್ಕಾಗಿ ಹೊರಟ. ಧನಪಾಲ ಆಗಲೇ ಕೆಲವು ದಿನಗಳ ಹಿಂದೆಯೇ  ತನ್ನತಂಡದೊಡನೆ ಹೊರಟಿದ್ದ. ಅನೇಕ ದಿನಗಳನಂತರ ಧರ್ಮಪಾಲನು ವಿಸ್ತಾರವಾದ ಮರುಭೂಮಿಯನು ಪ್ರವೇಶಿಸತೊಡಗಿದನು. ಮುಂಜಾಗರೂಕತೆಯಿಂದ ವಾರಕ್ಕೆ ಸಾಕಾಗುವಷ್ಟು ನೀರು ಶೇಖರಿಸಿಕೊಂಡರು. ಮುನ್ನಡೆಯುತ್ತ ವೃಧ್ಧ ವ್ಯಕ್ತಿಯೊಬ್ಬರು ಕಾಣಿಸಿಕೊಂಡರು. "ದಯಮಾಡಿ ನನ್ನನೂ ನಿಮ್ಮೊಡನೆ ಕರೆದೊಯ್ಯಿರಿ. ನನ್ನಿಂದಾದ ಸಹಾಯವನ್ನು ಮಾಡುತ್ತೇನೆ "ಎಂದರು. ಧರ್ಮಪಾಲನ ಅನುವರ್ತಿಗಳು ಗೊಳ್ಳನೆ ನಕ್ಕರು. "ಅಜ್ಜ ! ಸ್ವಂತರಕ್ಷಣೆಗೆ ದೊಣ್ಣೆ ಎತ್ತುವ ಶಕ್ತಿಯಿಲ್ಲ, ನಮ್ಮನ್ನೇನು ಕಾಪಾಡುತ್ತೀಯೆ ? " ಆದರೆ ಧರ್ಮಪಾಲನ ಮನಸ್ಸು ಅನುಕಂಪದಿಂದ ಕರಗಿತು. ಗೌರವದಿಂದ ಕರೆತಂದು ವೃದ್ಧರನ್ನು ಪಕ್ಕದಲ್ಲೇ ಬಂಡಿಯಲ್ಲಿ ಕುಳ್ಳಿರಿಸಿಕೊಂಡನು. ಉರಿಬಿಸಿಲಲ್ಲಿ ಮುಂದುವರೆಯುತ್ತ, ಎದುರಿನಿಂದ ಬರುತ್ತಿದ್ದ ಪ್ರಯಾಣಿಕರ ಗುಂಪೊಂದು ಕಂಡುಬಂದಿತು. ಅವರ ಬಟ್ಟೆಗಳು ನೆನೆದಿದ್ದವು. ಅವರು ಮಾತನಾಡುತ್ತಿರುವುದು ಕೇಳಿಬಂತು "ಅಬ್ಬಾ ಎಷ್ಟು ಇಂಪಾದ ನೀರಿನ ಚಿಲುಮೆ. ಪ್ರಯಾಣಿಕರಿಗೆ ವರವೇ ಸರಿ ! ". ಇದನ್ನು ಕೇಳಿದ ಧರ್ಮಪಾಲನ ಅನುವರ್ತಿಗಳು "ಮುಂದೆ ಚಿಲುಮೆ ಇದ್ದರೆ, ನೀರನ್ನು ಹೊರುವುದೇತಕ್ಕೆ.ಇದರಿಂದಾಗಿ ಪ್ರಯಾಣ ನಿಧಾನವಾಗುತ್ತಿದೆ " ಎಂದರು. ಧರ್ಮಪಾಲನಿಗೂ ಸರಿಯೆಂದನ್ನಿಸಿದರೂ, ಪಕ್ಕದಲ್ಲಿ ಕುಳಿತಿದ್ದ ಅಜ್ಜ "ನಂಬಬೇಡಿ ಶ್ರೇಷ್ಠಿ !  ಬಾಯಾರಿಕೆಯಿಂದ ಬಳಲಿ ದುರ್ಬಲರಾದ ಪ್ರಯಾಣಿಕರನ್ನು ಅಪಹರಿಸಲು ಕಾಯುತ್ತಿರುವ ಮೋಸಗಾರರಿವರು !". ಧರ್ಮಪಾಲನಿಗೆ ಸಂದಿಗ್ಧ. ವೃದ್ಧನ ಮಾತು ತಳ್ಳಿಹಾಕಲಾರದೆ, ಹಾಗೆಯೇ ಮುಂದುವರೆಯಲು ಆದೇಶಿಸಿದ. ಇತರರು "ಛೆ !'" ನಾವೂ ಧನಪಾಲನ ತಂಡದಲ್ಲೇ ಹೋಗಬೇಕಿತ್ತೆಂದು ಗೊಣಗಿದರು. ಒಂದೆರಡು ದಿನಗಳ ಪ್ರಯಾಣವಾದರೂ ಚಿಲುಮೆ ಕಾಣಲಿಲ್ಲ. ಬದಲಾಗಿ ಕಂಡದ್ದು, ನಿರ್ಗತಿಕರಾಗಿ ಬಿದ್ದಿದ್ದ ಧನಪಾಲನ ತಂಡ ! "ಅಜ್ಜ ನಿಮ್ಮ ಮಾತು ಸತ್ಯ, ಹೇಗೆ ತಿಳಿಯಿತು ನಿಮಗೆ ?" ಎಂದುಕೇಳಲಾಗಿ "ಹತ್ತಿರದಲ್ಲಿ ಚಿಲುಮೆಯಿದೆ ಎಂಬ ತೋರಿಕೆಗೆ ಬಟ್ಟೆಗಳು ಒದ್ದೆಮಾಡಿಕೊಂಡಿದ್ದರಾದರೂ, ಆಕಾಶದಲ್ಲಿ ಒಂದು ಪಕ್ಷಿಯೂ ಕಾಣಲಿಲ್ಲ. ಸಂಶಯದಿಂದ ಅವರ ಕಂಗಳನ್ನು ಗಮನಿಸಿದಾಗ, ಅವರ ದೌಷ್ಟ್ಯ ಬಯಲಾಯಿತು"

ಕಾಶೀ ಕ್ಷೇತ್ರವೇ ನಮ್ಮ ಶರೀರ. ಇಂದ್ರಿಯಗಳ ಮೂಲಕ ವ್ಯಾಪಾರ ನಡೆಸುತ್ತೇವೆ. ಹೊರವ್ಯಾಪಾರ ಕ್ಷೇತ್ರವು ಮರುಭೂಮಿಯಂತೆ. ಒಳಕ್ಷೇತ್ರದಲ್ಲಿ ಅಮೃತಮಯವಾದ ನೀರುಂಟು. ಇಂದ್ರಿಯಲಾಲಸೆ ಮರೀಚಿಕೆಯನ್ನುಂಟುಮಾಡಿ, ಭ್ರಮೆಗೊಳಿಸುತ್ತದೆ. ವ್ಯಾಪಾರದಲ್ಲಿ ಧನ-ಬಲಗಳಿಂದ ಕೂಡಿದ ಧನಪಾಲರ ಸಂಗವನ್ನು ಸಹಜವಾಗಿಯೇ ಬಯಸುತ್ತೇವೆ. ಅಮೃತವನ್ನು ಚೆಲ್ಲಿ ಇಂದ್ರಿಯಗಳು ತೋರಿಸುವ ಮರೀಚಿಕೆಗೆ ಮೋಸಹೋಗಿ ನಿಜವಾದ ಧನವನ್ನು ಕಳೆದುಕೊಳ್ಳುತ್ತೇವೆ.  ವಯೋವೃದ್ಧನೂ  ಜ್ಞಾನವೃದ್ಧನೂ ಆದ ಧರ್ಮವನ್ನು ದುರ್ಬಲನೆಂದು ತಿರಸ್ಕರಿಸುತ್ತೇವೆ. ಧರ್ಮವು  ಸತ್ಯವನ್ನು ರಕ್ಷಿಸಿ ನಮಗೆ ತಿಳಿಯಪಡಿಸುತ್ತದೆ. ನೋಡುವ ಶಕ್ತಿಯೇ ಕಣ್ಣಿನ ಧರ್ಮ, ಕೇಳುವುದು ಕಿವಿಯ ಧರ್ಮ. ಅಂತೆಯೇ ಭ್ರಮೆಗೊಳಗಾಗದೆ ಒಳಸತ್ಯವನ್ನು ಅರಿಯುವುದು ಆತ್ಮಧರ್ಮ. ಧರ್ಮವನ್ನು ರಕ್ಷಿಸಿಕೊಂಡರೆ, ಒಳಬೆಳಕನ್ನು ತೋರಿ ರಕ್ಷಿಸುತ್ತದೆ. ಇಂದ್ರಿಯಗಳನ್ನು ಹತೋಟಿಯಲ್ಲಿಡುತ್ತದೆ. ಅಂತಹ ಧರ್ಮವನ್ನು ಪಾಲಿಸುವ ಧರ್ಮಪಾಲ ಎಂದೂ ಸುರಕ್ಷಿತ.  "ಧರ್ಮವನ್ನು ರಕ್ಷಿಸಿದವರನ್ನು ಧರ್ಮವು ರಕ್ಷಿಸುತ್ತದೆ" ಎಂಬ ಈ ತತ್ತ್ವವನ್ನು ಶ್ರೀರಂಗ ಮಹಾಗುರುಗಳು ಎತ್ತಿ ಹೇಳುತ್ತಿದ್ದರು.

ಸೂಚನೆ: 23/06/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.