Saturday, June 6, 2020

ರಾಮಾಯಣದಲ್ಲಿ ಶೃಂಗಾರ ರಸ (Ramayanadalli Srungara Rasa)

ಲೇಖಕರು: ಡಾII ನಂಜನಗೂಡು ಸುರೇಶ್ 
(ಪ್ರತಿಕ್ರಿಯಿಸಿರಿ lekhana@ayvm.in)



ನವರಸಗಳಲ್ಲಿ ಪ್ರಥಮಸ್ಥಾನ ಶೃಂಗಾರರಸಕ್ಕೆ.  ರತಿ ಇದರ ಸ್ಥಾಯಿಭಾವ.  ಈ ರಸದ ಆವಿರ್ಭಾವಕ್ಕೆ ಜೀವಗಳೆರಡರ ಪರಸ್ಪರ ಮಾನಸಿಕಮಿಲನ ಅತ್ಯಾವಶ್ಯಕ. ಶ್ರೀಮದ್ರಾಮಾಯಣದಲ್ಲಿ, ಸೂರ್ಯವಂಶದಲ್ಲಿ ದಿವಿಯಿಂದ ಅವತರಿಸಿ ಬಂದ ಶ್ರೀರಾಮನಿಗೆ ಜ್ಞಾನಿಶ್ರೇಷ್ಠನಾದ ಜನಕನ ಪ್ರೀತ್ಯತಿಶಯದಿಂದ ಬೆಳೆದ ಭುವಿಪೆಣ್ಣಾದ ಸೀತಾದೇವಿಯೊಡನೆ ವಿವಾಹವೇ ಶೃಂಗಾರರಸದ ಆವಿರ್ಭಾವಕ್ಕೆ ನಾಂದಿ.  ರತ್ನವು ಕಾಂಚನದೊಡನೆ ಸಮಾಗಮವನ್ನು ಹೊಂದಿದಂತೆ ಇವರಿಬ್ಬರ ಸಮಾಗಮ.

ಧೀರೋದಾತ್ತನಾಯಕನ ಲಕ್ಷಣಗಳಾದ ವಿದ್ಯೆ, ವಿನಯ, ವಿವೇಕ, ಧೃತಿ, ಕ್ಷಮೆ, ಸ್ಥೈರ್ಯ, ಗಾಂಭೀರ್ಯ ಮುಂತಾದಗುಣಗಳಿಂದ ಕೂಡಿದ್ದ ಶ್ರೀರಾಮ ಲೋಕಪ್ರಿಯತೆಯನ್ನು ಗಳಿಸಿದ್ದ.  ಪ್ರಜೆಗಳ ಬಾಯಲ್ಲಿ ಯಾವಾಗಲೂ ಶ್ರೀರಾಮನ ಮಾತೇ. ತನ್ನ ಚರಿತವನ್ನು ರಕ್ಷಿಸಿಕೊಂಡು, ತನ್ನವರನ್ನೂ ಮತ್ತು ತನ್ನ ಪ್ರಜೆಗಳನ್ನೂ ರಕ್ಷಿಸುತ್ತಾ, ಧರ್ಮಮಾರ್ಗದಲ್ಲಿ ನಿರತನಾದವನು ಶ್ರೀರಾಮ.
ವಿವಾದವಾಗಲೀ ವಿವಾಹವಾಗಲೀ ಸಮರೊಡನೆಯೇ ಶೋಭಿಸುತ್ತದೆ ಎಂಬ ನಾಣ್ಣುಡಿಯಂತೆ, ವಿನಯ, ಆರ್ಜವಾದಿಗಳಿಂದ ಕೂಡಿ, ಗೃಹಕರ್ಮಪರಳಾಗಿ  ಮತ್ತು ಪತಿವ್ರತೆಯಾಗಿ, ರೂಪ-ಗುಣ-ರಸಗಳನ್ನು ಶುದ್ಧರೂಪದಲ್ಲಿ ಹೊಂದಿದ್ದ ಸೀತಾದೇವಿ ಶ್ರೀರಾಮನಿಗೆ ಎಲ್ಲಾ ವಿಧದಲ್ಲೂ ಅನುರೂಪಳು ಮತ್ತು ಅನುಕೂಲಳು. 'ರಾಘವನು ವೈದೇಹಿಯನ್ನೂ, ವೈದೇಹಿಯು ಶ್ರೀರಾಮನನ್ನು ಪರಸ್ಪರಹೊಂದುವುದಕ್ಕೆ ಅರ್ಹರು' ಎಂಬ ಆದಿಕವಿಯ ಮಾತೇ ಇದಕ್ಕೆ ಸಾಕ್ಷಿ. ಸೀತೆಯು ಸಾಕ್ಷಾತ್ ಲಕ್ಷ್ಮೀಸ್ವರೂಪಳೇ.  ವಿಶಿಷ್ಟವಾದ ವಸ್ತುವಿನೊಡನೆ ಮತ್ತೊಂದು ವಿಶಿಷ್ಟವಾದ ವಸ್ತುವಿನ ಸಂಗಮವು ಉತ್ತಮವೇ ಅಲ್ಲವೇ?  ಇಂತಹವರಲ್ಲಲ್ಲವೇ ಶೃಂಗಾರವು ಶೋಭಿಸುವುದು ? 'ಸ್ತ್ರೀಯು ಪುರುಷನ ಆತ್ಮಕ್ರೀಡೆಗೂ, ಧರ್ಮರತಿಗೂ ಸಹ ಒಂದು ಸುಂದರವೂ, ಮಂಗಳವೂ ಆದ ಗೃಹವಾಗಿದ್ದಾಳೆ' ಎಂಬ ಶ್ರೀರಂಗಮಹಾಗುರುವಿನ ಮತು ಇಲ್ಲಿ ಸ್ಮರಣಾರ್ಹ.  

ಆನುರೂಪ್ಯವಿಲ್ಲದಿದ್ದರೆ ಶೃಂಗಾರವು ಶೋಭಿಸಲಾರದು.  ಶ್ರೀರಾಮನನ್ನು ಕಾಮಿಸಿ ಬಂದ ಶೂರ್ಪಣಖಿ ಇದಕ್ಕೊಂದು ಉತ್ತಮ ನಿದರ್ಶನ. ಶ್ರೀರಾಮ ಶೂರ್ಪಣಖಿಯರಲ್ಲಿನ ಪರಸ್ಪರ ವಿರುದ್ಧಗುಣಗಳನ್ನು ಆದಿಕವಿಗಳು, ' ಸುಮುಖನನ್ನು ದುರ್ಮುಖಿಯು, ವೃತ್ತಮಧ್ಯನನ್ನು ಲಂಬೋದರಿಯು, ವಿಶಾಲಾಕ್ಷನನ್ನು ವಿರೂಪಾಕ್ಷಿಯು, ಸುಕೇಶನನ್ನು ತಾಮ್ರಕೇಶಿಯು, ಪ್ರೀತಿರೂಪನನ್ನು ವಿರೂಪಿಯು, ಸುಸ್ವರನನ್ನು ಭೈರವಸ್ವರಳು, ತರುಣನನ್ನು ವೃದ್ಧೆಯು, ನ್ಯಾಯವೃತ್ತನನ್ನು ದುರ್ವೃತ್ತೆಯು, ಪ್ರಿಯದರ್ಶನನನ್ನು, ಅಪ್ರಿಯದರ್ಶನಳು' ಕಾಮಿಸಿಬಂದಳು ಎಂದು  ಬಣ್ಣಿಸಿದ್ದಾರೆ.  ಇದು ರಸಾಭಾಸವಲ್ಲದೇ ಮತ್ತೇನು ?  
ಇದನ್ನರಿತಾಗಲೇ ನಮಗೆ ಶ್ರೀಸೀತಾರಾಮರ ಆನುರೂಪ್ಯವು ಮತ್ತು ಅನನ್ಯದಾಂಪತ್ಯಭಾವವು ಅರ್ಥವಾಗುವುದು.  ಸೂರ್ಯನಿಂದ ಕಿರಣಗಳನ್ನು ಮತ್ತು ಚಂದ್ರನಿಂದ ಚಂದ್ರಿಕೆಯನ್ನು ಹೇಗೆ ಬೇರ್ಪಡಿಸಲಾಗುವುದಿಲ್ಲವೋ, ಹಾಗೆಯೇ ಶ್ರೀರಾಮನಿಂದ ಸೀತೆಯನ್ನಾಗಲೀ, ಸೀತೆಯಿಂದ ಶ್ರೀರಾಮನನ್ನಾಗಲೀ ಬೇರ್ಪಡಿಸಲು ಸಾಧ್ಯವೇ?

ವಿವಾಹವಾದ ನಂತರ ಕೆಲವರ್ಷಗಳು ಅಯೋಧ್ಯೆಯಲ್ಲಿಯೂ ಆನಂತರ ಪಿತೃವಾಕ್ಯಪರಿಪಾಲನೆಗೆಂದು ಕಾಡಿಗೆ ಹೋದ ಶ್ರೀಸೀತಾರಾಮರು ಅನ್ಯಾದೃಶವಾದ ದಾಂಪತ್ಯವನ್ನು ಹೊಂದಿದ್ದವರು.  ತ್ರಿಕರಣದಿಂದ ಒಬ್ಬರನ್ನೊಬ್ಬರು ಭಾವಿಸಿದ್ದ ಇವರ ದಾಂಪತ್ಯ ಎಲ್ಲರಿಂದಲೂ ಅನುಕರಣಯೋಗ್ಯ.

ಸೂಚನೆ:  06/06/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.