Sunday, June 7, 2020

ಪ್ರಾತ:ಸ್ಮರಣೀಯ ಶ್ರೀ ರಾಮಭದ್ರಾಚಾರ್ಯರು (Pratasmaraniya Sri Ramabhadracharyaru)

ಸಂಗ್ರಾಹಕರು : ಶ್ರೀ ಸುಬ್ರಹ್ಮಣ್ಯ ಸೋಮಯಾಜಿ
  (ಪ್ರತಿಕ್ರಿಯಿಸಿರಿ lekhana@ayvm.in
 
ಪೂಜ್ಯ ಶ್ರೀ ರಾಮಭದ್ರಾಚಾರ್ಯರು
    ಧನ್ಯಜೀವಿತದ ಕಾಲ1926 ರಿಂದ 2008.   

ಕಾಡಿನಲ್ಲಿ ಎಷ್ಟೋ ಹೂವುಗಳು ಅರಳುತ್ತವೆ. ಅರಳಿ ಬಾಡಿ ಉದುರಿಹೋಗುತ್ತವೆ. ಅವನ್ನು ಯಾರು ಲೆಕ್ಕಿಸುತ್ತಾರೆ? ಆದರೆ ಗಜೇಂದ್ರನು ಶ್ರೀಹರಿಯ ಪೂಜೆಗೆ ಕಿತ್ತು ಅರ್ಪಿಸಿದ ಹೂವಿನ ಜೀವನ ಅದೆಷ್ಟು ಧನ್ಯ! ಪಾವನ ! ಈ ಸಾಲುಗಳು ನೆನಪಾಗಲು ಕಾರಣ, ಭಗವಂತನ ಸೇವೆಗೆಂದೇ ಭುವಿಗೆ ಬಂದ ಜೀವನ ಪುಷ್ಪವೊಂದನ್ನು ನನ್ನ ಜೀವಿತಕಾಲದಲ್ಲಿ ನೋಡುವಂತಾದುದು. ಅದೇ ಶ್ರೀ ರಾಮಭದ್ರಾಚಾರ್ಯರ ಜೀವನ ಸುಮ. ಹುಟ್ಟಿದ್ದು ಚೆನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಎಂಬ ಗ್ರಾಮದಲ್ಲಿ, ಪಾಲ್ಗುಣ ಕೃಷ್ಣ ತ್ರಯೋದಶಿ ದಿನಾಂಕ ೯-೪-೧೯೨೬ ರಂದು. ಅತ್ಯಂತ ಸಂಪ್ರದಾಯಸ್ಥ ಶ್ರೀವೈಷ್ಣವ ಬ್ರಾಹ್ಮಣ ಕುಟುಂಬದಲ್ಲಿ ಜನನ. ತಂದೆ ಶ್ರೀ ಶ್ರೀನಿವಾಸ ರಾಘವಾಚಾರ್ಯರು, ತಾಯಿ ಶ್ರೀಮತಿ ಶ್ರೀರಂಗನಾಯಕಮ್ಮನವರು. ವೇದಾಧ್ಯಯನ, ಅಧ್ಯಾಪನಗಳೇ ಜೀವನ ಧ್ಯೇಯವಾಗಿರುವ ಕುಟುಂಬ. ನಾಲ್ವರು ಸೋದರರು ನಾಲ್ವರು ಸೋದರಿಯರೊಂದಿಗಿನ ತುಂಬು ಕುಟುಂಬ ಶ್ರೀ ರಾಮಭದ್ರಾಚಾರ್ಯರದು. ಬಾಲ್ಯದಲ್ಲಿ ತಮ್ಮ ತಂದೆಯವರಿಂದಲೇ ವೇದಾಧ್ಯಯನ ಮಾಡಿದರು.ನಂತರ ಪ್ರಾಚೀನ ಮತ್ತು ನವೀನ ನ್ಯಾಯ ಶಾಸ್ತ್ರಗಳಲ್ಲಿ, ಪೂರ್ವ ಮೀಮಾಂಸಾ ಮತ್ತು ಅಲಂಕಾರ ಶಾಸ್ತ್ರಗಳಲ್ಲಿ ವಿದ್ವತ್ ಪದವಿಯನ್ನು ಗಳಿಸಿದ್ದಷ್ಟೇ ಅಲ್ಲದೇ ಆ ಎಲ್ಲಾ ವಿಷಯಗಳ ತಲಸ್ಪರ್ಶಿ ಜ್ಞಾನವನ್ನು ಸಂಪಾದಿಸಿದ್ದರು. ಶ್ರೀಮನ್ಮಹಾರಾಜಾ ಕಾಲೇಜು ಮೈಸೂರಿನಲ್ಲಿ ಸುಮಾರು ಮೂರು ದಶಕಗಳ ಕಾಲ ನಿರಂತರ ಸಾವಿರಾರು ವಿದ್ಯಾರ್ಥಿಗಳಿಗೆ ಶಾಸ್ತ್ರಪಾಠ ಮಾಡಿದ್ದಾರೆ. ಇವೆಲ್ಲವೂ ಅವರ ವಿದ್ಯಾಭ್ಯಾಸ ಮತ್ತು ವೃತ್ತಿಗೆ ಸಂಬಂಧಿಸಿದ ವಿಷಯಗಳು. ಇದಲ್ಲದೇ ಇವರು ನಿವೃತ್ತರಾದ ನಂತರ ಮೇಲುಕೋಟೆಯ ಸಂಶೋಧನಾ ಸಂಸ್ಥೆಯಲ್ಲಿ ರಚಿಸಿದ ಶ್ರೀ ಭಾಷ್ಯ ಟಿಪ್ಪಣಿ ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿವೆ. ಅಷ್ಟಾಂಗಯೋಗ ವಿಜ್ಞಾನಮಂದಿರದಿಂದ ಪ್ರಕಾಶಿತವಾದ ಇಡೀ ನಮ್ಮ ಸಂಸ್ಕೃತಿಯ ಸಾರ ಸಂಗ್ರಹವಾದ "ತತ್ತ್ವಾರ್ಥ ಸಾಹಸ್ರಿ", ಶ್ರೀರಂಗಮಹಾಗುರುಗಳು ತಮ್ಮ ಪ್ರವಚನಗಳಲ್ಲಿ ಉದ್ಧರಿಸಿದ ಅನೇಕ ಶ್ರುತಿ ವಾಕ್ಯಗಳು, ಸ್ತೋತ್ರ ಸಾಹಿತ್ಯಗಳ ಭಾವಾರ್ಥ "ಶ್ರೀ ಗುರುಹೃದಯ ಮತ್ತು ಆರ್ಷಸಾಹಿತ್ಯ" ಗ್ರಂಥಗಳು, ಸನಾತನ ಭಾರತ ಭಾರತೀ ಮಹಾ ವಿದ್ಯಾಲಯ ಮೈಸೂರಿನಿಂದ ಪ್ರಕಾಶಿತವಾದ "ಉದಕ ಶಾಂತಿ ಮಂತ್ರಾಃ" "ಮಂತ್ರಾರ್ಥ ಪ್ರಕಾಶ"-  ಎರಡು ಭಾಗಗಳು, ಮತ್ತು "ಉಪನಿಷತ್ ಭಾವಪ್ರಕಾಶ" ಎಂಬ ಹತ್ತು ಉಪನಿಷತ್ತುಗಳ ವಿಸ್ತೃತವಾದ ವಿವರಣ ರೂಪದ ಪೂಜ್ಯರ ಕೃತಿಗಳು ಅವರ ವಿದ್ಯಾಸಂಪತ್ತಿಗೆ ಸಾಕ್ಷಿಗಳಾಗಿವೆ.

ಶ್ರೀರಾಮಭಾದ್ರಾಚಾರ್ಯರಿಗೆ ಐವತ್ತರ ದಶಕದಲ್ಲಿ ಶ್ರೀರಂಗಮಹಾಗುರುಗಳ ಅನುಗ್ರಹವಾಯಿತು. ಅದರ ನಂತರ ಅವರ ಜೀವನವಾಹಿನಿಯ ದಿಕ್ಕು ಬದಲಾಯಿತು. ಭಾರತೀಯ ಸಂಸ್ಕೃತಿ ವಾಹಿನಿಯು ತಾನು ಪ್ರವಹಿಸಿದಲ್ಲೆಲ್ಲಾ ಜೀವನವನ್ನು ತಂಪಾಗಿರಿಸಿದೆ, ಆ ಜೀವನದಿ ಧರ್ಮ,ಅರ್ಥ,ಕಾಮ,ಮೋಕ್ಷಗಳೆಂಬ ಚತುರ್ಭದ್ರಗಳ ಎಲ್ಲೆಕಟ್ಟಿನಲ್ಲಿ ಪ್ರವಹಿಸಿ  ಜೀವನದ ಅತ್ಯುನ್ನತ ಧ್ಯೇಯವಾದ ಭಗವಂತನ ಸಾಕ್ಷಾತ್ಕಾರವೆಂಬ ಪರಮಾನಂದ ಸಾಗರದಲ್ಲಿ ತನ್ನ ನೆಲೆಯನ್ನು ಕಂಡುಕೊಳ್ಳುವ ಸಹಜವಾದ ಜೀವನಧ್ಯೇಯ ಎಲ್ಲರದ್ದಾಗಬೇಕು ಎನ್ನುವ ಶ್ರೀರಂಗಮಹಾಗುರುಗಳ ವಿಚಾರಧಾರೆಗೆ ಶ್ರೀ ರಾಮಭದ್ರಾಚಾರ್ಯರು ತಮ್ಮನ್ನು ತಾವು ಸಮರ್ಪಿಸಿಕೊಂಡರು. ಗುರುವಿನ ಸದ್ವಿಷಯಗಳನ್ನು ಪಾಮರರಿಂದ ಪಂಡಿತರ ವರೆಗೆ ಅವರವರ ನೆಲೆಯಲ್ಲಿ ನಿಂತು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ, ಮನಮುಟ್ಟುವಂತೆ ಹೇಳುವ ಅವರ ಶೈಲಿ ಅನ್ಯಾದೃಶವಾದುದು ಎಂಬುದು ಅವರೊಡನೆ ಮಾತನಾಡಿದ ಎಲ್ಲರ ಅನುಭವ. ಶಾಸ್ತ್ರಗಳು ಎಂದರೆ ಕಬ್ಬಿಣದ ಕಡಲೆ ಎಂಬ ಹೆಚ್ಚುಕಡಿಮೆ ಸಾರ್ವತ್ರಿಕವಾದ ಅಭಿಪ್ರಾಯವನ್ನು ರಾಮಭಾದ್ರಾಚಾರ್ಯರ ಪಾಠ ಕೇಳಿದವರು ಬದಲಾಯಿಸಿಕೊಳ್ಳಲೇ ಬೇಕಾಗಿತ್ತು.  ಜೀವನವೆಲ್ಲ ಶಾಸ್ತ್ರಮಯವಾಗಿದೆ ಎಂಬುದನ್ನು ನಿತ್ಯದ, ಕಣ್ಣಿಗೆ ಕಾಣುವ ಉದಾಹರಣೆಗಳಿಂದ ಅವರು ನಿರೂಪಿಸುತ್ತಿದ್ದ ರೀತಿ ಅವಿಸ್ಮರಣೀಯ.

ಶ್ರೀರಂಗಮಹಾಗುರುಗಳ ಅತ್ಯುನ್ನತವಾದ ವಿಚಾರಸರಣಿಯನ್ನು ಅವರು ನಮಗೆ ತಿಳಿಸುವಾಗ, ಭಾರತೀಯ ಶಾಸ್ತ್ರಸಂಹಿತೆಯ ಪ್ರವಾಹವನ್ನು ನಮ್ಮ ಅರಿವಿಗೂ ಪ್ರವಹಿಸುವಂತೆ ಮಾಡುವಾಗ, ನನಗೆ- ನಾನೆಷ್ಟು ಸಣ್ಣವನು. ಅದರೂ ಇವರು ಇಷ್ಟೊಂದು ಗಹನವಾದ ವಿಷಯಗಳನ್ನು ಅಕ್ಕರೆಯಿಂದ ನನಗೆ ಹೇಳುತ್ತಿದ್ದಾರಲ್ಲಾ ಎಂದು ನಾಚಿಕೆಯಾದ ಸಂದರ್ಭಗಳೂ ಬಹಳ. ಆದರೆ ಅವರು ನಮ್ಮೊಡನೆ ಮಾತನಾಡುವಾಗ ತಂದೆ ಮಕ್ಕಳಿಗೆ ಕಲಿಸುವಂತೆ, ಅಣ್ಣ ಸೋದರವಾತ್ಸಲ್ಯದಿಂದ ತಿಳಿಸುವಂತೆ, ತಾಯಿ ತನ್ನ ಕಂದಗಳಿಗೆ ಹಾಲುಣಿಸುವಂತೆ ಆ ಪ್ರೀತಿ ವಿಶ್ವಾಸಗಳು ಅನುಸ್ಯೂತವಾಗಿ ಹರಿಯುತ್ತಿತ್ತು. ಹಾಗಾಗಿ ನಮಗೆ ಅಂತಹ ಸಲಿಗೆಯಿಂದ ಅವರೆಷ್ಟು ದೊಡ್ಡವರು ಎಂಬುದನ್ನೂ ಮರೆಯುವ ಸಂದರ್ಭವೂ ಬಹಳವೇ.

ಶಾಸ್ತ್ರಗಳ ಅಂತರಾರ್ಥವನ್ನು ಮನಸ್ಸಿನಿಂದ ಜಾರಿಸಿಕೊಂಡಾಗ ಒಂದು ಮತ್ತೊಂದನ್ನು ಖಂಡಿಸುವ ಪರಿಯೇ ಎಲ್ಲೆಲ್ಲೂ ಕಾಣಸಿಗುತ್ತದೆ. ಆದರೆ ಈ ವಿಚಾರದಲ್ಲಿ ಪೂಜ್ಯರ ನಿಲುವೇ ಬೇರೆಯಾಗಿತ್ತು. ಪೂಜ್ಯ ಶಂಕರನಾರಾಯಣ ಜೋಯಿಸರೊಂದಿಗೆ ಅವರ ಸಂಭಾಷಣೆಯನ್ನು ನೆನಪಿಸಿಕೊಳ್ಳೋಣ,.-"ವೇದಪುರುಷನ ಅಂಗೋಪಾಂಗಗಳಾದ ದರ್ಶನ ಹಾಗೂ ಶಾಸ್ತ್ರಗಳು ಪರಸ್ಪರ  ವಿರೋಧಿಗಳಲ್ಲಪ್ಪಾ. ಮಧ್ಯಕಾಲದಲ್ಲಿ ತತ್ತ್ವದರ್ಶಿಗಳಲ್ಲದ ಕೇವಲ ಪಂಕ್ತಿರತರು ಖಂಡನ ಮಂಡನಗಳಲ್ಲಿ ತೊಡಗಿ ಶಾಸ್ತ್ರಗಳೆಲ್ಲಾ ಗೊಂಡಾರಣ್ಯವಾಯಿತು. ಆದರೆ ಅವುಗಳೆಲ್ಲಾ ಮೂಲತಃ ಬೇರೆ ಬೇರೆ ನೆಲೆಯಲ್ಲಿ ನಿಂತು ಒಂದೇ ಸತ್ಯವನ್ನು ದರ್ಶನ ಮಾಡಿದಾಗ ಹುಟ್ಟಿಕೊಂಡ ದರ್ಶನಗಳು. ಉದಾಹರಣೆಗೆ ಮನಸ್ತತ್ವದ ಬಗ್ಗೆ ನ್ಯಾಯದರ್ಶನವು ಮನಸ್ಸನ್ನು ಅಣು ಎಂದು ನಿರೂಪಿಸಿದರೆ ಸಾಂಖ್ಯ ಯೋಗವು ಮನಸ್ಸನ್ನು ವಿಭು ಎಂದು ನಿರೂಪಿಸುವುದು. ಲೋಕದ ದೃಷ್ಟಿಯಿಂದ ಇವು ಪರಸ್ಪರ ವಿರುದ್ಧವಾದ ಮಾತುಗಳು. ಆದರೆ ಇಂದ್ರಿಯ ಪ್ರಪಂಚದಲ್ಲಿ ನಿಂತು ಮನಸ್ಸನ್ನು ಭಾವಿಸಿದಾಗ ಅದು ಅಣು. ಅದೇ ತತ್ತ್ವವನ್ನು ಯೋಗಭೂಮಿಕೆಗೆ ಏರಿ ಗುರಿತಿಸಿದಾಗ ಆತ್ಮನನ್ನು ಭಾವಿಸಿ ಆತ್ಮನಲ್ಲೇ ಅಭಿನ್ನವಾಗುವ ಅದು "ವಿಭು" ಎಂಬ ಅನುಭವ. ಇವೆರಡು ಅನುಭವಗಳೂ ಸತ್ಯಗಳೇ. ಹೀಗೆ ಒಂದು ದರ್ಶನ ಇನ್ನೊಂದು ದರ್ಶನಕ್ಕೆ ವಿರೋಧಿಯಲ್ಲ." ಹೀಗೆ ಪಾಠವೆಲ್ಲವೂ ಸಹಜವಾದ ಸಮನ್ವಯದೊಂದಿಗೆ ಸಾಗುತ್ತಿದ್ದುದು ಅವರ ವಿಶೇಷ. ಇದನ್ನೇ ಹಾಸ್ಯಮಯವಾಗಿ "ಶಾಸ್ತ್ರಿಗಳಲ್ಲಿ ಪರಸ್ಪರ ಖಂಡನ-ಮಂಡನಗಳಿರಬಹುದಪ್ಪಾ ಆದರೆ ಶಾಸ್ತ್ರಗಳಲ್ಲಲ್ಲ ಎಂಬ ಗುರುವಾಣಿಯನ್ನು ಜ್ಞಾಪಿಸುತ್ತಿದ್ದರು.

ಶರೀರದ ಎಲ್ಲ ಅಂಗಗಳೂ ಒಳಗಿರುವ ಅಂಗಿಗಾಗಿ ಬಂದಿವೆ ಎಂಬುದನ್ನು ಮರೆಯಬಾರದು. ತಲೆಗೆ ಏಟು ಬೀಳುವಾಗ ಸಹಜವಾಗಿ ಕೈ ಅಡ್ಡ ಬಂದು ತಲೆಯನ್ನು ರಕ್ಷಿಸುತ್ತದೆ. ತನ್ನ ಕೆಲಸವಲ್ಲ ಅದು ಎಂದು ಕೈ ಸುಮ್ಮನಿರುವುದಿಲ್ಲ. ಹೀಗೆಯೇ ಎಲ್ಲ ಶಾಸ್ತ್ರಗಳೂ ನಮ್ಮೊಳಗಿರುವ ಸತ್ಯವನ್ನು ಮುಟ್ಟಲು ಅನುವಾಗುವಂತೆಯೇ ಏರ್ಪಟ್ಟ ನಿಸರ್ಗಸಹಜವಾದ ಸತ್ಯಗಳು ಎಂಬುದನ್ನು ಸರಳವಾದ ಆದರೆ ನಿಖರವಾದ ಉದಾಹರಣೆಗಳಿಂದ ನಮ್ಮ ಮನಸ್ಸಿಗೆ ತರಿಸುತ್ತಿದ್ದರು.

ಒಮ್ಮೆ "ಏಕಂ ಸತ್ ವಿಪ್ರಾಃ ಬಹುಧಾ ವದಂತಿ " ಎಂಬ ಶ್ರುತಿವಾಕ್ಯದ ಕುರಿತಾಗಿ ಚರ್ಚೆ ನಡೆದಿತ್ತು. ಮೊದಲಿಗೆ ಶ್ರೀ ರಾಮಭದ್ರಾಚಾರ್ಯರು – ಏಕೆ ಒಂದೇ ಸತ್ಯವನ್ನು ಬಹುವಾಗಿ ವಿಪ್ರರು ಹೇಳಬೇಕು? ಅದು ಸಮಾಜದಲ್ಲಿ ಗೊಂದಲವನ್ನುಂಟುಮಾಡುವುದಿಲ್ಲವೇ? ಅಂತಹ ವಿಪ್ರರನ್ನು ಶಿಕ್ಷಿಸಬೇಕಲ್ಲವೇ ಎಂಬ ಪೂರ್ವಪಕ್ಷದೊಂದಿಗೆ ಚರ್ಚೆ ಆರಂಭಿಸಿದರು. ನಂತರ ಒಂದು ವೀರ್ಯಾಣುವಿನ ಫೋಟೋ ತೆಗೆದು ಇದು ನೀವು ಎಂದರೆ ಒಪ್ಪುತ್ತೀರಾ ಎಂದು ಕೇಳಿದರು. ಒಂದೇ ವೀರ್ಯಾಣು ಭ್ರೂಣವಾಗಿ,ಶಿಶುವಾಗಿ, ಕಣ್ಣು, ಕೈಕಾಲುಗಳನ್ನೆಲ್ಲಾ ಅಂಟಿಸಿಕೊಂಡು ಹೊರಬರುತ್ತದೆ. ಬಂದಮೇಲೆ ಒಬ್ಬರ ಮಗ, ಅಣ್ಣ, ತಮ್ಮ, ಗಂಡ, ತಂದೆ, ಮಾವ, ತಾತ ಎಲ್ಲವೂ ಆ ಒಂದೇ ವೀರ್ಯಾಣುರೂಪದಲ್ಲಿದ್ದುದೇ ಆಯಿತಲ್ಲವೇ? ಹಾಗೆ ವೀರ್ಯಾಣು ರೂಪದಲ್ಲಿ ಒಂದೇ ಆಗಿತ್ತು ಅದನ್ನು ಅದರ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಹೇಗೆ ಹೇಗೆ ನೋಡುತ್ತಾ ಬಂದರೋ ಹಾಗೆಯೇ ಹೇಳುತ್ತಾಬರಬೇಕಲ್ಲವೇ? ಈ ಉದಾಹರಣೆಯಿಂದ ಒಂದಿದ್ದುದು ಬಹುವಾಗಬಹುದಲ್ಲವೇ? ಹಾಗೆಯೇ ಒಂದೇ ಬ್ರಹ್ಮವಸ್ತು ತನ್ನನ್ನು ಬಹುವಾಗಿ ವಿಸ್ತರಿಸಿಕೊಂಡುದನ್ನು ತಮ್ಮ ಅಂತರಂಗದಲ್ಲಿ ಕಂಡವರೇ "ವಿಪ್ರರು"  ಪ್ರಾ ಪೂರಣೆ ಎಂಬುದು ವಿಪ್ರ ಶಬ್ದದ ನಿಷ್ಪತ್ತಿ. ಒಂದು ವಸ್ತುವನ್ನು ಆರಂಭದ ಹಂತದಿಂದ ಪುರ್ಣತೆಗೆ ಬರುವವರೆಗೂ ನೋಡಿಕೊಂಡು ಬಂದವನೇ ವಿಪ್ರನಾಗುತ್ತಾನೆ. ಅಂತಹ ವಿಪ್ರರು ಹೇಳಿದ ಮಾತು ಪ್ರಮಾಣ. ಬ್ರಹ್ಮವೇ ಒಂದಾಗಿದ್ದು ಬಹುವಾದ ವಿವಿಧ ನಾಮರೂಪಗಳನ್ನು ತಳೆದುದನ್ನು ಹೇಗೆ ನೋಡಿದರೋ ಹಾಗೆಯೇ ಹೇಳಿಕೊಂಡು ಬಂದಿದ್ದಾರಪ್ಪಾ ಎಂದು ನಮಗೆಲ್ಲರಿಗೂ ಈ ಶ್ರುತಿ ವಾಕ್ಯವನ್ನು ಅತ್ಯಂತ ಸರಳವಾಗಿ ಅರ್ಥಮಾಡಿಕೊಳ್ಳುವಂತೆ ಪಾಠವನ್ನು ಅನುಗ್ರಹಿಸಿದರು. ಕೇವಲ ನಿದರ್ಶನಕ್ಕಾಗಿ ಈ ವಿಷಯವೊಂದನ್ನು ನಿರೂಪಿಸಿದ್ದೇನೆ. ಇಂತಹ ಅಮೂಲ್ಯವಾದ ಪಾಠಗಳು ಅಸಂಖ್ಯಾತವಾಗಿ ಅವರಿಂದ ಹರಿದುಬಂದಿದೆ ಎಂಬುದನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇನೆ. ಯಾವುದೇ ವಿಷಯವನ್ನು ನೈಸರ್ಗಿಕವಾಗಿ ಅರ್ಥಮಾಡಿಕೊಳ್ಳದೆ ಕೇವಲ ಪಂಕ್ತಿಶರಣತೆಯಿಂದ ತೀರ್ಮಾನಿಸಬಾರದು ಎಂಬ ಶ್ರೀರಂಗಮಹಾಗುರುಗಳ ವಿಚಾರವನ್ನು ಸಮರ್ಥವಾಗಿ ನಿರೂಪಿಸುವಲ್ಲಿ ಅವರದು ಎತ್ತಿದ ಕೈ.

ಪೂಜ್ಯರ ಧರ್ಮಪತ್ನಿಯವರು ಗತಿಸಿದ ಸಂದರ್ಭ. ಅವರು ಗತಿಸಿ ನಾಲ್ಕು ದಿನಗಳಾಗಿರಬಹುದು. ನಾನು ಮೈಸೂರಿಗೆ ಅವರನ್ನು ನೋಡಲು ಹೋಗಿದ್ದೆ. ಹೋಗುವ ಮುನ್ನ ಅವರ ದಾಂಪತ್ಯದ ಅನ್ಯೋನ್ಯ ಸಂಬಂಧವನ್ನೆಲ್ಲ ನೆನೆದು ದುಃಖವಾಗಿತ್ತು. ಅವರನ್ನು ಹೇಗೆ ಮಾತನಾಡಿಸಬೇಕು? ಅವರಿಗೆ ಎಷ್ಟೊಂದು ದುಃಖವಾಗಿರಬಹುದು! ನಾನು ಚಿಕ್ಕವನು, ಹೇಗೆ ಇಂತಹ ಸಂದರ್ಭದಲ್ಲಿ ಅವರೊಡನೆ ವ್ಯವಹರಿಸಬೇಕು ಎಂಬ ಬಗ್ಗೆ ನನ್ನ ಮನಸ್ಸು ಭಾರವಾಗಿತ್ತು.  ಅಲ್ಲಿಗೆ ಹೋದಾಗ ಅವರು ಬಹಳ ಗಂಭೀರವಾಗಿ ನನ್ನನ್ನು ಬರಮಾಡಿಕೊಂಡರು. ಮಾತ್ರವಲ್ಲ, ಜೀವನದ ನಶ್ವರತೆಯ ಬಗ್ಗೆ, ಶಾಶ್ವತವಾದ ನೆಲೆ ಭಗವಂತನೊಬ್ಬನೆ ಎಂಬುದರ ಬಗ್ಗೆ ಸೋದಾಹರಣವಾಗಿ ಸುಮಾರು ಒಂದು ಗಂಟೆ ಪಾಠಮಾಡಿದರು.

ಪ್ರಾಣಪ್ರಿಯೆಯಾದ ಮಡದಿಯೂ ಒಂದು ದಿನ ಇಲ್ಲವಾಗುತ್ತಾಳೆ. ಹಾಗಾಗಿ ಅವಳಲ್ಲಿ ಇಟ್ಟಿದ್ದ ಪ್ರೀತಿಯನ್ನು ಮತ್ತೆ ಭಗವಂತನಲ್ಲಿಡುವುದೇ ಇಂತಹ ಸಂದರ್ಭದಲ್ಲೆಲ್ಲ ಮಾಡಬೇಕಾದುದು. ನಿಮಗೆ ಪ್ರೀತಿ ಎನ್ನುವ ಭಾವವಿರುವುದರಿಂದ ಅದನ್ನು ಭಗವಂತನಿಗೆ ಸಮರ್ಪಿಸಲು ಸಾಧ್ಯವಾಗುತ್ತದೆ. ಸಿಮೆಂಟಿನ ಗೋಡೆಯಂತೆ ನಿರ್ಭಾವಿಯಾದವನಿಗೆ ಭಗವಂತನಿಗೆ ಕೋಡಲು ಏನೂ ಇರುವುದಿಲ್ಲ. ಈ ಸಂದರ್ಭದಲ್ಲಿ "ನಿನೋಬ್ಬನೇ ಎಂದೆಂದಿಗೂ ಸತ್ಯ" ಎಂಬುದನ್ನು ಜ್ಞಾಪಿಸಿಕೊಳ್ಳಬೇಕು. Aattachment ಇರಬೇಕು. ಆದರೆ ಅದಕ್ಕೊಂದು ನಿಸರ್ಗಸಹಜವಾದ limitation ಇದೆ. ಅದನ್ನು ಮೀರಿದಾಗ ಜೀವನವಿಡೀ ನೋಯಬೇಕಾಗುತ್ತದೆ. ಉದಾಹರಣೆಗೆ ಕುಳಿತುಕೊಳ್ಳಲು ಕುರ್ಚಿಬೇಕು. ಆದರೆ ನಾವು ನಿಂತ ಮೇಲೂ ನಮ್ಮ ಜೊತೆಗೆ ಅದು ಅಂಟಿಕೊಂಡು ಬರುತ್ತದೆಯಾದರೆ ಅಂತಹ ಕುರ್ಚಿಯನ್ನು ಯಾರೂ ಇಷ್ಟಪಡುವುದಿಲ್ಲ. ಹಾಗೆ ಇಷ್ಟಪಟ್ಟರೆ ಅದು ಅಸಹಜವಾಗುತ್ತದೆ. ಅಷ್ಟು limitನಲ್ಲೇ ಅದನ್ನು ಇಟ್ಟುಕೊಳ್ಳಬೇಕು. ಆಗ ಜೀವನದ ಇಂತಹ ಸಂದರ್ಭಗಳಲ್ಲಿ ನಾವು ಸಂಯಮ ಕಳೆದುಕೊಳ್ಳುವುದಿಲ್ಲ.

ಅವರ ಈ ಪಾಠವನ್ನು ಅತ್ಯಂತ ಸಂಕ್ಷಿಪ್ತವಾಗಿ ಬರೆದಿದ್ದೇನೆ. ಈ ಪಾಠ ಮಾಡಿದ ಸಂದರ್ಭ ಎಂತಹದು? ಅದು ಅವರಂತಹ ಮಹಾನುಭಾವರಿಗೆ ಮಾತ್ರ ಸಾಧ್ಯವಾಗುವ ವಿಷಯ. ಅವರು ಹೇಳಿದ್ದರು- ನೋಡಿ, ಇನ್ಯಾವುದೋ ಸಂದರ್ಭದಲ್ಲಿ ನಾನು ಈಮಾತುಗಳನ್ನು ಹೇಳಿದ್ದರೆ, ನಿಮಗೆ ಒಣವೇದಾಂತವಾಗಿ ಕಾಣುತ್ತಿತ್ತು. "ಇವರಿಗೆ ಆದಾಗ ಗೊತ್ತಾಗುತ್ತದೆ" ಎಂದು ನೀವಂದುಕೊಳ್ಳುವ ಸಂಭವವಿತ್ತು. ಹಾಗೆಂದೇ ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಹೇಗೆ ನಡೆದುಕೊಳ್ಳಬೇಕೆಂದು ಗುರುವಿನ ಸ್ಮರಣೆಯೊಂದಿಗೆ ಹೇಳಿದೆನಪ್ಪಾ. ಎಂದಿದ್ದರು.

ಅವರ ನಿಸ್ಪೃಹತೆ ಅವಿಸ್ಮರಣೀಯ. ಅವರು ಶ್ರೀರಂಗಮಹಾಗುರುಗಳ ಜೀವನದ ಸರಳತೆ, ನಿಸ್ಪೃಹತೆಯನ್ನು ಸದಾ ಕೊಂಡಾಡುತ್ತಿದ್ದರು. ನೋಡಪ್ಪಾ, ಅವರು ವಿಶ್ವಕ್ಕೇ ಅದ್ಭುತವಾದ ಜೀವನದರ್ಶನವನ್ನು ನೀಡಿದರು. ಜೀವನವನ್ನು ಬೆಳಗಿಸಿಕೊಳ್ಳುವ ವಿಚಾರಸರಣಿಯನ್ನೂ ಕೊಟ್ಟರು. ಇಷ್ಟಾರು ಸಾಧಕರಿಗೆ ಮಾರ್ಗದರ್ಶನ, ಅನುಗ್ರಹವನ್ನು ಮಾಡಿದರು. ಆದರೂ "ಅವಾಕೀ, ಅನಾದರಃ" ಎಂಬಂತೆ ಅದರ ಬಗ್ಗೆ ತನ್ನ ದೊಡ್ಡಸ್ತಿಕೆಯನ್ನೇನೂ ಎಲ್ಲೂ ಹೇಳಿಕೊಳ್ಳಲಿಲ್ಲ. ತಾನಿಷ್ಟು ತಿಳಿದುಕೊಂಡಿದ್ದೇನೆ ಎಂದು ಅದರ ಬಗ್ಗೆ ಆದರವನ್ನೂ ಇಟ್ಟುಕೊಳ್ಳಲಿಲ್ಲ. ನಾವೆಲ್ಲರೂ ಹಾಗಿರಬೇಕು. ವಿಷಯ ಮುಂದೆ ಬೆಳೆಯಬೇಕು. ನಮ್ಮ ಮೈಯ್ಯನ್ನು ಮುಂದೆ ಮಾಡಬಾರದು. ದೀಪವನ್ನು ಎತ್ತಿಹಿಡಿದು ಅದರ ಬೆಳಕು ಎಲ್ಲೆಡೆಯಲ್ಲೂ ತುಂಬಿಕೊಳ್ಳುವಂತಾಗಬೇಕು. ಎತ್ತಿ ಹಿಡಿದವನು ತಾನು ಕಾಣಬೇಕೆಂದು ಅಪೇಕ್ಷಿಸಬಾರದು. ಈ ಮಾತುಗಳನ್ನು ಸದಾಕಾಲದಲ್ಲಿಯೂ ಹೇಳುತ್ತಿದ್ದರು. ಪೂಜ್ಯ ರಾಮಭದ್ರಾಚಾರ್ಯರು ಎಂದೂ ಲೋಕದ ಕೀರ್ತಿ ಪ್ರಸಿದ್ಧಿಗಳ ಹಿಂದೆ ಓಡಿದವರಲ್ಲ. ಅವು ಅವರನ್ನು ಹುಡುಕಿಕೊಂಡು ಬಂದಾಗಲೂ ಅದರ ಬಗ್ಗೆ ಉದಾಸೀನವಾಗಿಯೇ ಇದ್ದವರು.

ಅವರೆಂದೂ ವೈಯಕ್ತಿಕ ವಿಷಯಗಳು, ಕ್ಷೇಮಸಮಾಚಾರಗಳನ್ನು ವಿಚಾರಿಸುವಲ್ಲಿ ಹೆಚ್ಚು ಸಮಯ ವ್ಯರ್ಥಮಾಡುತ್ತಿರಲಿಲ್ಲ. ನಾನು ಯಾವಾಗಲಾದರೂ phoneಮಾಡಿ- ಮಾಮಾ, ಆರೋಗ್ಯ ಹೇಗಿದೆ? ಎಂದು ವಿಚಾರಿಸಿದರೆ, ಅದನ್ನು ಅರೆನಿಮಿಷದಲ್ಲಿ ಹೇಳಿ ಮುಗಿಸಿ ಯಾವುದಾದರೂ ಮೌಲಿಕವಾದ ವಿಷಯದ ಬಗ್ಗೆ ಮಾತನ್ನು ಆರಂಭಿಸುತ್ತಿದ್ದರು. ನನ್ನ ಅನುಭವಕ್ಕೆ ಬಂದಂತೆ ಅವರ ಜೀವನದಲ್ಲಿ ಕಾಡುಹರಟೆಯ ಕಾಲಕ್ಷೇಪ ಎಂದೂ ಇರಲಿಲ್ಲ. ಅವರ ಜೀವನದಲ್ಲಿನ ಸಮಯ ಪಾಲನೆ, ಶಿಸ್ತು, ಅಚ್ಚುಕಟ್ಟು ಎಲ್ಲವೂ ಅನುಕರಣೀಯ. ನಾವು ಯಾವಾಗ ಅವರ ಕೊಠಡಿಗೆ ಬಂದರೂ ಅದು ಒಪ್ಪ, ಓರಣವಾಗಿರುತ್ತಿತ್ತು. ಅವರ ವಸ್ತ್ರಗಳು ಸದಾ ಶುಭ್ರವಾಗಿರುತ್ತಿದ್ದವು. ಕಡೆಯವರೆಗೂ ತಮ್ಮ ವಸ್ತ್ರಗಳನ್ನು ತಾವೇ ಶುಭ್ರಗೊಳಿಸುತ್ತಿದ್ದರು. ಅವರು ತಂತಿಯ ಮೇಲೆ ಬಟ್ಟೆ ಹರಿವಿದ್ದರೆ ಅದರ ಪದರಗಳು ಮೇಲೆಕೆಳಗೆ ಇಲ್ಲದೇ ನೇರವಾಗಿರುತ್ತಿತ್ತು. ಅವರ ಪುಸ್ತಕಗಳು ಓರಣವಾಗಿ ಜೋಡಿಸಲ್ಪಟ್ಟಿರುತ್ತಿದ್ದವು. ಯಾವುದಕ್ಕೂ ಬೈಂಡ್ಹಾಕದೇ ಇರುತ್ತಿರಲಿಲ್ಲ. ಎಂದರೆ ಅವರ ವ್ಯಾವಹಾರಿಕ ಜೀವನದಲ್ಲೂ ಶಿಸ್ತಿನಸಿಪಾಯಿ ಅವರು.

  

ಪೂಜ್ಯರು ತಮ್ಮ ಜೀವಿತದ ಒಂದೊಂದು ಕ್ಷಣವನ್ನೂ ಲೋಕದಲ್ಲಿ ವಿದ್ಯೆಗಳನ್ನು ಬೆಳೆಸಲು ಮೀಸಲಿಟ್ಟಿದ್ದರು. ಶ್ರೀರಂಗ ಮಹಾಗುರುಗಳ ಧೀರವಾಣಿಯನ್ನು ಸದಾ ನಮಗೆ ನೆನಪಿಸುತ್ತಿದ್ದರು- ' ನನ್ನ ಗುರುವು ಅಹೋರಾತ್ರಿ, ಕುಳಿತಾಗ, ನಿಂತಾಗ ಅವರವರ ಮಟ್ಟಕ್ಕೆ ತಕ್ಕಂತೆ ಒಂದೊಂದು ವಿಷಯವನ್ನು ಹೇಳಿ ಬೆಳೆಸಿದರಪ್ಪಾ ಎಂದು ಅನೇಕಬಾರಿ ಹೇಳಿದ್ದರು. "ಕಣ್ಣಿನಲ್ಲಿ ಒಂದು ತೊಟ್ಟು ರಕ್ತವಿರುವವರೆಗೂ ಭಾರತೀಯ ಸಂಸ್ಕೃತಿಯ ಸಂರಕ್ಷಣೆಗಾಗಿ ಯೋಧರಂತೆ ದುಡಿಯಬೇಕಪ್ಪಾ" ಎಂಬ ಗುರುವಾಣಿಯನ್ನು ಆಗಾಗ  ಅವರು ನೆನಪಿಸಿಕೊಳ್ಳುತ್ತಿದ್ದುದು, ಆಗಿನ ಅವರ ಆರ್ದ್ರವಾದ ಗುರುಸ್ಮರಣೆ, ಗಂಭೀರವಾದ ಭಾವ ವೈಭವ ಎಲ್ಲವೂ ಅದನ್ನು ಅನುಭವಿಸಿದ ಎಲ್ಲರಿಗೂ ಅಚ್ಚಳಿಯದ ಸ್ಮರಣೆಯಾಗಿದೆ. ಅವರ ನೂರಾರು ಪ್ರವಚನಗಳು, ಲೆಕ್ಕವಿಲ್ಲದಷ್ಟು ಅನೌಪಚಾರಿಕ ಮಾತುಕತೆಗಳು, ಆರ್ಯ ಸಂಸ್ಕೃತಿ ಮಾಸಪತ್ರಿಕೆಯಲ್ಲಿ ಸುಮಾರು ಎರಡು ದಶಕಗಳಿಗೂ ಮೀರಿ ಅನ್ಯಾನ್ಯ ವಿಷಯಗಳ ಬಗ್ಗೆ ಲೇಖನಗಳು-ಎಲ್ಲವೂ ಭಾರತೀಯ ಸಂಸ್ಕೃತಿ ನಾಗರೀಕತೆಗಳ ಬಗೆಗಿನ  ಶ್ರೀರಂಗಮಹಾಗುರುಗಳ ತಳಸ್ಪರ್ಶಿ ಚಿಂತನೆಯನ್ನು ಜನಮಾನಸದಲ್ಲಿ ಬಿತ್ತರಿಸಲು ಸಹಕಾರಿಗಳಾಗಿವೆ. ಪೂಜ್ಯರು ದಿನಾಂಕ ೧೨-೧೨-೨೦೦೮ ರಂದು ಅಂತಿಮವಾಗಿ ಭಾಗವತ ಪುರಾಣದ ಬಗ್ಗೆ ವೀರ್ಯವತ್ತಾದ ಪ್ರವಚನ ನೀಡಿ ೧೩-೧೨-೨೦೦೮ ರಂದು ಭಗವಂತನ ಪಾದವನ್ನು ಸೇರಿದ್ದಾರೆ.

ಅವರು ನಮ್ಮಲ್ಲುಂಟುಮಾಡಿದ ವೈಚಾರಿಕಪ್ರಜ್ಞೆ, ಭಗವದ್ಭಕ್ತಿಗೆ ನಾವೆಂದಿಗೂ ಎಂದೆಂದಿಗೂ ಋಣಿಗಳು. ಇದು ನನ್ನಂತೆ ಅವರ ಸಂಪರ್ಕಕ್ಕೆ ಬಂದವರೆಲ್ಲರ ಮಾತಾಗಿರುತ್ತದೆ ಎಂಬುದು ನಿಃಸ್ಸಂಶಯ. ಇಷ್ಟು ಸಣ್ಣ ಲೇಖನದಲ್ಲಿ ಎಲ್ಲವನ್ನೂ ಬರೆಯುವುದು ದುಸ್ತರ. ಶ್ರೀರಂಗಮಹಾಗುರುಗಳ ವಿಚಾರಧಾರೆಯನ್ನು ನಮ್ಮ ಮತಿಗಳಿಗೆ ತರುವುದಕ್ಕಾಗಿ ಪೂಜ್ಯ ರಾದರಾಮಭದ್ರಾಚಾರ್ಯರು ಅಹರ್ನಿಶಿ ಶ್ರಮಿಸಿದ್ದಾರೆ. ಅವರು ಆಡಿದ ಮಾತುಗಳಲ್ಲಿ ನಿರುಪಯುಕ್ತವಾದುದು ಯಾವುದು ಇರಲಿಲ್ಲ. ಎಲ್ಲಾ ಮಾತುಕತೆಗಳೂ ಮಹಾಗುರುವಿನ ಜೀವನದರ್ಶನದ ಕುರಿತಾದದ್ದೇ ಆಗಿದ್ದವು. ಅವರು ಬದುಕಿದ ಹಾದಿ, ಅವರ ದಿಗ್ದರ್ಶನ ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಲಿ ಎಂದು ಭಗವಂತನನ್ನು ಪ್ರಾರ್ಥಿಸಿ ಶ್ರೀರಾಮಭದ್ರಾಚಾರ್ಯರ ತಂಪಾದ ಪುಣ್ಯಸ್ಮರಣೆಯೊಂದಿಗೆ ಈ ಲೇಖನವನ್ನು ಭಗವತ್ಪಾದದಲ್ಲಿ ಸಮರ್ಪಿಸುವೆ.