Sunday, June 28, 2020

ರಾಮಾಯಣದಲ್ಲಿ ಅದ್ಭುತರಸ (Ramayanadalli Adbhutarasa)

ಲೇಖಕರು: ಡಾ|| ನಂಜನಗೂಡು ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)


ನವರಸಗಳಲ್ಲಿ ಅದ್ಭುತರಸಕ್ಕೆ ವಿಶಿಷ್ಟಸ್ಥಾನವಿದೆ.  ಅದ್ಭುತರಸಕ್ಕೆ ವಿಸ್ಮಯವೇ ಸ್ಥಾಯಿಭಾವ. ಈ ರಸದ ಅಭಿವ್ಯಕ್ತಿ ತರ್ಕಾತೀತವಾದದ್ದು.  ಶ್ರೀಮದ್ರಾಮಾಯಣದಲ್ಲಿ ಈರಸವು ಎರಡು ಸಂದರ್ಭಗಳಲ್ಲಿ ಅಭಿವ್ಯಕ್ತವಾಗಿರುವುದನ್ನು ಕಾಣುತ್ತೇವೆ.  

ಮೊದಲನೆಯದು, ಸಮುದ್ರದಲ್ಲಿ ಸೇತುಬಂಧನದ ಸಂದರ್ಭ. .ಸಮುದ್ರರಾಜನ ಸಲಹೆಯಂತೆ ದೇವಶಿಲ್ಪಿಯಾದ ವಿಶ್ವಕರ್ಮನ ಮಗ ನಲನು ಸೇತುನಿರ್ಮಾಣಕರ್ಮವನ್ನು ವಹಿಸಿಕೊಳ್ಳುತ್ತಾನೆ.  ಶ್ರೀರಾಮನ ಆಣತಿಯಂತೆ ಕಪಿಶ್ರೇಷ್ಠರು ಪರ್ವತಶಿಖರಗಳನ್ನೂ, ಅನೇಕವೃಕ್ಷಗಳನ್ನೂ, ಬೃಹದಾಕಾರವಾದ ಬಂಡೆಗಳನ್ನೂ ಹೊತ್ತುತಂದು ಸಮುದ್ರಕ್ಕೆ ಹಾಕುತ್ತಾರೆ. ನೈಸರ್ಗಿಕವಾಗಿ ನೋಡುವುದಾದರೆ ವೃಕ್ಷಾದಿಗಳ ಸಾಂದ್ರತೆಯು ಜಲದಸಾಂದ್ರತೆಗಿಂತ ಹೆಚ್ಚಾಗಿರುವುದರಿಂದ ಅವುಗಳು ನೀರಿನಲ್ಲಿ ಮುಳುಗಬೇಕು.  ಆದರೆ ಶ್ರೀರಾಮನಿಗೆ ಸಮುದ್ರರಾಜನು 'ತಮಹಂಧಾರಯಿಷ್ಯಾಮಿ', 'ನಾನು ಅದನ್ನು ಮುಳುಗದಂತೆ ಧರಿಸುತ್ತೇನೆ' ಎಂದು ಕೊಟ್ಟಮಾತಿನಂತೆ ಅದನ್ನು ಧರಿಸುತ್ತಾನೆ.  ನೀಲನಾದರೋ ಹತ್ತುಯೋಜನಗಳಷ್ಟು ಅಗಲವಾಗಿಯೂ, ನೂರು ಯೋಜನಗಳಷ್ಟು ಉದ್ದವಾಗಿಯೂ ಇದ್ದ ಸೇತುವೆಯನ್ನು ಪ್ರಥಮದಿನದಿಂದಾರಂಭಿಸಿ ದಿನಂಪ್ರತಿ ೧೪-೨೦-೨೧-೨೨-೨೩ ಯೋಜನಗಳಂತೆ ಐದುದಿನಗಳಲ್ಲಿ ಕಟ್ಟಿಮುಗಿಸುತ್ತಾನೆ. ನ್ಯಾಯಮಾರ್ಗದಲ್ಲಿರುವವನಿಗೆ ಪಶುಪಕ್ಷಿಗಳಾದಿಯಾಗಿ ಸಕಲ ಜಗತ್ತೂ ಅವನ ಸಹಾಯಕ್ಕೆ ನಿಲ್ಲುತ್ತದೆಯಲ್ಲವೇ? ಊಹಿಸಲೂ ಅಸಾಧ್ಯವಾದ, ಪರಮಾದ್ಭುತವಾದ ಈ ನಲಸೇತುವನ್ನು ನೋಡಿದೇವ-ಗಂದರ್ವ-ಪರಮರ್ಷಿಗಳಾದಿಯಾಗಿ ಎಲ್ಲರೂ ರೋಮಾಂಚನಗೊಂಡರು.  ಹಿಂದೆಂದೂ ಕಂಡು-ಕೇಳರಿಯದ ಈ ಅದ್ಭುತವನ್ನು ಪ್ರತ್ಯಕ್ಷವಾಗಿ ಕಂಡು ಮೂಕ ವಿಸ್ಮಿತರಾದರು. ಶ್ರೀರಂಗಮಹಾಗುರುವು 'ಅದ್ಭುತ' ಶಬ್ದದ ನಿರ್ವಚನವನ್ನು ಹೇಳುತ್ತಾ 'ಅತ್ತಿಭೂತಮ್ಇತಿಅದ್ಭುತಮ್'ಎಂದರೆ, 'ಹಿಂದಿನದ್ದನ್ನು ಮೀರಿಸಿ ಮತ್ತೊಂದನ್ನು ಪ್ರಕಾಶಕ್ಕೆ ತರುವುದು' ಎಂದುತಿಳಿಸಿಕೊಟ್ಟಿರುತ್ತಾರೆ.

ಶ್ರೀಮದ್ರಾಮಾಯಣದ ಉತ್ತರಕಾಂಡದಲ್ಲಿ, ಶ್ರೀರಾಮನ ಒಡ್ಡೋಲಗದಲ್ಲಿ, ಸಾಕ್ಷಾತ್ತಾಗಿ ಮಹರ್ಷಿವಾಲ್ಮೀಕಿಗಳೇ 'ಸೀತೆಯು ಶುದ್ಧಚಾರಿತ್ರ್ಯಳು, ಶ್ರೀರಾಮನನ್ನೇ ಪರದೇವತೆಯಾಗಿ ಭಾವಿಸಿರುವವಳು ಮತ್ತು ಪಾಪರಹಿತಳು' ಎಂಬುದಾಗಿ ಹೇಳಿದರೂ, ಶ್ರೀರಾಮನು, 'ಸಭಾಸದರ ಸಮಕ್ಷಮದಲ್ಲಿ ವೈದೇಹಿಯು ತನ್ನ ಪಾವಿತ್ರ್ಯವನ್ನು ಪ್ರಮಾಣೀಕರಿಸಬೇಕೆಂ'ದಾಗ ಸೀತಾದೇವಿಯು' ತ್ರಿಕರಣಗಳಿಂದಲೂ ನಾನು ಶ್ರೀರಾಮನನ್ನೇ ಅರ್ಚಿಸುತ್ತಿರುವುದು ನಿಜವಾಗಿದ್ದರೆ ಭೂದೇವಿಯು ವಿವರವನ್ನು ಕೊಡಲಿ' ಎಂದು ಬೇಡಿಕೊಳ್ಳುತ್ತಾಳೆ.  ಆಗ ಭೂಮಿಯಿಂದ ಅದ್ಭುತವಾದ ಸಿಂಹಾಸನದಲ್ಲಿ ಮಂಡಿಸಿದ್ದ ಭೂದೇವಿಯು ಬಂದು ಸೀತೆಯನ್ನು ಕುಳ್ಳಿರಿಸಿಕೊಂಡು ಮತ್ತೆ ರಸಾತಳಕ್ಕೆ ಪ್ರವೇಶಿಸುತ್ತಾಳೆ. ಈ ಅದ್ಭುತವನ್ನು ಕಂಡ ಸಭಾಸದರ ಸಾಧುವಾದಗಳಿಂದ ಸಭೆಯು ತುಂಬುತ್ತದೆ.  

ಬರಿಯಮಾತಿಗೆ ಇಷ್ಟು ದೊಡ್ಡ ಪರಿಣಾಮವೇ !?  'ಋಷೀಣಾಂ ಪುನರಾದ್ಯಾನಾಂ ವಾಚಮರ್ಥೋನುಧಾವತಿ' ಎಂದರೆ 'ಜ್ಞಾನಿಗಳ ಮಾತಿನಂತೆ ಕ್ರಿಯೆ ನಡೆದುಹೋಗುತ್ತದೆ' ಎಂಬ ಭವಭೂತಿಯ ಮಾತು ಎಷ್ಟು ನೈಜ! 'ಬಾಳಿದರೆ ಸತ್ಯದೊಡನೆ ಬಾಳಬೇಕು. ಸತ್ಯಬೆಳೆಯಬೇಕು. ಸತ್ಯಸಮರಕ್ಕೆಕಾಲಿಟ್ಟರೂ, ಜೊತೆಗೆ ಒಂದು ಸಕಾರ ಸೇರಿಸಿಕೊಂಡು ಸಾಧಿಸಿದರೆ, ಅಂತ್ಯದಲ್ಲಿ ಸತ್ಯಸಾಕ್ಷಾತ್ಕಾರವಾಗಿ ಸಮರಸವಾಗುತ್ತದೆ ಜೀವನ' ಎಂಬ ಶ್ರೀರಂಗಮಹಾಗುರುವಿನ ವಾಣಿಗೆ ಇದೊಂದು ಉತ್ತಮ ನಿದರ್ಶನ.

ಸೂಚನೆ:  27/06/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.