Sunday, June 28, 2020

ದರಿದ್ರನಾರು? ಧನಿಕನಾರು? (Daridranaru? Dhanikanaru?)

ಲೇಖಕರು: ಶ್ರೀ ಕೆ.ಎಲ್. ಮಧುಸೂದನ 
(ಪ್ರತಿಕ್ರಿಯಿಸಿರಿ lekhana@ayvm.in)

ಒಮ್ಮೆ ಒಬ್ಬ ರಾಜನು ಬೇಟೆಯಾಡಲು ಅರಣ್ಯಕ್ಕೆ ಹೋಗಿದ್ದನು . ದಾರಿತಪ್ಪಿ ಪರಿವಾರದಿಂದ ದೂರವಾಗಿ ಉಳಿಯಬೇಕಾಯಿತು. ಬಹಳ ದೂರ ಕ್ರಮಿಸಿದ ಮೇಲೆ ದಾರಿ ತಿಳಿಯಿತು. ಹಾಗೆಯೇ ಅರಣ್ಯದಲ್ಲಿನ ಓಟಾಟದಿಂದ ಬಳಲಿ ಆಯಾಸವಾಗಿ ಆಶ್ರಯವನ್ನು ಅರಸುತ್ತಾ ಒಂದು ಋಷಿಯ ಆಶ್ರಮಕ್ಕೆ ಬಂದನು. ನಿಯಮದಂತೆ ಆ ದೇಶದ ರಾಜನಿಗೆ ಆಶ್ರಮದಲ್ಲಿ ಒಳ್ಳೆಯ ಅತಿಥಿಸತ್ಕಾರವು ದೊರಕಿತು. ಒಂದು ದಿನ ಅಲ್ಲಿಯೇ ತಂಗಿದ್ದು ಚೆನ್ನಾಗಿ ವಿಶ್ರಾಂತಿ ಪಡೆದನು. ಮಾರನೆಯ ದಿನ ಪ್ರಯಾಣಕ್ಕೆ ಸಿದ್ಧನಾದನು.

ಅದಕ್ಕೆ ಪೂರ್ವಭಾವಿಯಾಗಿ ಋಷಿಯ ಜೊತೆಯಲ್ಲಿ ಸ್ವಲ್ಪಕಾಲ ಉಭಯ ಕುಶಲೋಪರಿ ಹಾಗೂ ಸದ್ವಿಚಾರಗಳ ಚಿಂತನೆಯು ನಡಯುತ್ತದೆ. ರಾಜನಿಗೆ ಋಷಿಗಳಿಗೆ ಏನಾದರೂ ಕಾಣಿಕೆಯನ್ನು ಸಮರ್ಪಿಸಬೇಕೆಂದು ತೋರುತ್ತದೆ. "ಮಹರ್ಷಿಗಳೇ, ತಾವು ಏಕೆ ನನ್ನೊಡನೆ ನನ್ನ ರಾಜ್ಯಕ್ಕೆ ಬರಬಾರದು? ನಾನು ತಮಗೆ ಸಮಸ್ತ ವಿಧವಾದ ಅನುಕೂಲಗಳನ್ನು ತಾವು ಬಯಸಿದಂತೆ ಕಲ್ಪಿಸಿ ಕೊಡುತ್ತೇನೆ. ಈ ಅರಣ್ಯದ ಕಷ್ಟಕಾರ್ಪಣ್ಯಗಳೇಕೆ? ನಾರುಮಡಿಯೇಕೆ? ಸುಖವಾಗಿ ವೈಭವದಿಂದ ತಾವು ಜೀವನ ಮಾಡಬೇಕು. ಆದ್ದರಿಂದ ತಾವು ಬರಬೇಕು"ಎಂದು ವಿನಂತಿಸುತ್ತಾನೆ.

ಅದಕ್ಕೆ ಋಷಿಗಳು ಹೇಳುತ್ತಾರೆ " ವಯಮಿಹ ಪರಿತುಷ್ಟಾ: ವಲ್ಕಲೈ: ತ್ವಂ  ದುಕೂಲೈ: ಸಮ ಇಹ ಪರಿತೋಷಃ ನಿರ್ವಿಶೇಷೋ ವಿಶೇಷಃ। ಸತು ಭವತಿ ದರಿದ್ರ: ಯಸ್ಯ ತೃಷ್ಣಾ ವಿಶಾಲಾ, ಮನಸಿ ಚ ಪರಿತುಷ್ಟೇ ಕೋsರ್ಥವಾನ್ ಕೋ ದರಿದ್ರ: "ಎಂದರೆ ನಾವು ಋಷಿಗಳು ನಾರುಮಡಿಯಲ್ಲೇ ಸಂತುಷ್ಟರು, ನೀನಾದರೋ ರೇಷ್ಮೆ ವಸ್ತ್ರದಿಂದ. ಇಲ್ಲಿ ಸಂತೋಷವು ಇಬ್ಬರಿಗೂ ಸಮಾನ ಏನೂ ವಿಶೇಷವಿಲ್ಲ. ಯಾರಿಗೆ ಆಸೆಯು ವಿಸ್ತಾರವಾಗಿರುವುದೋ ಅವನೇ ದರಿದ್ರನು. ಮನಸ್ಸಿನಲ್ಲಿ ಸಂತೃಪ್ತಿಯಿದ್ದರೆ ಯಾರು ದರಿದ್ರ?ಯಾರು ಧನಿಕ?
  
ಮೇಲಿನ ಕಥೆಯಲ್ಲಿ ಇಡೀ ಜಗತ್ತಿಗೆ ಉತ್ತಮ ಸಂದೇಶವಿದೆ. ಪ್ರಕೃತ ಪ್ರತಿಯೊಬ್ಬ ಮನುಷ್ಯನೂ ಲಿಂಗ, ವಯಸ್ಸು, ಗುಣ, ಅಭಿರುಚಿ, ವೃತ್ತಿ, ಪ್ರವೃತ್ತಿ ಇತ್ಯಾದಿಗಳಿಗೆ ಅನುಗುಣವಾಗಿ ನಾಲ್ಕು ಪುರುಷಾರ್ಥಗಳ ಚೌಕಟ್ಟಿನಲ್ಲಿ ಬಾಳಾಟವನ್ನಿಟ್ಟುಕೊಂಡಾಗ ಮನಸ್ಸ್ಸು ಸಂತುಷ್ಟವಾಗಿ ಶಾಂತಿಯಿಂದ ಸುಖವಾಗಿರುತ್ತದೆ. ಹಾಗಲ್ಲದೆ ಇಂದ್ರಿಯಗಳ ಸೆಳೆತಕ್ಕೆ ಸಿಕ್ಕಿ ಸೃಷ್ಟಿಯಲ್ಲಿರುವುದೆಲ್ಲವನ್ನೂ ಬಯಸುತ್ತಾ ಹೋದರೆ ಇವನ ಪ್ರಜ್ಞೆಯು ಹರಣವಾಗುತ್ತದೆ. ಅದರಿಂದ ನೆಮ್ಮದಿ, ತೃಪ್ತಿ, ಸೌಖ್ಯ ಒಂದೂ ಇರುವುದಿಲ್ಲ. ಆಗ ಎಷ್ಟು ಸಿರಿತನವಿದ್ದರೂ ದರಿದ್ರನೇ. ಅಲ್ಲಿ ಅತಿಯಾಸೆ, ದುರಾಸೆ ಎಲ್ಲವೂ ತಾಂಡವವಾಡುತ್ತದೆ. ಕಡೆಗೆ ಸರ್ವಸ್ವವನ್ನೂ ಕಳೆದುಕೊಳ್ಳುತ್ತಾನೆ. ಇಂದು ನಾವು ಕಾಣುವ ಪ್ರಪಂಚವು ಹೀಗೆಯೇ ಇದೆ. ಹಾಗಾಗದೇ ಎಲ್ಲರೂ ಭಾ-ರತರಾಗಿ ಅಂದರೆ ಆತ್ಮಾನಂದದಿಂದ ಕೂಡಿದ ಮಹಾತ್ಮರ ಜೀವನಾದರ್ಶವನ್ನು ರೂಢಿಸಿಕೊಂಡು ಬಾಳಬೇಕೆಂಬುದು ಶ್ರೀರಂಗಮಹಾಗುರುಗಳ ಸಂದೇಶ. ಅಲ್ಲಿ ಸಂತೃಪ್ತಿ ಇದೆ. ಅದೇ ನಿಜವಾದ ಸಿರಿತನ. ರಾಮರಾಜ್ಯವು ಹಾಗೆಯೇ ಇತ್ತೆಂದು ಕವಿಗಳು ವರ್ಣಿಸುತ್ತಾರೆ. ಅಂಥಹಾ ಭಾರತವು ಮತ್ತೆ ನಮ್ಮದಾಗಲಿ ಎಂದು ಆಶಿಸೋಣ. ಶ್ರೀರಾಮನವಮಿಯ ಸವಿನೆನಪಿನಲಿ.

ಸೂಚನೆ: 29/05/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.