Showing posts with label author_klmadhusudhan. Show all posts
Showing posts with label author_klmadhusudhan. Show all posts

Sunday, June 28, 2020

ದರಿದ್ರನಾರು? ಧನಿಕನಾರು? (Daridranaru? Dhanikanaru?)

ಲೇಖಕರು: ಶ್ರೀ ಕೆ.ಎಲ್. ಮಧುಸೂದನ 
(ಪ್ರತಿಕ್ರಿಯಿಸಿರಿ lekhana@ayvm.in)

ಒಮ್ಮೆ ಒಬ್ಬ ರಾಜನು ಬೇಟೆಯಾಡಲು ಅರಣ್ಯಕ್ಕೆ ಹೋಗಿದ್ದನು . ದಾರಿತಪ್ಪಿ ಪರಿವಾರದಿಂದ ದೂರವಾಗಿ ಉಳಿಯಬೇಕಾಯಿತು. ಬಹಳ ದೂರ ಕ್ರಮಿಸಿದ ಮೇಲೆ ದಾರಿ ತಿಳಿಯಿತು. ಹಾಗೆಯೇ ಅರಣ್ಯದಲ್ಲಿನ ಓಟಾಟದಿಂದ ಬಳಲಿ ಆಯಾಸವಾಗಿ ಆಶ್ರಯವನ್ನು ಅರಸುತ್ತಾ ಒಂದು ಋಷಿಯ ಆಶ್ರಮಕ್ಕೆ ಬಂದನು. ನಿಯಮದಂತೆ ಆ ದೇಶದ ರಾಜನಿಗೆ ಆಶ್ರಮದಲ್ಲಿ ಒಳ್ಳೆಯ ಅತಿಥಿಸತ್ಕಾರವು ದೊರಕಿತು. ಒಂದು ದಿನ ಅಲ್ಲಿಯೇ ತಂಗಿದ್ದು ಚೆನ್ನಾಗಿ ವಿಶ್ರಾಂತಿ ಪಡೆದನು. ಮಾರನೆಯ ದಿನ ಪ್ರಯಾಣಕ್ಕೆ ಸಿದ್ಧನಾದನು.

ಅದಕ್ಕೆ ಪೂರ್ವಭಾವಿಯಾಗಿ ಋಷಿಯ ಜೊತೆಯಲ್ಲಿ ಸ್ವಲ್ಪಕಾಲ ಉಭಯ ಕುಶಲೋಪರಿ ಹಾಗೂ ಸದ್ವಿಚಾರಗಳ ಚಿಂತನೆಯು ನಡಯುತ್ತದೆ. ರಾಜನಿಗೆ ಋಷಿಗಳಿಗೆ ಏನಾದರೂ ಕಾಣಿಕೆಯನ್ನು ಸಮರ್ಪಿಸಬೇಕೆಂದು ತೋರುತ್ತದೆ. "ಮಹರ್ಷಿಗಳೇ, ತಾವು ಏಕೆ ನನ್ನೊಡನೆ ನನ್ನ ರಾಜ್ಯಕ್ಕೆ ಬರಬಾರದು? ನಾನು ತಮಗೆ ಸಮಸ್ತ ವಿಧವಾದ ಅನುಕೂಲಗಳನ್ನು ತಾವು ಬಯಸಿದಂತೆ ಕಲ್ಪಿಸಿ ಕೊಡುತ್ತೇನೆ. ಈ ಅರಣ್ಯದ ಕಷ್ಟಕಾರ್ಪಣ್ಯಗಳೇಕೆ? ನಾರುಮಡಿಯೇಕೆ? ಸುಖವಾಗಿ ವೈಭವದಿಂದ ತಾವು ಜೀವನ ಮಾಡಬೇಕು. ಆದ್ದರಿಂದ ತಾವು ಬರಬೇಕು"ಎಂದು ವಿನಂತಿಸುತ್ತಾನೆ.

ಅದಕ್ಕೆ ಋಷಿಗಳು ಹೇಳುತ್ತಾರೆ " ವಯಮಿಹ ಪರಿತುಷ್ಟಾ: ವಲ್ಕಲೈ: ತ್ವಂ  ದುಕೂಲೈ: ಸಮ ಇಹ ಪರಿತೋಷಃ ನಿರ್ವಿಶೇಷೋ ವಿಶೇಷಃ। ಸತು ಭವತಿ ದರಿದ್ರ: ಯಸ್ಯ ತೃಷ್ಣಾ ವಿಶಾಲಾ, ಮನಸಿ ಚ ಪರಿತುಷ್ಟೇ ಕೋsರ್ಥವಾನ್ ಕೋ ದರಿದ್ರ: "ಎಂದರೆ ನಾವು ಋಷಿಗಳು ನಾರುಮಡಿಯಲ್ಲೇ ಸಂತುಷ್ಟರು, ನೀನಾದರೋ ರೇಷ್ಮೆ ವಸ್ತ್ರದಿಂದ. ಇಲ್ಲಿ ಸಂತೋಷವು ಇಬ್ಬರಿಗೂ ಸಮಾನ ಏನೂ ವಿಶೇಷವಿಲ್ಲ. ಯಾರಿಗೆ ಆಸೆಯು ವಿಸ್ತಾರವಾಗಿರುವುದೋ ಅವನೇ ದರಿದ್ರನು. ಮನಸ್ಸಿನಲ್ಲಿ ಸಂತೃಪ್ತಿಯಿದ್ದರೆ ಯಾರು ದರಿದ್ರ?ಯಾರು ಧನಿಕ?
  
ಮೇಲಿನ ಕಥೆಯಲ್ಲಿ ಇಡೀ ಜಗತ್ತಿಗೆ ಉತ್ತಮ ಸಂದೇಶವಿದೆ. ಪ್ರಕೃತ ಪ್ರತಿಯೊಬ್ಬ ಮನುಷ್ಯನೂ ಲಿಂಗ, ವಯಸ್ಸು, ಗುಣ, ಅಭಿರುಚಿ, ವೃತ್ತಿ, ಪ್ರವೃತ್ತಿ ಇತ್ಯಾದಿಗಳಿಗೆ ಅನುಗುಣವಾಗಿ ನಾಲ್ಕು ಪುರುಷಾರ್ಥಗಳ ಚೌಕಟ್ಟಿನಲ್ಲಿ ಬಾಳಾಟವನ್ನಿಟ್ಟುಕೊಂಡಾಗ ಮನಸ್ಸ್ಸು ಸಂತುಷ್ಟವಾಗಿ ಶಾಂತಿಯಿಂದ ಸುಖವಾಗಿರುತ್ತದೆ. ಹಾಗಲ್ಲದೆ ಇಂದ್ರಿಯಗಳ ಸೆಳೆತಕ್ಕೆ ಸಿಕ್ಕಿ ಸೃಷ್ಟಿಯಲ್ಲಿರುವುದೆಲ್ಲವನ್ನೂ ಬಯಸುತ್ತಾ ಹೋದರೆ ಇವನ ಪ್ರಜ್ಞೆಯು ಹರಣವಾಗುತ್ತದೆ. ಅದರಿಂದ ನೆಮ್ಮದಿ, ತೃಪ್ತಿ, ಸೌಖ್ಯ ಒಂದೂ ಇರುವುದಿಲ್ಲ. ಆಗ ಎಷ್ಟು ಸಿರಿತನವಿದ್ದರೂ ದರಿದ್ರನೇ. ಅಲ್ಲಿ ಅತಿಯಾಸೆ, ದುರಾಸೆ ಎಲ್ಲವೂ ತಾಂಡವವಾಡುತ್ತದೆ. ಕಡೆಗೆ ಸರ್ವಸ್ವವನ್ನೂ ಕಳೆದುಕೊಳ್ಳುತ್ತಾನೆ. ಇಂದು ನಾವು ಕಾಣುವ ಪ್ರಪಂಚವು ಹೀಗೆಯೇ ಇದೆ. ಹಾಗಾಗದೇ ಎಲ್ಲರೂ ಭಾ-ರತರಾಗಿ ಅಂದರೆ ಆತ್ಮಾನಂದದಿಂದ ಕೂಡಿದ ಮಹಾತ್ಮರ ಜೀವನಾದರ್ಶವನ್ನು ರೂಢಿಸಿಕೊಂಡು ಬಾಳಬೇಕೆಂಬುದು ಶ್ರೀರಂಗಮಹಾಗುರುಗಳ ಸಂದೇಶ. ಅಲ್ಲಿ ಸಂತೃಪ್ತಿ ಇದೆ. ಅದೇ ನಿಜವಾದ ಸಿರಿತನ. ರಾಮರಾಜ್ಯವು ಹಾಗೆಯೇ ಇತ್ತೆಂದು ಕವಿಗಳು ವರ್ಣಿಸುತ್ತಾರೆ. ಅಂಥಹಾ ಭಾರತವು ಮತ್ತೆ ನಮ್ಮದಾಗಲಿ ಎಂದು ಆಶಿಸೋಣ. ಶ್ರೀರಾಮನವಮಿಯ ಸವಿನೆನಪಿನಲಿ.

ಸೂಚನೆ: 29/05/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.  

Wednesday, November 27, 2019

ಸತ್ಸಂಕಲ್ಪ (Sathsankalpa)

ಲೇಖಕರು: ಶ್ರೀ. ಕೆ. ಎಲ್. ಮಧುಸೂಧನ.  


ಒಂದೂರಿನಲ್ಲಿ ಒಬ್ಬ ನಿರ್ಗತಿಕನಾದ ಯುವಕನಿದ್ದನು ಹಾಗೂ ಭಿಕ್ಷೆಯಂದ ಜೀವನಸಾಗಿಸುತ್ತಿ ದ್ದನು. ಊರೂರಿಗೆ ಸಂಚರಿಸುತ್ತಿದ್ದನು. ಒಮ್ಮೆ ಅವನಿಗೆ ಅನಿರೀಕ್ಷಿತವಾಗಿ ಒಬ್ಬ ಪ್ರಸಿಧ್ಧ ಜ್ಯೋತಿಷಿಯ ಭೇಟಿಯಾಗಿ ತನ್ನ ‘ಕೈ’ ತೋರಿಸಿ ಭವಿಷ್ಯ ಹೇಳಬೇಕೆಂದು ಕೇಳಿಕೊಂಡನು. ಯುವಕನಿಗೆ ಸ್ವಲ್ಪ ಸತ್ಸಂಸ್ಕಾರವಿತ್ತು.  ಜ್ಯೋತಿಷಿಯು ಆತನ ‘ಕೈ’ ನೋಡಿ ಗಾಬರಿಯಿಂದ ಮಾರನೆಯ ದಿನ ಬರಲು ಹೇಳಿದನು. ಯುವಕನಿಗೆ ಸ್ವಲ್ಪ ಆಸೆ ಚಿಗುರೊಡೆಯತು. ರಾತ್ರಿ ಒಂದು ಪಾಳುಗುಡಿಯಲ್ಲಿ ಮಲಗಲುದ್ಯುಕ್ತನಾದನು. ಆದರೆ ನಿದ್ದೆ ಬರಲಿಲ್ಲ. ಅದೊಂದು ವೈಭವದಿಂದ ಮೆರೆದ ಶಿವನ ದೇವಾಲಯವಾಗಿದ್ದಿತು.  ಹಾಗಾಗಿ ಇವನಿಗೆ ಶಿವನಲ್ಲಿ ಭಕ್ತಿಮೂಡಿ ತನಗೆ ಶಕ್ತಿ ಸಾಮರ್ಥ್ಯಗಳನ್ನು ಭಗವಂತನು ಕರುಣಿಸಿದರೆ ತಾನು ಆ ದೇವಾಲಯವನ್ನು ಜೀರ್ಣೋದ್ಧಾರ ಮಾಡುವುದಾಗಿ ಮನಸಿಸನಲ್ಲಿ ಸಂಕಲ್ಪಿಸಿದನು.

ಸ್ವಲ್ಪ ಹೊತ್ತಿಗೆ ಅವನಿಗರಿವಿಲ್ಲದೆಯೇ ನಿದ್ದೆ ಆವರಿಸಿತು. ಮಧ್ಯರಾತ್ರಿರಯಲ್ಲಿ ಇದ್ದಕ್ಕಿದ್ದ ಹಾಗೇ ಭಯಂಕರವಾದ ಶಬ್ದವಾಯತು. ಗಾಬರಿಯಿಂದೆದ್ದು ನೋಡುತ್ತಾನೆ ಇವನ ಪಕ್ಕದಲ್ಲಿಯೇ ಕಲ್ಲಿನ ಕಂಬವೊಂದು ಮುರಿದು ಬಿದ್ದಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಎದ್ದು, ರಾತ್ರಿಯೆಲ್ಲಾ ಹೇಗೋ ಕಳೆದು ಬೆಳಿಗ್ಯೆ ಗ್ರಾಮದ ಕೆರೆಯಲ್ಲಿ ಶೌಚಾದಿ ಕಾರ್ಯ ಮುಗಿಸಿ ಜ್ಯೋತಿಷಿಯ ಬಳಿಸಾರಿದನು. ಇವನು ಬಂದಿದ್ದನ್ನು ನೋಡಿ ಜ್ಯೋತಿಷಿಯು ಆಶ್ಚರ್ಯದಿಂದ ಹಿಂದಿನ ದಿವಸ ಹೇಗೆ ಕಳೆದೆಯೆಂದು ಕೇಳಿದನು. ಆತನು ಯಥಾವತ್ತಾಗಿ ತಿಳಿಸಿದನು. ಆ ಜ್ಯೋತಿಷಿಯು ಯುವಕನಿಗೆ ಆತನ ಆಯಸ್ಸು ಹಿಂದಿನ ದಿನವೇ ಮುಗಿದಿತ್ತೆಂದು ಹೇಳುತ್ತಾನೆ. ನಿನ್ನ ಸತ್ಯಸಂಕಲ್ಪದಿಂದ ನಿನಗೆ ಭಗವಂತನು ಆಯಸ್ಸನ್ನು ಕರುಣಿಸಿದ್ದಾನೆ. ಆದ್ದರಿಂದ ನೀನು ಪುರುಷಪ್ರಯತ್ನ ಮಾಡು, ದೈವಾನುಕೂಲವಾಗಿ ನಿನ್ನ ಅಸೆ ಈಡೇರುತ್ತದೆ ಎಂದನು. ಅವನು ಎಲ್ಲಾ ಭೋಗ ಭಾಗ್ಯಗಳನ್ನನುಭವಿಸಿ, ಧರ್ಮದಿಂದ ಜೀವನ ಸಾಗಿಸಿದನು..

ಪರಮಾತ್ಮನು ನಮ್ಮ ಮನಸ್ಸಿನ ಅಧಿಪತಿಯಾಗಿ ಎಲ್ಲಾ ವ್ಯಾಪಾರಗಳಿಗೆ ಸಾಕ್ಷಿಯಾಗಿರುತ್ತಾನೆ. ಅವನ ನಿಯಮಕ್ಕೊಳಪಟ್ಟು ಒಳಗೆ ಮತ್ತು ಹೊರಗೆ ಶಕ್ತಿರೂಪವಾಗಿ ಕೆಲಸ ಮಾಡುವ ದೇವತೆಗಳು ಶುಭಾಶುಭ ಫಲಗಳನ್ನು ನೀಡುತ್ತಾರೆ. ಒಳ್ಳೆಯ ಭಾವನೆಗಳಿದ್ದಾಗ ಸತ್ಫಲಗಳನ್ನೂ ದುಷ್ಟಾಲೋಚನೆ ಇದ್ದಾಗ ದುಷ್ಫಲವನ್ನು ನೀಡುತ್ತಾರೆ.ನಾವು ದೈವೀ ಶಕ್ತಿಗಳಿಗೆ ವಂಚಿಸಿ ಏನನ್ನೂ ಸಾಧಿಸಲಾಗುವುದಿಲ್ಲ. ಈ ಸತ್ಯವನ್ನು ನಾವು ಸದಾ ನೆನೆಪಿಡಬೇಕು. ಧರ್ಮ ಒಂದಿದ್ದರೆ ಜೀವನದಲ್ಲಿ ಎಲ್ಲವೂ ಇದ್ದಂತೆಯೇ. ಅದಿಲ್ಲವಾದರೆ ಏನೆಲ್ಲಾ ಇದ್ದರೂ ಎಲ್ಲವೂ ಶೂನ್ಯವೇ. ಈ ಮೇಲಿನ ಕಥೆಯಿಂದ ಯಾವುದೇ ಮನುಷ್ಯನು ತನ್ನ ಜೀವನದಲ್ಲಿ ಒಳ್ಳೆಯ ನಿರ್ಧಾರವನ್ನು ಮಾಡಿದವನಾಗಿ ಧರ್ಮಮಯವಾದ ಬಾಳಾಟಕ್ಕಾಗಿ ಜೀವನವನ್ನು ಮುಡುಪಾಗಿಟ್ಟರೆ  ಅವನಿಗೆ ಎಲ್ಲಾ ಅನುಕೂಲವನ್ನು ದೈವವು ಒದಗಿಸಿಕೊಡುತ್ತದೆ.

ಇದು ಮಹರ್ಷಿ ಸಂಸೃತಿಯ ಜೀವನದ ಒಂದು ವಿಚಾರಧಾರೆ. ಅಂತಹ ಸ್ಫೂರ್ತಿಯನ್ನು ನೀಡಿದ ಶ್ರೀರಂಗ ಮಹಾಗುರುಗಳನ್ನು ಸ್ಮರಿಸುತ್ತಾ ಧರ್ಮವೊಂದಿದ್ದರೆ ಅರ್ಥಕಾಮಗಳು ತಾವಾಗಿಯೇ ಸಿದ್ಧಿಸುತ್ತವೆ ಹಾಗೂ ಜೀವನವನ್ನು ಬಂಧನದಿಂದ ಬಿಡುಗಡೆ ಮಾಡಿ ಶಾಶ್ವತ ಶಾಂತಿ ಸೌಖ್ಯಾನಂದ ನೆಲೆಯಾದ ಮೋಕ್ಷದಲ್ಲಿಯೇ ನಿಲ್ಲಿಸುತ್ತದೆ ಎಂಬುದನ್ನು ತಿಳಿಸುತ್ತಾ ಅತ್ತ ಕಡೆ ಭಾರತ ನಾಡಿನ ಜನರು ಸಾಗುವಂತಾಗಲಿ ಎಂದು ಅಶಿಸೋಣ.   

ಸೂಚನೆ:  27/11/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

Thursday, August 22, 2019

ವಿದ್ಯೆಗೆ ಅಧಿಕಾರ ಸಂಪತ್ತು (Vidyege adhikara sampaththu)

ಲೇಖಕರು:  ಕೆ.ಎಲ್. ಮಧುಸೂದನ  


ಒಂದು ಊರಿನಲ್ಲಿ ಒಬ್ಬ ಜನಾನುರಾಗಿಯಾದ ರಾಜನಿದ್ದ. ಒಮ್ಮೆ ಅವನ ಆಸ್ಥಾನಕ್ಕೆ ಒಬ್ಬ ಸಿದ್ಧ ಪುರುಷನಾದ ಸನ್ಯಾಸಿ ಬಂದ. ಅವನನ್ನು ರಾಜ ಚೆನ್ನಾಗಿ ಸತ್ಕರಿಸಿದ. ಅನೇಕ ಸಿದ್ಧಿಗಳನ್ನು ಕೊಡುವಂತಹ ಒಂದು ದಿವ್ಯ ಮಂತ್ರದ ಉಪದೇಶ ಪಡೆಯಬೇಕೆಂದು ರಾಜನಿಗೆ ಒಂದು ಬಯಕೆ ಉಂಟಾಯಿತು. ಸನ್ಯಾಸಿಯಲ್ಲಿ ಪ್ರಾರ್ಥಿಸಿದ. “ನಿನಗೆ ಅದನ್ನು ಪಡೆಯುವ ಯೋಗ್ಯತೆ ಬಂದಾಗ ಕೊಡುತ್ತೇನೆ” ಎಂದ ಸನ್ಯಾಸಿ. ರಾಜನಿಗೆ ನಿರಾಸೆಯಾಯಿತು. ಸನ್ಯಾಸಿ ಹೊರಟು ಬಂದ.

ರಾಜ ಬಹಳ ಶ್ರಮಪಟ್ಟು ಸಿದ್ಧಿಗಳನ್ನು ಪಡೆಯುವ ಮಂತ್ರವೇನೆಂದು ಯಾರಿಂದಲೋ ಸಂಗ್ರಹ ಮಾಡಿದ. ಆದರೆ, ವಿಧ್ಯುಕ್ತವಾಗಿ ಉಪದೇಶವನ್ನೇನೂ ಪಡೆಯಲಿಲ್ಲ. ಅಷ್ಟಕ್ಕೇ ಸಂತುಷ್ಟನಾಗಿ ಅದನ್ನು ನಿತ್ಯವೂ ಜಪಿಸಲು ಶುರು ಮಾಡಿದ. ಹೀಗೆ ಒಂದು ದಿನ ಅದೇ ಸನ್ಯಾಸಿ ರಾಜಾಸ್ಥಾನಕ್ಕೆ ಬಂದ. ರಾಜ ಅವನನ್ನು ಸತ್ಕರಿಸಿದ. ನಂತರ, “ತಾವು ಉಪದೇಶ ಕೊಡಲಿಲ್ಲ, ಆದರೆ, ನನಗೆ ಬೇಕಾದ ಮಂತ್ರವನ್ನು ಕಲಿತಿದ್ದೇನೆ” ಎಂದ.

ಸನ್ಯಾಸಿ ಸ್ವಲ್ಪ ಮೌನ ವಹಿಸಿ ತಕ್ಷಣ ರಾಜಭಟರಿಗೆ ಆಜ್ಞಾಪಿಸಿದ, “ಈ ನಿಮ್ಮ ರಾಜನನ್ನು ಕೂಡಲೇ ಬಂಧಿಸಿ” ಎಂದು. ಆದರೆ, ಯಾರೂ ಮುಂದೆ ಬರಲಿಲ್ಲ. ಆಗ ರಾಜನು ಸಿಟ್ಟಾದನು. ಕೂಡಲೇ “ಬಂಧಿಸಿ ಆ ರಾಜ ದ್ರೋಹಿಯನ್ನು” ಎಂದ ಭಟರಿಗೆ. ಅವರು ಸನ್ಯಾಸಿಯನ್ನು ಬಂಧಿಸಿದರು.

ಸನ್ಯಾಸಿ ಜೋರಾಗಿ ನಗುತ್ತಾ ಹೇಳಿದನು “ಮಹಾರಾಜ ನಾನು ಆಜ್ಞೆ ಮಾಡಿದಾಗ ನಿನ್ನನ್ನು ಯಾರೂ ಬಂಧಿಸಲಿಲ್ಲ, ಆದರೆ ನೀನು ಆಜ್ಞೆ ಮಾಡಿದಾಗ ತಕ್ಷಣವೇ ಬಂಧಿಸಿದರು, ಅಂದರೆ ನಿನಗೆ ಅಧಿಕಾರವಿದೆ ಅದರಿಂದ ನಿನ್ನ ಆಜ್ಞೆ ನೆರವೇರಿತು. ನನಗೆ ಆ ಅಧಿಕಾರವಿಲ್ಲ”.

ಹಾಗೆಯೇ, ವಿದ್ಯೆಯನ್ನು ಕೊಡುವ ಅಧಿಕಾರಿಯು ಕೊಟ್ಟರೆ ಮಾತ್ರ ಅದು ವಿದ್ಯಾಸಿದ್ಧಿಗೆ ಕಾರಣವಾಗುತ್ತದೆ.

 ಅಷ್ಟೇ ಅಲ್ಲಾ, ಕೊಡುವುದಕ್ಕೆ ಅಧಿಕಾರಿಯಾಗಿದ್ದರೂ ಯಾರಿಗೆ ಯಾವುದರಲ್ಲಿ, ಯಾವಾಗ, ಎಷ್ಟು ಅಧಿಕಾರ ಎಂಬ ಪಾತ್ರಾಪಾತ್ರ ವಿವೇಚನೆಯನ್ನು ಮಾಡಿಕೊಡಬೇಕು. ಏಕೆಂದರೆ, ಒಂದು ಹಣ್ಣನ್ನು ಕೊಯ್ಯುವ ಚಾಕು ಇದೆ, ಅದನ್ನು ಒಬ್ಬನ ಪ್ರಾಣ ತೆಗೆಯುವುದಕ್ಕೂ ಉಪಯೋಗಿಸಬಹುದು. ಅದನ್ನು ಬಳಸುವವನ ವಿವೇಕದ ಮೇಲೆ ನಿಂತಿದೆ.

ಮಕ್ಕಳಿಗೆ ಬೋಧನೆಯನ್ನು ಮಾಡುವ ವಿಷಯ ಎಲ್ಲಾ ವಯಸ್ಸಿನವರಿಗೂ ಒಂದೇ ಆಗಿರುವುದಿಲ್ಲ. ಅದು ವಿಭಿನ್ನವಾಗಿರುತ್ತದೆ, ಕಾರಣ ಅವರವರ ವಯಸ್ಸಿಗನುಗುಣವಾದ ಗ್ರಹಣ ಸಾಮರ್ಥ್ಯವಿರುತ್ತದೆ.

ಹೀಗೆಯೇ ಕಾಲ, ದೇಶ, ಸನ್ನಿವೇಶ, ವ್ಯಕ್ತಿ, ಲಿಂಗ, ಶಕ್ತಿ, ಸಾಮರ್ಥ್ಯ, ವಯಸ್ಸು, ಪ್ರಕೃತಿ, ಪ್ರವೃತ್ತಿ, ಆಸಕ್ತಿ, ಇತ್ಯಾದಿಗಳನ್ನು ಗಮನಿಸಿ ಅವರವರಿಗುಚಿತವಾದ ವಿದ್ಯೆಯನ್ನು ನೀಡಿ ಕಾಲ ಕಾಲಕ್ಕೆ ಗಮನಿಸುತ್ತಾ ಎಲ್ಲರನ್ನೂ ಸರಿಯಾಗಿ ಬೆಳೆಸುವುದೇ ನಿಜವಾದ ಶಿಕ್ಷಣ. ಶಿಕ್ಷಣ ಎಂದರೆ, ವಿದ್ಯಾಪ್ರದಾನ.

ಸನಾತನಾರ್ಯ ಭಾರತೀಯ ಮಹರ್ಷಿಗಳು ತಂದುಕೊಟ್ಟಂತಹ ಶಿಕ್ಷಣ ಪದ್ಧತಿಯು ಎಲ್ಲರನ್ನೂ ಶಾಂತಿಸೌಖ್ಯಾನಂದದ ನೆಲೆಯಾದ ಆತ್ಮಸಾಕ್ಷಾತ್ಕಾರಕ್ಕೆ ಕೊಂಡೊಯ್ಯುವುದೇ ಆಗಿದೆ ಎಂದು ಶ್ರೀರಂಗ ಮಹಾಗುರುಗಳು ಹೇಳಿದ ಮಾತುಗಳನ್ನು ಸ್ಮರಿಸುತ್ತಾ ಅತ್ತಕಡೆ ನಮ್ಮ ಶಿಕ್ಷಣ ಪದ್ಧತಿಯು ಸಾಗಲಿ ಎಂದು ಆಶಿಸೋಣ. 

ಸೂಚನೆ:  22/08/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.