Thursday, August 22, 2019

ವಿದ್ಯೆಗೆ ಅಧಿಕಾರ ಸಂಪತ್ತು (Vidyege adhikara sampaththu)

ಲೇಖಕರು:  ಕೆ.ಎಲ್. ಮಧುಸೂದನ  


ಒಂದು ಊರಿನಲ್ಲಿ ಒಬ್ಬ ಜನಾನುರಾಗಿಯಾದ ರಾಜನಿದ್ದ. ಒಮ್ಮೆ ಅವನ ಆಸ್ಥಾನಕ್ಕೆ ಒಬ್ಬ ಸಿದ್ಧ ಪುರುಷನಾದ ಸನ್ಯಾಸಿ ಬಂದ. ಅವನನ್ನು ರಾಜ ಚೆನ್ನಾಗಿ ಸತ್ಕರಿಸಿದ. ಅನೇಕ ಸಿದ್ಧಿಗಳನ್ನು ಕೊಡುವಂತಹ ಒಂದು ದಿವ್ಯ ಮಂತ್ರದ ಉಪದೇಶ ಪಡೆಯಬೇಕೆಂದು ರಾಜನಿಗೆ ಒಂದು ಬಯಕೆ ಉಂಟಾಯಿತು. ಸನ್ಯಾಸಿಯಲ್ಲಿ ಪ್ರಾರ್ಥಿಸಿದ. “ನಿನಗೆ ಅದನ್ನು ಪಡೆಯುವ ಯೋಗ್ಯತೆ ಬಂದಾಗ ಕೊಡುತ್ತೇನೆ” ಎಂದ ಸನ್ಯಾಸಿ. ರಾಜನಿಗೆ ನಿರಾಸೆಯಾಯಿತು. ಸನ್ಯಾಸಿ ಹೊರಟು ಬಂದ.

ರಾಜ ಬಹಳ ಶ್ರಮಪಟ್ಟು ಸಿದ್ಧಿಗಳನ್ನು ಪಡೆಯುವ ಮಂತ್ರವೇನೆಂದು ಯಾರಿಂದಲೋ ಸಂಗ್ರಹ ಮಾಡಿದ. ಆದರೆ, ವಿಧ್ಯುಕ್ತವಾಗಿ ಉಪದೇಶವನ್ನೇನೂ ಪಡೆಯಲಿಲ್ಲ. ಅಷ್ಟಕ್ಕೇ ಸಂತುಷ್ಟನಾಗಿ ಅದನ್ನು ನಿತ್ಯವೂ ಜಪಿಸಲು ಶುರು ಮಾಡಿದ. ಹೀಗೆ ಒಂದು ದಿನ ಅದೇ ಸನ್ಯಾಸಿ ರಾಜಾಸ್ಥಾನಕ್ಕೆ ಬಂದ. ರಾಜ ಅವನನ್ನು ಸತ್ಕರಿಸಿದ. ನಂತರ, “ತಾವು ಉಪದೇಶ ಕೊಡಲಿಲ್ಲ, ಆದರೆ, ನನಗೆ ಬೇಕಾದ ಮಂತ್ರವನ್ನು ಕಲಿತಿದ್ದೇನೆ” ಎಂದ.

ಸನ್ಯಾಸಿ ಸ್ವಲ್ಪ ಮೌನ ವಹಿಸಿ ತಕ್ಷಣ ರಾಜಭಟರಿಗೆ ಆಜ್ಞಾಪಿಸಿದ, “ಈ ನಿಮ್ಮ ರಾಜನನ್ನು ಕೂಡಲೇ ಬಂಧಿಸಿ” ಎಂದು. ಆದರೆ, ಯಾರೂ ಮುಂದೆ ಬರಲಿಲ್ಲ. ಆಗ ರಾಜನು ಸಿಟ್ಟಾದನು. ಕೂಡಲೇ “ಬಂಧಿಸಿ ಆ ರಾಜ ದ್ರೋಹಿಯನ್ನು” ಎಂದ ಭಟರಿಗೆ. ಅವರು ಸನ್ಯಾಸಿಯನ್ನು ಬಂಧಿಸಿದರು.

ಸನ್ಯಾಸಿ ಜೋರಾಗಿ ನಗುತ್ತಾ ಹೇಳಿದನು “ಮಹಾರಾಜ ನಾನು ಆಜ್ಞೆ ಮಾಡಿದಾಗ ನಿನ್ನನ್ನು ಯಾರೂ ಬಂಧಿಸಲಿಲ್ಲ, ಆದರೆ ನೀನು ಆಜ್ಞೆ ಮಾಡಿದಾಗ ತಕ್ಷಣವೇ ಬಂಧಿಸಿದರು, ಅಂದರೆ ನಿನಗೆ ಅಧಿಕಾರವಿದೆ ಅದರಿಂದ ನಿನ್ನ ಆಜ್ಞೆ ನೆರವೇರಿತು. ನನಗೆ ಆ ಅಧಿಕಾರವಿಲ್ಲ”.

ಹಾಗೆಯೇ, ವಿದ್ಯೆಯನ್ನು ಕೊಡುವ ಅಧಿಕಾರಿಯು ಕೊಟ್ಟರೆ ಮಾತ್ರ ಅದು ವಿದ್ಯಾಸಿದ್ಧಿಗೆ ಕಾರಣವಾಗುತ್ತದೆ.

 ಅಷ್ಟೇ ಅಲ್ಲಾ, ಕೊಡುವುದಕ್ಕೆ ಅಧಿಕಾರಿಯಾಗಿದ್ದರೂ ಯಾರಿಗೆ ಯಾವುದರಲ್ಲಿ, ಯಾವಾಗ, ಎಷ್ಟು ಅಧಿಕಾರ ಎಂಬ ಪಾತ್ರಾಪಾತ್ರ ವಿವೇಚನೆಯನ್ನು ಮಾಡಿಕೊಡಬೇಕು. ಏಕೆಂದರೆ, ಒಂದು ಹಣ್ಣನ್ನು ಕೊಯ್ಯುವ ಚಾಕು ಇದೆ, ಅದನ್ನು ಒಬ್ಬನ ಪ್ರಾಣ ತೆಗೆಯುವುದಕ್ಕೂ ಉಪಯೋಗಿಸಬಹುದು. ಅದನ್ನು ಬಳಸುವವನ ವಿವೇಕದ ಮೇಲೆ ನಿಂತಿದೆ.

ಮಕ್ಕಳಿಗೆ ಬೋಧನೆಯನ್ನು ಮಾಡುವ ವಿಷಯ ಎಲ್ಲಾ ವಯಸ್ಸಿನವರಿಗೂ ಒಂದೇ ಆಗಿರುವುದಿಲ್ಲ. ಅದು ವಿಭಿನ್ನವಾಗಿರುತ್ತದೆ, ಕಾರಣ ಅವರವರ ವಯಸ್ಸಿಗನುಗುಣವಾದ ಗ್ರಹಣ ಸಾಮರ್ಥ್ಯವಿರುತ್ತದೆ.

ಹೀಗೆಯೇ ಕಾಲ, ದೇಶ, ಸನ್ನಿವೇಶ, ವ್ಯಕ್ತಿ, ಲಿಂಗ, ಶಕ್ತಿ, ಸಾಮರ್ಥ್ಯ, ವಯಸ್ಸು, ಪ್ರಕೃತಿ, ಪ್ರವೃತ್ತಿ, ಆಸಕ್ತಿ, ಇತ್ಯಾದಿಗಳನ್ನು ಗಮನಿಸಿ ಅವರವರಿಗುಚಿತವಾದ ವಿದ್ಯೆಯನ್ನು ನೀಡಿ ಕಾಲ ಕಾಲಕ್ಕೆ ಗಮನಿಸುತ್ತಾ ಎಲ್ಲರನ್ನೂ ಸರಿಯಾಗಿ ಬೆಳೆಸುವುದೇ ನಿಜವಾದ ಶಿಕ್ಷಣ. ಶಿಕ್ಷಣ ಎಂದರೆ, ವಿದ್ಯಾಪ್ರದಾನ.

ಸನಾತನಾರ್ಯ ಭಾರತೀಯ ಮಹರ್ಷಿಗಳು ತಂದುಕೊಟ್ಟಂತಹ ಶಿಕ್ಷಣ ಪದ್ಧತಿಯು ಎಲ್ಲರನ್ನೂ ಶಾಂತಿಸೌಖ್ಯಾನಂದದ ನೆಲೆಯಾದ ಆತ್ಮಸಾಕ್ಷಾತ್ಕಾರಕ್ಕೆ ಕೊಂಡೊಯ್ಯುವುದೇ ಆಗಿದೆ ಎಂದು ಶ್ರೀರಂಗ ಮಹಾಗುರುಗಳು ಹೇಳಿದ ಮಾತುಗಳನ್ನು ಸ್ಮರಿಸುತ್ತಾ ಅತ್ತಕಡೆ ನಮ್ಮ ಶಿಕ್ಷಣ ಪದ್ಧತಿಯು ಸಾಗಲಿ ಎಂದು ಆಶಿಸೋಣ. 

ಸೂಚನೆ:  22/08/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.