ಲೇಖಕರು: ಡಾ|| ಕೆ.ಎಸ್. ಕಣ್ಣನ್
ನಾವೆಲ್ಲರೂ ಸದಾ ಏನಾದರೂ ಮಾಡುತ್ತಲೇ ಇರುತ್ತೇವೆ. ಸುಮ್ಮನೇ ಇರಲಾದೀತೆ? ಎಲ್ಲವನ್ನೂ ಏಕೆ ಮಾಡುತ್ತೇವೆ? – ಎಂಬ ಪ್ರಶ್ನೆಗೆ ಉತ್ತರವೇ? ದಾಸರೇ ಕೊಟ್ಟಿದ್ದಾರೆ: “ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ”. ಯಾರ ಹೊಟ್ಟೆ-ಬಟ್ಟೆಗಳಿಗಾಗಿ? ನಮ್ಮವಕ್ಕೇ ತಾನೆ?
ಬರೀ ತನ್ನ ಹೊಟ್ಟೆ—ಬಟ್ಟೆಗಳಿಗಾಗಿಯೇ? ಮನೆಯ ಯಜಮಾನನೆಂದರೆ ಮನೆಯ ಮಂದಿಯ ಎಲ್ಲರ ಹೊಟ್ಟೆ-ಬಟ್ಟೆಗಳಿಗಾಗಿಯೂ ಮಾಡುವವನೇ. ಬರೀ ತನಗೋ? “ಸ್ವಾರ್ಥಿ” ಎನ್ನುತ್ತಾರೆ! ಬೈಗಳ ತಪ್ಪಿಸಿಕೊಳ್ಳಲಾದರೂ ಕೊಟ್ಟು ತಿನ್ನಬೇಕು!
ಹಣಕ್ಕೆ ಮೂರೇ ’ಗತಿ’ಗಳಂತೆ. ದಾನವೊಂದು, ಭೋಗವೊಂದು. ಮೂರನೆಯದೇ ನಾಶ. ಅನ್ಯರಿಗೆ ಕೊಡಲಿಲ್ಲ. ತಾನೂ ತಿನ್ನಲಿಲ್ಲ – ಎಂದಾದಲ್ಲಿ ಅಂತಹ ಗಳಿಕೆಗೆ ’ನಾಶ’ವೇ ಗತಿ. ಯಾರಿಗೋ ಹೋಯಿತು: ದುರ್ಗತಿಯೇ!
ನಾವು ಪ್ರಗತಿಯನ್ನು ಕಾಣಬೇಕೆಂದರೆ ಕೊಟ್ಟು ಸಂತೋಷಿಸಬೇಕು. ಬಾಯಿಗೆ ಅನ್ನ ಹಾಕಿದೆವು, “ತನಗೇ ಎಲ್ಲ” ಎಂದು ಬಾಯಿ ಹೇಳುತ್ತದೆಯೇ? ಅದನ್ನು ಹೊಟ್ಟೆಗೆ ಕಳುಹಿಸುತ್ತದೆ. “ತನ್ನಲ್ಲೇ ಎಲ್ಲ ಇರಲಿ” ಎಂದು ಹೊಟ್ಟೆ ಇಟ್ಟುಕೊಂಡರೆ, ಡಾಕ್ಟರ ಬಳಿ ಹೋಗಿ “ಹೊಟ್ಟೆ ಕೆಟ್ಟಿದೆ” ಎನ್ನುತ್ತೇವೆ! ಪಚನ ಮಾಡಿ ಆಹಾರದ ಸಾರವನ್ನು ಇಡೀ ಶರೀರಕ್ಕೇ ಹೊಟ್ಟೆ ಕಳುಹಿಸುವುದಲ್ಲವೆ?: ಎಲ್ಲ ಅಂಗಗಳೂ ಚೆನ್ನಾಗಿದ್ದೇ ತಾನೂ ಚೆನ್ನಾಗಿರುವುದು.
ಶ್ರೀರಂಗಮಹಾಗುರುಗಳು ಬೀಜದ ಉದಾಹರಣೆಯನ್ನು ಕೊಡುತ್ತಿದ್ದರು. ಕ್ಷೇತ್ರದಲ್ಲಿ ಬಿದ್ದ ಬೀಜವು ತನ್ನನ್ನೇ ಮುಂದಿನದಕ್ಕೆ ಕೊಟ್ಟುಕೊಳ್ಳುತ್ತದೆ. ಮುಂದಿನದೂ ಕೊಟ್ಟುಕೊಂಡೇ ಬೇರು, ಕಾಂಡ, ಕೊಂಬೆ, ಚಿಗುರು, ಎಲೆ, ಹೂವು, ಹಣ್ಣುಗಳಾಗಿ ವೃಕ್ಷವಾಗುವುದು. ಫಲ ಬಿಟ್ಟಾಗಲೇ ಅಲ್ಲವೆ, ಸ-ಫಲ-ತೆ?
“ಕೊಟ್ಟರೆ ಹೋಯಿತು!” ಎಂಬುದಲ್ಲ, “ಕೊಟ್ಟದ್ದು ತನಗೆ” ಎಂಬುದು ನೀತಿ: ವಿಚಿತ್ರವಾದ ಸತ್ಯವಿದು. “ಓ, ಹಾಗಾದರೆ ನನಗೇ ಬರಲೆಂದೇ ಕೊಡುತ್ತೇನೆ” ಎಂಬ ಸಂಕಲ್ಪವೂ ಸರಿಯಲ್ಲ! ತ್ಯಾಗವನ್ನೂ ಮಾಡಬೇಕು, ಭೋಗವನ್ನೂ ಪಡಬೇಕು. ಆದರೂ ಭೋಗಿಸಿ ತ್ಯಾಗವಲ್ಲ, ತ್ಯಾಗಿಸಿ ಭೋಗ. ಈಶಾವಾಸ್ಯೋಪನಿಷತ್ತು ಅದನ್ನು “ತೇನ ತ್ಯಕ್ತೇನ ಭುಂಜೀಥಾಃ” ಎನ್ನುತ್ತ್ತದೆ. “ಜಗತ್ತಿನಲ್ಲಿಯ ಚರಾಚರವೆಲ್ಲವೂ ಈಶನಿಂದ ವ್ಯಾಪ್ತ. ಮತ್ತೊಬ್ಬರ ಸೊತ್ತಿಗಾಗಿ ಹಂಬಲಿಸೀಯೆ!” ಎಂದು ಎಚ್ಚರಿಸುತ್ತದೆ.
ನಮಗೆ ದೊರೆತದ್ದೂ ಬೇರೆಯವರು ಕೊಟ್ಟದ್ದರಿಂದ, ಉಳ್ಳವರು ಕೊಟ್ಟದ್ದರಿಂದಲೇ. ಎಲ್ಲವನ್ನೂ ಉಳ್ಳವನು, ಎಲ್ಲಕ್ಕೂ ಸ್ವಾಮಿಯೆಂದರೆ ಈಶನೇ. ಆ ಸ್ಮರಣೆಯಿರಬೇಕು. ದುಡಿದು ಸಂಪಾದಿಸಬೇಕು. ಹಂಚಿ ತಿನ್ನಬೇಕು: ತ್ಯಾಗಪೂರ್ವಕ ಭೋಗ. ಇಲ್ಲಿಯೇ ಇರುವುದು ಸ್ವಸುಖ-ಪರಸುಖ. ಕ್ರಮವರಿತು ಕೊಟ್ಟರಲ್ಲವೆ ಸುಖ?
ಪುಟ್ಟ ಉಪನಿಷತ್ತಿನ ಮೊಟ್ಟಮೊದಲ ಮಂತ್ರ ಸಫಲತೆಯ ಸೂತ್ರ.