Sunday, August 4, 2019

ಎಲ್ಲವನ್ನೂ ದಯಪಾಲಿಸುವ ಒಂದು ಅದ್ಭುತ ವರ (Ellavannu dayapalisuva ondu adbhuta vara)

ಲೇಖಕರು: ತಾರೋಡಿ ಸುರೇಶಒಬ್ಬ ತರುಣ ಬಗೆಬಗೆಯಲ್ಲಿ ದೇವರನ್ನು ಪ್ರಾರ್ಥಿಸುತ್ತಿದ್ದ. ಅವನಿಗೆ ಕಣ್ಣು ಬೇರೆ ಕಾಣಿಸುತ್ತಿರಲಿಲ್ಲ. ಬಡತನ ಕಿತ್ತು ತಿನ್ನುತ್ತಿತ್ತು. ಸ್ವಂತ ಮನೆಯಿಲ್ಲ.ಅನಾರೋಗ್ಯದಿಂದ ಬಳಲುತ್ತಿದ್ದ. ವಿವಾಹದ ವಯಸ್ಸಾಗಿದ್ದರೂ ಕನ್ಯಾಪಿತೃಗಳು ಹೆಣ್ಣು ಕೊಡಲು ಮುಂದೆ ಬರುತ್ತಿರಲಿಲ್ಲ. ಒಟ್ಟಾರೆ ಬಹಳ ದುಃಖದಿಂದ ಕಾಲ ಕಳೆಯುತ್ತಿದ್ದ. ಧನಕನಕಾದಿ ಸಂಪತ್ತು, ವಿವಾಹ, ಆಯುಸ್ಸು, ಆರೋಗ್ಯ, ಹೀಗೆ ನಿರಂತರವಾಗಿ ದೇವರಲ್ಲಿ ಒಂದಲ್ಲ ಒಂದು ವರವನ್ನು ಕೇಳಿಕೊಳ್ಳುತ್ತಲೇ ಇದ್ದ. ಒಮ್ಮೆ ಲಕ್ಷ್ಮಿಯು ಸ್ವಲ್ಪ ಸಂಪತ್ತನ್ನು ಅನುಗ್ರಹಿಸಿದಳು. ಪುಟ್ಟ ಮನೆಯೊಂದನ್ನು ಕಟ್ಟಿಕೊಳ್ಳೋಣವೆಂದು ಆರಂಭಿಸಿದ. ಅಕಾಸ್ಮಾತ್ ಮಾಳಿಗೆಗೆ ಬಳಸಿದ ತೊಲೆಯೊಂದು  ಮೇಲೆ ಬಿದ್ದು ಕೈಕಾಲು ಮುರಿದುಕೊಳ್ಳಬೇಕಾಯಿತು. ನಾವು ಬೇಡಿದ್ದನ್ನೆಲ್ಲಾ ದೇವರು ಅನುಗ್ರಹಿಸಿದರೂ ಕಷ್ಟವೇ. ಏಕೆಂದರೆ ಅದರ ಪರಿಣಾಮ ಭವಿಷ್ಯದಲ್ಲಿ ಏನಾಗುವುದೋ?

ಒಮ್ಮೆ ಒಬ್ಬ ಸನ್ಯಾಸಿಯನ್ನು ಭೆಟ್ಟಿಯಾಗಿ ನಮಸ್ಕರಿಸಿದ. ಸನ್ಯಾಸಿಗೆ ಇವನ ಮೇಲೆ ಕರುಣೆ ಉಂಟಾಯಿತು. “ನಿನಗೆ ಒಂದು ಮಂತ್ರವನ್ನು ಉಪದೇಶಿಸುತ್ತೇನೆ. ಚೆನ್ನಾಗಿ ಅದರ ಉಪಾಸನೆ ಮಾಡು.ಆದರೆ ಮಂತ್ರದೇವತೆಯು ಪ್ರತ್ಯಕ್ಷವಾದಾಗ ಈ ವರವನ್ನು ಕೇಳಿಕೊ” ಎಂದೂ ಸೂಚಿಸಿದ. ನಮ್ಮ ಕಥಾನಾಯಕನು ಹಾಗೆಯೇ ಮಾಡಿದ.ದೇವತೆಯು ಒಲಿದು ಪ್ರತ್ಯಕ್ಷವಾಗಿ ‘ ಏನು ವರ ಬೇಕು’? ಎಂದು ಕೇಳಿತು. “ನನ್ನ ಮೊಮ್ಮಗನು ಬಂಗಾರದ ತಟ್ಟೆಯಲ್ಲಿ ಮೃಷ್ಠಾನ್ನ ಭೋಜನ ಮಾಡುವುದನ್ನು ನಾನು ನೋಡಬೇಕು”ಎಂದು ಪ್ರಾರ್ಥಿಸಿದನು.

ಒಂದೇ ವರದಿಂದ ಆ ಕುರುಡನು ಎಲ್ಲವನ್ನು ಪಡೆದುಕೊಂಡನು. ಸ್ವಲ್ಪ ವಿಶ್ಲೇಶಿಸೋಣ: ಮೊಮ್ಮಗನನ್ನು ಪಡೆಯಬೇಕಾದರೆ ಮಗನು ಹುಟ್ಟಿರಬೇಕು. ಮಗನಿಗೆ ವಿವಾಹವಾಗಬೇಕು.  ಮೊದಲು ತನಗೆ ವಿವಾಹವಾಗಬೇಕು. ಮೊಮ್ಮಗನನ್ನು ನೋಡಬೇಕಾದರೆ ಅಷ್ಟು ದೀರ್ಘವಾದ ಆಯುಸ್ಸು ಬೇಕು. ಹಾಗೆಯೇ ತನಗೆ ಕಣ್ಣು ಬರಬೇಕು. ಬಂಗಾರದ ತಟ್ಟೆಯಲ್ಲಿ ಮೃಷ್ಠಾನ್ನಭೋಜನ ವೆಂದರೆ ಶ್ರೀಮಂತನಾಗಬೇಕು. ಹೀಗೆ ಒಂದೇ ವರದಲ್ಲಿ ತನಗೆ ಬೇಕಾದ ಕಣ್ಣಿನ ದೃಷ್ಟಿ, ಆಯುಸ್ಸು, ಆರೋಗ್ಯ, ತನಗೆ ಪತ್ನಿ, ಸೊಸೆ, ಸಂತಾನ, ಮೊಮ್ಮಗ ಮತ್ತು ಶ್ರೀಮಂತಿಕೆ ಎಲ್ಲವನ್ನೂ ಆ ಜಾಣ ಪಡೆದುಕೊಂಡ.

ನಮ್ಮ ಬಯಕೆಗಳಾದರೋ ಅನಂತ. ಯಾವುದು ಬೇಕು, ಯಾವುದು ಬೇಡ ಎಂಬ ವಿವೇಕವೂ ಇರುವುದಿಲ್ಲ. ಏನೇನನ್ನೋ ಬೇಡಿ ಅಪಾಯಕ್ಕೆ ಸಿಗುವ ಸಂಭವವೇ ಹೆಚ್ಚು.
ದೇಹದ ಹಿಂಬದಿಯಲ್ಲಿ ಕೆಲಸಮಾಡುತ್ತಿರುವ ಶಕ್ತಿಗಳ ಪರಿಚಯವೂ ನಮಗಿಲ್ಲ. ಯಾವ ವರದಿಂದ, ಯಾವ್ಯಾವದೋ ಕಾರ್ಯಗಳು ನಡೆದು ಯಾವ ಶಕ್ತಿಗಳಿಗೆ ಅಪ್ರಸನ್ನತೆ ಉಂಟಾಗುತ್ತದೆಯೋ? ಆ ವಿಷಯದಲ್ಲಿಯೂ ನಾವು ಅವಜ್ಞರು. ಕರ್ಮಗಳು ಜನ್ಮಜನ್ಮಾಂತರದವರೆಗೂ ಹಿಂಬಾಲಿಸಿ ಬಂದು ತಮ್ಮ ತಮ್ಮ ಫಲಗಳನ್ನು ತಪ್ಪದೇ ನೀಡುತ್ತವೆ. ಸಂಸಾರಸಾಗರದಲ್ಲಿ ಜೀವಿಗಳನ್ನು ಕಟ್ಟಿಹಾಕುತ್ತವೆ. ಹೀಗಿದ್ದಾಗ ಎಷ್ಟು ಎಚ್ಚರಿಕೆ ಬೇಕು.

ಜೀವಿಗಳು ದೇವನಿಂದ ಅರಳಿದ ಕಿಡಿಗಳು. ಪುನಃ ಅವು ದೇವನಲ್ಲಿ ಸಂಯೋಗಗೊಂಡಾಗಲೇ ಮುಕ್ತಿ. ಭಗವಂತನ ಸಂಕಲ್ಪಕ್ಕನುಗುಣವಾಗಿ, ಜೀವಿಗಳು ತಮ್ಮ ಸುವೃತ್ತವನ್ನು ಪೂರ್ಣಗೊಳಿಸಲು, ಬಯಸುವುದು ನಾಲ್ಕು ಪುರುಷಾರ್ಥಗಳನ್ನು ಮಾತ್ರ. ಧರ್ಮ, ಅರ್ಥ, ಕಾಮಗಳೆಂಬ ಪುರುಷಾರ್ಥಗಳಲ್ಲಿ ನಮ್ಮ ಇಹ-ಪರ ಜೀವನಕ್ಕೆ ಬೇಕಾದ ಸಮಸ್ತವೂ ತುಂಬಿದೆ. ಆ ಹಾದಿಯಲ್ಲಿ ಸಾಗಿದಾಗ ಮೋಕ್ಷವು ಕಟ್ಟಿಟ್ಟ ಬುತ್ತಿ. ಆದ್ದರಿಂದ ಪುರುಷಾರ್ಥಗಳನ್ನಲ್ಲದೆ ಮಾನವನು ಬೇರೆ ಏನನ್ನೂ ಕೇಳುವುದಕ್ಕೆ ನಿಸರ್ಗದ ಅನುಮತಿಯಿಲ್ಲ. ಹಾಗೆ ನಿಸರ್ಗದ ನಿಯತಿಯನ್ನು ಮೀರಿದರೆ ಶಿಕ್ಷೆಯು ಅನಿವಾರ್ಯ.

“ಭಗವಂತನ ಪಾದದಲ್ಲಿ ತನ್ಮಯರಾದ ಭಕ್ತರು ಯಾವ ವರವನ್ನೂ ಬೇಡುವುದಿಲ್ಲಾಪ್ಪ. ಹಾಗೊಮ್ಮೆ ಅವರು ಬೇಡಿದರೆ  ‘ಅವರ’ರಾಗಿಬಿಡುತ್ತಾರೆ”. ಶ್ರೀರಂಗಮಹಾಗುರುಗಳು ಎನ್ನುತ್ತಿದ್ದರು. ವರ ಎಂದರೆ ಶ್ರೇಷ್ಠವಾದದ್ದು ಎಂದರ್ಥ. ನಾವು ಭಗವದಾಶಯಕ್ಕೆ ಹೊರತಾದ ಬೇಡಿಕೆಯನ್ನಿಟ್ಟರೆ ಭಗವತ್ಪಾದದಿಂದ ಕೆಳಗೆ ಜಾರಿ ‘ಅವರ’ರಾಗಿಬಿಡುತ್ತೇವೆ. ಭಕ್ತರ ಪ್ರಾರ್ಥನೆಯಾದರೋ ಪುರುಷಾರ್ಥಕ್ಕೆ ಒಳಪಟ್ಟೇ ಇರುತ್ತದೆ. “ತ್ವತ್ಪಾದಾಂಭೋರುಹಯುಗಗತಾ ನಿಶ್ಚಲಾ ಭಕ್ತಿರಸ್ತು”.ಎಂದು ಮಾತ್ರ ಅವರು ಬೇಡುತ್ತಾರೆ. ಅದರಲ್ಲಿ ನಮ್ಮ ಯೋಗಕ್ಷೇಮಕ್ಕೆ ಬೇಕಾದ ಎಲ್ಲವೂ ಅಡಗಿದೆ.’ಕಾಪಾಡಪ್ಪ’ಎಂಬ ಪ್ರಾರ್ಥನೆಯನ್ನು ಮಾತ್ರ ಮಾಡುವುದು ಎಂತಹ ಜಾಣತನವಲ್ಲವೇ?  

ಸೂಚನೆ:  04/08/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.