Saturday, August 3, 2019

ಇಂದ್ರನಿಗೂ ಬಗೆಹರಿಯದ ಒಗಟು (Indranigu bagehariyada ogatu)

ಲೇಖಕರು: ಡಾ|| ಕೆ.ಎಸ್. ಕಣ್ಣನ್


ನಮ್ಮ ಪುರಾಣಗಳಲ್ಲೆಲ್ಲ ತುಂಬಿರುವ ಕಥೆಯೆಂದರೆ ದೇವಾಸುರ ಯುದ್ಧದ ಕಥೆಯೇ. ವೇದೋಪನಿಷತ್ತುಗಳಲ್ಲೂ ಇದಿರುವುದೇ.

ಒಮ್ಮೆ ಯುದ್ಧವಾದಾಗ, ಅಸುರರು ಸೋತರು. ದೇವತೆಗಳು ಗೆದ್ದರು. ವಾಸ್ತವವಾಗಿ ಆದದ್ದೆಂದರೆ, “ದೇವತೆಗಳಿಗಾಗಿ ಬ್ರಹ್ಮವು ಗೆದ್ದಿತು”. ಹಾಗೆಂದೇ ಕೇನೋಪನಿಷತ್ತು ಹೇಳಿದೆ. ಆ ಕಥೆಯೇ ಇಲ್ಲಿಯದು.

ಗೂಢವಾದ ಕಾರ್ಯವು ಸುಲಭಕ್ಕೆ ಗೋಚರವಾಗದು – ದೇವತೆಗಳಿಗೂ! ಹೀಗಾಗಿ ಅವರು “ಇದು ತಮ್ಮದೇ ವಿಜಯ” (ಎಂದರೆ “ತಾವೇ ಗೆಲುವನ್ನು ಸಾಧಿಸಿದ್ದು”) – ಎಂದು ಭಾವಿಸಿಕೊಂಡರು!

ಬ್ರಹ್ಮಕ್ಕೆ ಇದೇನು ಗೋಚರವಾಗದೆ? ಆದರೆ ಅವರಿಗೆ ತಿಳಿವಳಿಕೆ ಕೊಡಬೇಕಲ್ಲ! ಅದಕ್ಕಾಗಿ ಇವರ ಮುಂದೆ ತೋರಿಕೊಂಡಿತು, ಬ್ರಹ್ಮ. ಆದರೆ ತನ್ನ ಸ್ವರೂಪವು ನಿಚ್ಚಳವಾಗಿ ಗೋಚರವಾಗುವಂತೆ ಅಲ್ಲ. ಯಾವುದೋ ಆಶ್ಚರ್ಯಕರವಸ್ತುವಿನಂತೆ – ಅಂದರೆ, ಉಪನಿಷತ್ತಿನ ಭಾಷೆಯಲ್ಲೇ ಹೇಳುವುದಾದರೆ, “ಯಾವುದೋ ಯಕ್ಷದಂತೆ”!

 ಆಗ ದೇವತೆಗಳು, “ಇದೇನಿದೆಂದು ತಿಳಿದು ಬಾ” ಎಂಬುದಾಗಿ ಅಗ್ನಿಗೆ ಹೇಳಿದರು. ಆ ಯಕ್ಷದ ಬಳಿ ಅಗ್ನಿ ಧಾವಿಸಿದ. “ನೀ ಯಾರು?” ಎಂದು ಯಕ್ಷವು ಆತನನ್ನು ಕೇಳಿತು. “ನಾನು ಅಗ್ನಿ, ಈ ಭೂಮಿಯ ಮೇಲಿರುವುದನ್ನೆಲ್ಲ ಸುಡಬಲ್ಲೆ!” ಎಂದ. “ಇದನ್ನು ಸುಡು” ಎಂದು ಹುಲ್ಲಿನ ಕಡ್ಡಿಯೊಂದನ್ನು ಅದಿಟ್ಟಿತು. ತನ್ನೆಲ್ಲ ವೇಗದಿಂದ ಅದರತ್ತ ಧಾವಿಸಿದರೂ ಆ ಕಡ್ಡಿಯನ್ನು ಸುಡಲಾಗಲಿಲ್ಲ. ಸೋಲೊಪ್ಪಿ ಹಿಂದಿರುಗಿ, “ಯಾವುದೀ ಯಕ್ಷವೆಂದು ನಾನರಿಯಲಾಗಲಿಲ್ಲ” ಎಂದು ದೇವತೆಗಳಲ್ಲಿ ಹೇಳಿಕೊಂಡ ಅಗ್ನಿದೇವ!

ಹಾಗೆಯೇ “ಎಲ್ಲವನ್ನೂ ಸೆಳೆದುಕೊಳ್ಳಬಲ್ಲೆ”ನೆಂದ ವಾಯುವಿಗೂ ಪರಾಭವವಾಯಿತು.

ಆಮೇಲೆ ಇಂದ್ರನೇ ಹೋಗಬೇಕಾಯಿತು. ಹೋದರೆ, ಆ ಯಕ್ಷವೇ ಅಗೋಚರ: ಮಾಯವಾಗಿ ಹೋಯಿತು! ಆದರೆ ಅದೇ ಆಕಾಶದಲ್ಲಿ “ಬಹುವಾಗಿ ಶೋಭಿಸುವ ಉಮಾಹೈಮವತಿಯು” ತೋರಿದಳು. ಅವಳನ್ನೇ ಇಂದ್ರ ಕೇಳಿದ. “ಯಾವುದಾ ಯಕ್ಷ?” ಎಂದು. “ಅದು ಬ್ರಹ್ಮ” ಎಂದು ಉಮೆಯು ಹೇಳಿದಳು. “ಬ್ರಹ್ಮದ ವಿಜಯದಿಂದಾಗಿ ನೀವು ಮಹಿಮಸಂಪನ್ನರಾಗಿದ್ದೀರಿ” ಎಂದೂ ಹೇಳಿದಳು. ಇದಾದ ಬಳಿಕವೇ ಇಂದ್ರನಿಗೆ ಜ್ಞಾನೋದಯವಾದದ್ದು. ಆಗಲೇ ಅದನ್ನು ಬ್ರಹ್ಮವೆಂದು ಆತನು ಅರಿತುಕೊಂಡದ್ದು.

ಬ್ರಹ್ಮಸ್ಫುರಣವು ಮಿಂಚು ಹೊಳೆದಂತೆ - ಎಂಬ ಉಪಮೆಯನ್ನು ಈ ಉಪನಿಷತ್ತು ಕೊಡುತ್ತದೆ. ಪೂಜ್ಯ ರಂಗಪ್ರಿಯಸ್ವಾಮಿಗಳು “ವಿದ್ಯುಲ್ಲೇಖೇವ ಭಾಸ್ವರಾ” ಎಂಬ ಸಂವಾದಿಯಾದ ವೇದೋಕ್ತಿಯನ್ನು ಇದರ ವಿವರಣೆಯ ಸಂದರ್ಭದಲ್ಲಿ ಸ್ಮರಿಸಿದ್ದರು.

“ಹಿಮವತ್ ಪ್ರದೇಶವೆಲ್ಲಾ ಭಗವಂತನ ತಪೋಭೂಮಿಯಪ್ಪಾ” ಎಂಬ ಶ್ರೀರಂಗಮಹಾಗುರುಗಳ ವಚನವು ಈ ಹೈಮವತೀ ಎಂಬ ತಪೋಗಮ್ಯವಾದ ಪರತತ್ತ್ವದ ದರ್ಶನವನ್ನೂ ಮಾಡಿಸುತ್ತದೆ.

ಸೂಚನೆ: 03/08/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.