Saturday, August 17, 2019

ನಚಿಕೇತನು ಕೇಳಿದ ಮೊದಲ ವರ (Nachikethanu kelida modala vara)

ಲೇಖಕರು: ಡಾ|| ಕೆ.ಎಸ್. ಕಣ್ಣನ್, 
ಡಿಲಿಟ್. ಪೀಠ-ಪ್ರಾಧ್ಯಾಪಕರು, ಐಐಟಿ, ಚೆನ್ನೈ.


ಕಠೋಪನಿಷತ್ತಿನಲ್ಲಿ ನಚಿಕೇತನ ಕಥೆ ಬರುತ್ತದೆ. ಅಲ್ಲಿ ತಂದೆ ವಾಜಶ್ರವಸನು ಪುತ್ರನಾದ ನಚಿಕೇತನನ್ನು ಯಮನ ಬಳಿಗೆ ಕಳುಹಿಸಿಕೊಡುತ್ತಾನಷ್ಟೆ. ಯಮನನ್ನು ಭೇಟಿಯಗಲು ಮೂರುದಿನ ಗಳಿಂದ ಕಾದಿದ್ದ ಆ ಬಾಲಕನಲ್ಲಿಗೆ ಬಂದ ಯಮನು ಆತನಲ್ಲಿ ಕ್ಷಮೆ ಯಾಚಿಸಿದನು! “ಅಯ್ಯಾ, ನಮಸ್ಕಾರಕ್ಕೆ ಯೋಗ್ಯನಾದ ಅತಿಥಿಯೇ! ಮೂರು ರಾತ್ರಿ ನಿರಾಹಾರನಾಗಿ ನನ್ನ ಮನೆಯಲ್ಲಿ ಉಳಿದುಕೊಂಡಿದ್ದೀಯೆ. ನಿನಗೆ ನಮಃ. ಮೂರು ರಾತ್ರಿಗಳಿಗೆ ಪ್ರತಿಯಾಗಿ ಮೂರು ವರಗಳನ್ನು ಕೇಳಿಕೋ” – ಎಂದನು.

“ನನ್ನ ತಂದೆಗೆ ಕಳವಳ ಹೋಗಲಿ. ಆತನಿಗೆ ಒಳ್ಳೆಯ ಮನಸ್ಸು ಉಂಟಾಗಲಿ. ನನ್ನ ಮೇಲಿನ ಕೋಪವು ಹೋಗಲಿ. ನಾನು ಹಿಂದಿರುಗಿದಾಗ ಆತನು ನನ್ನನ್ನು ಗುರುತಿಸಿ ಮಾತನಾಡಿಸುವಂತಾಗಲಿ. ಇದು ನಾ ಕೇಳುವ ಮೊದಲ ವರ” ಎಂದ ನಚಿಕೇತ. “ನಿನ್ನ ತಂದೆ ಮೊದಲಿನಂತೆಯೇ ಆಗುವನಯ್ಯ! ನಿನ್ನನ್ನು ಕಾಣುತ್ತಲೇ ಗುರುತಿಸುವನು. ಆತನ ಕೋಪವೆಲ್ಲ ಕಳೆದುಹೋಗುವುದು. ರಾತ್ರಿ ಸುಖವಾಗಿ ನಿದ್ರೆ ಮಾಡುವನು” – ಎಂದನು, ಯಮ.

“ನನಗೆ ಒಂದು ದೊಡ್ಡ ಲಾಭವಾಗಬೇಕು” – ಎಂದಲ್ಲ ನಚಿಕೇತ ಕೇಳುವುದು. ಮೊದಲು ತನ್ನ ತಂದೆಗೆ ಒಳ್ಳೆಯದಾಗಬೇಕೆಂದು: “ತಂದೆಯ ಕೋಪ-ಕಳವಳಗಳು ಕಳೆದು, ಆತ ಸುಮನಸ್ಕನಾಗಬೇಕು.” – ಎಂದು! ನಚಿಕೇತನು ಮುಂದೆ ಆತ್ಮವಿದ್ಯೆಯನ್ನೇ ಕೇಳಿ ಪಡೆಯುವನಾದರೂ ಅದಕ್ಕಾಗಿ ಐಹಿಕವಾದ ಸುಖವನ್ನೆಲ್ಲ ಬಿಡಲಿಲ್ಲ. ತಾನು ಮಾತ್ರವಲ್ಲ, ತನಗೆ ಸೇರಿದವರೂ ಸುಖ- ನೆಮ್ಮದಿಗಳನ್ನು ಕಾಣಬೇಕೆಂಬುದು ಆತನ ಆಶಯ!

“ಸದುದ್ದೇಶದಿಂದ ತಾನಿತ್ತ ಸಲಹೆಯನ್ನು ತಿರಸ್ಕರಿಸಿದನಲ್ಲವೆ, ತನ್ನ ತಂದೆ?  ಅವನೂ ಪರಿಭವಪಡಲಿ” – ಎಂದು

ಭಾವಿಸುವವನಲ್ಲ, ನಚಿಕೇತ. ತಂದೆಯು ತನ್ನ ವರ್ತನೆಗೆ ತಾನೇ ಪಶ್ಚಾತ್ತಾಪವನ್ನು ಪಡುವವನು – ಎಂಬುದನ್ನೂ ಆತ ಬಲ್ಲ.

ನಾವು ಮತ್ತು ನಮ್ಮವರು - ಎಲ್ಲ ಸೇರಿ ಒಂದು ದೊಡ್ಡ ವೃಕ್ಷದಂತೆ. “ವೃಕ್ಷದ ಯಾವುದೇ ಶಾಖೆಗೆ ಖಾಯಿಲೆ ತಗುಲಿದರೂ ಅದು ಮಿಕ್ಕ ಶಾಖೆಗಳ ಮೇಲೂ ಪರಿಣಾಮ ಬೀರುವಂತಹುದೇ” – ಎಂಬ ತತ್ತ್ವವನ್ನು ಶ್ರೀರಂಗಮಹಾಗುರುಗಳು ಪ್ರತಿಪಾದಿಸುತ್ತಿದ್ದರು.

ಧನಸಂಪಾದನೆ-ಕೀರ್ತಿಸಂಪಾದನೆಗಳಿಗಿಂತ ಮನಸ್ಸಿನ ನೆಮ್ಮದಿಯ ಸಂಪಾದನೆ ಮುಖ್ಯ. “ತನ್ನ ತಂದೆಗೆ ನೆಮ್ಮದಿಯೊದಗಲಿ” ಎಂದೇ ನಚಿಕೇತನು ಕೇಳಿಕೊಳ್ಳುವುದು. ಜೀವನದಲ್ಲಿ ತಾನು-ತನ್ನವರೆಂಬ ಸ್ವಸುಖ-ಪರಸುಖಗಳೂ ಅವಶ್ಯ. ಇದು ಇಹ-ಸುಖ. ಇಷ್ಟಕ್ಕೇ ನಿಲ್ಲುವುದೂ ಅಲ್ಲ. ಇಹಸುಖದ ಜೊತೆಗೆ ಪರಸುಖವೂ ಮುಖ್ಯ – ಎಂಬುದನ್ನು ಮನಗಾಣಿಸುತ್ತದೆ, ಈ ಉಪನಿಷತ್ತಿನ ಈ ಸರಳ-ಸುಭಗ ಪ್ರಸಂಗ : ಪರವು ಪ್ರಧಾನ, ಆದರೆ ಇಹವು ಅಮುಖ್ಯವಲ್ಲ.

ಸೂಚನೆ: 17/08/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.