ಶ್ರೀರಂಗ ಮಹಾಗುರುಗಳ ನೋಟದ ಲೇಖನ
ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ
ಶ್ರಾವಣ ಶುಕ್ಲ ಪಂಚಮಿಯನ್ನು ನಾಗಪಂಚಮೀ ಎಂದು ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ. ನಾಗಪಂಚಮಿಯಂದು ಏಳುಹೆಡೆಯ ಸರ್ಪಾಕೃತಿಯ ಚಿತ್ರಬರೆದು ತಾಳೆಹೂವಿನಿಂದ ಅದಕ್ಕೆ ಹಾಲೆರೆಯುವ ಪದ್ಧತಿ ಇದೆ. ಇದಕ್ಕೆ ತನಿಎರೆಯುವುದು ಎಂಬ ಹೆಸರಿದೆ. ಅಂತೆಯೇ ಅಂದು ಬೆನ್ನುಮೂಳೆಯ ಆರಂಭದ ಎಡೆ, ಹೊಕ್ಕಳು, ಹೃದಯ, ಗಂಟಲಗುಳಿ, ಅದರ ಹಿಂಭಾಗದ ಬೆನ್ನಿನ ನೇರ, ನೆತ್ತಿ ಇವುಗಳಿಗೆ ಹಾಲು ತುಪ್ಪವನ್ನು ಸವರುವುದೂ ರೂಢಿಯಲ್ಲಿದೆ. ನಾಗದ ವಾಸದ ಎಡೆಯಾದ ಹುತ್ತಗಳಿರುವಲ್ಲಿಗೆ ಹೋಗಿ ಹಾಲು ತುಪ್ಪಗಳನ್ನೆರೆಯುವ ರೂಢಿಯೂ ಇದೆ.ಆದರೆ ನಾಗಪೂಜೆಯ ಬಗ್ಗೆ ಸಾಕಷ್ಟು ಟೀಕೆಗಳನ್ನುಕೇಳುತ್ತೇವೆ. ಕೆಲವನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಆರ್ಯ ದ್ರಾವಿಡ ವಾದ:
ಭಾರತದಲ್ಲಿ ಎಲ್ಲ ವಿಷಯಗಳಿಗೂ ಆರ್ಯ ದ್ರಾವಿಡ ವಾದವನ್ನು ಮುಂದೆಮಾಡುವವರು ಹೇಳುವ ಮಾತು- ದ್ರಾವಿಡ ಅಥವಾ ಆದಿವಾಸಿ ಜನಾಂಗದಲ್ಲಿ ಈ ನಾಗ ಪೂಜೆ ಬಳಕೆಯಲ್ಲಿತ್ತು, ನಂತರ ಆರ್ಯ-ದ್ರಾವಿಡ ಸಂಗಮವಾದಾಗ ಆರ್ಯಸಂಸ್ಕೃತಿಯಲ್ಲಿಯೂ ಈ ನಾಗಪೂಜೆ ಸೇರಿತು. ಶ್ರೀಕೃಷ್ಣನ ಕಾಲೀಯ ತಾಂಡವವು ಈ ನಾಗ ಪೂಜೆಯ ಕ್ಷೀಣ ದಶೆಯನ್ನು ಸೂಚಿಸುತ್ತದೆ ಎಂಬುದು ಅಂತಹ ಮಹಾಮೇಧಾವಿಗಳ ಮಾತು.
ದೇವತಾಮೂರ್ತಿಗಳಲ್ಲಿ ನಾಗನ ಹಿನ್ನೆಲೆ:
ದೇವತೆಗಳಿಗೆ ಮತ್ತು ನಾಗಕ್ಕೆ ನಿಕಟವಾದ ಸಂಬಂಧ ಕಲ್ಪಿಸಲಾಗಿದೆ. ವಿಷ್ಣು ಶೇಷಶಾಯಿ. ಶಿವ ನಾಗಾಭರಣಧರ. ಗಣಪತಿ ನಾಗಯಜ್ಞೋಪವೀತಿ. ಇದಲ್ಲದೇ ಸುಬ್ರಹ್ಮಣ್ಯ, ನಾಗರಾಜ ಎಂಬ ಹೆಸರಿನಿಂದ ಸ್ವತಂತ್ರವಾಗಿಯೇ ನಾಗನನ್ನು ಪೂಜಿಸುವುದೂ ನಮಗೆಲ್ಲರಿಗೂ ವೇದ್ಯವಾದ ವಿಷಯವೇ.
ಮೂರು, ಐದು, ಏಳು ಹೆಡೆಗಳ ಸರ್ಪಗಳು.
ಮಾನವ-ನಾಗ:
ತನ್ನ ಬುದ್ಧಿಸಾಮರ್ಥ್ಯಗಳಿಂದ ನಿಸರ್ಗದ ಆಳ-ಅಗಲಗಳ ಅಳತೆಯನ್ನು ಮಾಡುತ್ತಾ ಅನೇಕ ರಂಗಗಳಲ್ಲಿ ಯಶಸ್ಸನ್ನು ಸಾಧಿಸಿದ ಮಾನವನೆಲ್ಲಿ? ತಾನು ಹುಟ್ಟಿದಂದಿನಿಂದ ನಿಸರ್ಗವಿಟ್ಟಂತೆಯೇ ಇರುವ ಯಾವ ಹೆಗ್ಗಳಿಕೆಯೂ ಇಲ್ಲದ ನಾಗವೆಲ್ಲಿ? ಅಂತಹ ಕ್ಷುದ್ರ ವಿಷಜಂತುವನ್ನು ನಿಸರ್ಗದ ಮಹಾನ್ವೇಷಕನಾದ ಮಾನವ ಪೂಜಿಸುವುದು ಮನುಕುಲಕ್ಕೇ ಅಪಮಾನವಲ್ಲವೇ?
ಇಂತಹ ಪರಿಸರದಲ್ಲಿ ನಾಗಪೂಜೆ ಹೇಗೆ ಸಮರ್ಥನೀಯ? ಜೀವನಕ್ಕೆ ಅದು ಯಾವ ಮೇಲ್ಮೆಯನ್ನು ತರುತ್ತದೆ. ಎಲ್ಲೂ ಕಾಣದ ಮೂರು, ಐದು, ಏಳು, ಸಹಸ್ರ ಫಣಗಳ ಸರ್ಪಗಳ ಕಲ್ಪನೆ ಹೇಗೆ ಮೂಡಿಬಂತು? ದೇವತೆಗಳಿಗೂ ಸರ್ಪಕ್ಕೂ ಕಲ್ಪಿಸಿರುವ ಸಂಬಂಧದ ತಿರುಳೇನು? ಎಲ್ಲವೂ ಉತ್ತರವನ್ನು ಬಯಸುವ ಪ್ರಶ್ನೆಗಳಾಗಿವೆ. ನಾಗಪೂಜೆಯು ಕ್ಷುದ್ರ ವಿಷಜಂತುವಿನ ಮೂಢ ಆರಾಧನೆಯೇ ಆದರೆ ಅದನ್ನು ಕೈಬಿಡುವುದೇ ಲೇಸು. ಇದಲ್ಲದೇ ವಸ್ತುನಿಷ್ಠವಾದ ವಿಷಯಗಳೂ ಆ ಪೂಜೆಯಲ್ಲಿದೆ ಎಂಬುದಾದರೆ ಅಂತಹ ಮೌಲಿಕವಾದ ವಿಷಯಗಳು ಬೆಳಕಿಗೆ ಬರಬೇಕಾಗುತ್ತದೆ.
ಮಹರ್ಷಿ ಪ್ರಣೀತ ಆಚರಣೆ:
ನಿಸರ್ಗವನ್ನೂ,ಜೀವನವನ್ನೂ, ಒಳತುಂಬುನೋಟದಿಂದ ಅನ್ವೇಷಿಸಿ ಅಂತಹ ಅನ್ವೇಷಣೆಯಿಂದ ಬಂದ ನಿಷ್ಕರ್ಷೆಯಿಂದ ಜೀವನದ ನಡವಳಿಕೆಗಳನ್ನು ರೂಪಿಸಿದ ನಮ್ಮ ಸನಾತನ ಭಾರತೀಯ ಮಹರ್ಷಿಗಳಿಂದಲೇ ಈ ನಾಗಪೂಜೆಯೂ ರೂಪವನ್ನು ತಳೆದಿದೆ ಎಂಬುದನ್ನು ನಾವು ಗಮನಿಸಬೇಕು. ಅವರು ಪೂಜಿಸಿದ ಆ ನಾಗ ಕೇವಲ ಕ್ಷುದ್ರಜಂತು ಮಾತ್ರವಲ್ಲ ಎನ್ನುವುದೂ ಅಷ್ಟೇ ಸತ್ಯವಾದ ವಿಷಯ. ಹಾಗಾದರೆ ಯಾವುದು ಆ ನಾಗ? ಎಲ್ಲಿದೆ?
ನಾಗ-ಕುಂಡಲಿನೀ
ಪ್ರತಿ ಜೀವಿಗಳ ಮೂಲಾಧಾರ ಎಂಬ ಶರೀರದ ಕೇಂದ್ರದಲ್ಲಿ ಸುಪ್ತವಾಗಿ ಸುತ್ತು ಹಾಕಿಕೊಂಡಿರುವ ಕುಂಡಲಿನೀ ಎಂಬ ಹೆಸರಿನಿಂದ ಕರೆಯಲ್ಪಡುವ ಶಕ್ತಿಯೇ ಅವರು ಗುರುತಿಸಿದ ನಾಗ ಶಕ್ತಿ. ಅದು ಮೆದುಳುಬಳ್ಳಿಯಾಗಿ ವಿಕಾಸಗೊಂಡು ನಂತರ ಬೆನ್ನುಮೂಳೆಯಾಗುವ ಸುಷುಮ್ನಯೇ ಜೀವಿಯ ಇಹ ಮತ್ತು ಪರಗಳಿಗೆ ಆಧಾರವಾದ ಶಕ್ತಿಯನ್ನೊದಗಿಸುವ ಕೇಂದ್ರ. ನಮ್ಮ ಭೌತಿಕ ಜೀವನಕ್ಕೆ ಅಗತ್ಯವಾದ ಕೇಂದ್ರಗಳೂ ಆ ಮೂಳೆಯ ಪರ್ವಸ್ಥಾನದಿಂದಲೇ ಅರಳುತ್ತದೆ ಎಂಬುದನ್ನು ಆಧುನಿಕ ವಿಜ್ಞಾನವೂ ಒಪ್ಪುತ್ತದೆ. ಬೆನ್ನೆಲುಬೇ ಜೀವನದ ಆಧಾರ ಎನ್ನುವ ಮಾತೂ ಜನಜನಿತವಾಗಿದೆ.
ಆ ಬೆನ್ನೆಲುಬಿನ ಹೊರರಹಸ್ಯವನ್ನು ಆಧುನಿಕ ವೈದ್ಯವಿಜ್ಞಾನವು ಬಯಲಿಗೆಳೆದಿರುವಂತೆ ಅದರ ಒಳರಹಸ್ಯವನ್ನು ಯೋಗವಿಜ್ಞಾನವು ಅರಿತು ಹೊರಹೊಮ್ಮಿಸಿದೆ. ಅದರಂತೆ ಮೂಲಾಧಾರಪ್ರದೇಶದಲ್ಲಿ ಸುತ್ತುಹಾಕಿಕೊಂಡಿರುವ ಆ ಕುಂಡಲಿಯು ಸುಪ್ತನಾಗದಂತೆ ಇರುತ್ತದೆ. ” ಕುಂಡಲೀ ಸುಪ್ತನಾಗವತ್” ಎಂದು ಯೋಗ ಶಾಸ್ತ್ರವು ಕೊಂಡಾಡುವುದೂ ಇದನ್ನೇ. ಸುಷುಮ್ನಾರಂಧ್ರದ ಒಳರಹಸ್ಯವನ್ನರಿಯದ ಅಥವಾ ಅರಿಯುವ ಪ್ರಯತ್ನವನ್ನೇ ಮಾಡದ ಜೀವಿಗಳ ಪಾಲಿಗೆ ಅದು ಸುಪ್ತವಾಗಿಯೇ ಇರುತ್ತದೆ. ಆದರೆ ಅವರಿಗೂ ಇಂದ್ರಿಯಜೀವನಕ್ಕೆ ಬೇಕಾದ ಚೈತನ್ಯರಸವು ಹರಿಯುವುದು ಆ ಶಕ್ತಿಯ ಕಡೆಯಿಂದಲೇ.
ಇದರ ಮರ್ಮವರಿತ ಶಂಕರ ಭಗವತ್ಪಾದರು ತಮ್ಮ ಯೋಗತಾರಾವಳಿಯಲ್ಲಿ ಆ ನಾಗನನ್ನು ಹೀಗೆ ವರ್ಣಿಸುತ್ತಾರೆ:
ಓಡ್ಯಾಣ ಜಾಲಂಧರ ಮೂಲಬಂಧೈಃ ಉನ್ನಿದ್ರಿತಾಯಾಂ ಉರಗಾಂಗನಾಯಾಂ
ಪ್ರತ್ಯಙ್ಮುಖತ್ವಾತ್ಪ್ರವಿಶನ್ ಸುಷುಮ್ನಾಂ ಗಮಾಗಮೌ ಮುಂಚತಿ ಗಂಧವಾಹಃ ||
ಉಡ್ಯಾಣ, ಜಾಲಂಧರ, ಮೂಲ ಎಂಬ ಬಂಧಗಳಿಂದ ನಾಗ ಶಕ್ತಿಯು ಎಚ್ಚರಗೊಳಿಸಲ್ಪಡುತ್ತದೆ. ಆಗ ಹಿಮ್ಮುಖನಾಗಿ ಸುಷುಮ್ನೆಯನ್ನು ಪ್ರವೇಶಿಸಿದ ಪ್ರಾಣಶಕ್ತಿಯು ತನ್ನ ಗತಾಗತಿಯನ್ನು ಬಿಡುತ್ತದೆ. ಎಂಬುದು ಅನುಭವಿಗಳ ಮಾತು.
ಮೂಲಬಂಧವೆಂಬುದು ಪೃಷ್ಠಾಸ್ಥಿಮೂಲದಲ್ಲಿ ಏರ್ಪಡುವ ಒಂದು ಕಟ್ಟು. ಉಡ್ಯಾಣಬಂಧವು ಉದರ ಅಥವಾ ನಾಭಿದೇಶದಲ್ಲಿ ಏರ್ಪಡುವ ಕಟ್ಟು. ಜಾಲಂಧರವೆಂಬುದು ಕಂಠಪ್ರದೇಶದಲ್ಲಿ ಏರ್ಪಡುವ ಒಂದು ಕಟ್ಟು. ಈ ಮೂರೂ ಕಟ್ಟೂ ಏರ್ಪಟ್ಟಾಗ ಆ ಸಂದರ್ಭದಲ್ಲಿ ಏಳುವ ನಾಗಶಕ್ತಿ, ಕುಂಡಲಿನೀ ಶಕ್ತಿ. ಅದುವೇ ಅವರು ಪೂಜಿಸಿದ ನಾಗ ಶಕ್ತಿ. ತಮ್ಮ ಒಳಮುಖಜೀವನದ ನಡೆಯಿಂದ ಸುಷುಮ್ನೆಯನ್ನು ಪ್ರವೇಶಿಸುವ ಸಾಹಸಕ್ಕಿಳಿದು, ಆ ಬಗ್ಗೆ ಸೂಕ್ತ ಮಾರ್ಗದರ್ಶನ, ಗುರುವಿನ ಅನುಗ್ರಹವನ್ನು ಪಡೆದು ಸಾಧನೆ ಮಾಡುವವರಿಗೆ ಪ್ರಾಣಶಕ್ತಿಯು ಸುಷುಮ್ನೆಯಲ್ಲಿ ಪ್ರವೇಶಿಸತೊಡಗಿದಾಗ ಆ ಸುಪ್ತನಾಗವು ಎಚ್ಚರಗೊಳ್ಳುತ್ತದೆ ತನ್ನ ಸುತ್ತುಗಳನ್ನು ಬಿಚ್ಚುತ್ತದೆ. ಆ ಶಕ್ತಿಯು ಶರೀರದ ಆರೂ ಕೇಂದ್ರಗಳನ್ನು ಭೇದಿಸಿಕೊಂಡು ಏಳನೆಯದಾದ ಸಹಸ್ರಾರವೆಂಬ ಎಡೆಯಲ್ಲಿ ನೆಲೆ ನಿಲ್ಲುತ್ತದೆ.
ಅದು ವಿದ್ಯುಲ್ಲೇಖೆಯಂತೆ ಮಿನುಗುತ್ತದೆ. ಜೀವನದ ಒಳ ರಹಸ್ಯವನ್ನೆಲ್ಲವನ್ನೂ ಬಚ್ಚಿಟ್ಟುಕೊಂಡಿರುವ ಜ್ಞಾನ ಭಂಡಾರವದು. ಪ್ರಾಮಾಣಿಕವಾದ ಪ್ರಯತ್ನದಿಂದ ಜೀವನದ ಒಳರಹಸ್ಯವನ್ನರಿಯಲು ಸಾಧನೆ ಮಾಡುವವರಿಗೆ ಸುಷುಮ್ನಾದ್ವಾರವನ್ನು ತೆರೆದು ಕಾಪಾಡುವ ತಾಯಿ ಅವಳು. ಪೂಜ್ಯರಾದ ಶ್ರೀ ರಾಮಭದ್ರಾಚಾರ್ಯರು ಒಂದು ಉದಾಹರಣೆ ಕೊಟ್ಟಿದ್ದರು. ನಾವು ನಮ್ಮ ಜಮೀನನ್ನು ಮರೆತುಬಿಟ್ಟಿದ್ದೇವೆ. ಸುಷುಮ್ನೆಯನ್ನು ಮರೆತಿದ್ದೇವೆ. ಅದನ್ನು ನಮ್ಮ ಜಮೀನು ಎಂದು ಅರಿತು ಮತ್ತೆ ಮತ್ತೆ ಸಾಧನೆಯಿಂದ ಅದರ ಕಡೆಗೆ ಹೆಜ್ಜೆ ಹಾಕುತ್ತಿದ್ದರೆ ಆ ಜಮೀನನ್ನು ಕಾಯುತ್ತಿರುವ ತಾಯಿ ನಮಗೆ ದ್ವಾರವನ್ನು ಬಿಟ್ಟುಕೊಡುತ್ತಾಳೆ.ಅದಿಲ್ಲದಿದ್ದಾಗ ಅವಳು ಆ ದ್ವಾರವನ್ನು ಭದ್ರವಾಗಿ ಮುಚ್ಚಿರುತ್ತಾಳೆ-ಎಂಬುದಾಗಿ. ಆ ಜ್ಞಾನ ಭಂಡಾರವಾದ ಶಕ್ತಿಯ ನಡೆಯು ಹೊರಗೆ ಸುತ್ತನ್ನು ಬಿಚ್ಚುವ ಸರ್ಪದ ನಡೆಯನ್ನೂ, ಮತ್ತು ಅದು ಮೇಲೇಳುವ ನಡೆಯು ಸರ್ಪದ ಗತಿಯನ್ನೂ ಹೋಲುವುದರಿಂದ ಅದನ್ನೂ ಸರ್ಪ ಅಥವಾ ನಾಗ ಎಂದು ಕರೆದರು. ಅಂದರೆ ಜೀವನ ವಿಕಾಸಕ್ಕೆ ಬೇಕಾದ ಚೈತನ್ಯರಸಧಾರೆಯನ್ನೆರೆಯುವ, ಒಳಗೆ ಸರ್ಪದ ನಡೆಯಿಂದ ಗೋಚರವಾಗುವ ಮಿಂಚಿನ ಕಾಂತಿಯುಳ್ಳ ಮಹಾಶಕ್ತಿಯೇ ಕುಂಡಲಿ ಅಥವಾ ಕುಂಡಲಿನೀ. ಅದೇ ಅವರು ಪೂಜಿಸಿದ ನಾಗ ಶಕ್ತಿಯೇ ಹೊರತು ಹೊರಗಿನ ವಿಷಜಂತುವಲ್ಲ.
ತಂತ್ರ ಶಾಸ್ತ್ರ:
ತಂತ್ರಶಾಸ್ತ್ರದ ಈ ಮಾತು ಇದನ್ನು ಇನ್ನೂ ಸ್ಪಷ್ಟಗೊಳಿಸುತ್ತದೆ.:
ಮೂಲೋನ್ನಿದ್ರ ಭುಜಂಗರಾಜಮಹಿಷೀಂ ಯಾಂತೀಂ ಸುಷುಮ್ನಾಂತರಂ
ಭಿತ್ವಾಧಾರ ಸಮೂಹ ಮಾಶು ವಿಲಸತ್ಸೌದಾಮಿನೀ ಸನ್ನಿಭಾಂ |
ವ್ಯೋಮಾಂಭೋಜ ಗತೇಂದುಮಂಡಲ ಗಲದ್ದಿವ್ಯಾಮೃತೌಘಪ್ಲುತಂ
ಸಂಭಾವ್ಯ ಸ್ವಗೃಹಂ ಗತಾಂ ಪುನರಿಮಾಂ ಸಂಚಿಂತಯೇತ್ಕುಂಡಲೀಂ ||
ಮೂಲಾಧಾರದೆಡೆಯಲ್ಲಿ ಎಚ್ಚೆತ್ತ ಸರ್ಪರಾಣಿ ಸುಷುಮ್ನೆಯಲ್ಲಿ ಸಂಚರಿಸುತ್ತಿರುವಾಕೆ. ಆಧಾರಾದಿ ಆರು ಚಕ್ರಗಳನ್ನೂ ಭೇದಿಸಿ ಮಿಂಚಿನ ಬಳ್ಳಿಯಂತೆ ಹೊಳೆಯುತ್ತಿರುವಾಕೆ. ದಹರಾಕಾಶದಲ್ಲಿರುವ ಸಹಸ್ರಾರಕಮಲ ಪ್ರದೇಶದಲ್ಲಿರುವ ಚಂದ್ರಮಂಡಲದಿಂದ ಅಮೃತವನ್ನು ಹರಿಸುತ್ತಿರುವುದನ್ನು ಗಮನಿಸಿ ಆ ಕುಂಡಲಿಯು ತನ್ನ ಮನೆ ಸೇರಿರುವುದನ್ನರಿತು ಅವಳನ್ನು ಚಿಂತಿಸಬೇಕು ಎಂಬುದಾಗಿದೆ. ಅಂತಹ ಕುಂಡಲಿನಿಯನ್ನು ತಮ್ಮ ವಶಪಡಿಸಿಕೊಂಡಿರುವುದರಿಂದಲೇ ಅದು ಶಿವ, ವಿಷ್ಣು ದೇವತೆಗಳ ಶಿರೋಭಾಗದಲ್ಲಿ ಕಂಗೊಳಿಸುವುದು. ಮೂಲಾಧಾರದಿಂದ ಎಚ್ಚೆತ್ತು ಸರಸರನೆ ಮೇಲೆ ಹರಿದು ಸಹಸ್ರಾರದಲ್ಲಿ ಶೋಭಿಸುತ್ತಿರುವುದು.
ಹೀಗೆ ಅವರು ಆರಾಧಿಸಿರುವ ನಾಗ ಹೊರ ವಿಷಜಂತುವಲ್ಲ. ಜೀವನಕ್ಕೆ ಚೈತನ್ಯವನ್ನೆರೆಯುವ ಜೀವನದ ಸಾರವಾದ ಶಕ್ತಿ, ಅದರ ಹಾದಿ ಹಿಡಿದು ಹೊರಟಾಗ ಜೀವಿಗಳನ್ನು ನೆಲೆ ಮುಟ್ಟಿಸಬಲ್ಲ ಮಹಾಶಕ್ತಿ. ಆ ಸುಷುಮ್ನಾಂತರ್ಗತವಾದ ಮಹಾಶಕ್ತಿಯೇ ಜೀವನದ ಒಳಹೊರ ರಹಸ್ಯಗಳನ್ನು ಬಿಚ್ಚಿಕೊಡುವ ಭಂಡಾರವಾದುದರಿಂದಲೇ ಅದರ ಆರಾಧನೆ. ಒಳಗೆ ಪ್ರಣವ ರೂಪವಾಗಿ ಮೊಳಗುವ ಮಹಾಶಕ್ತಿಯೂ ಅದೇ.
ವಿಷ್ಣು ಸರ್ಪಶಯನ:
ಶಿವ ನಾಗಾಭರಣ:
ಈ ಕುಂಡಲಿನೀ ಶಕ್ತಿಯೇ ಶರೀರವ್ಯಾಪಿಯಾಗಿ ಅದರ ಬಗೆಬಗೆಯ ಎಡೆಗಳಲ್ಲಿ ಬಗೆಬಗೆಯ ಕೆಲಸವನ್ನು ನಿರ್ವಹಿಸುತ್ತಿರುವುದರಿಂದ ಅದನ್ನು ಸೂಚಿಸಲು ಶಿವನ ಶರೀರದ ಬಗೆಬಗೆಯ ಎಡೆಗಳಲ್ಲಿ ನಾಗಾಭರಣವಿರುವುದು. ಮೇಲೆದ್ದ ಕುಂಡಲಿನಿಯ ಜ್ಞಾನದೃಷ್ಟಿಗೋಚರನಾದ ಮಹಾದೇವನವನು.
ಗಣಪತಿ ನಾಗಯಜ್ಞೋಪವೀತಿ:
ಯಜ್ಞ್ನೋಪವೀತವು ಸೃಷ್ಟಿರಹಸ್ಯಗಳೆಲ್ಲವನ್ನೂ ಒಳಗೊಂಡ ಸೂತ್ರವಾಗಿದೆ. ಜೀವಶಕ್ತಿಯೇ ಆದ ಕುಂಡಲಿನಿಯು ಜೀವದ ಗತಿಯನ್ನು ಸೂಚಿಸುವ ಯಜ್ಞೋಪವಿತವು ಆಗಿದೆ ಎಂಬುದನ್ನು ಸೂಚಿಸಲು ಮೂಲಾಧಾರದ ದೇವತೆಯಾದ ಗಣಪತಿಯು ನಾಗಯಜ್ಞೋಪವೀತಿಯಾಗಿದ್ದಾನೆ.
ಸಹಸ್ರಾರ ಪ್ರದೇಶದಲ್ಲಿ ಕಾಂತಿಯುತವಾಗಿ ಬೆಳಗುವ ಫಣಗಳು ಗೋಚರವಾಗುವುದರಿಂದ ಸಹಸ್ರ ಫಣ ಸರ್ಪವೂ ಅದೇ ಆಗಿದೆ.
ತ್ರಿಗುಣಗಳೇ ಮೂರು ಮುಖವಾಗಿ ನಡೆದ ಸೃಷ್ಟಿಶಕ್ತಿಯನ್ನು ಮೂರು ಹೆಡೆಯು ಸೂಚಿಸುತ್ತಿದೆ. ಆ ಶಕ್ತಿಯು ಸೃಷ್ಟ್ಯುನ್ಮುಖವಾಗಿ ಕೆಲಸ ಮಾಡುವ ರಹಸ್ಯವನ್ನೇ ಹೇಳುತ್ತಿದೆ. ಈ ತರಹದ ಹಾವು ಹೊರಗಿಲ್ಲವೆಂಬುದು ಅದನ್ನು ತಂದವರಿಗೂ ಗೊತ್ತು. ಅಂತೆಯೇ ಪಂಚಪ್ರಾಣ ಶಕ್ತಿಗಳು ಅಥವಾ ಸಪ್ತ ಪ್ರಾಣ ಶಕ್ತಿಗಳು ಕೇವಲ ಇಂದ್ರಿಯಮುಖವಾದ ಪ್ರವೃತ್ತಿಯನ್ನು ಬಿಟ್ಟು ಜ್ಞಾನ ಮುಖವಾದಾಗ ಎಲ್ಲ ವೃತ್ತಿಗಳೂ ಜ್ಞಾನದ ನೆಲೆಯತ್ತಲೇ ಬೆಳೆದು ಜ್ಞಾನದ ಪರಮರಹಸ್ಯವನ್ನು ಜೀವಿಯು ಮುಟ್ಟಿದಾಗ ಆ ವೃತ್ತಿಗಳೆಲ್ಲವೂ ಮೇಲ್ಮುಖವಾಗಿವೆ ಎಂಬುದನ್ನೇ ಐದು ಅಥವಾ ಏಳು ಹೆಡೆಗಳು ತೋರಿಸುತ್ತವೆ.
ಆದಿಶೇಷನ ಮೇಲೆ ಭೂಮಿ ನಿಂತಿದೆ;
ಆ ಮಹಾಶಕ್ತಿಯು ಯಾವ ಮೂಲಧಾರಪ್ರದೇಶದಲ್ಲಿ ಸುತ್ತುಹಾಕಿಕೊಂಡಿದೆಯೋ ಆ ಎಡೆಯನ್ನು ಪೃಥ್ವೀ ತತ್ತ್ವದ ಎಡೆಯೆಂದು ಜ್ಞಾನಿಗಳು ಗುರುತಿಸುವುದರಿಂದ ಸುತ್ತು ಹಾಕಿದ ಆದಿಶೇಷನ ಮೇಲೆ ಭೂಮಿ ನಿಂತಿದೆ ಎಂಬ ಮಾತು ಒಳಸತ್ಯವನ್ನು ಸಾರುತ್ತದೆ. ಇಡೀ ವಿಶ್ವವೇ ವಾಸ್ತವವಾಗಿ ಆ ಶಕ್ತಿಯ ಬಲದಿಂದಲೇ ನಿಂತಿರುವುದು.
ಶ್ರೀಕೃಷ್ಣನ ಕಾಲೀಯ ನರ್ತನ:
ಯೋಗಮಾರ್ಗಕ್ಕೆ ಅನುಕೂಲಕರವಾದ ನಾಗಶಕ್ತಿಯಂತೆಯೇ ಅದಕ್ಕೆ ವಿಘ್ನವನ್ನುಂಟುಮಾಡುವ ಸರ್ಪಶಕ್ತಿಯೂ ಉಂಟು. ಅಂತಹ ಸರ್ಪಶಕ್ತಿಯನ್ನು ಮೆಟ್ಟಬೇಕು. ಕೃಷ್ಣವರ್ಣದ ಕಾಳಿಂಗ ಅಂತಹ ಯೋಗವಿಘ್ನಕಾರಿಯಾದ ಮಹಾಸರ್ಪ. ಅದನ್ನು ಕೃಷ್ಣನು ಮೆಟ್ಟಿದುದು ಯೋಗವಿಘ್ನವನ್ನು ಅಳಿಸಿ ಯೋಗದಹಾದಿಯನ್ನು ತೆರೆಸುವ ಸೂಚನೆಯೇ ಹೊರತು ಹೊರಹಾವನ್ನು ಮೆಟ್ಟುವ ಅಥವಾ ನಾಗಾರಾಧನೆಯ ಕ್ಷೀಣದೆಸೆಯ ಕುರುಹಲ್ಲ.
ಒಳನಡೆಯ ನಾಗಾರಾಧನೆ
ಒಳನಡೆಯಲ್ಲಿ ತಾವು ಕಂಡ ನಾಗ ಶಕ್ತಿಯೇ ಅವರ ಆರಾಧನೆಯ ವಿಷಯ. ಅದು ನಾಗ ಶಕ್ತಿ ಎನ್ನುವುದಕ್ಕಿಂತಲೂ ಜೀವನದ ಮೂಲಜ್ಯೋತಿಯ ನಾಗರೂಪವೇ ಅದು. ಆ ನಾಗಾರಾಧನೆಯ ಮೂಲಕ ಅವರು ಆರಾಧಿಸಿದುದು ಆ ಮೂಲಜ್ಯೋತಿಯನ್ನೇ.
ನಾಗಾರಾಧನೆಯ ರಹಸ್ಯ, ನಾಗಪಂಚಮಿಯ ಆಚರಣೆಯ ಮಹತ್ವ;
ಪ್ರತಿ ಜೀವಿಯ ಮೂಲಾಧಾರ ಕೇಂದ್ರದಲ್ಲಿ ಸುಪ್ತವಾಗಿದ್ದು ಸೂಕ್ತವಾಗಿ ಆರಾದಿಸಲ್ಪಟ್ಟಾಗ ಜೀವನದ ಒಳರಹಸ್ಯವನ್ನೇ ಬಿಚ್ಚಿತೋರುವ, ಜೀವಿಯನ್ನು ನೆಲೆಮುಟ್ಟಿಸುವ, ನಾಗರೂಪವಾಗಿ ಗೋಚರಿಸುವ ಮಹಾಶಕ್ತಿಯ ಆರಾಧನೆಯೇ ಈ ನಾಗಪೂಜೆಯ ರಹಸ್ಯ. ನಾಗಪಂಚಮಿಯ ಕಾಲದ ವಿಶೇಷದಲ್ಲಿ ಅಂತಹ ನಾಗಪೂಜೆಗೆ ಬೇಕಾದ ಧರ್ಮವು ಕಾಲದಲ್ಲಿಯೇ ಕೂಡಿಬರುವುದರಿಂದ ಅಂದು ಮಾಡುವ ಪೂಜೆಗೆ ವಿಶೇಷತೆಯಿರುವುದು. ಆ ಪೂಜೆಯ ವ್ಯವಸ್ಥೆಯ ಹಿನ್ನೆಲೆಯಲ್ಲಿಯೂ ಆ ರಹಸ್ಯವಿದೆ. ಅದು ಯಾವ ಅಮೃತ ರಸವನ್ನು ಚಂದ್ರಮಂಡಲದಿಂದ ಒಸರುತ್ತದೆಯೋ ಅದಕ್ಕೆ ಪ್ರತೀಕವಾದ, ಅಮೃತವೆಂದೇ ಹೆಸರು ಪಡೆದಿರುವ ಹಾಲು ತುಪ್ಪಗಳಿಂದಲೇ ಅದಕ್ಕೆ ಪೂಜೆ. ಬರೆಯುವ ಚಿತ್ರವೂ ಒಳಮುಖವಾದ ಪ್ರಾಣವೃತ್ತಿಯುಳ್ಳ, ಜ್ಞಾನಿಯಲ್ಲಿ ಪ್ರಭುದ್ಧವಾದ ಮಹಾಕುಂಡಲಿಯ ಚಿತ್ರವನ್ನು ಸೂಚಿಸುವ ಐದು ಅಥವಾ ಏಳು ಹೆಡೆಯ ಸರ್ಪ.
ಅಂತೆಯೇ ಪೂಜಾಸಾಧನವೂ ತಾಳೆಯ ಹೂವು.ಅದೂ ಸರ್ಪಾಕೃತಿಯುಳ್ಳದ್ದು.ಜ್ಞಾನಿಗಳಿಗೆ ಯಾವ ಬಣ್ಣವನ್ನು ನೋಡಿದರೆ ಒಳಗೆ ಬೆಳಗುವ ಸುವರ್ಣಕಾಂತಿಯುಳ್ಳ ಜ್ಯೋತಿಯ ನೆನಪು ಬರುವುದೋ ಅಂತಹ ಹೊಂಬಣ್ಣವುಳ್ಳ ತಾಳೆಯ ಹೂವು. ಅಲ್ಲಿ ನಡೆಯುವ ಕ್ರಿಯೆಯ ಹೆಸರೇ ತನಿಎರೆಯುವಿಕೆ. ಅಂದರೆ ತಂಪೆರೆಯುವುದು. ತಾಪವನ್ನು ಕಳೆದು ತಂಪುಪಡೆಯುವ ಕೆಲಸ.
ಇಂದಿಗೂ ಮೂಲಾಧಾರ, ಹೊಕ್ಕಳು, ಹೃದಯ, ಕಂಠ, ನೆತ್ತಿಗಳಿಗೆ ಹಾಲುತುಪ್ಪವೆರೆಯುವುದು ಆ ಮೂಲ ಶಕ್ತಿಯ ಕಡೆಗೆ ನಮ್ಮ ಮನವೆಳೆಯಲು ಮಾಡಿದ ಯುಕ್ತಿಕಲ್ಪಿತ ಪ್ರಯೋಗ. ನಿಮ್ಮ ಪೂಜೆ ಸಲ್ಲಬೇಕಾದುದು ಆ ಮಹಾಸರ್ಪಕ್ಕೆ. ನೀವು ಒಲಿಸಿಕೊಳ್ಳಬೇಕಾದ ಸರ್ಪ ಎಲ್ಲಿದೆ ಎಂದು ಕೈದೋರುವ ಕೆಲಸವದು. ಅದರ ನಿಜವರಿತಾಗ ತಾನೇ ಆ ಕೇಂದ್ರಗಳಿಗೆ ಹಾಲುತುಪ್ಪವಿಡುವ ರಹಸ್ಯ ಅರಿವಿಗೆ ಬಂದೀತು.
ಹೊರಸರ್ಪವೇಕೆ ಪೂಜಾರ್ಹ?:
ಒಳನಡೆಯುಳ್ಳ ನಾಗಶಕ್ತಿಯನ್ನು ಗಮನಿಸಿದ ಜ್ಞಾನಿಗಳಿಗೆ ಹೊರಗೆ ಗೋಚರವಾವ ಈ ಸರ್ಪ ಒಂದೆರಡರಲ್ಲಿ ಆ ಒಳ ಸರ್ಪವನ್ನು ಬಹುಪಾಲು ಹೋಲುವ ಹೊರಲಕ್ಶಣಗಳು ಕೂಡಿಬಂದಿರುವುದು ಗುರುತಿಗೆ ಸಿಕ್ಕಿತು. ಹೀಗೆ ಹೊರಗೆ ಅದನ್ನು ಕಂಡೊದನೆ ಒಳನಡೆಯತ್ತ ಸೂಚನೆನೀಡುವ ಒಳ ನಾಗಶಕ್ತಿಯ ನೆನಪನ್ನು ತರುವ ಲಕ್ಷಣವುಳ್ಳ ಸರ್ಪಗಳನ್ನೂ ಒಳನಾಗಶಕ್ತಿಯ ಗೌರವದ ಪ್ರತೀಕವಾಗಿ ಪುಜಾರ್ಹವೆಂದು ಗುರುತಿಸಿದರು. ಆದ್ದರಿಂದ ಶುದ್ಧ ಧವಳವರ್ಣ, ಗೋಧಿನಾಗರ ಈ ಬಗೆಯ ಸರ್ಪಗಳ ಹೆಡೆಎತ್ತುವಿಕೆ ಆ ಒಳನಡೆಯನ್ನೇ ಹೋಲುವುದರಿಂದ ಹೆಡೆಯೆತ್ತಿದ ನಾಗದರ್ಶನ ಶುಭವೆಂದುದು ಆ ಒಳನಡೆಯತ್ತ ಅದು ಸೂಚಕವೆಂಬ ಕಾರಣದಿಂದಲೇ.
ಸರ್ಪಫಣದಲ್ಲಿ ಕಾಣುವ ಕಪ್ಪು ರೇಖಾಕೃತಿಯನ್ನು ವಿಷ್ಣುಪಾದ ಎಂದು ಕರೆಯುವುದುಂಟು. ಆ ಆಕೃತಿಯು ವಿಶೇಷವಾಗಿ ಅವರ ಒಳನೋಟಕ್ಕೆ ಸಂಬಂಧಿಸಿದುದು. ಹೆಡೆಯೆತ್ತಿದ ಸರ್ಪದ ನೋಟವು ಹೊರನೋಟಕ್ಕೆ ಚೆಲುವು ಎಂಬುದು ಮಾತ್ರವಲ್ಲದೇ ಒಳನಾಗನ ಊರ್ಧ್ವಫಣದ ವಿನ್ಯಾಸದ ನೆನಪನ್ನು ಮೂಡಿಸುವತ್ತ ಸೆಳೆಯುವ ವಿನ್ಯಾಸವಲ್ಲಿರುವುದು ಅವರ ಪ್ರೀತಿಗೆ ಕಾರಣವಾಯಿತು.
ಹುತ್ತಗಳಿಗೆ ಹಾಲು ತುಪ್ಪವೇಕೆ?:
ಹೊರ ಹಾವೂ ಸುಪ್ತವಾಗಿ ಹುತ್ತದ ಒಳಗೆ ಅಡಗಿರುತ್ತದೆ.ಅಂತೆಯೇ ಒಳನಾಗವೂ ಪೃಥ್ವೀತತ್ತ್ವದ ಕ್ಷೇತ್ರದಲ್ಲಿ ಸುಪ್ತವಾಗಿರುತ್ತದೆ. ಅದನ್ನೇಳಿಸಲು ಆ ತತ್ತ್ವದ ಕ್ಷೇತ್ರಕ್ಕೇ ತಂಪೆರೆಯಬೇಕು. ಅಂತೆಯೇ ಹುತ್ತದ ಮಣ್ಣು ಪೃಥ್ವೀತತ್ತ್ವದ ಗುರುತಾಗಿ ಅಂದು ಪೂಜಾರ್ಹ.
ಹೀಗೆ ಪೂಜಾವಿಧಾನದಲ್ಲಿಯೂ ತಾವು ಒಳನೋಟದಿಂದ ಕಂಡ ನಾಗದ ಕಡೆಗೆ ಅದನ್ನರಿಯದ ಜೀವಿಗಳನ್ನು ಸೆಳೆಯುವುದೇ ಜ್ಞಾನಿಗಳ ನಾಗಪೂಜೆಯ ತಿರುಳು. ಜೀವಿಗಳಿಗೆ ಚೈತನ್ಯದ ನೆಲೆಯಿಂದ ಯಾವರೂಪದಲ್ಲಿ ಶಕ್ತಿಯು ಹರಿದುಬರುತ್ತದೆಯೋ ಆ ರೂಪದಿಂದ ಅವರನ್ನು ಹಿಂತಿರುಗಿಸಿ ನೆಲೆಮುಟ್ಟಿಸುವಂತೆ ಮಾಡಿದ ಭಾರತಮಹರ್ಷಿಗಳ ಮಹಾ ಯೋಜನೆಯಿದಾಗಿದೆ. ಅದು ಆರ್ಯ-ದ್ರಾವಿಡರ ಕೊಡುಗೆಯಲ್ಲ. ಅದು ಒಳಗೆ ತುಂಬಿ ಬೆಳಗುವ ಕುಂಡಲಿನಿಯ ರಹಸ್ಯವರಿತ ಜ್ಞಾನಿಗಳ ಕರುಣೆಯ ಕೊಡುಗೆ.
ಈ ನಾಗಪಂಚಮಿಯಂದು ಮಹರ್ಷಿಹೃದಯವೇದ್ಯರಾದ ಶ್ರೀರಂಗ ಮಹಾಗುರುಗಳ ಈ ನಾಗಾರಾಧನೆಯ ಒಳ ನೋಟವನ್ನು ಭಾವಿಸಿ ನಮ್ಮ ಮನೆಗಳಲ್ಲಿ ಹಬ್ಬವನ್ನು ಆಚರಿಸುವಂತಾಗಲಿ.