Thursday, August 15, 2019

ಪಾರತಂತ್ರವೇ ನರಕ-ಸ್ವಾತಂತ್ರ್ಯವೇ ಸ್ವರ್ಗ (Paarathanthrave naraka - Svaathanthrave svarga)


ಲೇಖಕರು: ತಾರೋಡಿ ಸುರೇಶ



ಹಳ್ಳಿಯ ನಾಯಿಯೊಂದು ಪಟ್ಟಣಕ್ಕೆ ಬಂದಿತು. ದಾರಿಯಲ್ಲಿ ಶ್ರೀಮಂತನೊಬ್ಬನ ಮನೆಯ ದ್ವಾರದಲ್ಲಿ ಸುಪುಷ್ಟವಾಗಿರುವ ಸ್ವಜಾತಿಬಾಂಧವ ಗಲ್ಲವನ್ನು ನೆಲಕ್ಕೆ ಊರಿ ಆನಂದವಾಗಿ ಮಲಗಿತ್ತು. ಪರಸ್ಪರ ಸ್ನೇಹ ಬೆಳೆದು, ಕ್ಷೇಮಸಮಾಚಾರಗಳ ವಿನಿಮಯವಾಯಿತು.ತನ್ನ ಕಷ್ಟವನ್ನು ಹಳ್ಳಿಯ ಶ್ವಾನವು ತೋಡಿಕೊಂಡಿತು. ವಾಸಕ್ಕೆ ಮನೆಯಿಲ್ಲ.ಆಹಾರವಿಲ್ಲ. ಇತ್ಯಾದಿ,ಇತ್ಯಾದಿ. ಅದೇ ಶ್ರೀಮಂತ ನಾಯಿಯು ತನಗಿರುವ ಸುಖಸೌಲಭ್ಯಗಳನ್ನೆಲ್ಲಾ ಒಂದೊಂದಾಗಿ ವಿವರಿಸುತ್ತಾ ಹೋಯಿತು. ಇದನ್ನು ಕೇಳಿದ ಗ್ರಾಮಶ್ವಾನವು ತನ್ನ ದುರದೃಷ್ಟಕ್ಕೆ ನೊಂದುಕೊಳ್ಳುತ್ತಿರುವಾಗಲೇ ಅದಕ್ಕೆ ಶ್ರೀಮಂತನ ಶ್ವಾನದ ಕೊರಳಲ್ಲಿನ ಸರಪಣಿಯು ಕಾಣಿಸಿತು. “ನಿನ್ನ ಕೊರಳಲ್ಲಿರುವ ಆಭರಣ ಯಾವುದು?” ಎಂದು ಪ್ರಶ್ನಿಸಿತು. “ಅದು ಆಭರಣವಲ್ಲ, ನಾನು ಎಲ್ಲಿಯೂ ಓಡಿಹೋಗದಂತೆ ಕಟ್ಟಲು ಯಜಮಾನ ಬಳಸುವ ಸರಪಣಿ”  ಎಂದು ಶ್ರೀಮಂತ ನಾಯಿಯು ಉತ್ತರಿಸಿತು. ಮರುಕ್ಷಣದಲ್ಲಿ ಗ್ರಾಮಶ್ವಾನವು “ನಿನ್ನ ಶ್ರೀಮಂತಿಕೆಯೂ ಬೇಡ, ಸುಖವೂ ಬೇಡ, ನನ್ನಿಚ್ಛೆಯಂತೆ ಬದುಕುವ ಸ್ವಾತಂತ್ರ್ಯವನ್ನು ಮಾತ್ರ ಬಿಡಲಾರೆ” ಎಂದು ಪರಾರಿಯಾಯಿತು.

ಸ್ವಾತಂತ್ರ್ಯ ಎಂಬ ಪದಕ್ಕೆ ‘ತನ್ನ ಯೋಜನೆ, ತನ್ನ ಕ್ರಿಯೆ.ತನ್ನ ಚಿಂತನೆ’ ಎಂಬೆಲ್ಲ ಅರ್ಥಗಳಿವೆ.ಸ್ವಾತಂತ್ರ್ಯವು ಮನುಷ್ಯನ ಮೂಲಭೂತ ಅಗತ್ಯ. ಪಾರತಂತ್ರ್ಯವು ನರಕ. ತನ್ನ ಅಪೇಕ್ಷೆಗನುಗುಣವಾಗಿ ಬಾಳಲು ಮುಕ್ತ ಅವಕಾಶ ಬೇಕು. ಮೃಗಾಲಯದಲ್ಲಿರುವ ಪ್ರಾಣಿಗಳಿಗೂ,  ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುವ ಪ್ರಾಣಿಗಳಿಗೂ ಎಷ್ಟೊಂದು ವ್ಯತ್ಯಾಸವಿದೆ. ಕಟ್ಟುಪಾಡುಗಳು ಇಲ್ಲದಿದ್ದರೆ ಜೀವನವೇ ನಡೆಯದು. ರಾಷ್ತ್ರಹಿತಕ್ಕೆ ವ್ಯಕ್ತಿಯ ಸ್ವಾತಂತ್ರ್ಯ ಅಧೀನವಾಗಿರಬೇಕು. ‘ರಾಷ್ಟ್ರ ಎಂಬುದೇ ಇರಬಾರದು, ವಿಶ್ವವೇ ಒಂದು ದೇಶ’- ಹೀಗೆಲ್ಲ ವಾದವಿವಾದಗಳನ್ನು ನೋಡುತ್ತೇವೆ. ಆದರೆ ಸ್ವಾತಂತ್ರ್ಯದ ಅರ್ಥವನ್ನು, ಅದರ ಸಹಜತೆಯನ್ನು, ನಮ್ಮ ಬಾಳಿನಲ್ಲಿಯೇ ಹುಡುಕಬೇಕಷ್ಟೆ. ಮಾವಿನ ಬೀಜವೊಂದನ್ನು ನೆಟ್ಟರೆ ಅದು ಮೊಳಕೆ, ಕಾಂಡವಾಗಿ ಬೆಳೆಯುತ್ತಾ ಕೊನೆಯಲ್ಲಿ ಹಣ್ಣಿನೊಳಗೆ ಪುನಃ ಕಾಣಿಸಿಕೊಂಡು ತನ್ನ ವಿಕಾಸವನ್ನು ಮುಗಿಸಿಕೊಳ್ಳುತ್ತದೆ. ಈ ಬೆಳವಣಿಗೆಯ ಯೋಜನೆ ಬೀಜದಲ್ಲಿಯೇ ಇತ್ತು. ಮಾವನ್ನು ನೆಟ್ಟರೆ ಹಲಸಾಗಲೀ, ತೆಂಗಾಗಲೀ ಬೆಳೆಯುವುದಿಲ್ಲ. ಮಾವಿನ ಬೀಜದಿಂದ ಹೊರಟಿದ್ದು ಪುನಃ ಮಾವಿನ ಬೀಜದಲ್ಲಿಯೇ ನಿಂತಿತು. ಹಾಗೆ ಪೂರ್ಣವಿಕಾಸಕ್ಕೆ ಅವಕಾಶ ಮಾಡಿಕೊಡುವುದೇ ಸ್ವಾತಂತ್ರ್ಯ. ಈ ಸ್ವಾತಂತ್ರ್ಯ ಬೀಜಕ್ಕೆ ನಿಸರ್ಗದತ್ತವಾದುದು, ಕಲ್ಪಿತವಲ್ಲ. ಇಲ್ಲಿ ಸ್ವ ಎಂದರೆ ಅದು ಬೀಜವೇ. ಅದರ ನಿಸರ್ಗಸಹಜವಾದ ಆಶಯದಂತೆ ಬೆಳೆಯುವುದೇ ಅದರ ಯೋಜನೆ ಅಥವಾ ತಂತ್ರ. ಅದಕ್ಕೆ ಮುಕ್ತ ಅವಕಾಶವಿರುವುದೇ ಸ್ವಾತಂತ್ರ್ಯ. 

ನಮ್ಮ ಜೀವನಕ್ಕೂ ಈ ಸಹಜತೆಯು ಅನ್ವಯಿಸುತ್ತದೆ. ಮಹರ್ಷಿಗಳಿಗೆ ಅವರ ಕಠೋರ ತಪಸ್ಸಿನಿಂದ ಅನ್ವೇಷಿಸಿದಾಗ ಗೋಚರವಾದದ್ದು ಬಾಳಮೂಲದಲ್ಲಿರುವ ಜ್ಯೋತೀರೂಪವಾದ ಒಂದು ಶಕ್ತಿ. ಶ್ರೀಕೃಷ್ಣನೂ “ಅಹಂ ಬೀಜಪ್ರದಃ ಪಿತಾ” ಎಂದು ಹೇಳುತ್ತಾನೆ. ಆ ಜ್ಯೋತಿರ್ಬೀಜದಿಂದ ಅರಳಿದ ಕಿಡಿಗಳೇ ಜೀವಿಗಳು. ಜೀವವು ವಿಕಾಸವಾಗುತ್ತಾ ಕೊನೆಗೆ ಜ್ಯೋತಿರ್ಬೀಜದಲ್ಲಿಯೇ ಲಯವಾಗಬೇಕು. ಇದೇ ಅದರ ಯೋಜನೆ. ಹಾಗಾಗುವಂತೆ ಬಾಳನ್ನು ನಡೆಸುವ ಮುಕ್ತ ಅವಕಾಶವಿದ್ದಲ್ಲಿ ಅದನ್ನು ಸ್ವಾತಂತ್ರ್ಯವೆಂದು ಕರೆಯಬಹುದು. ಇಂತಹ ಸ್ವಾತಂತ್ರ್ಯ ಮಾನವನಿಗೆ ನಿಸರ್ಗಸಹಜವಾದದ್ದೇ. ಮನೋಕಲ್ಪಿತವಾದದ್ದಲ್ಲ. ತನ್ನತನದ ಒಂದು ಸ್ಥಿತಿ, ಅದನ್ನು ಕಾಪಾಡಿಕೊಳ್ಳುವ ವಿಧಿ-ನಿಷೇಧಗಳು ಮೌಲಿಕವಾಗಿ ಧರ್ಮವಾದರೆ, ಆ ಧರ್ಮಕ್ಕೆ ಅಡ್ಡಿಬಾರದಂತೆ ಅರ್ಥ ಮತ್ತು ಕಾಮಗಳಿರಬೇಕು. ಆಗ ಜೀವನವು ಸಹಜವಾಗಿಯೇ ಮೋಕ್ಷದಲ್ಲಿ ನಿಲ್ಲುತ್ತದೆ. ಇವೇ ‘ಜೀವ’ದ ಸಹಜ ಬಯಕೆಗಳು, ಈ ನಾಲ್ಕನ್ನು ಸಾಧಿಸಲು ಸಾಧ್ಯವಾಗುವಂತೆ, ದೇಹವನ್ನೂ, ಅಂತಹ ದೇಹಕ್ಕೆ ಪೋಷಕವಾದ ಗೇಹವನ್ನೂ, ಮತ್ತು ಇದಕ್ಕೆ ಪೂರಕವಾದ ರಾಷ್ಟ್ರವನ್ನೂ, ವಿಶ್ವವನ್ನೂ ನಿರ್ಮಿಸಿಕೊಂಡರೆ ಯಾರ ಸ್ವಾತಂತ್ರ್ಯಕ್ಕೂ ಪರಸ್ಪರ ಘರ್ಷಣೆಯಿಲ್ಲ. ಧರ್ಮಾರ್ಥಕಾಮಮೋಕ್ಷಗಳಿಗೆ ಪೋಷಕವಾದ ವಿಧಿ-ನಿಷೇಧಗಳು ಹೊರೆಯಾಗುವುದಿಲ್ಲ. ಅವುಗಳನ್ನು ಸಂತೋಷದಿಂದಲೇ ಅನುಸರಿಸುತ್ತೇವೆ. ಕಟ್ಟುಪಾಡುಗಳು ಎಲ್ಲ ಬಂಧನದಿಂದ ಬಿಡಿಸಿಕೊಂಡು ಮುಕ್ತರಾಗಲು, ಸ್ವತಂತ್ರರಾಗಲು ಪೋಷಕವಾಗಿದ್ದಲ್ಲಿ ಪೂಜ್ಯವೇ. ಇಂತಹ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಎನ್ನುವುದೇ ಋಷಿಗಳ ಕಳಕಳಿಯ ಕರೆ.    

ಸೂಚನೆ:  15/08/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.