Saturday, August 17, 2019

ಸಹವಾಸ ದೋಷ -ಶುಕೋಪದೇಶ (Sahavasa dosha- shukopadesha)

ಲೇಖಕರು: ರಾಜಗೋಪಾಲನ್. ಕೆ .ಎಸ್.  ಒಂದು ಗಿಣಿಗೆ ಎರಡು ಮರಿಗಳಿದ್ದವು. ಒಮ್ಮೆ ಒಬ್ಬ ಬೇಟೆಗಾರ ಆ ಮರಿಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ. ಒಂದು ಗಿಣಿಮರಿ ಹೇಗೋ ತಪ್ಪಿಸಿಕೊಂಡು ಒಬ್ಬ ಋಷಿಯ ಆಶ್ರಮ ಸೇರಿತು. ಅಲ್ಲಿಯೇ ಬೆಳೆಯಿತು. ಮತ್ತೊಂದು ಮರಿಯನ್ನು, ಬೇಡನು ಕಟುಕನೊಬ್ಬನಿಗೆ ಮಾರಿದ. ಆ ಗಿಣಿಮರಿ ಅಲ್ಲಿಯೇ ಬೆಳೆಯಿತು. ಒಮ್ಮೆ ದಾರಿಹೋಕನೊಬ್ಬ ಆ ಕಟುಕನ ಮನೆ ಮುಂದೆ ಹಾದುಹೋಗುತ್ತಿದ್ದ. ಅಲ್ಲಿಯೇ ಇದ್ದ ಗಿಣಿ ಇವನನ್ನು ನೋಡಿ, “ಯಾರೋ ನೀನು?” ಎಂದು ಮಾತು ಆರಂಭಿಸಿ ಕಟುವಾಗಿ ಮಾತನಾಡಹತ್ತಿತು. ದಾರಿಹೋಕ ಮುಂದೆ ಸಾಗಿ ಋಷ್ಯಾಶ್ರಮದ ಬಳಿ ಬಂದನು. ಅಲ್ಲಿದ್ದ ಗಿಣಿ, “ನಮಸ್ಕಾರ, ಬನ್ನಿ, ಕುಶಲವೇ?” ಇತ್ಯಾದಿ ಮೃದುಮಧುರ ಮಾತುಗಳನ್ನಾಡಿತು. ಒಂದೇ ತಾಯಿಯ ಮರಿಗಳಾದರೂ ಎರಡೂ ಗಿಳಿಗಳ ಮಾತಿನ ಶೈಲಿಯೇ ಬೇರೆಬೇರೆಯಾಗಿತ್ತು. ಸಹವಾಸದ ದೆಸೆಯಿಂದಾಗಿ ಸಣ್ಣಮಕ್ಕಳು ಹೇಗೆ ಗುಣದೋಷಗಳನ್ನು ಬೆಳೆಸಿಕೊಳ್ಳುತ್ತಾರೆಂದು ಈ ಕಥೆ ಸುಂದರವಾಗಿ ನಿರೂಪಿಸುತ್ತದೆ.

ಶ್ರೀರಂಗಮಹಾಗುರುಗಳು ಹೀಗೆ ಎಚ್ಚರಿಸುತ್ತಿದ್ದರು -”ಬುದ್ಧಿ ಎನ್ನುವುದು ಒಂದು ಲತೆಯಂತೆ. ಅದನ್ನು ನಾವು ಹೇಗೆ ಹಬ್ಬಿಸಿದರೆ ಹಾಗೆ ಬೆಳೆಯುತ್ತದೆ….ಮೊಟ್ಟಮೊದಲಿಗೆ ಮಕ್ಕಳ ಮನಸ್ಸನ್ನು ಯಾವುದರ ಮೇಲೆ ಹಬ್ಬಿಸಬೇಕು ಎನ್ನುವುದರ ಬಗ್ಗೆ ಸರಿಯಾದ ಶಿಕ್ಷಣ ಆರ್ಯ ಗೃಹಿಣಿಯರಿಗೆ ಇಲ್ಲ…..”

ನಮ್ಮ ರಾಷ್ಟ್ರದಲ್ಲಿ, ಋಷಿಗಳು ಭಗವಂತನನ್ನೇ ಜೀವನದ ಕೇಂದ್ರವಾಗಿಟ್ಟುಕೊಂಡು ಸಂಸ್ಕೃತಿ ನಾಗರಿಕತೆಗಳನ್ನು ಬೆಳೆಸಿದ ಕಾಲ ಒಂದಿತ್ತು. ಆಗ ಅದಕ್ಕೆ ತಕ್ಕಂತೆ ಹಿರಿಯರ ವ್ಯವಹಾರ ಇರುತ್ತಿತ್ತು. ಮಕ್ಕಳು ಅವರನ್ನು ನೋಡಿಯೇ ಸುಸಂಸ್ಕಾರಸಂಪನ್ನರಾಗುತ್ತಿದ್ದರು. ಮೊನ್ನೆ ಮೊನ್ನೆಯವರೆಗೂ ನಮ್ಮ ದೇಶದಲ್ಲಿ, ಇದ್ದುದರಲ್ಲಿ ತೃಪ್ತಿಪಡುವ ಎಷ್ಟೋ ಮಂದಿ ಇದ್ದರು. ಇದಕ್ಕೊಂದು ನಿದರ್ಶನವನ್ನು ಕೊಡಲೇಬೇಕು. ನಮ್ಮ ಮನೆಗೊಬ್ಬ ಪುರೋಹಿತರು ಬರುತ್ತಿದ್ದರು. ಅವರು ಕಾರ್ಯಕ್ರಮ ನಡೆಸಿಕೊಟ್ಟ ತರುವಾಯ ದಕ್ಷಿಣೆ ಎಷ್ಟು ಕೊಡಬೇಕು? ಎಂದು ಪ್ರಸ್ತಾಪ ಮಾಡಿದೊಡನೆಯೇ, “ನಿಮಗನ್ನಿಸಿದನ್ನು ಕೊಡಿ; ದೇವರು ನನಗೆ ತೃಪ್ತಿಯನ್ನು ಕೊಟ್ಟಿದ್ದಾನೆ” ಎನ್ನುತ್ತಿದ್ದರು. ಇಷ್ಟಾಗಿ ಅವರೇನೂ ಶ್ರೀಮಂತರಲ್ಲ; ಒಬ್ಬ ಬಡ ಮೇಷ್ಟ್ರರಷ್ಟೇ! ಇಂತಹ ಕೆಲವೇ ವ್ಯಕ್ತಿಗಳಾದರೂ ಮನೆಯಲ್ಲಿ, ಸಮಾಜದಲ್ಲಿ ನಡೆದಾಡುತ್ತಿದ್ದರೆ ಮಕ್ಕಳೂ ಅವರನ್ನೇ ಅನುಕರಿಸುವ ಸಾಧ್ಯತೆಗಳು ಹೆಚ್ಚು.

ಇಂದು ಶಾಲಾಕಾಲೇಜು ಪಠ್ಯಗಳಲ್ಲಿ ನಮ್ಮ ದೇಶದ ಹಿರಿಮೆಯನ್ನು ಸಾರುವ ಪಾಠಗಳು ಹೆಚ್ಚಾಗಬೇಕು; ಪರೋಪಕಾರಿಗಳ, ನಿಃಸ್ವಾರ್ಥಿಗಳ, ದೇಶಪ್ರೇಮಿಗಳ ಕಥೆಗಳು ಮತ್ತಷ್ಟು ಸೇರ್ಪಡೆಯಾಗಬೇಕು. ಅನೇಕ ತಂದೆತಾಯಂದಿರಿಗೆ, ತಮ್ಮ ಮಕ್ಕಳು ಸಮಾಜದಲ್ಲಿ ಯಾರಿಗೂ ಕಮ್ಮಿ ಇರಬಾರದೆಂಬ ಧಾವಂತವಿರುವುದು ಸಹಜವೇ. ಹೀಗಾಗಿ ಟ್ಯೂಷನ್, ಸ್ಕೂಲು, ಹೋಮ್  ವರ್ಕಗಳ ಚಕ್ರವೊಂದೇ ಸುತ್ತುತ್ತಿರುವುದು! ಆದರೆ ಭಾರತದ ಸಂಸ್ಕೃತಿ ವೈಭವವನ್ನು ಮತ್ತೆ ತರಬೇಕೆನ್ನುವುದಾದರೆ,  ಲೌಕಿಕ ಜೀವನವನ್ನೂ ಕಡೆಗಣಿಸದೆ, ಭಗವಂತನನ್ನೂ ಮರೆಯದೆ ನೆಮ್ಮದಿಯಿಂದ ಜೀವನ ಮಾಡುವ ವಿಧಾನದ ಅರಿವುಂಟಾಗುವಂತೆ ಗೃಹಿಣೀ ಗೃಹಸ್ಥರಿಗೆ ಶಿಕ್ಷಣ ಕೊಡಬೇಕಾಗಿದೆ; ಪಠ್ಯಪುಸ್ತಕಗಳ ಸುಧಾರಣೆಯಾಗಬೇಕಾಗಿದೆ.  

ಸೂಚನೆ:  17/08/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.