Wednesday, August 14, 2019

ಪಿತಾಮಹನ ಆಸ್ತಿ (Pithamahana aasthi)

ಲೇಖಕರು: ಶ್ರೀಮತಿ ಮೈಥಿಲೀ ರಾಘವನ್ 



'ಕವಿತಾರ್ಕಿಕಸಿಂಹ' ಎಂಬ ಬಿರುದುಹೊತ್ತ ಶ್ರೀವೇದಾಂತದೇಶಿಕರು ಸುಪ್ರಸಿದ್ಧ ಶ್ರೀವೈಷ್ಣವ ಆಚಾರ್ಯರು. ತಮ್ಮ ವೈದುಷ್ಯದಿಂದಲೂ,  ಕವಿತಾಸಾಮರ್ಥ್ಯದಿಂದಲೂ ಎಲ್ಲ ವಿದ್ವಾಂಸರನ್ನೂ, ಕವಿಗಳನ್ನೂ ಆಕರ್ಷಿಸಿದ ಈ ಮಹಾತ್ಮರು ಪರಮ ಭಕ್ತಶಿರೋಮಣಿಗಳೂ, ಪರಮ ವೈರಾಗ್ಯಶಿಖಾಮಣಗಳೂ ಆಗಿದ್ದರು. ಗೃಹಸ್ಥಾಶ್ರಮವನ್ನು ಅಲಂಕರಿಸಿದ್ದ ಇವರು ತಮ್ಮ ಜೀವನವನ್ನು ಉಂಛವೃತ್ತಿಯಿಂದ - ಅಂದರೆ ಬೇಡಿ ಪಡೆಯದೇ ತಾನಾಗಿಯೇ ಲಭಿಸಿದ ದಾನ್ಯಗಳಿಂದ ಆಹಾರಸಿದ್ಧಪಡಿಸಿ ಭಗವತ್ಸಮರ್ಪಣೆಮಾಡಿ ಪ್ರಸಾದರೂಪವಾಗಿ ಅದನ್ನು ಸ್ವೀಕರಿಸುತ್ತಾ - ತಮ್ಮ ಬದುಕನ್ನು ಸಾಗಿಸುತ್ತಿದ್ದವರು. 

ಒಮ್ಮೆ ಇವರ ಪಾಂಡಿತ್ಯ-ಪ್ರತಿಭೆಗಳಿಂದ ಆಕರ್ಷಿತರಾದ ವಿಜಯನಗರ ಸಾಮ್ರಾಜ್ಯದ ವಿದ್ಯಾರಣ್ಯರು 'ಇವರಂತಹವರು ರಾಜ್ಯದ ಆಸ್ಥಾನ ವಿದ್ವಾಂಸರಾಗಬೇಕೆಂದು’ ಬಯಸಿ ಆಚಾರ್ಯರಿಗೆ ಆಹ್ವಾನವನ್ನು ಕಳುಹಿಸಿದರು. ಆರ್ಥಿಕವಾಗಿ ಕಡುಬಡತನದಲ್ಲಿದ್ದರೂ ಪರಮವೈರಾಗ್ಯ ಸಂಪನ್ನರಾದ ದೇಶಿಕರಿಗೆ ರಾಜಾಹ್ವಾನವನ್ನು ಸ್ವೀಕರಿಸುವ ಮನಸ್ಸಾಗಲಿಲ್ಲ. ಅದಕ್ಕೆ ಉತ್ತರವಾಗಿ  "ನಾನಾಗಿ ಸಂಪಾದಿಸಿದ್ದೋ, ನನ್ನ ತಂದೆಯಿಂದ ಕೂಡಲ್ಪಟ್ಟ ಧನವೋ ಕಿಂಚಿತ್ತೂ ನನ್ನಲ್ಲಿಲ್ಲ. ಆದರೆ ನನಗೆ ನನ್ನ ಪಿತಾಮಹನ(ತಾತನ) ಆಸ್ತಿಯೊಂದು ಹಸ್ತಿಗಿರಿಶಿಖರದಲ್ಲುಂಟು" ಎಂದು ತಿಳಿಸುವ 'ವೈರಾಗ್ಯಪಂಚಕವೆಂಬ' ಸ್ತೋತ್ರರತ್ನವನ್ನು ಅತ್ಯಂತಗೌರವದೊಂದಿಗೆ  ಕಳುಹಿಸಿಕೊಟ್ಟರಂತೆ! ಧನಕ್ಕಾಗಿ ಹಾತೊರೆಯುವ ಸಮಾಜದಲ್ಲಿ ಎಂತಹ ವೈರಾಗ್ಯ!

ಇಂತಹದ್ದೇ ಒಂದು ಘಟನೆಯು ನಾದೋಪಾಸಕರಾದ ಶ್ರೀ ತ್ಯಾಗರಾಜಸ್ವಾಮಿಯ ಜೀವನದಲ್ಲೂ ಕಂಡುಬರುತ್ತದೆ. ಗೃಹಸ್ಥರಾಗಿ ಉಂಛವೃತ್ತಿಯ ಜೀವನವನ್ನೇ ನಡೆಸುತ್ತಿದ್ದ ಇವರಿಗೂ ಆಗಿನ ರಾಜನಿಂದ ಕರೆ ಬಂದಿತು - ತನ್ನ ವೈಭವವನ್ನು ಸಾರುವ ಕೃತಿರಚನೆ ಮಾಡಲು. ಶ್ರೀರಾಮಚಂದ್ರನ ಸನ್ನಿಧಿಸೌಖ್ಯವನ್ನು ಹೃದಯದಲ್ಲಿ ತುಂಬಿಕೊಂಡು ಆನಂದತುಂದಿಲರಾಗಿದ್ದ ಆ ಭಾಗವತೋತ್ತಮರ ಮುಖಾರವಿಂದದಿಂದ  ನರಸ್ತುತಿ ಹೊರಡುವುದಾದರೂ ಎಂತು? ದೇಶಿಕರಂತೆ ಇವರೂ ರಾಜಾಹ್ವಾನವನ್ನು ನಿರಾಕರಿಸಿದರು. ಅಷ್ಟೇ ಅಲ್ಲದೆ ರಾಮನ ಸನ್ನಿಧಿಸುಖದ ಮುಂದೆ ಇತರ ಸುಖಗಳು ಎಷ್ಟು ಕ್ಷುದ್ರವಾದವು ಎಂಬುದನ್ನು ಸಾರುವ ಸುಂದರ ಕೃತಿಯೊಂದನ್ನೂ ಹಾಡಿದರು!

ಹಸ್ತಿಗಿರಿಯಲ್ಲಿನ ಪಿತಾಮಹನ ಆಸ್ತಿಯಾಗಲಿ(ವರದರಾಜಸ್ವಾಮಿ), ಶ್ರೀರಾಮನ ಸನ್ನಿಧಿಸುಖವಾಗಲಿ ಇವರಿಬ್ಬರಿಗೆ ಮಾತ್ರವೆ ಸೇರಿದ್ದಲ್ಲ.  ಇವೆರಡೂ ಸಹ ಮನುಷ್ಯಮಾತ್ರರೆಲ್ಲರಿಗೂ ಸೇರಿದ, ಸೃಷ್ಟೀಶನಾದ 'ಪಿತಾಮಹನ'(ಬ್ರಹ್ಮದೇವನ) ಆಸ್ತಿ. ಪ್ರತಿಮಾನವನ ಜನ್ಮಸಿದ್ಧವಾದ ಹಕ್ಕದು ಎಂದು ಶ್ರೀರಂಗಮಹಾಗುರುಗಳು ಘೋಷಿಸಿದ್ದರು. ಆದರೆ ಈ ಆಸ್ತಿಗಳನ್ನು ಪಡೆಯಲು ವೈರಾಗ್ಯದನಡೆಯನ್ನು ಕೈಗೊಳ್ಳುವುದು ಸಾಮಾನ್ಯರಿಗಸಾಧ್ಯ. ಆದ್ದರಿಂದ ಸಾಮಾನ್ಯರೂ ಇದನ್ನು ಗಳಿಸುವಂತೆ ರೂಪಿಸಿದ ಜೀವನಕ್ರಮವೇ ಪುರುಷಾರ್ಥಮಯವಾದ ಬಾಳಾಟ.  

 ಶಂಕರಭಗವತ್ಪಾದರ ಆದೇಶ 'ಸತ್ಕರ್ಮದಿಂದ(ಧರ್ಮಕ್ಕೊಳಪಟ್ಟ) ಲಭಿಸುವ ವಿತ್ತದಿಂದ ಸುಖಿಸು'. ವಿತ್ತದಿಂದ ಚಿತ್ತಕ್ಕೊದಗಬಹುದಾದ ಸುಖ-ಸಂತೋಷಗಳನ್ನು ಜ್ಞಾನಿಗಳು ಸಂಪೂರ್ಣವಾಗಿ ನಿಷೇಧಿಸಿಲ್ಲ. ಆದರೆ ವಿತ್ತಗಳಿಸುವಲ್ಲಿ  ನಿಯಂತ್ರಣ ಬೇಕೆಂದು ಎಚ್ಚರಿಸುತ್ತಾರೆ. ಶ್ರೀರಂಗಮಹಾಗುರುಗಳ ಸೂತ್ರಪ್ರಾಯವಾದ ಮಾತೆಂದರೆ “ಅರ್ಥ-ಕಾಮಗಳು ತುಂಟ ಹಸುವಿನಂತೆ. ಅವುಗಳನ್ನು ಸುಮ್ಮನೆ ಕರೆದರೆ ಒದೆಯುತ್ತವೆ. ಆದರೆ ಧರ್ಮ-ಮೋಕ್ಷಗಳೆಂಬ ಕಂಬಕ್ಕೆ ಕಟ್ಟಿ ಕರೆದರೆ ಅಮೃತವನ್ನೇ ನೀಡುತ್ತವೆ”. ಅಷ್ಟೇ ಅಲ್ಲ, ಧರ್ಮ-ಮೋಕ್ಷಗಳೇ ಜೀವನಧ್ಯೇಯವಾದಾಗ ಅರ್ಥ-ಕಾಮಗಳು ತಾವಾಗಿಯೇ ಬಂದೊದಗುವುವು ಎಂಬ ಮಾತೂ ಇದೆ. ಈ ರೀತಿಯಾದ ಪುರುಷಾರ್ಥಮಯ ಬಾಳಾಟದಿಂದ ಇಹಸೌಖ್ಯದೊಡನೆ 'ತಾತನ'ಆಸ್ತಿಯನ್ನೂ, ‘ರಾಮಸಾನ್ನಿಧ್ಯ'ಸುಖವನ್ನೂ ಪಡೆಯುವುದು ನಿಶ್ಚಿತ ಎಂಬುದು ಜ್ಞಾನಿಗಳ ನಿರ್ಣಯ.
ಅಷ್ಟು ಮಾತ್ರವಲ್ಲದೆ ಈ ನಿಯಂತ್ರಣವು ಸಮಾಜದಲ್ಲಿ ಅಪರಾಧಗಳನ್ನು ತಪ್ಪಿಸಿ ಸುವ್ಯವಸ್ಥೆಯನ್ನು ಸಹ ರೂಪಿಸಬಲ್ಲುದು. ವೈಯಕ್ತಿಕಲಾಭದೊಡನೆ ಸಮಾಜದ ರಕ್ಷಣೆಯೂ ಕೂಡಿಬರುತ್ತದೆ.

ಸೂಚನೆ:  14/08/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.