Thursday, August 8, 2019

ಕಮಲವು ಏಕೆ ಭಗವಂತನಿಗೆ ವಿಶೇಷಣ? (Kamalavu bhagavanthanige eke visheshana?)

ಲೇಖಕರು: ನರಸಿಂಹ ಭಟ್ಟ


ಸಂಸ್ಕೃತ ಭಾಷೆಯಲ್ಲಿ ಕಮಲ ಎಂಬ ಪದಾರ್ಥವನ್ನು ಅನೇಕ ಪದಗಳಿಂದ ಬಳಸುತ್ತಾರೆ. ಅದರ ಹದಿನಾರು
ಪರ್ಯಾಯ ಪದಗಳನ್ನು ಅಮರಕೋಶದಲ್ಲಿ ಈ ರೀತಿಯಾಗಿ ಹೇಳಲಾಗಿದೆ. “ವಾ ಪುಂಸಿ ಪದ್ಮಂ ನಲಿನಮ್
ಅರವಿಂದಂ ಮಹೋತ್ಪಲಮ್ | ಸಹಸ್ರಪದ್ಮಂ ಕಮಲಂ ಶತಪತ್ರಂ ಕುಶೇಶಯಮ್ | ಪಂಕೇರುಹಂ ತಾಮರಸಂ
ಸಾರಸಂ ಸರಸೀರುಹಮ್ | ಬಿಸಪ್ರಸೂನರಾಜೀವಪುಷ್ಕರಾಂಭೋರುಹಾಣಿ ಚ ||” ಎಂದು. ‘ಕಮಲನಯನ’
‘ಅರವಿಂದಲೋಚನ’ ‘ರಾಜೀವಲೋಚನ’ ಇತ್ಯಾದಿಯಾಗಿ ಕಮಲದ ಪರ್ಯಾಯಪದಗಳನ್ನು ಉಪಯೋಗಿಸಿ
ಉಪಮಾನವಾಗಿ ಕಾಣುತ್ತೇವೆ. “ಕಮಲಪರ್ಯಾಯಗಳನ್ನು ಬಳಸಿ ಏಕೆ ಎಲ್ಲ ಕಡೆ ಭಗವಂತನನ್ನು ವರ್ಣಿಸುತ್ತಾರೆ?
ಈ ವಿಷಯದಲ್ಲಿ ಲೌಕಿಕ ಅಥವಾ ಅಲೌಕಿಕ ದೃಷ್ಟಿ ಏನಾದರೂ ಇದೆಯೆ? ಕಮಲದ ವ್ಯಾಪ್ತಿ ಏನು?” ಎಂಬುದಾಗಿ ಒಮ್ಮೆ ಶ್ರೀರಂಗ ಮಹಾಗುರುವಿನ ಶಿಷ್ಯರೊಬ್ಬರು ಗುರುವನ್ನು ಪ್ರಶ್ನಿಸುತ್ತಾರೆ. ಆಗ ಮಹಾಗುರುವು ಕೊಟ್ಟ ವಿವರಣೆಯು ಅತ್ಯಾಶ್ಚರ್ಯಕರವೂ ಹೃದಯರಮಣಿಯವೂ ಆಗಿದೆ.

ಕಮಲವು ಉಪಮಾನ

ಮೊಟ್ಟಮೊದಲು ಉಪಮಾನದ ಉಪಯೋಗ ಎಲ್ಲಿ ? ಎಂಬುದನ್ನು ನೋಡೋಣ. ಎರಡು ವಸ್ತುಗಳು ಇರುತ್ತವೆ.
ಒಂದು ತಿಳಿದಂತೆ ಇರುವಂತಹದ್ದು. ಇನ್ನೊಂದು ತಿಳಿಯದೇ ಇರುವಂತಹದ್ದು. ತಿಳಿದ ಮತ್ತು ತಿಳಿಯದ ಎರಡು
ವಸ್ತುಗಳಲ್ಲಿ ಯಾವುದೋ ಒಂದು ಸಾಮಾನ್ಯವಾದ ಅಂಶವು ಇರುತ್ತದೆ. ತಿಳಿದ ವಸ್ತುವಿನಲ್ಲಿರುವ ಅಂಶವನ್ನು
ಇಟ್ಟುಕೊಂಡು ಬೇರೊಂದು ವಿಷಯದ ಬಗ್ಗೆ ತಿಳಿವಳಿಕೆ ಉಂಟಾಗುತ್ತದೆ. ಆಗ ‘ಇದರಂತೆ ಇದು’ ಎಂಬ ಅರಿವು
ಬರುತ್ತದೆ. ಶಾಸ್ತ್ರದಲ್ಲಿ ಇದನ್ನೇ ಉಪಮಾನಪ್ರಮಾಣ ಅಥವಾ ಉಪಮಾ ಅಲಂಕಾರ ಎಂದು ಹೇಳಿದೆ. ಯಾವ
ಪದಾರ್ಥವನ್ನು ವರ್ಣಿಸುತ್ತೇವೋ ಅದು ಉಪಮೇಯ. ಯಾವುದರಿಂದ ವರ್ಣಿಸುತ್ತೇವೋ ಅದು ಉಪಮಾನ.
ಇವೆರಡರಲ್ಲಿ ಇರುವ ಸಾಮಾನ್ಯ ಅಂಶವೇ ಸಾಧಾರಣ ಧರ್ಮ. ಹೇಗೆಂದರೆ ‘ರಾಮೋ ರಾಜೀವಲೋಚನಃ’. ಇಲ್ಲಿ
ಶ್ರೀರಾಮನ ಕಣ್ಣನ್ನು ರಾಜೀವ ಎಂದು ಕಮಲಕ್ಕೆ ಹೋಲಿಸಲಾಗಿದೆ. ಕಮಲ ಎಷ್ಟು ಮನೋಹರವಾಗಿದೆಯೋ
ರಾಮನು ಅಷ್ಟೇ ಮನೋಹರನಾಗಿದ್ದಾನೆ.

ಶ್ರೀರಂಗಗುರುಗಳ ವಚನಸಾರ

“ಆಪೋ ನಾರಾ ಇತಿ ಪ್ರೋಕ್ತಾಃ” ಎಂಬಲ್ಲಿ ನಾರ ಎಂದರೆ ಜಲ ಎಂದರ್ಥ. ‘ನಾರಾಯಣ’ ಎಂದರೆ ಜಲವೇ ಯಾರಿಗೆ
ಶಯನವೋ ಅಥವಾ ಯಾರಿಗೆ ಅಯನ-ಗತಿಯೋ ಅಂತವನು ಎಂದರ್ಥ. ಕಮಲದ ಉಗಮವು ನೀರಿನಲ್ಲೇ.
ಆದ್ದರಿಂದ ಕಮಲಕ್ಕೆ ಜಲಜ ನೀರಜ ಅಂಬುಜ ಇತ್ಯಾದಿ ಹೆಸರುಗಳೂ ಬಂದಿವೆ. ಜಲದಲ್ಲೇ ಹುಟ್ಟಿ ಜಲದಲ್ಲೇ ಬೆಳೆದ
ನಾರಾಯಣನ ಸಹಚರಿ ಕಮಲ. ಹಾಗಾಗಿ ಕಮಲವನ್ನು ಭಗವಂತನ ವಿಶೇಷಣ ಅಥವಾ ಉಪಮಾನವಾಗಿ
ಬಳಸುವುದು ಉಚಿತವೇ ಆಗಿದೆ.

ಸೃಷ್ಟಿಮೂಲ ಕಮಲ

ಸೃಷ್ಟಿಕರ್ತನಾದ ಬ್ರಹ್ಮನೂ ನಾರಾಯಣನ ನಾಭಿಕಮಲದಲ್ಲೇ ಹುಟ್ಟಿದನು. ಅದಕ್ಕೆ ಇವನನ್ನು ‘ಕಮಲೋದ್ಭವ’
ಎಂದು ಕರೆಯುತ್ತಾರೆ. ಆದ್ದರಿಂದ ಸೃಷ್ಟಿಮೂಲ ಕಮಲವೇ ಆಗಿದೆ. ಲಕ್ಷ್ಮಿಯ ಹೆಸರು ‘ಪದ್ಮಾ ಕಮಲಾ’ ಎಂಬುದಾಗಿ. “ಪದ್ಮಪ್ರಿಯೇ ಪದ್ಮಿನಿ ಪದ್ಮಹಸ್ತೇ ಪದ್ಮಾಲಯೇ ಪದ್ಮದಲಾಯತಾಕ್ಷಿ | ವಿಶ್ವಪ್ರಿಯೇ ವಿಷ್ಣುಮನೋನುಕೂಲೇ ತ್ವತ್ಪಾದಪದ್ಮಂ ಮಯಿ ಸನ್ನಿಧತ್ಸ್ವ”|| ಎಂಬುದಾಗಿ ಅವಳ ಆಸನ ವಸನ ಕರ ಪಾದ ಎಲ್ಲವೂ ಪದ್ಮವೇ ಆಗಿದೆ. ಪತ್ನಿಯೇ ಕಮಲದಂತಿರುವಾಗ ಪತಿಯಾದವನು ಅವಳಿಗೆ ಅನುರೂಪನಾಗಿರಬೇಕಲ್ಲವೇ! ಆದ್ದರಿಂದ

ನಾರಾಯಣನನ್ನೂ ಕರಕಮಲಃ ಪಾದಕಮಲಃ ರಾಜೀವಲೋಚನಃ ಇತ್ಯಾದಿಯಾಗಿ ಹೇಳುವ ಅಭ್ಯಾಸ ಬಂದಿದೆ.
ಎಷ್ಟು ಸೊಗಸಾಗಿದೆ ವಿವರಣೆ!!!

ಯೋಗಿಗಳು ಅಂತಃಪ್ರಪಂಚದಲ್ಲಿ ಮೂಲಾಧಾರಾದಿ ಚಕ್ರಗಳನ್ನು ಕಮಲದ ರೂಪದಲ್ಲಿ ಕಾಣುತ್ತಾರಂತೆ. “ಸಹಸ್ರಾರೇ ಮಹಾಪದ್ಮೇ ಶಿವೇನ ಸಹ ಮೋದತೇ ( ವಿಷ್ಣುನಾ ಸಹ ಮೋದತೇ) ಎಂಬುದಾಗಿ. ಇದು ಕಮಲವನ್ನು ನಮ್ಮ ಋಷಿಗಳು ಹೇಗೆ ಕಂಡಿದ್ದಾರೆ ಎಂಬ ಅಲೌಕಿಕವಾದ ದೃಷ್ಟಿಕೋಣ. ಲೌಕಿಕ ದೃಷ್ಟಿಯಿಂದಲೂ ಕಮಲಕ್ಕೆ ಅಷ್ಟೇ ಪ್ರಾಧಾನ್ಯವಿದೆ. ಪ್ರಾಕೃತಿಕವಾಗಿ ಕಮಲವು ಅತ್ಯಂತ ಕೋಮಲ ಸುಗಂಧ ಸುವರ್ಣ ಮತ್ತು ಮನೋಹರವಾಗಿದೆ. ಆಯುರ್ವೇದವೂ ಇದಕ್ಕಿರುವ ಓಷಧೀಯ ಗುಣವನ್ನು ಕೊಂಡಾಡುತ್ತದೆ. ಭಗವಂತನನ್ನು ಪೂಜಿಸುವಾಗ ಪುಷ್ಪಪೂಜೆಯಲ್ಲಿ ಪ್ರಧಾನವಾದ ಪುಷ್ಪ ಕಮಲ. ಕಮಲವೆಂದರೆ ಭಗವಂತನಿಗೆ ಅಷ್ಟು ಪ್ರೀತಿ. ಈ ಎಲ್ಲ ಅಂಶವನ್ನು ಪರಿಗಣಿಸಿ ಭಾರತಸರ್ಕಾರವು ಇದನ್ನು ರಾಷ್ಟಿಯ ಪುಷ್ಪ ಎಂದು ಅನುಮೋದಿಸಿದೆ. ಹೀಗೆ ಕಮಲಕ್ಕೆ ಸೃಷ್ಟಿಮೂಲದಿಂದ ಈ ಕಾಲದವರೆಗೆ ಮಾತ್ರವಲ್ಲ ಸೂರ್ಯ ಚಂದ್ರರು ಇರುವಷ್ಟು ಕಾಲವೂ ಉನ್ನತ ಸ್ಥಾನವಿದೆ.
ಸೂಚನೆ: ಮೂಲ ಸಂಸ್ಕೃತ ಲೇಖನವನ್ನು ನೋಡಲು AYVM blogs  ಉಪಯೋಗಿಸಬಹುದು.