ಲೇಖಕರು: ಡಾ|| ಕೆ.ಎಸ್. ಕಣ್ಣನ್, ಡಿಲಿಟ್.
ಪೀಠ-ಪ್ರಾಧ್ಯಾಪಕರು, ಐಐಟಿ, ಚೆನ್ನೈ.
ಪೀಠ-ಪ್ರಾಧ್ಯಾಪಕರು, ಐಐಟಿ, ಚೆನ್ನೈ.
ಪ್ರತಿಕ್ಷಣವೂ ನಾವು ಪ್ರಪಂಚವನ್ನು ಅರಸುತ್ತಲೇ ಇರುತ್ತೇವೆ. ಸುಖವೆಲ್ಲಿದೆಯೆಂಬ ಪ್ರಶ್ನೆ ನಮಗೆ ಸದಾ ಬರುತ್ತಿರುತ್ತದೆ. ನಮಗೆ ಸುಖವು ಸಿಕ್ಕೇ ಇಲ್ಲವೆಂದೂ ಹೇಳಲಾಗದು: ಸಿಕ್ಕಿದೆ, ಸಿಕ್ಕುತ್ತಿದೆ – ಎಂದು ಹೇಳಲೇಬೇಕಾಗುತ್ತದೆ. ಸುಂದರವಾದ ದೃಶ್ಯವನ್ನು ನೋಡಿದರೆ ಕಣ್ಣಿಗೆ ಸುಖ. ಮುದ್ದಾದ ಮಗುವಿನ ಮೊಗವನ್ನು ಕಂಡರೂ ನಮ್ಮ ಕಂಗಳಿಗೆ ಸುಖವೇ. ಸಾರಾಂಶವಾಗಿ ಒಳ್ಳೆಯ ರೂಪದಿಂದ ಕಣ್ಣಿಗೆ ಸುಖ. ಹಾಗೆಯೇ ಒಳ್ಳೆಯ ಸಂಗೀತದಿಂದ ಕಿವಿಗೆ ಸುಖ. ಅಂದರೆ, ಒಳ್ಳೆಯ ಶಬ್ದದಿಂದ ಕಿವಿಗೆ ಸುಖ. ಹಾಗೆಯೇ ಸ್ಪರ್ಶ-ರಸ-ಗಂಧಗಳಿಂದ ಚರ್ಮ-ನಾಲಿಗೆ-ನಾಸಿಕೆಗಳಿಗೂ ಸುಖ.
ಮೇಲೆ ಹೇಳಿದುದು ಐದು ಇಂದ್ರಿಯಗಳ ಸುಖಗಳ ಬಗ್ಗೆ. ಸುಖದ ಹಸಿವು ಇಂದ್ರಿಯಗಳಿಗೆ ಮಾತ್ರವಲ್ಲ, ಮನಸ್ಸು-ಬುದ್ಧಿಗಳಿಗೂ ಹಸಿವುಂಟು. ಒಳ್ಳೆಯ ಕಲೋಪಾಸನೆಯಿಂದ, ಕ್ಲಿಷ್ಟವಾದ ಸಮಸ್ಯೆಯನ್ನು ಬಗೆಹರಿಸುವುದರಿಂದ ಮನೋ-ಬುದ್ಧಿಗಳಿಗೂ ತೃಪ್ತಿಯಾಗುವುದು. ತೃಪ್ತಿಯೆಂದರೇನು? ಎಲ್ಲೆಲ್ಲಿ ಹಸಿವೋ ಅಲ್ಲಲ್ಲಿ ತಕ್ಕ ತಕ್ಕ ಆಹಾರವು ದೊರೆಯುತ್ತಿರುವುದು. ಶ್ರೀರಂಗಮಹಾಗುರುಗಳು ಇವಿಷ್ಟನ್ನೂ ಹೇಳಿ “ದೇಹೇಂದ್ರಿಯಮನೊಬುದ್ಧಿಗಳಲ್ಲದೆ, ಜೀವವೆಂಬುದೂ ಒಂದುಂಟಪ್ಪಾ. ಆ ಜೀವಕ್ಕೂ ಹಸಿವಿರುವುದು. ಜೀವನಿಗೆ ದೇವನೇ ’ಆಹಾರ’!: ಆತ್ಮದ ಹಸಿವನ್ನು ಪರಮಾತ್ಮನೇ ಹಿಂಗಿಸುವುದು; ಆತ್ಮತೃಪ್ತಿಯು ಪರಮಾತ್ಮದರ್ಶನದಿಂದಲೇ” ಎಂದು ಪ್ರತಿಪಾದಿಸುತ್ತಿದ್ದರು.
ಆದರೆ ದೇವದರ್ಶನವಾಗುವುದು ಸತ್ತಮೇಲೇ – ಎಂದು ಹಲವರ ಎಣಿಕೆ. ಶ್ರೀರಂಗಮಹಾಗುರುಗಳು ಇದನ್ನು ಒಪ್ಪುತ್ತಿರಲಿಲ್ಲ. “ಹಾಗಲ್ಲಪ್ಪಾ, ಈ ಜನ್ಮದಲ್ಲೇ ದೇವನನ್ನು ಕಾಣುವುದು ಶಕ್ಯವಪ್ಪಾ” ಎಂದು ಬೋಧಿಸುತ್ತಿದ್ದರು. ಅದು ಅವರ ಸಾಕ್ಷಾದನುಭವದ ಮಾತಾಗಿತ್ತು. ಅದಕ್ಕೆ ಬೇರೆ ಪುರಾವೆಗಳೂ ಉಂಟೇ. ಈಚಿನ ಇತಿಹಾಸದಲ್ಲಿ ತ್ಯಾಗರಾಜರು- ರಮಣಮಹರ್ಷಿಗಳು-ರಾಮಕೃಷ್ಣಪರಮಹಂಸರು – ಇವರುಗಳೆಲ್ಲರೂ ಇದಕ್ಕೆ ಸಾಕ್ಷಿಗಳೇ. ಭಗವಂತನನ್ನು ನಾವು ಕಂಡೆವು, ಆಹಾ, ನಾವು ಕಂಡೆವು (“ಕಂಡೋಂ ಕಂಡೋಂ”)! - ಎಂದು ಪ್ರಾಚೀನ ಇತಿಹಾಸದ ಆಳ್ವಾರುಗಳೂ ಉದ್ಗರಿಸಿದ್ದರು.
ವೇದೋಪನಿಷತ್ತುಗಳಲ್ಲೂ ಈ ಬಗೆಯ ಉದ್ಗಾರಗಳಿವೆ. “ಆ ಮಹಾಪುರುಷನನ್ನು ನಾನು ಅರಿತಿದ್ದೇನೆ” (“ವೇದಾಹಮೇತಂ ಪುರುಷಂ ಮಹಾಂತಂ”) ಎಂಬುದು ಋಷಿಯ ಮಾತೇ. “ಇಲ್ಲಿಯೇ ಕಂಡಿರೋ, ಅದೋ ಸತ್ಯವುಂಟು!” – “ಇಹ ಚೇದ್ ಅವೇದೀತ್ ಅಥ ಸತ್ಯಮ್ ಅಸ್ತಿ” ಎಂದು ಕೇನೋಪನಿಷತ್ತು ಸಾ ರಿದೆ. ಅಷ್ಟೇ ಅಲ್ಲ. “ಇಲ್ಲಿ ತಿಳಿಯಲಿಲ್ಲವೋ ಮಹಾ ನಷ್ಟವೇ!!” – ಎಂದೂ ಎಚ್ಚರಿಸಿದೆ.ಪ್ರಧಾನವಾಗಿ ಸ್ವಾನುಭವದ ಬಲದ ಮೇಲೂ, ಜೊತೆಗೆ ಬೇರೆ ಉಪನಿಷತ್ತುಗಳಲ್ಲೂ ಬರುವ ಇದೇ ಅರ್ಥದ ಮಾತುಗಳನ್ನು ಬಳಸಿಕೊಂಡೂ, ಶ್ರೀರಂಗಮಹಾಗುರುಗಳು ತತ್ತ್ವಪ್ರತಿಪಾದನೆ ಮಾಡುತ್ತಿದ್ದರು.