ಲೇಖಕರು: ಶ್ರೀಮತಿ ಮೈಥಿಲೀ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)
ಅಂದರೆ 'ವಿಮೆ' ಎನ್ನುವುದು 'ರಕ್ಷಣೆ'ಗಾಗಿ ಕೈಗೊಳ್ಳುವ ಒಂದು ಯೋಜನೆ. ದೇಹೇಂದ್ರಿಯ-ಮನೋಬುದ್ಧಿಗಳಿಗೆ ಚೈತನ್ಯವನ್ನು ತುಂಬಿ ಕಾರ್ಯನಿರತವಾಗಿಸುವ ಶಕ್ತಿಯೇ 'ಜೀವ'. ಇಂದಿನ ಜೀವವಿಮೆಯೆನ್ನುವುದು ಕೇವಲ ವ್ಯಕ್ತಿಯ ದೇಹರಕ್ಷಣೆಗೋ ಅಥವಾ ಕುಟುಂಬದವರ ನೆರವಿಗೋ ಬರುವುದು. ಜೀವವನ್ನು ಶಾಶ್ವತವಾಗಿ ದುಃಖದಿಂದ ಪಾರುಮಾಡುವುದೇ ಜೀವಕ್ಕೆ ರಕ್ಷಣೆ. ನಾವು ಮಾಡುವ ಜೀವವಿಮೆ ಜೀವಕ್ಕೆ ರಕ್ಷಣೆಯನ್ನು ನೀಡೂತ್ತಿದೆಯೇ ಎಂದರೆ ಉತ್ತರ ನಕಾರಾತ್ಮಕವೇ ಆಗುವುದು. ಈ ಅರ್ಥದಲ್ಲಿ ಜೀವವಿಮೆಯೆನ್ನುವುದುಂಟೇ ಎನ್ನುವುದು ಜೀವವನ್ನು ಹೊತ್ತಿರುವವರೆಲ್ಲರೂ ಚಿಂತಿಸಬೇಕಾದ ವಿಚಾರವೇ ಸರಿ. ಜೀವದವಿಚಾರವನ್ನು ಆಮೂಲಾಗ್ರವಾಗಿ ಅರಿತ ಭಾರತಮಹರ್ಷಿಗಳು ನೀಡಿದ ಸಂದೇಶ –'ಜೀವವು ದೇಹದೊಳಗಿರುವಾಗ ನೆಮ್ಮದಿ ಆನಂದಗಳನ್ನು ಕೊಟ್ಟು, ದೇಹತ್ಯಜಿಸಿದ ನಂತರವೂ ನಿರಂತರವಾದ ಶಾಂತಿ-ಆನಂದಗಳನ್ನು ನೀಡುವ ಧನ ಒಂದುಂಟು. ಅದೇ ಜ್ಞಾನಧನ'. ಶ್ರೀರಂಗಮಹಾಗುರುಗಳು "ಪ್ರಪಂಚದ ಎಲ್ಲ ಜನಾಂಗದವರೂ ನಿಗದಿತ ವಯಸ್ಸಾದೊಡನೆಯೇ ಚುನಾವಣೆಯಲ್ಲಿ ಮತಚಲಾಯಿಸುವ ಹಕ್ಕಿಗಾಗಿ ಹಾತೊರೆಯುತ್ತಾರೆ. ಆದರೆ ಜನ್ಮಸಿದ್ಧವಾಗಿಯೇ ಲಭಿಸಿರುವ ಜ್ಞಾನಧನವನ್ನು ಪಡೆಯುವ ಹಕ್ಕಿನ ಕಡೆಗೆ ಗಮನವೇ ಇಲ್ಲ. ಲೋಕವು ಅದರ ಬಗೆಗೆ ಯಾವ ಕಾಳಜಿಯನ್ನೂ ವಹಿಸುತ್ತಿಲ್ಲವಲ್ಲ' ಎಂಬ ಆತಂಕವನ್ನು ವ್ಯಕ್ತಪಡಿಸುತ್ತಿದ್ದರು.
ಈ ಅದ್ಭುತಧನವು ನಮ್ಮೊಳಗೇ ಸದಾ ಪ್ರಕಾಶಮಾನವಾಗಿರುವ ವಸ್ತು. ಒಮ್ಮೆ ಇದನ್ನು ಪಡೆದರೆ ದೇಹದೊಡಗೂಡಿದ್ದಾಗಲೂ ನೆಮ್ಮದಿ, ದೇಹತ್ಯಾಗವಾದಾಗಲೂ ಆನಂದಧಾಮದಲ್ಲಿಯೇ ನೆಲೆದಾಣ. ಇದನ್ನು ಪಡೆಯುವುದಕ್ಕಾಗಿ ಮಾಡುವ ವಿಮೆಯೇ ನಿಜವಾದ ಜೀವವಿಮೆಯಾಗುವುದು. ಇಂತಹ ವಿಮೆಯನ್ನು ಮಾಡಿಸುವವರಾರು ಎಂಬುದು ಮುಂದಿನ ಪ್ರಶ್ನೆ. ತಮ್ಮೊಳಗೆ ನಿರಂತರವಾಗಿ ಜಾಜ್ವಲ್ಯಮಾನವಾಗಿರುವ ಜ್ಞಾನಜ್ಯೋತಿಯಲ್ಲಿ ತಾವೂ ರಮಿಸಿ, ತಮ್ಮ ಬಳಿಸಾರಿದವರನ್ನೂ ಅತ್ತ ನಡೆಸಬಲ್ಲ ಮಹಾಜ್ಞಾನಿ, ಮಹಾಗುರುವಾದವರು ಮಾತ್ರವೇ ಈ ವಿಮೆಯನ್ನು ಮಾಡಿಸಬಲ್ಲರು. ಅಂತಹವರ ಬಳಿಸಾರಿ ಜೀವವಿಮೆಯನ್ನು ಮಾಡುವುದು ನಮ್ಮೆಲ್ಲರ ಹಕ್ಕು ಮತ್ತು ಹಿತ.
ವ್ಯಾವಹಾರಿಕವಾದ ವಿಮೆಗಳಲ್ಲಿ ನಿಗದಿತ ಸಮಯಗಳಲ್ಲಿ ನಿರ್ದಿಷ್ಟವಾದ ಹಣವನ್ನು(ಪ್ರೀಮಿಯಮ್) ವಿಮೆಮಾಡಿಸುವವರಿಗೆ ನೀಡಬೇಕೆನ್ನುವುದು ವಿಧಿ. ಅಂತೆಯೇ ಮೇಲೆ ಹೇಳಿದ ಜೀವವಿಮೆಯನ್ನು ಮಾಡುವಾಗಲೂ ಗುರುವಿಗೆ ಕಡ್ಡಾಯವಾಗಿ ಸಲ್ಲಿಸಬೇಕಾದ 'ಪ್ರೀಮಿಯಮ್' ಉಂಟು. ಶ್ರದ್ಧಾ-ಭಕ್ತಿ-ನಿಷ್ಠೆಗಳೊಂದಿಗೆ ಆದೇಶ ಪಾಲನೆಯೆಂಬ ಕಾಣಿಕೆಯನ್ನು ಸಲ್ಲಿಸಿದಾಗ ಮಾತ್ರವೇ ಜೀವವಿಮೆಯು ಸಫಲವಾಗುವುದು.
ನಿಜವಾದ ಜೀವವಿಮೆಯನ್ನು ಮಾಡಿಸುವ ಗುರು ದೊರೆಯುವುದು ಭಗವದನುಗ್ರಹದಿಂದಲೇ. ಆದ್ದರಿಂದ 'ಸದ್ಗುರುವನ್ನು ಕರುಣಿಸಪ್ಪಾ' ಎಂದು ಭಗವಂತನನ್ನು ಪ್ರಾರ್ಥಿಸುವುದೇ ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ.
ಸೂಚನೆ: 4/06/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.