ಲೇಖಕರು: ವಿದ್ವಾನ್ ಶ್ರೀ ಬಿ.ಜಿ.ಅನಂತ
(ಪ್ರತಿಕ್ರಿಯಿಸಿರಿ lekhana@ayvm.in)
ನಮ್ಮಲ್ಲಿ ದುಷ್ಟ ಅಭ್ಯಾಸಗಳು, ಅನಾತ್ಮ ಗುಣಗಳೆಲ್ಲ ಬಹುಕಾಲದಿಂದ ಇರುತ್ತವೆ. ಕೆಲವೊಂದು ವಂಶಪಾರಂಪರ್ಯವಾಗಿ ಬಂದಿರುವುದೂ ಉಂಟು. ಇದ್ದಕ್ಕಿದ್ದಂತೆ ಅವುಗಳನ್ನು ನಾವೇನಾದರೂ ಅಂಕೆ ಮಾಡಲು ನೋಡಿದರೆ ಅವು ಅಷ್ಟು ಸುಲಭಕ್ಕೆ ಬಗ್ಗುವುದಿಲ್ಲ. ಬದಲಾಗಿ, 'ನಾವಿಲ್ಲಿ ಬಹಳ ಕಾಲದಿಂದಲೂ ಇರುವವರಾಗಿದ್ದೇವೆ. ಇಷ್ಟು ಕಾಲ ಸುಮ್ಮನಿದ್ದು ಈಗೇಕೆ ಗಲಾಟೆ ಮಾಡುತ್ತೀರಿ?' ಎಂದು ತಿರುಗಿ ಬೀಳುತ್ತವೆ. ಈ ಮಾತುಗಳಿಗೆ ಶ್ರೀರಂಗ ಮಹಾಗುರುಗಳು ಘಟನೆಯೊಂದನ್ನು ಉದಾಹರಿಸುತ್ತಿದ್ದರು.
ಅವರ ಹಿರಿಯರ ಕಾಲದಲ್ಲಿ ಒಮ್ಮೆ ಕಾಲರಾ ರೋಗ ಬಂದಿತ್ತಂತೆ. ಆಗಿನ ವಾಡಿಕೆಯಂತೆ ಊರಿನ ಎಲ್ಲರೂ ಹಳ್ಳಿಯನ್ನು ತೊರೆದು ಊರಹೊರಗೆ ವಾಸಿಸತೊಡಗಿದರು. ತಾತ್ಕಾಲಿಕವಾದ ವ್ಯವಸ್ಥೆಯಾದ್ದರಿಂದ ಅಡಿಕೆ-ತೆಂಗಿನ ಗರಿಗಳಿಂದ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದರು.
ಗುರುಗಳ ಪೂರ್ವಜರ ಗುಡಿಸಿಲಿನಲ್ಲಿ ಒಂದು ಉಪ್ಪಿನಕಾಯಿಯ ಜಾಡಿ ಇತ್ತು. ಅದರ ಭರ್ತಿ ರುಚಿಯಾದ ಉಪ್ಪಿನಕಾಯಿಗಳು. ದಿನಗಳು ಕಳೆದಂತೆ ಜಾಡಿಯಲ್ಲಿದ್ದ ಉಪ್ಪಿನಕಾಯಿ ನಿರೀಕ್ಷೆಗಿಂತ ವೇಗವಾಗಿ ಖಾಲಿಯಾಗ ತೊಡಗಿತು. ಒಂದು ದಿವಸ ಮನೆಯವರು ನೋಡುತ್ತಿದ್ದಂತೆಯೇ ಗುಡಿಸಲಿನ ಸಂದಿಯಿಂದ ಕೈಯ್ಯೊಂದು ಉಪ್ಪಿನಕಾಯಿಯ ಜಾಡಿಯಿಂದ ಉಪ್ಪಿನಕಾಯಿಯನ್ನು ಕದಿಯುತ್ತಿದೆ! ಇವರು, 'ಕಳ್ಳನು ಸಿಕ್ಕಿಬಿದ್ದ' ಎಂದು ಹೋಗಿ ಹಿಡಿದುಕೊಂಡರಂತೆ. ವಿಶೇಷವೆಂದರೆ, ಸಿಕ್ಕಿಬಿದ್ದ ವ್ಯಕ್ತಿಯು ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾ, 'ಎಷ್ಟೋ ದಿನಗಳಿಂದ ನಾನಿಲ್ಲಿ ಉಪ್ಪಿನಕಾಯಿಯನ್ನು ತೆಗೆದುಕೊಳ್ಳುತ್ತಿದ್ದೇನೆ, ಇಂದೇಕೆ ವೃಥಾ ಹುಯಿಲೆಬ್ಬಿಸುತ್ತಿದ್ದೀರಿ?' ಎಂದನಂತೆ. ಕಳ್ಳನಿಂದಲೇ ಯಜಮಾನನ ಮೇಲೆ ಆಕ್ಷೇಪ !.
ಎಂದರೆ ದುರ್ಗುಣಗಳು ಬಹುಕಾಲ ನಮ್ಮೊಳಗೆ ನೆಲೆಯೂರದಂತೆ ನೋಡಿಕೊಳ್ಳಬೇಕು. ಒಂದುವೇಳೆ ದೀರ್ಘಕಾಲದಿಂದ ತಳವೂರಿಬಿಟ್ಟಿದ್ದರೆ ಉಪಾಯವಾಗಿ ಹೊರಹಾಕಬೇಕಾಗುತ್ತದೆ. ವರ್ಷಗಟ್ಟಲೆ ನಾವೇ ಸಾಕಿದ ನಾಯಿ- ಬೆಕ್ಕುಗಳು ನಮಗೆ ಬೇಡ ಎನಿಸಿದರೆ, ಒಮ್ಮೆಗೇ ಅವುಗಳನ್ನು ಹೊರಹಾಕಲಾಗದು. ಹಾಗೆ ಅವು ಒಮ್ಮೆಲೇ ಹೊರಟುಹೋದರೆ ನಮಗೂ ದುಃಖವಾಗುತ್ತದಷ್ಟೇ.
ಹೀಗಿರುವಾಗ ಇನ್ನು ಜನ್ಮಾಂತರಗಳಿಂದ ಬಂದ ಸಂಸ್ಕಾರಗಳು ಅಷ್ಟು ಸುಲಭದಲ್ಲಿ ಹೋಗುವುದುಂಟೆ? ಆದರೆ ಅದಕ್ಕೊಂದು ಉಪಾಯವಿದೆ. ನಮ್ಮ ನಮ್ಮ ಪ್ರಕೃತಿಯನ್ನು ಓಲೈಸಿ ಅದನ್ನು ಒಲಿಸಿಕೊಂಡು, ನಿಧಾನವಾಗಿ ನಮಗೆ ಬೇಡದ ಸಂಸ್ಕಾರಗಳನ್ನು ಹೊರಹಾಕಿ, ಬೇಕಾದ ಆತ್ಮಗುಣಗಳನ್ನು ಒಳಗೆ ಬರಮಾಡಿಕೊಳ್ಳಬೇಕು.
ಪ್ರಕೃತಿಯಲ್ಲಿ ಇದಕ್ಕೆ ಇನ್ನೊಂದು ಉಪಾಯವೂ ಉಂಟು. ಅದನ್ನು ಒಂದು ಉದಾಹರಣೆಯ ಮೂಲಕ ನೋಡೋಣ. ರಾತ್ರಿಯ ಹೊತ್ತು ಎಲ್ಲರೂ ಮಲಗಿರುವಾಗ ಕಳ್ಳನೊಬ್ಬನು ಮನೆಯನ್ನು ಪ್ರವೇಶಿಸಿದ ಎಂದಿಟ್ಟುಕೊಳ್ಳೋಣ. ಕಳ್ಳನು ಒಳಗೆ ಬಂದಿರುವುದು ಮನೆಯ ಯಜಮಾನನ ಗಮನಕ್ಕೆ ಬಂದಿದೆ. ತಾನು ಬಂದಿರುವುದು, ಯಜಮಾನನಿಗೆ ತಿಳಿದಿದೆ ಎಂಬುದು ಕಳ್ಳನಿಗೂ ತಿಳಿದುಹೋದರೆ, ಆಗೇನಾಗುತ್ತದೆ? ಯಜಮಾನನು ವಿಶೇಷವಾಗಿ ಮತ್ತೇನನ್ನೂ ಮಾಡದಿದ್ದರೂ ಕಳ್ಳನೇ ತಾನೇತಾನಾಗಿ ಮನೆಯಿಂದ ಹೊರಗೆ ಹೋಗಲು ಪ್ರಯತ್ನಿಸುತ್ತಾನಷ್ಟೇ. ನಮಗೆ ಬೇಡದ ದುರ್ಗುಣವೂ ಹಾಗೆಯೇ. ಅದರ ಇರುವು ನಮ್ಮ ಅರಿವಿಗೆ ಬಂದ ಪಕ್ಷದಲ್ಲಿ, ಆ ದುರ್ಗುಣವು ತಾನೇತಾನಾಗಿ ಹೊರಹೋಗುತ್ತದೆ. ಅದಕ್ಕೆ ಸ್ವಲ್ಪ ಸಮಯ ಹಿಡಿದೀತು.
ಇದು ನಮ್ಮ ನಮ್ಮ ಮನಸ್ಸಿಗೆ ಇರುವ ಸಾಮರ್ಥ್ಯ. ನಾವು ಯಾವುದನ್ನು ಬೇಡ ಎಂದುಕೊಳ್ಳುತ್ತೇವೆಯೋ ಅದು ಹೊರಟುಹೋಗುತ್ತದೆ, ಯಾವುದು ಬೇಕು ಎಂದು ಸ್ವಾಗತಿಸುತ್ತೇವೆಯೋ ಅದು ಒಳಬಂದು ನಿಧಾನವಾಗಿ ಗೂಡುಮಾಡಿಕೊಳ್ಳುತ್ತದೆ. ಹಾಗಾಗಿ ನಮ್ಮೊಳಗೆ ನಮಗೇ ಬೇಡದ ದುರ್ಗುಣಗಳು ಯಾವ ಯಾವುದು ಸೇರಿಕೊಂಡಿದೆ ಎಂಬುದನ್ನು ಪ್ರಾಮಾಣಿಕವಾಗಿ ಗುರುತಿಸಿಕೊಳ್ಳುವ ಕೆಲಸ ಅತ್ಯಂತ ಮುಖ್ಯ. ಗುರುತಿಸಿಕೊಂಡ ಮೇಲೆ ನನಗೆ ಇದು ಖಂಡಿತವಾಗಿಯೂ ಬೇಡ ಎಂಬ ಸಂಕಲ್ಪ ಮಾಡಿಕೊಳ್ಳುವುದು ಮುಂದಿನ ನಡೆ. ದೈವವೇ! ಈ ಸಲ್ಲದ ಗುಣದಿಂದ ನನ್ನನ್ನು ಪಾರುಮಾಡು ಎಂಬ ಗಟ್ಟಿ ಪ್ರಾರ್ಥನೆಯನ್ನು ಮಾಡಿದರಂತೂ ದುರ್ಗುಣವು ಖಂಡಿತವಾಗಿಯೂ ಹೆಚ್ಚು ಕಾಲ ಉಳಿಯಲಾರದು. ಈ ಪ್ರಯೋಗವನ್ನು ನಾವೆಲ್ಲರೂ ಮಾಡಿ ಯಶಸ್ವಿಯಾಗೋಣ.
ಸೂಚನೆ: 19/05/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.