Monday, December 19, 2022

ಮೂಲ ಗುರಿಯನ್ನು ಮರೆಯದಿರೋಣ (Mula Guriyannu Mareyadirona)

ಲೇಖಕರು : ಸುಮುಖ ಹೆಬ್ಬಾರ್ 
(ಪ್ರತಿಕ್ರಿಯಿಸಿರಿ lekhana@ayvm.in)


ಒಬ್ಬ ರಾಜನು ತನ್ನ ಪರಿವಾರದೊಡನೆ ಬೇಟೆಯಾಡಲು ದಟ್ಟವಾದ ಅರಣ್ಯವನ್ನು ಪ್ರವೇಶಿಸುತ್ತಾನೆ. ಅಲ್ಲಿ ಅವನಿಗೆ ಒಂದು ಆಕರ್ಷಕವಾದ ತರುಣ ಜಿಂಕೆಯು  ಎದುರಾಗುತ್ತದೆ. ಜಿಂಕೆಯನ್ನು ಬೇಟೆಯಾಡಲು ಉದ್ಯುಕ್ತನಾಗುತ್ತಾನೆ; ಬಾಣವನ್ನು ಪ್ರಯೋಗಿಸುತ್ತಾನೆ. ಜಿಂಕೆಯು  ತಪ್ಪಿಸಿಕೊಂಡು ಮುಂದೆ ಸಾಗುತ್ತದೆ. ಮತ್ತೆ ರಾಜನ ಎದುರು ಹುಲ್ಲನ್ನು ಬಾಯಲ್ಲಿ ಇಟ್ಟುಕೊಂಡು ಜಿಗಿಯುತ್ತಾ ಓಡಾಡುತ್ತದೆ. ಇದನ್ನು ಕಂಡ ರಾಜನು ಜಿಂಕೆಯು ತನ್ನ ಸಾಮರ್ಥ್ಯಕ್ಕೆ ಸವಾಲು ಎಂಬುದಾಗಿ ಭಾವಿಸಿ ಮತ್ತೆ ಬಾಣವನ್ನು ಪ್ರಯೋಗಿಸುತ್ತಾನೆ. ಈ ಬಾರಿ ಜಿಂಕೆಗೆ ಬಾಣವು ತಗುಲಿದರೂ, ಒಂದು ಮರಕ್ಕೆ ಉಜ್ಜುತ್ತಾ ದೇಹದಿಂದ ಉದುರಿಸಿಕೊಳ್ಳುತ್ತದೆ. ಜಿಂಕೆಯನ್ನು ಬೇಟೆಯಾಡಿಯೇ ತೀರಬೇಕೆಂಬ ಛಲದಿಂದ, ಜಿಗಿದೋಡುತ್ತಿರುವ ಜಿಂಕೆಯನ್ನು ಹಿಂಬಾಲಿಸುತ್ತಾ ರಾಜನು ತನ್ನ ಪರಿವಾರದಿಂದ ದೂರವಾಗುತ್ತಾನೆ. ಜಿಂಕೆಯನ್ನು ಬೇಟೆಯಾಡಬೇಕೆಂಬ ಆಸೆಯಿಂದ ರಾಜನು ದಟ್ಟ ಅರಣ್ಯದ ಮಧ್ಯದಲ್ಲಿ ಸಿಲುಕಿಕೊಳ್ಳುತ್ತಾನೆ. ಅತ್ತ ಜಿಂಕೆಯೂ ತಪ್ಪಿಸಿಕೊಂಡು ಹೋಗುತ್ತದೆ; ಇತ್ತ ರಾಜನಿಗೂ ಹೊರಗೆ ಬರುವ ದಾರಿ ಕಾಣದೆ ಒದ್ದಾಡುವ ಸ್ಥಿತಿ ಬಂದೊದಗುತ್ತದೆ.

ಭಾರತದ ಇತಿಹಾಸವನ್ನು ಗಮನಿಸಿದಾಗ ಕೆಲವು  ರಾಜರ ಕಥೆಗಳಲ್ಲಿ ಇದೇ ರೀತಿಯ ಸಂದರ್ಭಗಳು ಕಾಣಸಿಗುತ್ತವೆ. ಸನಾತನಾರ್ಯ ಮಹರ್ಷಿಗಳು ಭಗವಂತನ ಸಾಕ್ಷಾತ್ಕಾರವೇ ಮಾನವ ಜನ್ಮದ ಅಂತಿಮ ಗುರಿ ಎಂಬುದಾಗಿ ಬಗೆ ಬಗೆಯಾಗಿ ಸಾರುತ್ತಾರೆ. ಆದರೆ ಈಗಿನ ಸಮಾಜವು ಕೇವಲ ಅರ್ಥ-ಕಾಮಗಳ ಹಿಂದೆ ಓಡುವುದನ್ನು ಕಾಣುತ್ತೇವೆ.  ಆಕರ್ಷಕವಾದ ಜಿಂಕೆ ಎಂಬುದು, ನಮ್ಮ ಎದುರು ಓಡಾಡಿ, ಮನಸ್ಸನ್ನು ತನ್ನ ಕಡೆ ಸೆಳೆದುಕೊಳ್ಳುವ ಬಯಕೆಗಳು. ಅದರ ಹಿಂದೆ ಬಿದ್ದು, ಅದನ್ನು ಪಡೆಯಬೇಕೆಂಬ ಉತ್ಕಟತೆಯು ಏರ್ಪಟ್ಟಾಗ, ನಮ್ಮ ಜೀವನದ ಪರಮ ಧ್ಯೇಯವನ್ನು ಮರೆತು, ತನ್ನವರಿಂದ ದೂರವಾಗಿ, ಏಕಾಂಗಿಯಾಗಿ, ವಿವೇಚನೆಯಿಲ್ಲದೆ, ಸೆಳೆತದ ಹಿಂದೆ ಹೋಗುವಂತಾಗುತ್ತದೆ. ಹಠಕ್ಕೆ ಬಿದ್ದು ಅದನ್ನು ಪಡೆಯಬೇಕೆಂಬ ಕಾಮದಿಂದ ಆರಂಭವಾಗುವ ಈ ಪ್ರಕ್ರಿಯೆಯು, ಮುಂದುವರಿದು ಕೇವಲ ಇಂದ್ರಿಯಪ್ರಪಂಚದಲ್ಲಿ  ತಂದು ನಿಲ್ಲಿಸಿಬಿಡುತ್ತದೆ.  ಅಷ್ಟೇ ಅಲ್ಲದೆ "ಇದೋ ಸಿಕ್ಕಿತು!" ಎಂಬ ಭ್ರಮೆಯನ್ನು ನೀಡುತ್ತಾ, ಇಂತಹ ವಸ್ತು/ವಿಷಯ ದೊರಕದೆ ಹೋದರೆ!  ಎಂಬ ಆತಂಕವನ್ನು ಉಂಟುಮಾಡುತ್ತದೆ. ಒಟ್ಟಿನಲ್ಲಿ, ಅತೀಂದ್ರಿಯವಾದ ಸುಖವನ್ನು ಅನುಭವಿಸುವ ಯೋಗ್ಯತೆ ಇರುವ ಹಾಗೂ ಅದನ್ನೇ ಗುರಿಯಾಗಿಸಿಕೊಳ್ಳಬೇಕಾದ ನಮ್ಮನ್ನು, ಲೌಕಿಕ ಕ್ಷೇತ್ರದ ಸುಖಗಳಿಗಾಗಿಯೇ ಸೀಮಿತಗೊಳಿಸುತ್ತದೆ.

ಮಹರ್ಷಿಗಳು ಪುರುಷಾರ್ಥಕ್ಕೆ ವಿರೋಧವಲ್ಲದ ಕಾಮನೆಗಳನ್ನು ತಿರಸ್ಕರಿಸಿಲ್ಲ. ಆದರೆ ಸಂಸಾರದ ಸಾಗರದಲ್ಲಿ ನಮ್ಮನ್ನು ಸುತ್ತಿಸುವ ಆಸೆಗಳ ವಿಷಯದಲ್ಲಿ ಎಚ್ಚರಿಸಿದ್ದಾರೆ.  "ಇಂದ್ರಿಯಗಳಿಗೆ ವಿಷಯವನ್ನು ಕೊಡುವಾಗಲೂ ದೇವನವರೆಗೂ ತಟ್ಟುವಂತೆಯೇ ಕೊಟ್ಟರೆ, ಜೀವನವು ಅಂತರ್ಮುಖವಾಗಿ ಹರಿದು ಹೋದರೆ ಸೌಖ್ಯವಿರುತ್ತೆ" ಎಂಬುದು ಶ್ರೀರಂಗ ಮಹಾಗುರುಗಳ ಅಭಿಪ್ರಾಯವಾಗಿತ್ತು.  ಮಹರ್ಷಿಗಳು ಕೆಲವು ವಿಷಯಗಳನ್ನು ಸಂಸಾರದಲ್ಲಿ ಜಾರುವ ಭಾಗಗಳು ಎಂದು ಸೂಚಿಸಿ, ಅವುಗಳನ್ನು ದಾಟುವ ಬಗೆಯನ್ನೂ ಹೇಳಿದ್ದಾರೆ.  ಇಂತಹ ಮಹರ್ಷಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು, ಮೂಲ ಉದ್ದೇಶವನ್ನು ಮರೆಸುವ ಕಾಮನೆಗಳಿಗೆ ವಶರಾಗದೆ, ಭಗವತ್ಕಾಮ ಹೊಂದಿ ಬದುಕುವವರಾಗೋಣ.  

ಸೂಚನೆ: 15/12/2022 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.