Tuesday, December 20, 2022

ಅಷ್ಟಾಕ್ಷರೀ​ - 25 ತೇನ ತ್ಯಕ್ತೇನ ಭುಂಜೀಥಾಃ (Astakshara Darshana 25 Tena Tyaktena Bhunjithah)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಇದು ಉಪನಿಷತ್ತುಗಳಲ್ಲಿ ಮೊದಲೆನಿಸಿದ ಈಶಾವಾಸ್ಯೋಪನಿಷತ್ತಿನ ಮೊದಲ ಮಂತ್ರದೊಂದು ಪಾದ. (ಶ್ಲೋಕವೊಂದರಲ್ಲಿ ಎರಡು ಅರ್ಧಗಳಿರುತ್ತವೆ; ಒಂದೊಂದು ಅರ್ಧದಲ್ಲಿ ಎರಡು ಪಾದಗಳಿರುತ್ತವೆ. ಎಂದೇ ಪ್ರತಿಯೊಂದು ಶ್ಲೋಕದಲ್ಲೂ ನಾಲ್ಕು ಪಾದಗಳಿರುತ್ತವೆ.)


ನಾವೆಲ್ಲರೂ ಸಾಧಾರಣವಾಗಿ ಭೋಗಪ್ರಿಯರೇ. ಭೋಗವೆಂದರೆ ಸುಖ - ಎಂಬುದೇ ನಮ್ಮಗಳ ಗ್ರಹಿಕೆ. ಆದರೆ ವಾಸ್ತವವಾಗಿ ಸುಖ-ದುಃಖಗಳೆರಡೂ ಭೋಗವೇ. ನಾವು ಮಾಡಿದ ಶುಭಗಳನ್ನೂ ಅಶುಭಗಳನ್ನೂ ಅನುಭೋಗಿಸತಕ್ಕದ್ದೇ - ಎಂದು ಸುಭಾಷಿತವೊಂದು ಉಸುರುವುದು. "ಮಾಡಿದ್ದುಣ್ಣೋ ಮಹರಾಯ" ಎಂಬ ಕನ್ನಡದ ಅಷ್ಟಾಕ್ಷರಿಯಲ್ಲಿ, ನಾವು ಮಾಡುವ ಸತ್ಕರ್ಮ-ದುಷ್ಕರ್ಮಗಳ ಫಲವಾಗಿಯೇ ಸುಖ-ದುಃಖಗಳನ್ನು "ಉಣ್ಣು"ವುವೆಂಬುದನ್ನು ಸೂಚಿಸಿದೆ. "ಬಿತ್ತಿದಂತೆ ಬೆಳೆ" ಎಂಬ ಆರೇ ಅಕ್ಷರದ ಮಾತು ಸಹ ಇದನ್ನೇ ಧ್ವನಿಪೂರ್ಣವಾಗಿ ಹೇಳಿದೆ. ಇದಲ್ಲದೆ "ಬಿತ್ತಿದ್ದು ಬೇವು, ಬಯಸಿದ್ದು ಮಾವು" ಎಂಬ ಕಿರುನುಡಿಯೂ, ದುರ್ಬೀಜವನ್ನು ಬಿತ್ತಿ ಸುಫಲವನ್ನು ಬಯಸಲಾಗದೆಂಬುದನ್ನೂ ತಿಳಿಸಿಕೊಡುತ್ತದೆ. ಮಹಾಭಾರತದಲ್ಲಿ ವ್ಯಾಸೋಕ್ತಿಯೊಂದಿದೆ. "ಪುಣ್ಯದ ಫಲವನ್ನು ಜನರು ಬಯಸುವರು, ಆದರೆ ಪುಣ್ಯಕಾರ್ಯವನ್ನು (ಮಾಡುವುದನ್ನು) ಬಯಸರು; ಹಾಗೆಯೇ, ಪಾಪದ ಫಲವನ್ನು ಬಯಸರಾದರೂ, ಪಾಪವನ್ನು ಮಾತ್ರ ಪ್ರಯತ್ನಪೂರ್ವಕವಾಗಿಯೇ ಮಾಡು(ತ್ತಿರು)ವರಲ್ಲಾ!" ಎಂಬುದವರ ಉದ್ಗಾರ. ಸುಖವೆಂಬ ಫಲವು ಬೇಕೋ, ಸತ್ಕರ್ಮವನ್ನು ಮಾಡಿ; ದುಃಖವೆಂಬ ಫಲವು ಬೇಡವೋ, ದುಷ್ಕರ್ಮದಿಂದ ದೂರವಿರಿ - ಎಂಬುದು ಅವರ ಮಾತಿನ ಸಾರ.


ಸುಖಾನುಭವವು ಬೇಕೆಂದರೆ ಸುಖಕ್ಕೆ ಕಾರಣಭೂತವಾದದ್ದನ್ನು ಮಾಡಬೇಕು. ಸುಭೋಗವು ಬೇಕೆಂದರೆ ಸುದಾನವನ್ನೇ ಮಾಡತಕ್ಕದ್ದೇ ಸರಿ. "ಕೊಟ್ಟದ್ದು ಬರದು" - ಎಂಬ ನಿಯಮ ಸೃಷ್ಟಿಯಲ್ಲಿಲ್ಲ: "ಕೊಟ್ಟದ್ದು ತನಗೆ; ಬಚ್ಚಿಟ್ಟದ್ದು ಪರರಿಗೆ" ಎಂಬ ಗಾದೆಯು ಮಹಾಬೋಧವನ್ನು ವಿರೋಧಾಭಾಸ(=ತೋರಿಕೆಯ ವಿರೋಧ)ದ ಲಘೂಕ್ತಿಯಿಂದಲೇ ಉಂಟುಮಾಡುತ್ತದೆ.


ಎಷ್ಟೋ ಮಂದಿಗೆ ದಾನಮಾಡಲೇ ಕೈಬಾರದು. "ಕೊಡುಗೈ ದಾನಿ" ಎಂದೆನಿಸಿಕೊಳ್ಳುವವರು ಎಲ್ಲೋ ಕೆಲವೇ ಮಂದಿ: "ದಾತಾ ಭವತಿ ವಾ ನ ವಾ!". ಎಷ್ಟೋ ಮಂದಿ ತಾವು ಸಂಪಾದಿಸಿದುದರ ದಾನವನ್ನು ಮಾಡರು - ಎಂಬುದಷ್ಟೇ ಅಲ್ಲ, ಸ್ವತಃ ಭೋಗಿಸರು ಕೂಡ! ದಾನಕ್ಕೂ ಭೋಗಕ್ಕೂ ಸಲ್ಲದ ಹಣವು ನಾಶಕ್ಕೇ ಎಡೆ - ಎಂದು ಸುಭಾಷಿತವೊಂದು ಸೂಚಿಸುವುದು. ಪ್ರೀತಿಯ ಲಕ್ಷಣಗಳು ಆರು – ಎನ್ನುವರು; ಅಲ್ಲಿ ಮೊದಲನೆಯದೇ 'ದದಾತಿ', ಕೊಡುವಿಕೆ. ಒಂದರ್ಥದಲ್ಲಿ ಜಿಪುಣನೂ ದಾನಿಯೇ! - ಏಕೆಂದರೆ ಅವನು ಕೂಡಿಡುವುದೆಲ್ಲ ಕೊನೆಗೆ ಪರರ ಪಾಲಾಗಲಿಕ್ಕೇ ಅಲ್ಲವೇ? - ಎಂದು ಸೂಕ್ತಿಯೊಂದು ನಿಪುಣವಾಗಿ ಜಿಪುಣರನ್ನು ಜಿಗುಟುವುದು. "ವಿಶಿಷ್ಟರಾದವರಿಗೆ ಏನನ್ನು ದಾನವಿತ್ತೆಯೋ ಅದು ನಿನ್ನ ಹಣ; ಯಾವುದನ್ನು ನೀನೇ ಪ್ರತಿದಿನ ಭೋಗಿಸುವೆಯೋ ಅದೂ ನಿನ್ನ ಹಣ; ಇವೆರಡಕ್ಕೂ ಆಗದ್ದೆಂದರೆ ಮತ್ತಾರಿಗಾಗಿಯೋ ನೀನದನ್ನು ಬರೀ ಕಾಯುತ್ತಿರುವವನಷ್ಟೆ!" - ಎಂದೊಂದು ಅಚ್ಛೋಕ್ತಿಯು ಎಚ್ಚರಿಸುತ್ತದೆ.  'ದೇಹಿ'ಯೆಂದು ಬಂದವನಿಗೆ 'ನಾಸ್ತಿ'ಯೆನ್ನದಿರು - ಎಂಬ ಮಾತನ್ನಾರು ಕೇಳಿಲ್ಲ? ದಾಸರಂತೂ, "ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು" ಎಂಬ  ಉದಾತ್ತ ಉಪದೇಶವಿತ್ತಿದ್ದಾರೆ!


ವಿವೇಕಿಯಾದವನು ಜೀವನದಲ್ಲಿ ಸಾಧಿಸಬೇಕಾದುದೆಂದರೆ ಯಜ್ಞ-ದಾನ-ತಪಸ್ಸುಗಳು - ಎಂದು ಛಾಂದೋಗ್ಯ-ಬೃಹದಾರಣ್ಯಕಗಳೆಂಬ ಉಪನಿಷತ್ತುಗಳು ಜ್ಞಾಪಿಸುತ್ತವೆ. ಶ್ರದ್ಧೆಯಿಂದ ಕೊಡು, ಅಶ್ರದ್ಧೆಯಿಂದ ಕೊಡಬೇಡ - ಎಂದು ಮುಂತಾಗಿ ತೈತಿರೀಯೋಪನಿಷತ್ತು ಆದೇಶಿಸುತ್ತದೆ. ದುರ್ದಾನವು ಅಪ್ರಶಸ್ತವೆಂಬುದನ್ನು ಕಠೋಪನಿಷತ್ತು ಆರಂಭದಲ್ಲೇ ಧ್ವನಿಸುತ್ತದೆ. ದಾನದಿಂದ ರಿಪುಗಳನ್ನು ತೊಡೆದುಹಾಕಬಹುದೆಂದೂ, ದಾನವಿತ್ತು ಶತ್ರುಗಳನ್ನೂ ಮಿತ್ರರನ್ನಾಗಿಸಬಹುದೆಂದೂ ಮಹಾನಾರಾಯಣೋಪನಿಷತ್ತು ಸೂಚಿಸುತ್ತದೆ. ದಾನದ ವಿವಿಧತೆಗಳನ್ನು ವಿಸ್ತೃತವಾಗಿಯೇ ವರ್ಣಿಸಲಾಗಿದೆ, ಭಗವದ್ಗೀತೆಯಲ್ಲಿ.


ಇವೆಲ್ಲಕ್ಕಿಂತಲೂ ಮಿಗಿಲಾಗಿ, ದಾನವೆಂಬ ತತ್ತ್ವವು ಹೇಗೆ ಸೃಷ್ಟಿಯಲ್ಲೇ ನಿಹಿತವಾಗಿದೆಯೆಂಬುದನ್ನು ಶ್ರೀರಂಗಮಹಾಗುರುಗಳು ಬೀಜ-ವೃಕ್ಷ-ದೃಷ್ಟಾಂತದಿಂದ ತೋರಿಸಿಕೊಟ್ಟಿರುವರು. ಬೀಜವು ತನ್ನನ್ನೇ ಪೂರ್ಣವಾಗಿ ಕೊಟ್ಟುಕೊಂಡಿದ್ದರಿಂದಲೇ ಅಲ್ಲವೆ ಮೊಳಕೆ ಬಂದುದು? ಮೊಳಕೆಯೂ ಹಾಗೆಯೇ ಮಾಡಿದ್ದರಿಂದಲೇ ಅಲ್ಲವೆ, ಮುಂದೆ ಕಾಂಡ-ಚಿಗುರು-ಎಲೆ-ಹೂವು-ಕಾಯಿ-ಹಣ್ಣುಗಳಾದದ್ದು? ನಿಸರ್ಗದ ನಡೆಯ ಹೆಜ್ಜೆಹೆಜ್ಜೆಯೂ ದಾನಮಯವೇ! ತಾಯಿಯ ತಾಯ್ತನವಿರುವುದಾದರೂ ತನ್ನ ಶಿಶುವಿಗೆ ಸ್ತನ್ಯವನ್ನು ಪ್ರೀತಿಯಿಂದಿತ್ತು ಪೋಷಿಸುವುದರಲ್ಲಲ್ಲವೇ?


ಅಷ್ಟೇ ಅಲ್ಲ; ಬಿತ್ತಿದುದು ಒಂದು ಬೀಜವಾದರೂ ಬಂದ ಪ್ರತಿಫಲವೇನು?: ನೂರಾರು ಫಲಗಳು; ಪ್ರತಿ ಫಲದಲ್ಲೂ ಮತ್ತೆ ಬೀಜ(ಗಳು)! ಹೋದದ್ದೊಂದು (ಬೀಜ); ಬಂದದ್ದು ಅನೇಕ: ಫಲವು ಹಲವು! "ಇಷ್ಟಿತ್ತರೆ ಅಷ್ಟಷ್ಟೀವೆ" - ಎಂದು ಸಾರುತ್ತಿದೆ ಸೃಷ್ಟಿ! : ದಾನವೆಂಬುದಿಲ್ಲದೆ ಸೃಷ್ಟಿಚಕ್ರವು ಮುಂದುವರೆದೀತೇ? ಸೃಷ್ಟಿ ಬರಡಲ್ಲ; ಅದರ ಮಧುರನಡೆಗೆ ತಡೆಯಿಕ್ಕುವವನ ಜೀವನವಷ್ಟೆ ಬರಡು.


ಎಲ್ಲವನ್ನೂ ನಮಗಿತ್ತ ಭಗವಂತನಿಗೂ ನಾವು "ದಾನ" ಮಾಡಬೇಕಾದದ್ದೇ: ನಿತ್ಯತೃಪ್ತನಾದ ಆತನಿಗೆ ನಾವು ಪತ್ರ-ಪುಷ್ಪ-ಫಲ-ಜಲಗಳನ್ನಾದರೂ, "ಎಲ್ಲವೂ ನೀನಿತ್ತದ್ದೇಪ್ಪಾ!" ಎಂದು ಭಕ್ತಿಯಿಂದಲೇ ಸಮರ್ಪಿಸಬೇಕಾದದ್ದೇ. ಅನ್ಯರಿಗೆ ನಾವು ಕೊಡುವ ದಾನವನ್ನೂ "ಮದರ್ಪಣಂ" ಎಂದೇ, ಎಂದರೆ  ಭಗವದರ್ಪಿತವಾಗಿಯೇ, ಮಾಡೆಂದು ಸೂಚಿಸುತ್ತದೆ, ಗೀತೆ. ಅರ್ಹರಿಗೆ ಕೊಡುವುದರಲ್ಲೇ ಒಂದು ಸಹಜಸಂತೋಷವೂ ಇದೆಯಷ್ಟೆ? 


ಸಾರವಾಗಿ, ದಾನವೇ ಜೀವಸೂತ್ರವಲ್ಲವೇ?


ಸೂಚನೆ: 18/12/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.