Friday, December 23, 2022

ಉಪವಾಸವು ಆಹಾರದ ನಿಯಮನವೇ? (Upavasavu Aharada Niyamanave?)

 ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


 'ಉಪವಾಸ' ಎಂಬ ಶಬ್ದವನ್ನು ನಾವು ನಿತ್ಯದಲ್ಲೂ ಕೇಳುತ್ತೇವೆ. ಆಷಾಢ ಮಾಸದ ಏಕಾದಶೀ ಬಂದಿತೆಂದರೆ ನಮಗೆ ನೆನಪಾಗುವುದು 'ಉಪವಾಸ' ಎಂದು. ಪ್ರತಿಪಕ್ಷದಲ್ಲೂ ಒಂದು ಏಕಾದಶೀ ಬರುತ್ತದೆ. ಆಗಲೂ ಉಪವಾಸವನ್ನು ಮಾಡುತ್ತೇವೆ. ಅಂದರೆ ಈ ಉಪವಾಸದಂದು ನಾವು ಏನು ಮಾಡುತ್ತೇವೆ? ಉಪವಾಸದ ಅರ್ಥವೇನು? ಉಪವಾಸದ ಹಿನ್ನೆಲೆ ಏನು? ಅದನ್ನು ಆಚರಣೆ ಮಾಡುವುದರಿಂದ ನಮಗಾಗುವ ಪ್ರಯೋಜನವಾದರೂ ಏನು? ಎಂಬ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ.  


'ಉಪ' ಎಂದರೆ ಸಂಸ್ಕೃತದಲ್ಲಿ ಸಮೀಪ ಎಂದರ್ಥ. 'ವಾಸ' ಎಂದರೆ ವಾಸ ಮಾಡುವುದು ಎಂದರ್ಥ. ಎರಡನ್ನೂ ಸೇರಿಸಿದರೆ ಉಪವಾಸ ಎಂದಾಗುತ್ತದೆ. ಅದರ ಅರ್ಥವು ಸಮೀಪದಲ್ಲಿ ವಾಸ ಮಾಡುವುದು ಎಂಬ ಸಹಜವಾದ ಅರ್ಥವು ಬರುತ್ತದೆ. ಆದರೆ ಇಲ್ಲಿ ಬರುವ ಅರ್ಥಕ್ಕೂ ನಾವು ಮಾಡುವ ಉಪವಾಸಕ್ಕೂ ಯಾವ ಬಗೆಯ ಸಂಬಂಧವೂ ತೋರುವುದಿಲ್ಲವಲ್ಲ? ಎಂಬ ಜಿಜ್ಞಾಸೆಯೂ ಬರುವುದು ಸರಿಯೇ! ನಾವಿಂದು 'ಉಪವಾಸ' ಎಂದೊಡನೆ - ಒಂದು ಸೂರ್ಯೋದಯದಿಂದ ಇನ್ನೊಂದು ಸೂರ್ಯೋದಯದವರೆಗೆ ಯಾವುದೇ ಆಹಾರವನ್ನು ಸೇವಿಸದೇ ಇರುವುದು, ಅಥವಾ ಯಾರಿಂದ ಯಾವ ಆಹಾರವನ್ನೂ ಸೇವಿಸದೇ ಇರಲು ಅಸಾಧ್ಯವೋ ಅಂತವರು ಉಪಾಹಾರ ಅಥವಾ ಫಲಾಹಾರವನ್ನಾದರೂ ತೆಗೆದುಕೊಳ್ಳುವುದು. ಇನ್ನೂ ಕೆಲವು ಕಡೇ ಇದನ್ನೂ ಮಾಡದೆ ಕೇವಲ ದ್ರವಾಹಾರವನ್ನು ಮಾಡಿ ಉಪವಾಸವನ್ನು ಮಾಡುತ್ತಾರೆ. ಇನ್ನು ಕೆಲವರು ದೇವರ ತೀರ್ಥದಲ್ಲೇ ಉಪವಾಸವ್ರತವನ್ನು ಆಚರಿಸುವವರೂ ಇದ್ದಾರೆ. ಒಟ್ಟಾರೆ ಹೇಳುವುದಾದರೆ ಇದೊಂದು ಆಹಾರನಿಯಮ ಎಂಬ ಅರ್ಥವನ್ನು ಮಾತ್ರ ಇಂದಿನ ದಿನ ನೋಡುವಂತಾಗಿದೆ. ಆದರೆ ಇದೇ ನಿಜವಾದದ್ದೇ? ಈ ಉಪವಾಸವನ್ನು ನಾವು ಮಾಡುವ ಉದ್ದೇಶವಾದರೂ ಏನು? ಊಟವನ್ನೋ ಅಥವಾ ಯಾವುದೇ ಬಗೆಯ ಆಹಾರಾದಿಗಳನ್ನೋ ತೆಗೆದುಕೊಳ್ಳದೇ ಇರುವುದು ಮಾತ್ರವೇ ಉಪವಾಸವೋ? ಅಥವಾ ಇದಕ್ಕೆ ಇನ್ನೇನಾದರೂ  ವಿಶೇಷತೆ ಇದೆಯೇ? ವಿಮರ್ಶೆ ಮಾಡೋಣ.


ಉಪವಾಸವೆಂದರೆ ಸಮೀಪ ವಾಸಮಾಡುವುದು ಅಥವಾ ಇರುವುದು ಎಂದರ್ಥ. ನಮಗೆ ಯಾರ ಸಾಮೀಪ್ಯ ಬೇಕಾಗಿದೆಯೋ ಅವರ ಬಳಿ ಇರುವುದಕ್ಕೆ 'ಉಪವಾಸ' ಎಂದು ಹೇಳಬಹುದು. ನಮಗೆ ತಿಂಡಿ ಬೇಕಾಗಿದೆ. ಅಂದರೆ ತಿಂಡಿಯ ಬಳಿ ಇರುವುದು, ನೀರು ಬೇಕಾಗಿದೆ, ನೀರಿನ ಬಳಿ ಇರುವುದು ಎಂಬ ಅರ್ಥವೋ! ಇದೂ ಹೌದು. ಇದರ ಜೊತೆಗೆ ಇನ್ನೂ ಅರ್ಥವಿದೆ. ನಮಗೆ ವಿದ್ಯೆ ಬೇಕಾಗಿದೆ ಎಂದರೆ ಗುರುವಿನ ಬಳಿ ನಿಕಟ ಸಾಮೀಪ್ಯ ಬೇಕು. ಅದೇ ವಿದ್ಯೆ ಬೇಕಾದರೆ ಪುಸ್ತಕದ ಸಮೀಪಸಂಬಂಧ ಬೇಕು. ಅಂತೆಯೇ ನಮಗೆ ನಮ್ಮ ಜೀವನದಲ್ಲಿ ಸಾಧಿಸಲೇಬೇಕಾದ ಸಾಮೀಪ್ಯ ಎಂದರೆ ಅದು ದೇವರು.  ದೇವರ ಬಳಿ ಇರುವುದಕ್ಕೇ 'ಉಪವಾಸ' ಎಂಬ ಶಬ್ದ ಪ್ರಯೋಗ ಬಂದಿರುವುದು. ಕೇವಲ ಶಾರೀರಕ ಸಂಬಂಧವನ್ನು ಮಾತ್ರ ಹೊಂದಿದರೆ ಸಾಕೇ? ಅಂದರೆ ದೇವರ ಬಳಿ ಹೋಗಿ ಕುಳಿತರೆ ಉಪವಾಸವಾಗುತ್ತದೆಯೋ? ಗುರುವಿನ ಬಳಿ ಹೋಗಿ ಕುಳಿತರೆ ವಿದ್ಯೆ ನಮದಾಗುತ್ತದೆಯೋ? ಇಲ್ಲ. ಕೇವಲ ಶರೀರದ ಸಂಬಂಧಮಾತ್ರವಿದ್ದರೆ ಸಾಲದು. ನಾವು ಯಾವುದನ್ನು ಬಯಸಿದ್ದೇವೋ ಅಲ್ಲಿ ನಮ್ಮ ಶರೀರ, ಮನಸ್ಸು, ಇಂದ್ರಿಯ, ಆತ್ಮ ಇವೆಲ್ಲದರ ನಿಕಟ ಸಂಬಂಧವಿದ್ದಾಗ ಮಾತ್ರ ಅದು 'ಉಪವಾಸ'ವಾಗುತ್ತದೆ. 


ಕೆಲವೊಮ್ಮೆ ನಮ್ಮ ಮಾತಿಗೂ ಕೃತಿಗೂ ಮನಸ್ಸಿಗೂ ಯಾವ ಸಂಬಂಧವೂ ಇರುವುದಿಲ್ಲ. ಇವೆಲ್ಲವೂ ಒಂದೇ ಸರಳರೇಖೆಯಲ್ಲಿ ಬಂದಾಗ ಮಾತ್ರ, ಬೇಕಾದವಸ್ತು ನಮಗೆ ಲಭ್ಯವಾಗುತ್ತದೆ. ಅದಕ್ಕೆ ಮಹಾತ್ಮರ ಲಕ್ಷಣವನ್ನು ಹೇಳುವಾಗ ಯಾರ ಮಾತು, ಕೃತಿ, ಮನಸ್ಸು ಒಂದಾಗಿರುತ್ತದೋ ಅವರು ಮಹಾತ್ಮರು, ಯಾರ ಮನಸ್ಸು, ಮಾತು, ಕೃತಿ ಎಲ್ಲವೂ ಭಿನ್ನವಾಗಿರುತ್ತದೋ ಅವರು ದುರಾತ್ಮರು ಎಂಬುದಾಗಿ ಸಜ್ಜನರ ಮತ್ತು ದುರ್ಜನರ ವ್ಯತ್ಯಾಸವನ್ನು ಸುಭಾಷಿತದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಕೆಲವೊಮ್ಮೆ ನಾವು ಮಾತಿನಲ್ಲಿ ಹೇಳುವುದುಂಟು. 'ಒಳಗೊಂದು, ಹೊರಗೊಂದು' ಅಂತ. ಆದರೆ ಅದು ಅದು 'ಒಳಗೂ ಹೊರಗೂ ಒಂದೇ ಆಗಬೇಕು'. ಹೀಗೆ ಎಲ್ಲೆಲ್ಲೂ ಎಲ್ಲವೂ ಒಂದಾಗಿ ಸೇರಿಕೊಂಡಾಗ ಅದು ಉಪವಾಸವಾಗುತ್ತದೆ. ಅಂದರೆ ನಾವು ನಮಗೆ ಅಪೇಕ್ಷಿತವಾದ ವಿಷಯದ ಜೊತೆ ಇದ್ದೇವೆ ಎಂದರ್ಥ. ಆಗ ಮಾತ್ರ ನಮಗದು ಸಿದ್ಧಿಸುತ್ತದೆ. ಈ ನೇರದಲ್ಲಿ ಉಪವಾಸವ್ರತದ ಆಚರಣೆ ನಮ್ಮ ಭಾರತೀಯರ ಒಂದು ಸಂಸ್ಕೃತಿಯ ಅಂಗವಾಗಿ ಬಂದಿದೆ. 


ನಾವು ಉಪವಾಸವನ್ನು ಮಾಡುವುದು ಭಗವಂತನ ಸಾಮೀಪ್ಯವನ್ನು ಸಂಪಾದಿಸಲು. ಅಂದು ನಮ್ಮ ಮೈ ಮನಸ್ಸೆಲ್ಲಾ ಅಲ್ಲೇ ಇರಬೇಕು. ಇನ್ನೆಲ್ಲೋ ಅಲೇದಾಡುತ್ತಿದ್ದಾಗ ಭಗವಂತನ ಪೂಜೆಯೋ, ಧ್ಯಾನವೋ, ಆರಾಧನೆಯೋ ಆಗಲು ಹೇಗೆ ಸಾಧ್ಯ?. ಅದಕ್ಕಾಗಿ 'ಉಪವಾಸವನ್ನು ಮಾಡಿ' ಎಂದು ನಮ್ಮ ಹಿಂದಿನವರು ಈ ಉಪವಾಸ ವ್ರತಾಚರಣೆಯನ್ನು ತಂದುಕೊಟ್ಟರು. ಇದು ಪ್ರಧಾನವಾಗಿ ಆಹಾರದ ನಿಯಮವಾಗಿದೆ. ಈ ನಿಯಮವೇ ಇಂದು ಉಪವಾಸವಾಗಿಬಿಟ್ಟಿದೆ. ಆಹಾರದ ನಿಯಮನದಿಂದ ಭಗವಂತನ ಅಥವಾ ನಮ್ಮ ಇಷ್ಟಾರ್ಥದ ಸಂಬಂಧವನ್ನು ಸಾಧಿಸಲು ಸಾಧ್ಯ ಎಂಬುದು ನಮ್ಮವರ ಸ್ಪಷ್ಟವಾದ ಅಭಿಪ್ರಾಯವಾಗಿದೆ. ಆಹಾರಕ್ಕೂ ಮನಸ್ಸು ಮತ್ತು ಇಂದ್ರಿಯ ಸಂಯಮನಕ್ಕೂ ಸಂಬಂಧವಿದೆ. ಆಹಾರಸ್ವೀಕಾರದಿಂದ ಶರೀರದಲ್ಲಿ ಜಾಡ್ಯವು ಆವರಿಸುತ್ತದೆ. ಶರೀರವು ಆಹಾರದ ಪಚನಕ್ಕಾಗಿ ಸಕ್ರಿಯವಾದಾಗ ಮನಸ್ಸೂ ಅದಕ್ಕೆ ಸಹಕರಿಸಬೇಕಾಗುತ್ತದೆ. ಆಗ ಭವಂತನ ಧ್ಯಾನದಲ್ಲಿ ಅಥವಾ ಪೂಜೆಯಲ್ಲಿ ಮನಸ್ಸನ್ನು ಇಡುವುದು ಹೇಗೆ ಸಾಧ್ಯ? ಮನಸ್ಸು ಈ ಶರೀರದ ಸಂಬಂಧವನ್ನು ಬಿಟ್ಟರೆ ಅಪೇಕ್ಷಿತವಾದುದರ ಸಂಬಂಧವನ್ನು ಪಡೆಯಲು ಸಾಧ್ಯ. ಇದು ಆಹಾರದ ಕಟ್ಟುನಿಟ್ಟಾದ ನಿಯಮನದಿಂದ ಮಾತ್ರವೇ ಸಾಧ್ಯ. ಈ ನೇರದಲ್ಲಿ ಆಹಾರಕ್ಕೂ ಮೈಮನಸ್ಸುಗಳು ಭಗವಂತನ ಬಳಿ ಇರುವುದಕ್ಕೂ ನೇರ ಸಂಬಂಧವಿದ್ದ ಕಾರಣ ಆಹಾರ ನಿಯಮವನ್ನೇ 'ಉಪವಾಸ' ಎಂದು ಕರೆದರು. ಅದರಿಂದ ಆಗಬೇಕಾದುದು ಭಗವಂತನ ಸಾಮೀಪ್ಯ ಎನ್ನುವ ಅತಿ ಮುಖ್ಯವಾದ ವಿಷಯವನ್ನು ಮರೆಯದಿರೋಣ.


ಸೂಚನೆ: 22/12/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.