Sunday, December 4, 2022

ವ್ಯಾಸ ವೀಕ್ಷಿತ - 15 ಬ್ರಾಹ್ಮಣಿಯ ಪ್ರಾಣತ್ಯಾಗ-ಸಂಕಲ್ಪ (Vyaasa Vikshita 15 Brahmaniya Pranatyaga-Sankalpa)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಖೇದಕ್ಕೊಳಗಾಗಿದ್ದ ಬ್ರಾಹ್ಮಣನನ್ನು ಸಂತೈಸುತ್ತಾ ಬ್ರಾಹ್ಮಣಿಯು ಹೇಳಿದಳು:

"ಸಾಧಾರಣರಂತೆ ನೀ ಸಂತಪಿಸುವುದೇ? ಅಳುವ ಸಮಯವೇ ಇದು? ಮನುಷ್ಯರೆಲ್ಲರೂ ಸಾಯುವವರೇ. ಯಾವುದು ಅನಿವಾರ್ಯವೋ ಅದಕ್ಕೆ ಸಂತಾಪವು ಸಲ್ಲದು (ಅವಶ್ಯಂಭಾವಿನ್ಯರ್ಥೇ ಹಿ ಸಂತಾಪೋ ನೈವ ವಿದ್ಯತೇ)! ಚಿಂತೆ ಬಿಡು. ನಾನೇ ಅಲ್ಲಿಗೆ ಹೋಗುವೆ. ಸ್ವ-ಪ್ರಾಣ-ತ್ಯಾಗದಿಂದಲಾದರೂ ಪತಿಹಿತಾಚರಣೆಯೇ ಭಾರ್ಯೆಯ ಕಾರ್ಯ. ವಿವಾಹದ ಉದ್ದೇಶ್ಯವೇ ಸಂತಾನಪ್ರಾಪ್ತಿ: ಅದಾಗಿದೆ; ಮಕ್ಕಳನ್ನು ನೀ ರಕ್ಷಿಸಬಲ್ಲೆ. ನೀನಿಲ್ಲದ ನಾನು ಅನಾಥೆಯೂ ವಿಧವೆಯೂ ಆಗಿ ಮಕ್ಕಳನ್ನೆಂತು ಸಾಕಲಿ? ಅಹಂಕಾರಿಗಳೂ ಅಯೋಗ್ಯರೂ ಈ ಮಗಳಿಗಾಗಿ ಹಂಬಲಿಸಿದಲ್ಲಿ ನಾನಿವಳನ್ನು ರಕ್ಷಿಸಿಕೊಳ್ಳಬಲ್ಲೆನೆ? ಪತಿಹೀನಳ ಬಾಳು ಗೋಳೇ ಆದೀತು: ದುಷ್ಟರ ದೃಷ್ಟಿಯು ಅವಳ ಮೇಲೆ ಬೀಳದೇ?  ಇನ್ನು ಮಗನನ್ನು ಧರ್ಮಮಾರ್ಗದಲ್ಲಿ ತೊಡಗಿಸಬಲ್ಲೆನೇ? ಅಪೇಕ್ಷಿತಗುಣಗಳನ್ನು ಆತನಲ್ಲುಂಟುಮಾಡಬಲ್ಲೆನೇ? ಅನಾಥೆಯಾದ ನನ್ನನ್ನು ಕಡೆಗಣಿಸಿ ಅನರ್ಹರು ನಮ್ಮ ಮಗಳನ್ನು ಬಯಸುವರೇ ಸರಿ; ಹಾಗಾದಲ್ಲಿ ನಾನು ಪ್ರಾಣಬಿಡುವುದೇ ನಿಶ್ಚಯ: ನೀರೊಣಗಲು ಮೀನುಗಳು ಸಾಯುವಂತೆ, ನಾವಿಲ್ಲದೆ ಮಕ್ಕಳೂ ನಾಶಹೊಂದುವರು. ಅಲ್ಲಿಗೆ, ನೀನೊಬ್ಬನಿಲ್ಲದಿದ್ದರೆ, ಮೂವರು ಸಾಯುವಂತಾಗುವುದು!

 

ಸಪುತ್ರಳಾದ ಸ್ತ್ರೀಯು ಪತಿಗಿಂತ ಮೊದಲೇ ಮರಣಿಸುವುದು ಶ್ರೇಯಸ್ಕರವೆಂದು ಧರ್ಮಜ್ಞರು ಹೇಳುವರು. ಇದೋ ಈ ಮಕ್ಕಳಿಬ್ಬರನ್ನೂ ಬಾಂಧವರನ್ನೂ ನನ್ನ ಜೀವಿತವನ್ನೂ ನಿನಗಾಗಿ ತೊರೆದಿದ್ದೇನೆ. ಯಜ್ಞ-ದಾನ-ತಪಸ್ಸುಗಳಿಗಿಂತಲೂ ನಾರಿಗೆ ಹೆಚ್ಚಾದುದು ಪತಿಗೆ ಪ್ರಿಯವಾಗುವಂತೆಯೂ ಹಿತವಾಗುವಂತೆಯೂ ಇರುವಂತಹುದು. ಹೀಗೆ ಧರ್ಮಕ್ಕೆ ಪರಮಸಂಮತವಾದದ್ದನ್ನೇ ನಾ ಮಾಡಬಯಸುತ್ತಿರುವುದೂ.

 

ಇಷ್ಟರಾದ ಮಕ್ಕಳು, ಸಂಪತ್ತು, ಪ್ರಿಯಸ್ನೇಹಿತರು ಹಾಗೂ ಹೆಂಡತಿ - ಇವರುಗಳೆಲ್ಲರೂ ಆಪತ್ತುಗಳಿಂದ ಬಿಡುಗಡೆಗಾಗಿಯೇ ಸರಿ. ಆಪತ್ಕಾಲಕ್ಕಾಗೆಂದು ಹಣ ಕೂಡಿಟ್ಟಿರಬೇಕು (ಆಪದರ್ಥೇ ಧನಂ ರಕ್ಷೇತ್). ಹೆಂಡತಿಯ ರಕ್ಷಣೆಗಾಗಿ ಅದನ್ನೂ ವ್ಯಯಿಸಬಹುದು. ತನ್ನನ್ನಂತೂ ಸದಾ ಕಾಪಾಡಿಕೊಳ್ಳಬೇಕು (ಆತ್ಮಾನಂ ಸತತಂ ರಕ್ಷೇತ್), ಮತ್ತು ಅದಕ್ಕಾಗಿ ಧನವನ್ನೂ ಬಳಸಬಹುದು, ಪತ್ನಿಯ( ಶ್ರಮವ)ನ್ನೂ ಬಳಸಬಹುದು. ಇಹಲೋಕ-ಪರಲೋಕಗಳೆರಡರ ಸಾಧನೆಗೂ ಪತ್ನೀ-ಪುತ್ರರೂ ಧನ-ಗೃಹಗಳೂ ಒದಗಿಬರಬಹುದಾದದ್ದೇ. ಹೀಗಿರುವುದರಿಂದ ನನ್ನನ್ನುಪಯೋಗಿಸಿಕೊಂಡು ನಿನ್ನನ್ನು ರಕ್ಷಿಸಿಕೋ; ಮಕ್ಕಳನ್ನು ನೋಡಿಕೋ: ನಾನು ಹೋಗಲನುಮತಿಸು.

 

ನಾರಿಯು ಅವಧ್ಯೆ - ಎನ್ನುತ್ತಾರಲ್ಲವೆ, ಧರ್ಮಜ್ಞರು? ಕೆಲವು ರಾಕ್ಷಸರು ಧರ್ಮಜ್ಞರೂ ಆಗಿರುವರು: ಆ ಕಾರಣಕ್ಕಾಗಿ ಆ ರಾಕ್ಷಸನು ನನ್ನನ್ನು ಕೊಲ್ಲದೆಯೂ ಇರಬಹುದು. ಆತ ಗಂಡಸರನ್ನು (ತಿಂದು) ಸಾಯಿಸುವುದಂತೂ ನಿಶ್ಚಿತವೇ; ಆದರೆ ಸ್ತ್ರೀಯರನ್ನೇನು ಮಾಡುವನೋ ಅದಿನ್ನೂ ಸಂಶಯಗ್ರಸ್ತ. ಆದ್ದರಿಂದ ನನ್ನನ್ನೇ ಹೊರಡಿಸು. ಈವರೆಗೆ ನಾನು ಸಾಕಷ್ಟು ಭೋಗಪಟ್ಟಿದ್ದಾಯಿತು; ಬೇಕಾದವುಗಳನ್ನು ಪಡೆದಿದ್ದಾಯಿತು; ಸಾಕಷ್ಟು ಧರ್ಮವನ್ನೂ ಎಸಗಿದ್ದೇನೆ; ಇಷ್ಟಸಂತಾನವೂ ಆಗಿದೆ; ನಿನಗೆ ಪ್ರಿಯವಾಗುವುದನ್ನೇ ಬಯಸುತ್ತಿದ್ದೇನೆ. ಇಷ್ಟೆಲ್ಲಾ ಲೆಕ್ಕಾಚಾರದ ಮೇರೆಗೇ ನನ್ನ ತೀರ್ಮಾನವಾದರೂ ಮೂಡಿರುವುದು.

 

ಮುಂದಕ್ಕೆ ನೀನು ಮತ್ತೊಬ್ಬಳನ್ನು ಮದುವೆಯಾಗಿ (ಗೃಹಸ್ಥಕರ್ತವ್ಯರೂಪವಾದ) ಧರ್ಮವನ್ನು ಮುಂದುವರೆಸಿಕೊಂಡುಹೋಗಬಹುದು. ಬಹುಪತ್ನೀತ್ವವು ಪುರುಷರಿಗೆ ದೋಷವಲ್ಲ; ಆದರೆ ಪೂರ್ವಪತಿಯನ್ನು ಉಲ್ಲಂಘಿಸುವುದು ನಾರಿಗೆ ಅಧರ್ಮವೇ ಸರಿ. ಎಲ್ಲವನ್ನೂ ಚಿಂತಿಸು: ಆತ್ಮತ್ಯಾಗವು ನಿಂದಿತ. ಈ ಕುಲವನ್ನೂ ಮಕ್ಕಳನ್ನೂ ರಕ್ಷಿಸು."

 

ಅವಳು ಹೀಗೆ ಹೇಳಲು, ಪತಿಯು ಅವಳನ್ನಾಲಿಂಗಿಸಿಕೊಂಡನು, ಕಣ್ಣೀರು ಕರೆದನು.

 

ಅಬ್ಬ! ಒಬ್ಬ ಸಾಧಾರಣಗೃಹಿಣಿಯ ಬಾಯಲ್ಲಿ ಅದೆಂತಹ ತ್ಯಾಗದ/ಧರ್ಮಸೂಕ್ಷ್ಮದ ಮಾತುಗಳು!!


ಸೂಚನೆ : 04/12/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.