Tuesday, December 20, 2022

ಕೋಪ ಮಾಡಿಕೊಳ್ಳಬಾರದು- ಕೃತಜ್ಞರಾಗಿರಬೇಕು (Kopa Madikollabaradu- Krtajnaragirabeku)

 ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)



ಮಹಾಭಾರತದಲ್ಲಿನ ಒಂದು ಕಥೆ. ಧರ್ಮಶೀಲನೂ, ತಪಸ್ವಿಯೂ ಆದ ಕೌಶಿಕನೆಂಬ ಬ್ರಾಹ್ಮಣ ಇದ್ದನು. ಇವನು ಪ್ರತಿನಿತ್ಯ ಮರದ ಕೆಳಗೆ ವೇದಾಧ್ಯಯನವನ್ನು ಮಾಡುತ್ತಿದ್ದನು. ಒಂದು ದಿನ ಇವನು ವೇದಾಧ್ಯಯನವನ್ನು ಮಾಡುತ್ತಿದ್ದಾಗ, ಆ ಮರದ ಮೇಲಿದ್ದ ಹಕ್ಕಿಯೊಂದು ಇವನ ಮೇಲೆ ಮಲವಿಸರ್ಜನೆಮಾಡಿತು. ಇದರಿಂದ ಕೋಪಗೊಂಡ ಕೌಶಿಕನು ಕೆಂಗಣ್ಣಿನಿಂದ ಆ ಹಕ್ಕಿಯನ್ನು ದಿಟ್ಟಿಸಿ ನೋಡಿದನು. ತಕ್ಷಣವೇ ಆ ಹಕ್ಕಿಯು ಸತ್ತು ಕೆಳಕ್ಕೆ ಬಿತ್ತು. ಇದನ್ನು ನೋಡಿದ ಕೌಶಿಕನಿಗೇ ಬೇಸರವಾಯಿತು," ನನ್ನ ಕ್ಷಣಕಾಲದ ಕೋಪಕ್ಕೆ ಒಂದು ಪಕ್ಷಿಯ ಜೀವವೇ ಹೋಯಿತು" ಎಂದು ಪಶ್ಚಾತ್ತಾಪಪಟ್ಟನು. 


ಅಲ್ಲಿಂದ ಎದ್ದು, ಅವನು ಭಿಕ್ಷೆಗಾಗಿ ಊರೊಳಗೆ ಹೋದನು. ಒಂದು ಮನೆಯ ಮುಂದೆ ಬಂದನು.  'ಭವತಿ ಭಿಕ್ಷಾಂ ದೇಹಿ' ಎಂದು ಕೇಳುವನು. ಆಗ ಆ ಮನೆಯೊಳಗಿಂದ 'ಸ್ವಲ್ಪ ತಾಳಿ ಬರುವೆ' ಎಂದು ಹೆಣ್ಣಿನ ಧ್ವನಿ ಬಂದಿತು. ಆ ಗೃಹಿಣಿಯು ಹೊಟ್ಟೆಹಸಿದು ಬಂದಿದ್ದ ತನ್ನ ಗಂಡನಿಗೆ ಊಟ-ಉಪಚಾರವನ್ನು ಮಾಡುತ್ತಾ ಬ್ರಾಹ್ಮಣನನ್ನು  ಮರೆತುಬಿಟ್ಟಳು. ಸ್ವಲ್ಪ ಸಮಯದ ನಂತರ ಜ್ಞಾಪಕಕ್ಕೆ ಬಂದು, ಭಿಕ್ಷೆಯನ್ನು ತಂದಳು. ಕೌಶಿಕನು ಕೋಪದಿಂದ, "ಯಾಕೆ ತಡ ಮಾಡಿದೆ" ?  ಎಂದು ಕೇಳುವನು. ಅದಕ್ಕೆ ಆ ಗೃಹಿಣಿಯು "ನನ್ನನು ಕ್ಷಮಿಸಿ, ನನ್ನ ಪತಿಯ ಸೇವೆಯಲ್ಲಿದ್ದೆ" ಎನ್ನುವಳು. ಕೌಶಿಕ ಹೇಳುವನು- "ಭೂಲೋಕವನ್ನೇ ಸುಡಬಲ್ಲವರು ಬ್ರಾಹ್ಮಣರು.  ನನ್ನನ್ನೇ ನಿರ್ಲಕ್ಷಿಸಿದ್ದೀಯೇ ;  ನನಗಿಂತ ನಿನ್ನ ಗಂಡ ದೊಡ್ಡವನೇನು?" ಎನ್ನುತ್ತಾನೆ.


ಆಗ ಆಕೆಯು "ನೀವು ಮರದಮೇಲಿನ ಪಕ್ಷಿಯನ್ನು ನಿಮ್ಮ ಕೋಪದ ದೃಷ್ಟಿಯಿಂದ ಕೊಂದಿರಿ ಎಂದು ನನಗೆ ಗೊತ್ತು.  ಬ್ರಾಹ್ಮಣರಾದ ತಾವು ದೇವತಾ ಸಮಾನರು. ನನ್ನ ತಪ್ಪನ್ನು ಮನ್ನಿಸಬೇಕು. ನನ್ನ ಗಂಡನನ್ನೇ ಪ್ರತ್ಯಕ್ಷ ದೇವರೆಂದು ಸೇವೆಯನ್ನು ಮಾಡುತ್ತಿರುವವಳು ನಾನು. ತಾವು ಕೋಪವನ್ನು ಮಾಡಿಕೊಳ್ಳಬಾರದು, ಹಿಂಸಿಸಬಾರದು, ನಾನು ಮಾಡಿದ್ದು ಸರಿಯಲ್ಲದಿದ್ದರೆ ಕ್ಷಮಿಸಿಬಿಡಿ; ಸ್ತ್ರೀ ಜೀವವನ್ನು ತೆಗೆಯಬಾರದು. ತಾವು ನನ್ನನ್ನು ಸುಡಬಲ್ಲ ಶಕ್ತಿಯುಳ್ಳವರು. ತಾವು ವೇದಾಧ್ಯಯನ ಸಂಪನ್ನರು; ಧರ್ಮದ ಬಗ್ಗೆ ಇನ್ನೂ ತಿಳಿದು ಕೊಳ್ಳಬೇಕೆಂದರೆ 'ಮಿಥಿಲೆಯಲ್ಲಿನ ವ್ಯಾಧನ ಬಳಿ ಚರ್ಚಿಸಿ" ಎಂದು ತಿಳಿಸುವಳು. ಈ ಮಾತುಗಳನ್ನು ಕೇಳಿದ ಕೌಶಿಕನು ಶಾಂತನಾಗುವನು. 


ಅವಳ ಸಲಹೆಯಂತೆ ಮಿಥಿಲೆಗೆ ಹೊರಡುವನು. ಧರ್ಮವ್ಯಾಧನ ಸ್ಥಳಕ್ಕೆ ಬಂದನು. ಅದೋ, ಜಿಂಕೆ, ಕೋಣಗಳ ಮಾಂಸಮಾರುವ ಅಂಗಡಿ. ಅಲ್ಲಿದ್ದ ಜನರು ಹೋದ ಮೇಲೆ ವ್ಯಾಧನು  ಕೌಶಿಕನನ್ನು ನೋಡಿ ನಮಸ್ಕರಿಸುವನು. ವ್ಯಾಧನು ಹೇಳುವನು-  "ನಿನ್ನನ್ನು ಒಬ್ಬ ಗೃಹಿಣಿಯೇ ಕಳಿಸಿದ್ದಾಳೆ ಹಾಗೂ ನೀವು ಇಲ್ಲಿಗೆ ಬಂದಿರುವ ಉದ್ದೇಶ ನನಗೆ ಗೊತ್ತು" ಎಂದನು. ಕೌಶಿಕನಿಗೆ ಪರಮಾಶ್ಚರ್ಯ!  ವ್ಯಾಧನು, "ಮಾತನಾಡಲು ಇದು ಸೂಕ್ತ ಸ್ಥಳವಲ್ಲ; ಬನ್ನಿ ನಮ್ಮ ಮನೆಗೆ ಹೋಗೋಣ" ಎಂದು ಕೌಶಿಕನನ್ನು ತನ್ನ ಮನೆಗೆ ಕರೆದುಕೊಂಡು ಹೋಗುವನು.


ಕೌಶಿಕನು ವ್ಯಾಧನಿಗೆ, "ನೀನು ಮಾಡುತ್ತಿರುವ ಮಾಂಸ ಕಡಿಯುವ ಘೋರ ಕೆಲಸ ನಿನಗೆ ತಕ್ಕದ್ದಲ್ಲ" ಎನ್ನುತ್ತಾನೆ.  ಅದಕ್ಕೆ ವ್ಯಾಧನು, "ಇದು ಪಾರಂಪರಿಕವಾಗಿ ಬಂದ ವೃತ್ತಿ ; ನಾನು ಮಾಂಸವನ್ನು ಮಾರುತ್ತೇನೆ, ನನ್ನ ಹೊಟ್ಟೆಪಾಡಿಗಾಗಿ ; ನಾನು ಪ್ರಾಣಿಯನ್ನು ಕೊಲ್ಲುವುದಿಲ್ಲ;  ಮಾಂಸವನ್ನು ತಿನ್ನುವುದಿಲ್ಲ ! ಬಂದ ಹಣದಲ್ಲಿ ಸ್ವಲ್ಪಭಾಗ ದಾನವನ್ನು ಮಾಡುತ್ತೇನೆ. ಯಾರಮೇಲೂ ಅಸೂಯೆಪಡುವುದಿಲ್ಲ. ತಂದೆತಾಯಿಯರ ಸೇವೆ ಮಾಡುತ್ತೇನೆ. ಪ್ರಾಣಿ ಹಿಂಸೆ ಮಾಡದವರು ಯಾರಿದ್ದಾರೆ?"- ಇತ್ಯಾದಿ ಹಲವು ಧರ್ಮ- ಅಧರ್ಮದ ವಿಷಯಗಳನ್ನು ಚರ್ಚಿಸುವನು. ಅದಕ್ಕೆ ಕೌಶಿಕನು "ನೀನು ಹೇಳುತ್ತಿರುವುದು ಸರಿ" ಎಂದು ಒಪ್ಪಿಕೊಳ್ಳುವನು. "ಈ ಸಿದ್ಧಿಯು ನಿನಗೆ ಹೇಗೆ ಲಭಿಸಿತು?" ಎಂದು  ಕೇಳಲು, ವ್ಯಾಧನು ಕೌಶಿಕನನ್ನು ತನ್ನ ಮನೆಯೊಳಗೆ ಕರೆದುಕೊಂಡು ಹೋಗುವನು. ಅಲ್ಲಿ ಅವರ ತಂದೆತಾಯಿಗಳು ಸಂತೋಷವಾಗಿರುವರು. "ನಾನು ಇವರನ್ನೇ ಸಾಕ್ಷಾತ್ ದೇವರೆಂದೇ ತಿಳಿದಿರುವೆ. ಅವರ ಸೇವೆಯೇ ನನ್ನ ತಪಸ್ಸು. ಹಾಗೆಯೇ ಆ ಗೃಹಿಣಿಯು ತನ್ನ ಗಂಡನನ್ನೇ ದೇವರೆಂದೇ ಸೇವೆಯನ್ನು ಮಾಡುತ್ತಿರುವಳು. ಅವಳು ಮಾಡುತ್ತಿರುವುದು ಕೂಡ ಇದೇ ತಪಸ್ಸು. ಹಾಗಾಗಿ ನಾನು ನಿಮಗೆ ಸಲಹೆ ಕೊಡುವುದು ಏನೆಂದರೆ ನೀವು ನಿಮ್ಮ ತಂದೆತಾಯಿಗಳನ್ನು ತೊರೆದು ವೇದಾಧ್ಯಯನ, ತಪಸ್ಸು ಮಾಡುತ್ತಿರುವುದು ಆ ವೃದ್ಧರಿಗೆ ಬಹಳ ಬೇಸರವಾಗಿದೆ. ತಾವು ನಿಮ್ಮ ಮನೆಗೆ ಹೋಗಿ ಅವರನ್ನು ಸಂತೋಷಪಡಿಸಿ; ಅದಕ್ಕಿಂತ ಬೇರೆ ಧರ್ಮವಿಲ್ಲ" ಎಂದು ತಿಳಿವಳಿಕೆ ನೀಡಿ ಆ ಬ್ರಾಹ್ಮಣನನ್ನು  ಕಳುಹಿಸಿಕೊಡುತ್ತಾನೆ. ಈ ಕಥೆಯನ್ನು  ಮಹಾಭಾರತದ ಅರಣ್ಯ ಪರ್ವವು ವಿವರಿಸುತ್ತದೆ. 


ಈ ಕಥೆ ಇಂದಿಗೂ ನಮಗೆ ಪ್ರಸ್ತುತವೇ. ಕೋಪವನ್ನು ಮಾಡಿಕೊಳ್ಳಬಾರದು, ವೃಕ್ಷ-ವನಸ್ಪತಿ, ನೀರು ಭೂಮಿ ಗಾಳಿ ಮೃಗ-ಪಕ್ಷಿ ಎಲ್ಲ ವಿಷಯದಲ್ಲೂ ಕೃತಜ್ಞರಾಗಿರಬೇಕು. ನಮ್ಮ ಸುತ್ತಮುತ್ತಲಿನ ಜೀವಲೋಕವೆಲ್ಲವನ್ನೂ ಕೃತಜ್ಞತೆಯಿಂದ ಕಾಣಬೇಕು. ಕೋಪದಿಂದ ದುಷ್ಫಲವೇ. ಹೀಗೆ ನಾವು ತೀರಾ ಸಾಮಾನ್ಯರೆಂದು ತಿಳಿದಿರುವ ಜನರೂ ನಮ್ಮ ಜೀವನದ ಮೇಲ್ಮೆಗೆ ಕಾರಣರಾಗಬಹುದು. ಈ ಕಥೆಯಲ್ಲಿ ಬರುವ ಕೌಶಿಕನು ಆ ಗೃಹಿಣಿ, ಮತ್ತು ಧರ್ಮವ್ಯಾಧನಿಗೆ ಎಷ್ಟು ಕೃತಜ್ಞನಾಗಿರಬೇಕಲ್ಲವೇ? ಇಂದು ವರ್ಷಾನುವರ್ಷಕ್ಕೆ ಹೆಚ್ಚುತ್ತಿರುವ ವೃದ್ಧಾಶ್ರಮಗಳಿಗೆ ಕಾರಣವೇನು? ಎಂದರೆ ನಮಗೆ, ಧರ್ಮವ್ಯಾಧನಿಗಿದ್ದ ತಿಳಿವಳಿಕೆಯ ಅಭಾವವೇ. ಮಾತಾಪಿತೃಗಳನ್ನು ಪ್ರತ್ಯಕ್ಷ ದೇವರಂತೆ ಸೇವೆಮಾಡುತ್ತಿದ್ದ ಧರ್ಮವ್ಯಾಧನ ಕರ್ಮಯೋಗವು ಇಂದಿಗೂ-ನಮ್ಮೆಲ್ಲರಿಗೂ ಆದರ್ಶ. "ಸೇವೆ, ಭಗವಂತನ ಭಾವಕ್ಕೆ ಧಕ್ಕೆ ತಗುಲದಂತೆ ಮಾಡುವ ವ್ಯಾಪಾರ[ಕ್ರಿಯೆ]. ಅವನ ಪರವಾಗಿರುವ, ಅವನಿಗೆ ವಿರೋಧವಿಲ್ಲದ, ಅವನನ್ನು ಹೊಂದಿಸುವ ಕಾರ್ಯವ್ಯಾಪಾರಗಳೆಲ್ಲವೂ ಸೇವೆಯೇ." ಎಂಬ ಶ್ರೀರಂಗಮಹಾ ಗುರುಗಳ ಮಾತಿಲ್ಲಿ ಸ್ಮರಣೀಯ.


ಋಗ್ವೇದದ ಮಂತ್ರ ಹೀಗೆ ಹೇಳುತ್ತದೆ 'ಆ ನೋ ಭದ್ರಾ: ಕ್ರತವೋ ಯಂತು ವಿಶ್ವತಃ' ಅಂದರೆ ವಿಶ್ವದ ಎಲ್ಲ ಕಡೆಗಳಿಂದಲೂ ಒಳ್ಳೆಯ ಸಂಗತಿಗಳು ನಮಗೆ ಹರಿದುಬರಲಿ. ಹಾಗೆ ಹರಿದು ಬರುವಾಗ, ಒಳ್ಳೆಯದನ್ನು ಗುರುತಿಸುವ ಮನಸ್ಸನ್ನು, ಆ ಒಳ್ಳೆಯದು ಹರಿದು ಬಂದ ಎಡೆಗೆ ಕೃತಜ್ಞತೆಯನ್ನೂ ಇಟ್ಟುಕೊಂಡರೆ ಇಹ ಪರದಲ್ಲೂ ಪರಮ ಸುಖವನ್ನು ಅನುಭವಿಸಬಹುದು.


ಸೂಚನೆ: 19/11/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.