Monday, December 19, 2022

ವ್ಯಾಸ ವೀಕ್ಷಿತ - 17 ಶಿಶುವಿನ ನುಡಿ, ಕುಂತಿಯ ಪ್ರವೇಶ (Vyaasa Vikshita - 17 Shishuvina Nudi, Kuntiya Pravesha)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಬಕರಾಕ್ಷಸನ ಬಾಯಿಗೆ ತುತ್ತಾಗಬೇಕಾಗುವ ಸಂನಿವೇಶದಲ್ಲಿ, ಬಾಲೆಯ ಬಾಯಲ್ಲಿ ಬಂದ ಮಾತನ್ನು ಅವಳ ಅಪ್ಪನೂ ಅಮ್ಮನೂ ಕೇಳಿಸಿಕೊಂಡರು; ಮೂವರೂ ಚೆನ್ನಾಗಿಯೇ ಅತ್ತರು (ಪ್ರ-ರುರುದುಃ).

ಅವರೆಲ್ಲರ ಅಳುವನ್ನು ಕೇಳಿಸಿಕೊಂಡ ಅವಳ ತಮ್ಮ – ಇನ್ನೂ ಸಣ್ಣ ಶಿಶು - ಸುಮ್ಮನಿರಲಿಲ್ಲ. ಕಣ್ಣರಳಿಸಿಕೊಂಡು ತನ್ನ ಅಸ್ಪಷ್ಟ-ಮಧುರಧ್ವನಿಯಲ್ಲಿ (ಅವರನ್ನು ಸಮಾಧಾನಪಡಿಸುತ್ತಾ) ಮುಗುಳ್ನಗೆಯೊಂದಿಗೆ ಹೇಳಿದ: "ಅಪ್ಪಾ, ನೀ ಅಳಬೇಡ; ಅಮ್ಮಾ, ನೀ ಅಳಬೇಡ; ಅಕ್ಕಾ ನೀನೂ ಅಷ್ಟೆ". ಎಂದವನೇ, ದರ್ಭೆಯೊಂದನ್ನೆತ್ತಿಕೊಂಡು, "ನರಭಕ್ಷಕನಾದ ಆ ರಾಕ್ಷಸನನ್ನು ಇದರಿಂದ ಸಾಯಿಸಿಬಿಡುವೆ!" ಎಂದು ಹೇಳಿದ. ಅಷ್ಟು ದುಃಖ ಉಮ್ಮಳಿಸಿಬರುತ್ತಿದ್ದರೂ ಅವರೆಲ್ಲರಿಗೆ ಆ ಬಾಲಕನ ಅಸ್ಫುಟವಾದರೂ ಮಧುರವಾದ ಮಾತನ್ನು ಕೇಳಿ ಮಹಾಹರ್ಷವೇ ಉಂಟಾಯಿತು!

ಅಷ್ಟರಲ್ಲಿ ಕುಂತಿಯು, ಇದುವೇ ಸರಿಯಾದ ಸಮಯವೆಂದು ಭಾವಿಸಿ, ಅವರ ಬಳಿಗೆ ಸಾರಿದಳು. ಆಗ ಅವಳಾಡಿದ ಮಾತು, ಸತ್ತವರಿಗೆ ಅಮೃತಸೇಚನದ ಹಾಗಿತ್ತು: "ಯಾವ ಕಾರಣಕ್ಕಾಗಿ ನಿಮಗೀ ದುಃಖವೊದಗಿದೆ? - ಎಂಬುದನ್ನು ಯಥಾರ್ಥವಾಗಿ ತಿಳಿದುಕೊಳ್ಳಬಯಸುತ್ತೇನೆ. ತಿಳಿದರೆ, ಒಂದು ವೇಳೆ ಅದನ್ನು ಹೋಗಲಾಡಿಸಲು ಸಾಧ್ಯವಾಗುವುದಾದರೆ, ಹೋಗಲಾಡಿಸುವೆ" - ಎಂದಳು.

ಆಗ ಬ್ರಾಹ್ಮಣನು ನುಡಿದನು: "ಅಮ್ಮಾ, ತಪಸ್ವಿನಿ, ಸಜ್ಜನರಿಗೆ ಸಲ್ಲುವ ಮಾತುಗಳನ್ನೇ ನೀನಾಡಿದ್ದೀಯೇ. ಆದರೆ ನಮಗೊದಗಿರುವ ದುಃಖವು, ಮನುಷ್ಯರಿಂದ ಹೋಗಲಾಡಿಸಲಾಗದು. ಅದೇನೆಂದು ಹೇಳುವೆ, ಕೇಳು.

ಈ ನಗರದ ಸಮೀಪದಲ್ಲಿ ಬಕನೆಂಬ ರಾಕ್ಷಸನಿದ್ದಾನೆ. ಈ ಜನಪದದ ಒಡೆಯ ಆತನೇ: ಮಹಾಬಲಶಾಲಿಯಾತ; ಮನುಷ್ಯರ ಮಾಂಸವನ್ನು ತಿಂದು ಪುಷ್ಟನಾಗಿದ್ದಾನೆ; ಈ ನಗರಿಯನ್ನೇ ಆ ನರಭಕ್ಷಕ ತಿಂದುಹಾಕುತ್ತಿದ್ದಾನೆಂದೂ ಹೇಳಬಹುದು. ಆದರೆ ಈ ಊರು ತಬ್ಬಲಿ; ಕಾಪಾಡುವವರಾರೂ ಇಲ್ಲ. ಈ ಅಸುರರಾಜನೇ ಈ ಊರನ್ನು ಕಾಪಾಡುತ್ತಿರುವನೆಂದೂ ಹೇಳಬಹುದು. ಈ ನಗರ-ದೇಶಗಳನ್ನೂ ತನ್ನ ರಾಕ್ಷಸಸೇನೆಯೊಂದಿಗೆ ರಕ್ಷಿಸುತ್ತಿದ್ದಾನೆ. ಎಂದೇ, ಅನ್ಯರಾಜರುಗಳಿಂದಾಗಲಿ ಭೂತಗಳಿಂದಾಗಲಿ ನಮಗೆ ಭಯವೆಂಬುದಿಲ್ಲವಾಗಿದೆ.

ಅದಕ್ಕಾಗಿ ಆತನಿಗಾಗಿ "ಸಂಬಳ"ವೆಂದೂ ನಿಗದಿ ಮಾಡಲಾಗಿದೆ: ಬಂಡಿ ಅನ್ನ; ಅದನ್ನು ಹೊತ್ತೊಯುವ ಮನುಷ್ಯ; ಜೊತೆಗೆ ಎರಡು ಕೋಣಗಳು – ಇವಿಷ್ಟೂ ಆತನ ದಿನದಿನದ ಆಹಾರ. ಆತನಿಗಿದನ್ನೊದಗಿಸುವ ಸರದಿಯು ಹಲವು ವರ್ಷಗಳಿಗೊಮ್ಮೆ ಒಂದು ಕುಟುಂಬಕ್ಕೆ ಬರುವುದು. ಅದನ್ನು ತಪ್ಪಿಸಿಕೊಳ್ಳಲು ಆ ಮನೆಯವನೇನಾದರೂ ಯತ್ನಿಸಿದಲ್ಲಿ, ಆತನನ್ನೂ ಆತನ ಹೆಂಡತಿ-ಮಕ್ಕಳನ್ನೂ ಆ ರಾಕ್ಷಸನು ಕೊಂದುತಿನ್ನುವನೇ. ವೇತ್ರಕೀಯಗೃಹವೆಂಬ ಪಟ್ಟಣವೊಂದಿದೆ; ನಮ್ಮ ನಿಜವಾದ ರಾಜ ಅಲ್ಲಿದ್ದಾನೆ. ಮಂದಮತಿಯಾದ ಆತನೋ, ಜನರ ಕ್ಷೇಮಕ್ಕಾಗಿ ಯಾವ ಯತ್ನವನ್ನೂ ಮಾಡ!"

ಇಲ್ಲಿ ನಾವು ಗಮನಿಸಬೇಕಾದ ಒಂದೆರಡಂಶಗಳಿವೆ. ಪ್ರಾಣದ ಹಂಗನ್ನು ತೊರೆಯಲು ಒಬ್ಬರಿಗಿಂತ ಮತ್ತೊಬ್ಬರು ಸಿದ್ಧರಾಗಿರುವಷ್ಟು ಪರಿಸ್ಥಿತಿ ಬಿಗಡಾಯಿಸಿದೆ; ಶೋಕವು ಮಿತಿಮೀರಿದೆ. ಈ ಮಧ್ಯದಲ್ಲಿ ಮಗುವು ಬಾಯಿಹಾಕಿರುವುದು ಅನಿರೀಕ್ಷಿತವಾದರೂ ಅಸಹಜವೇನಲ್ಲ. ಎಳೆಯ ಮಗುವಿನ ಉಲಿಯಲ್ಲಿನ ಸಾಹಸದ ನುಡಿ ನಗು ಚಿಮ್ಮಿಸಿದೆ (ಓದುಗರಲ್ಲೂ). ಮತ್ತು ಕಾಲಕಾಯುತ್ತಿದ್ದ ಕುಂತಿಗೂ ಎಲ್ಲರೂ ನಗುವ ವೇಳೆಗೆ ಸಮುಚಿತವಾದ ಪ್ರವೇಶವನ್ನು ಒದಗಿಸಿಕೊಟ್ಟಿದೆ. ಕಥೆಯಲ್ಲಿ ಕೆಲಕಾಲಾನಂತರದ, ಕೃತಕವಲ್ಲದ, ರಸಾಂತರವು ಆಸ್ವಾದ್ಯವೇ ಸರಿ.

ಸೂಚನೆ : 18/12/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.