Sunday, December 4, 2022

ಅಷ್ಟಾಕ್ಷರೀ​ - 24 ಗೀತಾ ಸುಗೀತಾ ಕರ್ತವ್ಯಾ (Astakshara Darshana 24 Gita Sugita Kartavya)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



"ಸುಗೀತೆಯಾದ ಗೀತೆಯನ್ನೇ ಅಭ್ಯಸಿಸಬೇಕು" - ಎಂಬ ಶ್ಲೋಕವು ಪ್ರಸಿದ್ಧವಾದದ್ದೇ. ಈ ಶ್ಲೋಕವನ್ನು ಗೀತಾರಂಭದಲ್ಲಿ ಪಠಿಸುವ ಪರಿಪಾಠವೇ ಉಂಟು. ಮುಂದಿನ ಸಾಲಂತೂ "ಬೇರೆ ಶಾಸ್ತ್ರಗಳ ವಿಸ್ತರದಿಂದ ಏನು ಪ್ರಯೋಜನ?" - ಎಂದು ಕೇಳುತ್ತದೆ (ವಿಸ್ತರ ಬೇರೆ; ವಿಸ್ತಾರ ಬೇರೆ. ಇಲ್ಲಿ ವಿಸ್ತರ ಎಂಬುದೇ ಸರಿಯಾದದ್ದು). ಶಾಸ್ತ್ರಗಳೆಲ್ಲವೂ ಬಂದಿರುವುದೂ ಜೀವಹಿತವು ಸಾಧಿತವಾಗಬೇಕು – ಎಂಬ ಒಂದೇ ಉದ್ದೇಶಕ್ಕೇ. ಭಗವದ್ಗೀತೆಯ ಉದ್ದೇಶವಾದರೂ ಬೇರೆಯೇನಲ್ಲ. ಅದರೂ ಗೀತೆಯಲ್ಲಿಯ ಸೊಗಸು-ಆಸ್ವಾದ್ಯತೆಗಳು, ಸ್ಪಷ್ಟತೆ-ಖಚಿತತೆಗಳು ಇತರ ಶಾಸ್ತ್ರಗಳಲ್ಲಿ ಇಲ್ಲವೇ ಸರಿ!  

ಗೀತೆಯೇಕೆ ಹಿರಿದು? - ಎಂಬ ಪ್ರಶ್ನೆಗೂ ಅಲ್ಲೇ ಉತ್ತರಕೊಡಲಾಗಿದೆ: "ಗೀತೆಯು ಎಷ್ಟಾದರೂ ಸಾಕ್ಷಾತ್ ಪದ್ಮನಾಭನ ಮುಖಪದ್ಮದಿಂದಲೇ ಹೊಮ್ಮಿರುವುದಲ್ಲವೇ?" - ಎಂಬುದಾಗಿ.

ಸಂಸ್ಕೃತದಲ್ಲಿ ಅನೇಕ ಗೀತೆಗಳಿವೆ. ಅವಧೂತಗೀತೆ, ಹಂಸಗೀತೆ, ಅಷ್ಟಾವಕ್ರಗೀತೆ, ಶಿವಗೀತೆ, ದೇವೀಗೀತೆ, ಈಶ್ವರಗೀತೆ, ಪಾಂಡವಗೀತೆ, ಬ್ರಹ್ಮಗೀತೆ, ಬ್ರಾಹ್ಮಣಗೀತೆ, ಭಿಕ್ಷುಗೀತೆ, ರಾಮಗೀತೆ ಮುಂತಾದುವು. (ಬೌದ್ಧರ ಧಮ್ಮಪದವನ್ನು ಬುದ್ಧಗೀತಾ - ಎಂದು ಕರೆಯುವುದು ಕೂಡಾ ಉಂಟು). ಎಷ್ಟೇ ಗೀತೆಗಳಿದ್ದರೂ, ಅವೆಷ್ಟೇ ಚೆನ್ನಾಗಿದ್ದರೂ (ಇವಲ್ಲಿ ಕೆಲವು ಗೀತೆಗಳು ಮಹಾಭಾರತದಲ್ಲೇ ಬಂದಿದ್ದರೂ), ಗೀತೆಯೆಂದರೆ ಭಗವದ್ಗೀತೆಯೇ!

ಶಾಸ್ತ್ರವೆಂದರೆ ಒಂದೇ: ದೇವಕಿಯ ಸುತನು ಹಾಡಿದುದು - ಎಂಬ ಮಾತೂ ಪ್ರಸಿದ್ಧವೇ: "ಏಕಂ ಶಾಸ್ತ್ರಂ ದೇವಕೀಪುತ್ರ-ಗೀತಂ". ಗೀತೆಯು ಶಾಸ್ತ್ರವಾದರೂ ಗೇಯ-ಕಾವ್ಯ-ಗುಣಗಳನ್ನು ಹೊಂದಿರುವ ಶಾಸ್ತ್ರ. ಎಂದೇ ಅದನ್ನು "philosophical poem" ಎಂದು ಕರೆದಿರುವುದು. ಶಾಸ್ತ್ರಗಳಲ್ಲಿ ಮೂರ್ಧನ್ಯವಾದದ್ದು ಯೋಗಶಾಸ್ತ್ರ. ಗೀತೆಯ ಪ್ರತಿಯೊಂದು ಅಧ್ಯಾಯದ ಪುಷ್ಪಿಕೆಯೂ (=ಸಮಾಪ್ತಿವಾಕ್ಯವೂ) ಅದನ್ನು ಯೋಗಶಾಸ್ತ್ರವೆಂದೇ ಕರೆಯುವುದು.

ಅಂದು ಮಹಾತ್ಮಾಗಾಂಧಿಯವರು ಅದನ್ನು ಒಂದು "spiritual dictionary" ಎಂದು ಕರೆದರೆ, ಇಂದು ಪ್ರಧಾನಿ ಮೋದಿಯವರು "India's biggest gift to the world" (ಜಗತ್ತಿಗೆ ಭಾರತವಿತ್ತ ಮಹತ್ತಮವಾದ ದತ್ತಿ)ಎಂದು ಕರೆದಿದ್ದಾರೆ. ಅಮೆರಿಕದ ಅಧ್ಯಕ್ಷರಾದ ಒಬಾಮಾರವರು ಭಾರತಕ್ಕೆ ಬಂದಿದ್ದಾಗ (೨೦೧೪)  ಅವರಿಗೆ ಒಂದು ಉಪಾಯನವಾಗಿ ಪ್ರಧಾನಿ ಮೋದಿಯವರು ಭಗವದ್ಗೀತೆಯ ಪ್ರತಿಯೊಂದನ್ನುಕೊಟ್ಟಿದ್ದರು.

ಗೀತೆಗೆ ಬಂದಿರುವ ಪ್ರಶಂಸೆಯು ಇಂದಿನದಲ್ಲ. ಮಹಾಭಾರತದಲ್ಲಿಯೇ "ಸ ಹಿ ಧರ್ಮಃ ಸುಪರ್ಯಾಪ್ತಃ ಬ್ರಹ್ಮಣಃ ಪದ-ವೇದನೇ" ಎಂದಿದೆ: "ಬ್ರಹ್ಮಪದವನ್ನು ಅರಿತುಕೊಳ್ಳಲು ಸಾಕಷ್ಟು ಸಾಮರ್ಥ್ಯವುಳ್ಳ ಧರ್ಮವೆಂದರೆ ಅದುವೇ (= ಗೀತೆಯೇ)". ಹಾಗೆಂದು ಹೇಳಿದವನೂ ಸಾಕ್ಷಾತ್ ಕೃಷ್ಣನೇ! ಅಂದು ಅದು

ಹೊಮ್ಮಿದಾಗ ಬಂದಿದ್ದ ಸ್ಫೂರ್ತಿಯು ತನಗೇ ಮತ್ತೆ ಬರದು! – ಎಂದೆನ್ನುತ್ತಾನೆ, ಆತನೇ; ಏಕೆ? "ಅಂದು ಅದನ್ನು ನಾನು ಹೇಳಿದುದು ಯೋಗಯುಕ್ತನಾಗಿ! " (ಅರ್ಥಾತ್, ಕೇವಲ ತಾರ್ಕಿಕ- ಆಲೋಚನೆಗಳಿಂದಲ್ಲ).

ಗೀತೆಗೆ ಬಂದ ವ್ಯಾಖ್ಯಾನಗಳಿಗೆ ಲೆಕ್ಕವೇ ಇಲ್ಲವೇನೋ! ಈಗಂತೂ ನಾನಾಭಾಷೆಗಳಲ್ಲಿ ಇನ್ನೂರು-ಮುನ್ನೂರು ಅನುವಾದಗಳಿವೆ! ಒಂದು ವೇದಾಂತದರ್ಶನವು ಸಿದ್ಧವಾಗಬೇಕಾದರೆ ಅದು ಪ್ರಸ್ಥಾನತ್ರಯಾನುಸಾರಿಯಾಗಿರಬೇಕು: ಉಪನಿಷತ್ತು ಅನುಭವಪ್ರಸ್ಥಾನ; ಬ್ರಹ್ಮಸೂತ್ರವು ನ್ಯಾಯಪ್ರಸ್ಥಾನ; ಗೀತೆಯು ಸ್ಮೃತಿಪ್ರಸ್ಥಾನ. ಇವಲ್ಲಿ, ಉಪನಿಷತ್ತುಗಳ ಭಾಷೆಯು ಎಲ್ಲೆಡೆ ಸುಲಭವಾಗಿಲ್ಲ; ಬ್ರಹ್ಮಸೂತ್ರವಂತೂ ಕಗ್ಗಂಟೇ; ಗೀತೆಯ ಭಾಷೆಯದೆಷ್ಟು ಸರಳ, ಹೃದಯಂಗಮ!

ಗೀತೆಯು "ಸಮಸ್ತ-ವೇದಾರ್ಥ-ಸಾರ-ಸಂಗ್ರಹ"ವೆಂದು ಶಂಕರಭಗವತ್ಪಾದರು ಹೇಳುತ್ತಾರೆ. ಭಜಗೋವಿಂದಸ್ತುತಿಯಲ್ಲಿ "ಭಗವದ್ಗೀತಾ ಕಿಂಚಿದಧೀತಾ" (ಗೀತೆಯು ಅಧ್ಯಯನವನ್ನು ಕಿಂಚಿತ್ತಾಗಿ ಮಾಡಿದರೂ ಯಮದರ್ಶನವಿಲ್ಲ) ಎನ್ನುತ್ತಾರೆ! ಭಗವದ್ರಾಮಾನುಜರು ಅಲ್ಲಿ "ಜ್ಞಾನಕರ್ಮಾನುಗೃಹೀತಂ ಭಕ್ತಿಯೋಗಂ" ಇದೆಯೆಂದು ಹೇಳುತ್ತಾರೆ. ಮಧ್ವಮುನಿಗಳು ಅದನ್ನು "ಭಾರತ-ಪಾರಿಜಾತ-ಮಧು" ಎಂದಿದ್ದಾರೆ.

ಉಪನಿಷತ್ತುಗಳೆಲ್ಲದರ ಸಾರವೇ ಗೀತೆ - ಎಂಬುದನ್ನು ಸುಂದರವಾದ ರೂಪಕವೊಂದು ಮನಗಾಣಿಸುತ್ತದೆ: ಉಪನಿಷತ್ತುಗಳೆಲ್ಲ ಗೋವುಗಳು; ಅವುಗಳ ಹಾಲ್ಕರೆಯುವವ ಗೋಪಾಲ-ಕೃಷ್ಣ; ಅರ್ಜುನನೇ ಕರು; ಗೀತಾಮೃತವೇ ಹಾಲು! ಗೀತೆಯ ಪ್ರತಿಯೊಂದಧ್ಯಾಯವೂ ಒಂದು ಉಪನಿಷತ್ತೇ, ಬ್ರಹ್ಮವಿದ್ಯೆಯೇ!!

ಅತ್ಯಂತ ಮುಖ್ಯವಾಗಿ, "ಭಗವದ್ಗೀತೆಯೆಂಬುದು ನರ-ನಾರಾಯಣರ ಯೋಗ"ವೆಂಬುದಾಗಿ ಶ್ರೀರಂಗಮಹಾಗುರುಗಳು ತಿಳಿಸಿಕೊಟ್ಟಿದ್ದಾರೆ. ಗೀತೆಯ ಕೊನೆಯ ಶ್ಲೋಕದ ಮರ್ಮವದು: "ಯೋಗೇಶ್ವರನಾದವನು ಕೃಷ್ಣ; ಜ್ಞಾನದ ರಕ್ಷಣೆಗಾಗಿ ಧರ್ನುರ್ಧರನಾಗಿ ನಿಂತವನು ಅರ್ಜುನ. ಯೋಗೇಶ್ವರ-ಕೃಷ್ಣನು ಇರುವೆಡೆಯಲ್ಲಿ ಆತ್ಮಶ್ರೀ; ಧನುರ್ಧರ-ಪಾರ್ಥನಿರುವೆಡೆ ವಿಜಯ. ಯೋಗೇಶ್ವರ-ಕೃಷ್ಣನಿರುವೆಡೆ ಭೂತಿ (ದೈವೀ ಸಂಪತ್ತು); ಧನುರ್ಧರ-ಪಾರ್ಥನಿರುವೆಡೆ ಧ್ರುವಾನೀತಿ (ದಂಡನೀತಿ)".

"ವಿಸ್ಮೃತಿ ಹೊಂದಿದ್ದವನಿಗೆ ಉದ್ದಕ್ಕೂ ಸ್ಮೃತಿಯನ್ನು ನೀಡುವುದು ಗೀತೆ" ಎಂಬ ಅವರ ವಾಣಿಯು ಅಮರವಾಣಿಯೇ. ನಾನಾ-ವಿಸ್ಮೃತಿಗಳಿಗೊಳಗಾಗಿರುವ ನಮಗೂ ಈ ಸುಗೀತೆಯು ಅತ್ಯವಶ್ಯವಲ್ಲವೇ?


ಸೂಚನೆ: 04/12/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.