Sunday, December 11, 2022

ವ್ಯಾಸ ವೀಕ್ಷಿತ - 16 ಕಿರಿಯ ಬಾಲೆಯ ಹಿರಿದಾದ ನುಡಿ (Vyaasa Vikshita 16 Kiriya Baleya Hiridada Nudi)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ತಂದೆತಾಯಿಯರು ಹೀಗೆ ಶೋಕಿಸುತ್ತಿರಲು ಅವರ ಮಗಳೂ ಖೇದಭರದಲ್ಲೇ ಹೀಗೆಂದಳು: "ಇದೇನು ನೀವಿಬ್ಬರೂ ಅನಾಥರಂತೆ ಗೋಳಿಡುವುದು? ನನ್ನ ಮಾತನ್ನೂ ಕೇಳಿ; ಆಮೇಲೆ ಸರಿಯೆನಿಸಿದ್ದನ್ನು ಮಾಡಿ.

ಎಷ್ಟಾದರೂ ಧರ್ಮತಃ ನಾನು ಪರಿತ್ಯಾಜ್ಯಳೇ ಅಲ್ಲವೆ? (ಹೆಣ್ಣುಮಗಳೆಂದರೆ, ಒಂದಲ್ಲ ಒಂದು ದಿನ ವಿವಾಹ ನೆರವೇರಿಸಿ ಕಳುಹಿಸಿಕೊಡಬೇಕಾದುದೇ ತಾನೆ?) ಹಾಗಿರುವಲ್ಲಿ ನನ್ನನ್ನೀಗಲೇ ತೊರೆದಲ್ಲಿ ಎಲ್ಲರೂ ಉಳಿಯುವಂತಾಗದೇ?

ಮಕ್ಕಳನ್ನು ಬಯಸುವುದಾದರೂ ಏಕೆ?: ಮುಂದೆ ನಮ್ಮನ್ನು ದಾಟಿಸುವರೆಂದು (ಇತ್ಯರ್ಥಂ ಇಷ್ಯತೇಽಪತ್ಯಂ ತಾರಯಿಷ್ಯತಿ ಮಾಮಿತಿ). ಇದೋ ಆ ಕಾಲವೀಗ ಬಂದಿದೆ. ದಾಟಿಸುವುದೆನ್ನುವುದು ಇಹದಲ್ಲಾದರೂ ಆಗಬಹುದು, ಪರದಲ್ಲಾದರೂ ಆಗಬಹುದು. ಪಿತಾಮಹರು (ಅಜ್ಜಂದಿರು) ದೌಹಿತ್ರರನ್ನು (ಎಂದರೆ ಪುತ್ರಿಯ ಪುತ್ರರನ್ನು) ನನ್ನಲ್ಲಿ ಬಯಸುವರು. (ಪಿತೃತೃಪ್ತಿಯಲ್ಲಿ ದೌಹಿತ್ರನ ಪಾತ್ರ ಹಿರಿದಾದುದಲ್ಲವೇ?) ಅವರಿಗೆ (ದೌಹಿತ್ರನಿಂದಾಗ)ಬೇಕಾದ ಆ ರಕ್ಷಣೆಯನ್ನು ಇದೋ ನಾನೇ ಈಗೊದಗಿಸುವೆ - ನನ್ನ ತಂದೆಯ ಜೀವವನ್ನುಳಿಸಿ. ಈ ಸೋದರನಿನ್ನೂ ಕಿರಿಯ;  ಅಪ್ಪಾ, ನೀನೀ ಲೋಕವನ್ನು ಬಿಟ್ಟು ಹೋದೆಯಾದರೆ ಆತನು ಸ್ವಲ್ಪಕಾಲದಲ್ಲೇ ನಶಿಸುವನೇ ಸರಿ. ಅತ್ತ ಅಪ್ಪನು ಸ್ವರ್ಗಸ್ಥನಾಗಿ, ಇತ್ತ ನನ್ನೀ ತಮ್ಮನೂ ಕೊನೆಗೊಂಡರೆ, ಪಿತೃಗಳ ಪಿಂಡಕ್ಕೆ ಭಂಗವುಂಟಾಗದೇ? ಅದು ಅವರಿಗೆ ಅಪ್ರೀತಿಯನ್ನು ಉಂಟುಮಾಡದೆ?

ಅತ್ತ ನೀ ಬಿಟ್ಟುಹೋದಲ್ಲಿ, ತಾಯಿಯೂ ಸೋದರನೂ ಇಲ್ಲವಾದಲ್ಲಿ, ನನ್ನ ಪಾಡೇನಿನ್ನು? - ಹೆಚ್ಚುಹೆಚ್ಚಿನ ದುಃಖಕ್ಕೀಡಾಗುತ್ತಾ, ಬರಬಾರದ ಸಾವನ್ನು ಪಡೆಯುವೆನಷ್ಟೆ? ಬದಲಾಗಿ, ನೀ ಬಿಡುಗಡೆ ಹೊಂದಿದಲ್ಲಿ ತಾಯಿಯೂ ಸೋದರನೂ ನನ್ನ ಶಿಶುವೂ ಸಂತಾನವೂ ಪಿಂಡವೂ ನೆಲೆಗಾಣುವುದರಲ್ಲಿ ಸಂಶಯವಿಲ್ಲ.

ಮಗನೆಂದರೆ ತಾನೇ (ತಂದೆಯೇ ಮಗನಾಗಿ ಜನಿಸುವನೆನ್ನುವರು); ಶ್ರೇಷ್ಠಮಿತ್ರನೆಂದರೆ ಹೆಂಡತಿಯೇ; ಮಗಳೆಂದರೆ ಎಷ್ಟಾದರೂ ಕ್ಲೇಶವೇ. ಆ ಕ್ಲೇಶದಿಂದ ನಿನ್ನನ್ನು ನೀನೀಗ ಬಿಡಿಸಿಕೊಳ್ಳಬಹುದಲ್ಲಾ! ನನ್ನನ್ನು ಧರ್ಮದಲ್ಲಿ ತೊಡಗಿಸಿದಲ್ಲಿ ಅದಾದೀತು.

ಅಪ್ಪಾ, ನೀನಿಲ್ಲದಾದಲ್ಲಿ ನಾನು ಅನಾಥೆಯಾಗುವೆ, ಬಡಪಾಯಿಯಾಗುವೆ, ಎಲ್ಲೆಲ್ಲೋ ಅಲೆದಾಡಿಕೊಂಡು ದಯನೀಯಳಾಗಿಹೋಗುವೆ! ಇದೆಲ್ಲಾ ಯಾಕೆ? ಈ ಕುಲದ ಬಿಡುಗಡೆಯನ್ನು ನಾನೇ ಮಾಡುವೆ! ದುಷ್ಕರವಾದ ಕರ್ಮವನ್ನು ಮಾಡಿ ಅದರ ಫಲವನ್ನು ಪಡೆಯುವವಳೂ ಆಗುವೆ!

ಇದೆಲ್ಲದರ ಬದಲಾಗಿ, ನನ್ನನ್ನು ತೊರೆದು ಆ ರಾಕ್ಷಸನಲ್ಲಿಗೆ ಬ್ರಾಹ್ಮಣಶ್ರೇಷ್ಠನಾದ ನೀನೇ ಹೋಗುವೆಯಾದಲ್ಲಿ, ನನಗದೆಷ್ಟು ನೋವಾದೀತು - ಎಂಬುದನ್ನೂ ಗಮನಿಸಿಕೋ. ಎಂದೇ ನಮಗಾಗಿ, ಧರ್ಮಕ್ಕಾಗಿ, ಸಂತಾನದ ರಕ್ಷಣೆಗಾಗಿ - ನಿನ್ನನ್ನು ನೀ ಕಾಪಾಡಿಕೋ. ಎಷ್ಟೇ ಆದರೂ ತ್ಯಾಜ್ಯಳೇ ಆದ ನನ್ನನ್ನೀಗಲೇ ತೊರೆದರಾಯಿತು: ಅವಶ್ಯಕರಣೀಯವಾದುದರ (ಮಾಡಲೇಬೇಕಾಗಿರುವುದರ) ವಿಷಯದಲ್ಲಿ ವಿಳಂಬ ಸಲ್ಲದು.

ನೀನೇನಾದರೂ ಸ್ವರ್ಗಸ್ಥನಾದಲ್ಲಿ ನನಗದಕ್ಕಿಂತಲೂ ಪರಮದುಃಖವೇನಿದೆ?: ಬೇರೆಯವರಿಂದ ಅನ್ನವನ್ನು ಬೇಡುತ್ತಾ ನಾಯಿಯಂತೆ ಅಂಡಲೆಯಬೇಕಾದೀತು, ಅಷ್ಟೆ. ಬದಲಾಗಿ, ನೀನು ಬಿಡುಗಡೆ ಹೊಂದಿದೆಯಾದಲ್ಲಿ ನಾನು  ಸ್ವರ್ಗದಲ್ಲಿ ಸುಖವಾಗಿರುವಂತಾಗುವುದು. ನನಗೆ ನೀವು ಸಲ್ಲಿಸುವ (ಜಲತಿಲಗಳ) ದಾನದಿಂದ ದೇವತೆಗಳೂ ಪಿತೃಗಳೂ (ತೃಪ್ತರಾಗಿ) ನಮ್ಮೆಲ್ಲರ ಹಿತಕ್ಕೂ ಕಾರಣರಾಗುತ್ತಾರೆ! ಎಂದೇ, ನಾ ಹೇಳುವಂತೆ ಮಾಡಿ! " - ಎಂದಳು.

ಒಬ್ಬ ಬಾಲೆಯ ಬಾಯಲ್ಲಿ ಅದೆಂತಹ ಧರ್ಮಸಂಮತವಾದ ಮಾತುಗಳು! ತ್ಯಾಗಬುದ್ಧಿಯಲ್ಲಿ ಪೈಪೋಟಿ! ಭಾರತವನ್ನು ಬಿಟ್ಟರೆ ಮತ್ತೆಲ್ಲೂ ಇಂತಹ ಸಂಸ್ಕೃತಿಭರಿತ ನಡೆನುಡಿಗಳು ದೊರೆಯವೇ ಸರಿ!

ಸೂಚನೆ : 11/12/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.