Tuesday, December 20, 2022

ವ್ಯಾಸ ವೀಕ್ಷಿತ - 14 ಬ್ರಾಹ್ಮಣನ ಖೇದ (Vyaasa Vikshita 14 Brahmanana Kheda)

 ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಪಕ್ಕದ ಮನೆಗೆ ಪ್ರವೇಶ ಮಾಡಿದ ಕುಂತಿಯು, ಅಲ್ಲಿ ತನ್ನ ಪತ್ನಿಯೊಂದಿಗೆ ದುಃಖ ಹೇಳಿಕೊಳ್ಳುತ್ತಿದ್ದ ಬ್ರಾಹ್ಮಣನನ್ನು ಕಂಡಳು. ಆತನ ಮಾತಿನ ವರಸೆ ಹೀಗಿದೆ:

 

"ಅಯ್ಯೋ ಈ ಜೀವನವೇ! ಇದು ಸಾರಹೀನ, ಅರ್ಥಹೀನ, ದುಃಖಮೂಲ, ಪರಾಧೀನ, ಹಾಗೂ ಅಪ್ರಿಯಭರಿತ. ಬದುಕಿರುವುದೆಂದರೆ ದುಃಖಗಳೊದಗುವುದು ನಿಶ್ಚಿತವಾದದ್ದೇ (ದುಃಖಾನಾಮ್ ಆಗಮೋ ಧ್ರುವಃ)! ಧರ್ಮಾರ್ಥಕಾಮಗಳನ್ನು ಸೇವಿಸುವಾಗ, ಅವುಗಳಿಂದ ವಿಯೋಗವಾಯಿತೆಂದರೆ ಕೊನೆಯಿಲ್ಲದ ದುಃಖವೇ. ಕೆಲವರೆನೋ ಮೋಕ್ಷವು ಮಿಗಿಲಾದುದೆನ್ನುವರು; ಅದು ಹಾಗಿರಲಾರದು.

 

ಹಣದ ಬಯಕೆಯೆಂದರೆ ದೊಡ್ಡ ದುಃಖವೇ; ಅದು ದೊರಕಿತೋ ಇನ್ನೂ ಹೆಚ್ಚು ದುಃಖ; ಪ್ರಾಪ್ತವಾದ ಅರ್ಥದೊಂದಿಗೆ ಅಂಟುಂಟಾದರಂತೂ ಭಾರಿ ದುಃಖವೇ. ಅಂತೂ ಈಗ ಬಂದೊದಗಿರುವ ಆಪತ್ತಿನಿಂದ ಬಿಡುಗಡೆಯೆಂತೋ ಕಾಣೆನೇ! ಹೆಂಡಿರುಮಕ್ಕಳೊಂದಿಗೆಲ್ಲಿಗಾದರೂ ಓಡಿಹೋಗಿಬಿಡಲೇ?

 

ಹಿಂದೆಯೂ ಅದಕ್ಕಾಗಿ ಯತ್ನಿಸಿದ್ದನ್ನು ನೀ ಬಲ್ಲೆಯಲ್ಲವೇ? ಹಲವು ಬಾರಿ ನಾ ಹೇಳಿದರೂ ನೀ ಕೇಳಲೇ ಇಲ್ಲವಲ್ಲ! 'ನಾ ಹುಟ್ಟಿಬೆಳೆದದ್ದಿಲ್ಲೇ; ಅಪ್ಪ-ಅಮ್ಮ ಇಲ್ಲೇ ಇರುವರು' ಎಂದೆಲ್ಲಾ ಉಸುರಿದೆಯಲ್ಲಾ, ದುರ್ಮೇಧೆ (ಬುದ್ಧಿಗೆಟ್ಟವಳೇ)! ಅವರೆಲ್ಲ ಹೋದಮೇಲೂ ನೀ ಬಿಡದಾದೆ. ಈಗಿದೋ ಬಂಧುನಾಶವೇ ಬಂದೊದಗಿದೆ! ನನ್ನ ಕೊನೆಗಾಲವೇ ಬಂದಾಯಿತು. ನನ್ನವರನ್ನೇ ಬಲಿಗೊಟ್ಟು ನಾ ಬದುಕಿರಲೇ?"

 

ಈ ಮಾತುಗಳನ್ನು ಹೇಳುತ್ತಾ, "ದುರ್ಮೇಧೆ"ಯೆಂದು ಯಾವಳನ್ನು ಈಗಷ್ಟೆ ಬೈದಿದ್ದನೋ ಅಂತಹ ಹೆಂಡತಿಯನ್ನೇ ತಾನೇಕೆ ಪರಿತ್ಯಜಿಸಲಾರೆ? - ಎಂಬುದನ್ನೂ ಹೇಳಿಕೊಳ್ಳುತ್ತಾನೆ: ತಾಯಿಯಂತೆಯೂ ಸಲಹುವ ಇವಳು ನನ್ನ ಸಹಧರ್ಮಚರಿ: ದೇವತೆಗಳೇ ಇವಳನ್ನು ನನ್ನ ಗೆಳತಿಯನ್ನಾಗಿ ಮಾಡಿಕೊಟ್ಟಿದ್ದಾರೆ. ತಂದೆತಾಯಿಗಳು ಈಕೆಯನ್ನು ವಿಧ್ಯುಕ್ತವಾಗಿ ಸಲ್ಲಿಸಿದ್ದಾರೆ. ತಾನೂ ಮಂತ್ರಪೂರ್ವಕವಾಗಿ ಇವಳನ್ನು ವರಿಸಿದ್ದಾಗಿದೆ. ಸತ್ಕುಲಜಾತೆ, ಸುಶೀಲೆ, ಬಂಜೆಯಲ್ಲ, ಸಾಧ್ವಿ, ಎಂದೂ ಅಪಕಾರ ಮಾಡಿದವಳಲ್ಲ; ಹಾಗೂ ಸದಾ ಅನುವ್ರತೆ; ಕರ್ಮಗಳಲ್ಲಿ ಸಹಭಾಗಿನಿಯಾದವಳು. ಇವಳನ್ನೆಂತು ತ್ಯಜಿಸಲಿ?

 

ಇನ್ನು ಮಗನೋ ಅಪ್ರಾಪ್ತವಯಸ್ಕ; ವ್ಯಂಜನಗಳು (ಎಂದರೆ ಗಡ್ಡಮೀಸೆಗಳು) ಸಹ ಬಂದಿಲ್ಲದವ. ಇನ್ನು ಮಗಳೋ?: ವಿವಾಹವಾಗಿ ಅವಳಾರ ಮನೆಸೇರಬೇಕೋ? ಅವಳ ಪುತ್ರನಿಂದಾಗಿ ತನಗೇ ಸದ್ಗತಿಯಾದೀತು! ಇಂತಹವಳಿಗೆ ತಾನೇ ಜನ್ಮವಿತ್ತು ಈಗ ತಾನೇ ತ್ಯಜಿಸುವುದೇ?

 

"ತಂದೆಗೆ ಮಗನ ಮೇಲೆ ಹೆಚ್ಚು ಸ್ನೇಹ" - ಎನ್ನುವುದುಂಟು; "ಅಲ್ಲ, ಮಗಳ ಮೇಲೇ" - ಎಂದು ಇನ್ನು ಕೆಲವರು ಹೇಳುತ್ತಾರೆ. ಆದರೆ ನನಗೋ ಇಬ್ಬರೂ ಸಮಾನರು. (ಸ್ತ್ರೀವಾದಿಗಳೀ ಮಾತನ್ನು ಗಮನಿಸಬಹುದು.) ಪಾಪರಹಿತಳಾದ ಈ ಬಾಲೆಯನ್ನು ತ್ಯಜಿಸುವುದೆಂತು?

 

ಇನ್ನು (ಎಲ್ಲರ ಬದಲಾಗಿ) ನಾನೇ ಬಲಿಯಾದಲ್ಲಿ, ಪರಲೋಕದಲ್ಲಿ ಪಶ್ಚಾತ್ತಾಪ ಪಡಬೇಕಾದೀತು, ಅಷ್ಟೆ. ನನ್ನನ್ನು ಬಿಟ್ಟು ಇವರುಗಳು ಬದುಕುಳಿಯಲಾರರು. ಇತ್ತ ಇವರನ್ನು ತ್ಯಜಿಸುವುದು ತಪ್ಪು; ಅತ್ತ ನಾನೇ ಬಲಿಯಾದರೆ ಇವರೆಲ್ಲ ಸಾಯತಕ್ಕವರೇ.

 

ಇದೆಂತಹ ಗತಿ ಬಂದಿತೆನಗೆ! ಎಲ್ಲರೊಂದಿಗೆ ಸಾಯುವುದೊಂದೇ ಮಾರ್ಗವೆಂಬಂತಿದೆಯಲ್ಲಾ!"


ಸೂಚನೆ : 27/11/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

 

ಹಾಗೆ ಖೇದಿಸುತ್ತಿದ್ದ ಆತನನ್ನು ಸಂತೈಸುತ್ತಾ, ಅವನ ಕೈ ಹಿಡಿದವಳು ಹೇಳಿದಳು: ಯಾರೋ ಪ್ರಾಕೃತನಂತೆ (=ಸಾಧಾರಣಮನುಷ್ಯನಂತೆ) ಸಂತಾಪಪಡುವುದೇ?! ತಿಳಿದವ ನೀನು, ಸಂತಾಪಪಡುವ ಕಾಲವಲ್ಲ ಇದು! ಎಲ್ಲರಿಗೂ ಸಾವು ನಿಶ್ಚಿತವೇ; ಯಾವುದು ಘಟಿಸಿಯೇ ತೀರುವುದೋ ಅದಕ್ಕೆ ಸಂತಾಪವೇ?!