Saturday, December 24, 2022

ಸನ್ಮಾರ್ಗದ ನಡೆಗೆ ವಿದುರನೀತಿಯೂ ದಾರಿದೀಪ (Sanmargada Nadege Viduranitiyu Daridipa)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)



 

ಪಂಚಮ ವೇದ ಎಂದೇ ಪ್ರಸಿದ್ಧವಾದ ಜೀವನದ ಮೌಲ್ಯಗಳನ್ನು ಪ್ರತಿಬಿಂಬಿಸುವ, ಪುರುಷಾರ್ಥ ಪ್ರಾಪ್ತಿಗೆ ದಿಗ್ದರ್ಶಕವಾಗಿರುವ ಆರ್ಷ ಗ್ರಂಥ, ಭಗವಾನ್ ವೇದವ್ಯಾಸ ವಿರಚಿತ ಶ್ರೀ ಮನ್ಮಹಾಭಾರತ.  ಈ ಗ್ರಂಥದಲ್ಲಿ ಬರುವ ಪ್ರತಿಯೊಂದು ಪಾತ್ರದಲ್ಲೂ  ವಿಶೇಷತೆ ಇದೆ. ಪ್ರತಿಯೊಬ್ಬರೂ ಕೂಡ, ತಮ್ಮ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿಭಾಯಿಸಿ ಅದರಲ್ಲಿ ಅನುಪ್ರವಿಷ್ಟರಾಗಬೇಕಾಗುತ್ತದೆ; ಅನೇಕ ಪಾತ್ರಗಳೊಂದಿಗೆ ವ್ಯವಹರಿಸಬೇಕಾಗುತ್ತದೆ. ಯಾವ ಸಂದರ್ಭದಲ್ಲಿ ಎಂತಹ ಪಾತ್ರವನ್ನು ಧರಿಸಬೇಕು, ಸೇವಿಸಬೇಕು, ಯಾವುದನ್ನು ವರ್ಜಿಸಬೇಕು, ಎಂಬುದನ್ನು ಈ ಗ್ರಂಥವು ತನ್ನಲ್ಲಿರುವ ಪಾತ್ರಗಳ ಮೂಲಕ ಲೋಕಕ್ಕೆ ಸಾರುತ್ತಿದೆ. ಧರ್ಮ-ಅಧರ್ಮಗಳ ಸ್ವರೂಪ ಹಾಗೂ ಅವುಗಳ ಹಾದಿಯಲ್ಲಿ ನಡೆದಾಗ ಸಿಗುವ ಫಲಿತಾಂಶವನ್ನು ಈ ಗ್ರಂಥದಲ್ಲಿನ ಪಾತ್ರಗಳು ಯಥಾವತ್ತಾಗಿ ಸೂಚಿಸುತ್ತಿವೆ ಎಂಬ ಕಾರಣದಿಂದ ಇಂದು ನಿತ್ಯಾನುಸಂಧಾನ ಯೋಗ್ಯವಾಗಿದೆ ಎಂಬುದು ಧರ್ಮಜ್ಞರ ಅಭಿಮತ. ಇದರಲ್ಲಿ ಭಗವಾನ್ ವೇದವ್ಯಾಸರು ಅನೇಕ ಪಾತ್ರಗಳ ಮೂಲಕ ಲೋಕಕ್ಕೆ ನೀತಿಯನ್ನು ಬೋಧಿಸಿದ್ದಾರೆ.  ಅಂತಹ ಪಾತ್ರಗಳಲ್ಲಿ ವಿದುರನ ಪಾತ್ರವೂ ಉತ್ಕೃಷ್ಟವಾಗಿದೆ.  ಪುತ್ರ ವ್ಯಾಮೋಹಕ್ಕೊಳಗಾಗಿ, ಅಧರ್ಮಿಯಾದ ಪುತ್ರ ದುರ್ಯೋಧನನನ್ನು ಅವನ ಮಾರ್ಗದಿಂದ ಚ್ಯುತಿಗೊಳಿಸಲು, ಪ್ರಯತ್ನ ಶೂನ್ಯನಾದ;  ಧರ್ಮಮೂರ್ತಿಯಾದ ಯುಧಿಷ್ಠಿರನನ್ನು ಶುದ್ಧವಾದ ಮನಸ್ಸಿನಿಂದ ಆದರಿಸಲು ಅಸಮರ್ಥನಾದ.  ಬಾಹ್ಯ ಅಂಧತ್ವದ ಜೊತೆಗೆ ಅಂತರಂಗದಲ್ಲಿಯೂ ಕುರುಡಾಗಿ ಸರ್ವದಾ ಚಿಂತೆಯನ್ನು ಅನುಭವಿಸುತ್ತಿದ್ದ.  ಆ ಚಿಂತಾ ಶಮನಕ್ಕಾಗಿ  ಧೃತರಾಷ್ಟ್ರನನ್ನು ನೆಪವಾಗಿಟ್ಟುಕೊಂಡು, ಲೋಕಕ್ಕೆ ಸಾರ್ವಕಾಲಿಕ ಸತ್ಯಗಳನ್ನೊಳಗೊಂಡ ನೀತಿಯನ್ನು ಮಹಾಪ್ರಾಜ್ಞನಾದ ವಿದುರನು ಬೋಧಿಸುತ್ತಾನೆ.


ಕಣ್ಣು ಉತ್ತಮ ರೂಪವನ್ನೂ, ಮೂಗು ಸುವಾಸನೆಯನ್ನೂ, ನಾಲಿಗೆ ಉತ್ತಮ ರುಚಿಯನ್ನೂ ಹೇಗೆ ಬಯಸುತ್ತವೆಯೋ, ಅಂತೆಯೇ ಮನಸ್ಸು, ಶಾಂತಿ ಸಮಾಧಾನಗಳನ್ನು ಬಯಸುತ್ತದೆ.  ಶಾಂತಿ ಸಮಾಧಾನಗಳಿಂದ ಕೂಡಿದ ಮನಸ್ಸಿನಿಂದ, ಐಹಿಕ ಹಾಗೂ ಪಾರಮಾರ್ಥಿಕ ಜೀವನಗಳೆರಡನ್ನೂ ಸಮರ್ಥವಾಗಿ ನಡೆಸಿ ಏಳಿಗೆಯನ್ನು ಹೊಂದಬಹುದು. ಅಂತಹ ಮನಸ್ಸನ್ನು ಹೊಂದಲು ಬುದ್ಧಿಗೆ  ತಿಳಿವಳಿಕೆ ಅತ್ಯವಶ್ಯಕ.  ಅಂತಹ ತಿಳಿವಳಿಕೆಯನ್ನು ಈ ನೀತಿಯು ಬೋಧಿಸುವುದರ ಮೂಲಕ ಸಮಾಜದ ಎಲ್ಲಾ ವರ್ಗದವರಿಗೂ ಕೈ ದೀವಿಗೆಯಾಗಿದೆ. ಅದರಲ್ಲಿರುವ ಕೆಲವೊಂದಷ್ಟು ಅಂಶಗಳನ್ನು ಗಮನಿಸುವುದಾದರೆ,


ಷಣ್ಣಾಮಾತ್ಮನಿ ನಿತ್ಯಾನಾಮೈಶ್ವರ್ಯಂ ಯೋsಧಿಗಚ್ಛತಿ l

ನ ಸ ಪಾಪೈ: ಕುತೋsನರ್ಥೈರ್ಯುಜ್ಯತೇ ವಿಜಿತೇಂದ್ರಿಯ: ll


ತನ್ನಲ್ಲಿಯೇ ಹುದುಗಿಕೊಂಡಿರುವ ಆರು ನಿತ್ಯಶತ್ರುಗಳ ಮೇಲೆ (ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ) ಯಾವನು ಪ್ರಭುತ್ವವನ್ನು ಇಟ್ಟುಕೊಂಡಿರುತ್ತಾನೆಯೋ ಅಂತಹ ಜಿತೇಂದ್ರಿಯನಾದ ಮಹಾಪುರುಷನು ಯಾವ ವಿಧವಾದ ಪಾಪಗಳಿಂದಲೂ ಲಿಪ್ತನಾಗುವುದಿಲ್ಲ; ಯಾವ ವಿಧವಾದ ಅನರ್ಥಗಳಿಂದಲೂ ಯುಕ್ತನಾಗುವುದಿಲ್ಲ.


ಕಾಮ ಕ್ರೋಧಾದಿಗಳನ್ನು ಅರಿಷಡ್ವರ್ಗಗಳು ಎಂಬುದಾಗಿ ಕರೆದಿದ್ದಾರೆ.  ಇವು ನಮ್ಮ ಅಂತಶ್ಶತ್ರುಗಳು. ಇವು ನಮ್ಮ ಮನಸ್ಸನ್ನು ಕ್ಷೋಭೆಗೊಳಿಸಿ, ಭೌತಿಕ, ದೈವಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳ ಏಳಿಗೆಯನ್ನು ಕುಂಠಿತಗೊಳಿಸುತ್ತವೆ.  ಹಾಗಾಗಿ, ಅಭಿವೃದ್ಧಿಯನ್ನು ಬಯಸುವವನು ಇವುಗಳನ್ನು ಮೊದಲು ಜಯಿಸಬೇಕು.  ಅರಿಷಡ್ವರ್ಗಗಳನ್ನು ಪೂರ್ಣವಾಗಿ ತ್ಯಜಿಸಲು ಸಾಮಾನ್ಯರಿಂದ ಕಷ್ಟಸಾಧ್ಯ ,ಆದರೆ  ಅವುಗಳಿಗೆ ವಶರಾಗದೇ ನಮ್ಮ ಅಧೀನದಲ್ಲಿ ಅವುಗಳನ್ನು ಇರಿಸಿಕೊಂಡಾಗ ಅನರ್ಥಗಳನ್ನು ತಪ್ಪಿಸಬಹುದು. ಚತುರ್ವಿಧ ಪುರುಷಾರ್ಥಗಳಲ್ಲಿ ಒಂದಾದ ಧರ್ಮಕ್ಕೆ ಅವಿರೋಧವಾದ ಕಾಮವು ಸೇವ್ಯ. ಭಗವದ್ಧರ್ಮಕ್ಕೆ ವಿರೋಧ ಬಂದಾಗ, ಅದನ್ನೆದುರಿಸಲು ಶ್ರೀರಾಮನಂತೆ ಸಾತ್ತ್ವಿಕವಾದ ಕೋಪವನ್ನು ಬರಮಾಡಿಕೊಂಡು, ಆ ಕಾರ್ಯ ಮುಗಿದ ತಕ್ಷಣವೇ, ಅದನ್ನು ಉಪಸಂಹರಿಸಿಕೊಳ್ಳುವ ಜಾಣ್ಮೆಯನ್ನೂ ಕಲಿಯಬೇಕಾಗುತ್ತದೆ. ಮೋಹವನ್ನೂ ಸಹ  ಅಶಾಶ್ವತ ವಸ್ತುಗಳ ಮೇಲಿರಿಸಿದರೆ, ದುಃಖ ಕಟ್ಟಿಟ್ಟ ಬುತ್ತಿ.  ಅದೇ ಮೋಹವನ್ನು ಭಗವಂತನೆಡೆಗೆ ತಿರುಗಿಸಿದಾಗ ಭಕ್ತಿಯಾಗಿ ಪರಿಣಮಿಸಿ ಶಾಶ್ವತವಾದ ಆನಂದವನ್ನು ಹೊಂದುವುದಕ್ಕೆ ಸಾಧ್ಯ ಎಂಬುದಕ್ಕೆ ಅನೇಕ ಭಾಗವತೋತ್ತಮರು ಉದಾಹರಣೆಯಾಗಿದ್ದಾರೆ. ಹೀಗೆ ಅರಿಷಡ್ವರ್ಗಗಳನ್ನು ಪೂರ್ಣವಾಗಿ ತ್ಯಜಿಸಲಾಗದ ಪಕ್ಷದಲ್ಲಿ, ಅವುಗಳ ಮೇಲೆ ನಮ್ಮ ಹಿಡಿತವನ್ನು ಇಟ್ಟುಕೊಳ್ಳಲು ಸದಾ ಪ್ರಯತ್ನಶೀಲರಾದಾಗ, ಪಾಪಕಾರ್ಯಗಳಿಂದ ಒದಗಬಹುದಾದ ದುಃಖದಿಂದ ಪಾರಾಗಬಹುದು.


"ಕಳೆಯನ್ನು ಕಿತ್ತು ಬಿಸಾಡುವ ಬದಲು ಅದನ್ನೇ ಗೊಬ್ಬರವನ್ನಾಗಿ ಉಪಯೋಗಿಸಿಕೊಂಡು ಗಿಡ ಬೆಳೆಸುವವನು ಕುಶಲನಾದ ವ್ಯವಸಾಯಗಾರ.  ಅಂತೆಯೇ ಕಾಮ  ಲೋಭಾದಿಗಳನ್ನು ಬಿಡಲಾಗದಿದ್ದರೆ ಭಗವತ್ಕಾಮ ಭಗವಲ್ಲೋಭವಾಗುವಂತೆ ಮಾಡಿಕೊಳ್ಳುವುದು ಜಾಣತನದ ಕೆಲಸ " ಎಂಬ ಶ್ರೀರಂಗ ಮಹಾಗುರುಗಳ ವಾಣಿಯನ್ನು ಇಲ್ಲಿ ಸ್ಮರಿಸಬಹುದಾಗಿದೆ.


ಅಪ್ಯುನ್ಮತ್ತಾತ್ ಪ್ರಲಪತೋ ಬಾಲಾಚ್ಚ ಪರಿಜಲ್ಪತ: l

ಸರ್ವತ: ಸಾರಮಾದದ್ಯಾದಶ್ಮಭ್ಯ ಇವ ಕಾಂಚನಮ್ ll


ಅಸಂಗತವಾಗಿ ಮಾತನಾಡುವ ಹುಚ್ಚನಿಂದಾಗಲೀ ಅಥವಾ ತೊದಲು ನುಡಿಯುವ ಮಗುವಿನಿಂದಾಗಲೀ ಎಲ್ಲೆಡೆಯಿಂದಲೂ ಗುಣವನ್ನು ಗ್ರಹಿಸಬೇಕು. ಕಲ್ಲಿನಿಂದ ಚಿನ್ನವನ್ನು ಪಡೆಯುವಂತೆ ಎಲ್ಲರಿಂದಲೂ ಸಾರಭೂತವಾದ ಸದ್ಗುಣಗಳನ್ನು ಪಡೆಯಬೇಕು.


ಇಲ್ಲಿ ಗುಣಗ್ರಾಹಿತ್ವದ ಬಗ್ಗೆ ವಿದುರನು ಅತ್ಯಂತ ಮನೋಜ್ಞವಾಗಿ ತಿಳಿಸಿದ್ದಾನೆ. ಗುಣ ಗ್ರಾಹಿತ್ವವೆಂಬುದು ಎಲ್ಲರೂ ಅಳವಡಿಸಿಕೊಳ್ಳಲೇಬೇಕಾದಂತಹ ಒಂದು ಗುಣ. ಪ್ರತಿಯೊಂದು ಜೀವಿಯಲ್ಲಿಯೂ ಅನುಸರಿಸಲು ಯೋಗ್ಯವಾದಂತಹ ಒಂದಲ್ಲ ಒಂದು ಗುಣ ಇದ್ದೇ ಇರುತ್ತದೆ. ಎಷ್ಟೇ ಕೆಟ್ಟವರಾದರೂ, ಅವರಲ್ಲಿ ಒಂದಾದರೂ ಒಳ್ಳೆಯ ಗುಣ ಅಥವಾ ಅದರ ಛಾಯೆ ಇದ್ದೇ ಇರುತ್ತದೆ.  ಅಂತಹ ಗುಣವನ್ನು ಗ್ರಹಿಸಿ, ಗುರುತಿಸಿ, ಸಾಧ್ಯವಾದಲ್ಲಿ, ನಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡಾಗ ಶ್ರೇಯಸ್ಕರ ಎಂಬುದರಲ್ಲಿ ಸಂಶಯವೇನಿಲ್ಲ.  ಶ್ರೀಮದ್ಭಾಗವತವು ಒಬ್ಬ ಅವಧೂತನು ಯಾವ ಯಾವ ಜೀವಿಯಿಂದ ಎಂತೆಂತಹ ಗುಣವನ್ನು ಗ್ರಹಿಸಿ ತನ್ನ ಜೀವನವನ್ನು ಸಾರ್ಥಕ ಪಡಿಸಿಕೊಂಡ ಎಂಬುದನ್ನು ವಿಸ್ತಾರವಾಗಿ ತಿಳಿಸಿದೆ.


ಪೂರ್ವೇ ವಯಸಿ ತತ್ ಕುರ್ಯಾತ್ ಯೇನ ವೃದ್ಧ: ಸುಖo ವಸೇತ್ l

ಯಾವಜ್ಜೀವಂ ತತ್ ಕುರ್ಯಾತ್ ಯೇನ ಪ್ರೇತ್ಯ ಸುಖo ವಸೇತ್ ll


 ಯಾವ ಕಾರ್ಯವನ್ನು ಮಾಡುವುದರಿಂದ ವೃದ್ಧಾಪ್ಯದಲ್ಲಿ ಸುಖವಾಗಿರಲು ಸಾಧ್ಯವಾಗುವುದೋ ಅಂತಹ ಕಾರ್ಯಗಳನ್ನು ಪೂರ್ವ ವಯಸ್ಸಿನಲ್ಲಿ ಮಾಡಬೇಕು. ಅವಸಾನಾನಂತರದಲ್ಲಿ ಸಗ್ಗತಿಯನ್ನು ಪಡೆಯಲು ಯಾವ ಸತ್ಕಾರ್ಯಗಳನ್ನು ಮಾಡಬೇಕೋ ಅವನ್ನು ಜೀವಮಾನಪೂರ್ತಿ ಮಾಡಬೇಕು.


ಹೀಗೆ ಕರ್ಮಾಧಾರಿತವಾದ ಜೀವನದ ಪ್ರತಿಯೊಂದು ಹೆಜ್ಜೆಯನ್ನೂ ಪೂರ್ವಾಪರಗಳ ಬಗ್ಗೆ ನಿಗಾ ವಹಿಸಿ ಸತ್ಕರ್ಮಗಳನ್ನು ಆಚರಿಸಿದರೆ ಇಹ ಪರಗಳ ಸೌಖ್ಯ ಎಂಬುದನ್ನು ಸೂಚಿಸುತ್ತದೆ ವಿದುರನ ಈ ನುಡಿ. ಹೀಗೆ ಅನೇಕ ಸದ್ವಿಚಾರಗಳನ್ನೊಳಗೊಂಡ ವಿದುರ ನೀತಿಯು ಸನ್ಮಾರ್ಗದ ನಡೆಗೆ ದಾರಿದೀಪವಾಗಿದೆ.


ಸೂಚನೆ : 24/12/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.