Sunday, December 25, 2022

ವ್ಯಾಸ ವೀಕ್ಷಿತ - 18 ಬ್ರಾಹ್ಮಣ-ಕುಂತೀ-ಸಂವಾದ (Vyaasa Vikshita - 18 Brahmana-Kunti-Samvada)

 ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಕುಂತಿಯು ಕೇಳಿದ ಪ್ರಶ್ನೆಗೆ ಬ್ರಾಹ್ಮಣನು ತನ್ನ ಉತ್ತರವನ್ನು ಮುಂದುವರೆಸುತ್ತಾ ಹೇಳುತ್ತಿದ್ದಾನೆ : "ಕೆಟ್ಟರಾಜನನ್ನು ಆಶ್ರಯಿಸಿದ್ದೇವಲ್ಲವೇ? ಅನುಭವಿಸಲೇಬೇಕು ಇದನ್ನೆಲ್ಲಾ, ಆತನ ರಾಜ್ಯದಲ್ಲಿದ್ದ ಮೇಲೆ. ಬ್ರಾಹ್ಮಣನಾದವನು ಯಾರ ಅಧೀನದಲ್ಲಿ ಬಾಳಬೇಕು? ಯಾರ ಅಧಿಕ್ಷೇಪಕ್ಕೆ ತುತ್ತಾಗಬೇಕು? (ಯಾರದ್ದಕ್ಕೂಇಲ್ಲ.) ಮನಸ್ಸು ಬಂದತ್ತ ಸಾಗುವ ಪಕ್ಷಿಗಳಂತೆ, ಬ್ರಾಹ್ಮಣರು. ಗುಣಶಾಲಿಯಾದ ರಾಜನು ಕಂಡನೋ, ಅವನ ರಾಜ್ಯದಲ್ಲಿ ವಾಸಿಸತಕ್ಕವರು.(ಇಲ್ಲವೋ ಅನ್ಯತ್ರ ಸಾಗತಕ್ಕವರು).

ನಾನು ಮಾಡಿದುದು ತಪ್ಪಾಯಿತು. ಏಕೆ ಗೊತ್ತೇ? ಮೊದಲು ಕಂಡುಕೊಳ್ಳಬೇಕಾದದ್ದು ಒಳ್ಳೆಯ ನೆಲೆ, ಎಂದರೆ ಸರಿಯಾದ ರಾಜನಿರುವ ಎಡೆ; ಆ ಬಳಿಕವೇ ವಿವಾಹವಾಗತಕ್ಕದ್ದು; ಮುಂದಿನ ಹೆಜ್ಜೆಯೇ ಧನಸಂಪಾದನೆ. ಹೀಗೆ, ರಾಜ-ಭಾರ್ಯೆ-ವಿತ್ತ - ಈ ಮೂರೂ (ಈ ಕ್ರಮದಲ್ಲೇ) ಸಿಕ್ಕಮೇಲೆಯೇ ಮಕ್ಕಳು-ಮರಿಗಳನ್ನೂ ಬಂಧುಗಳನ್ನೂ ದಾಟಿಸಬಹುದು. ನಾನು ಹಾಗೆ ಮಾಡಲಿಲ್ಲವಲ್ಲಾ! ಎಂದೇ ಬಂದಿತು ನನಗೀ ಆಪತ್ತು. ಈಗ ತಾಪಪಡುವುದು ಕಟ್ಟಿಟ್ಟದ್ದೇ ಸರಿ.

ಅಂತೂ, ಈ ರಾಕ್ಷಸನಿಗೆ ತೃಪ್ತಿಯುಂಟುಮಾಡುವ ಸರದಿ ನಮಗೀಗ ಬಂದಿದೆ. ನಮ್ಮ ಕುಲಕ್ಕೇ ವಿನಾಶಕಾರಿಯಿದು. ಆ ರಕ್ಕಸನಿಗೆ ಕಳುಹಿಸಬೇಕಾದ ಬಂಡಿ ಅನ್ನ, ಹಾಗೂ ಒಬ್ಬ ಪುರುಷ - ಎಂಬೀ ಸಂಬಳವನ್ನು ಅವನಿಗೀಗ ಕಳುಹಿಸಬೇಕಾಗಿದೆ. ಹೋಗಲಿ, ಯಾರಾದರೂ ಆಳೊಬ್ಬನನ್ನು ಕೊಂಡು ಕಳುಹಿಸೋಣವೆಂದರೆ, ಅದಕ್ಕೆ ಬೇಕಾದ ಹಣವು ನನ್ನಲ್ಲಿಲ್ಲವೆಲ್ಲಾ! ಯಾವನಾದರೂ ಮಿತ್ರನನ್ನು ಕಳುಹಿಸಿಬಿಡೋಣವೆನ್ನುವಂತಹ ವಿಷಯವೇ ಇದು? ಅಂತೂ, ಈ ರಕ್ಕಸನಿಂದ ಬಿಡುಗಡೆ ಪಡೆಯುವ ಸಾಧ್ಯತೆಯೇ ಇಲ್ಲ. ಹೀಗೆ ದುಃಖಸಮುದ್ರದಲ್ಲಿ ನಾನು ಮುಳುಗಿದ್ದೇನೆ. ಎಂದೇ ಇಂದು ಇವರೆಲ್ಲರೊಂದಿಗೆ ನಾನು ಈ ರಾಕ್ಷಸನ ಬಳಿ ಸಾರುವೆ. ಆ ಕ್ಷುದ್ರನು ನಮ್ಮೆಲ್ಲರನ್ನೂ ತಿಂದುಬಿಡತಕ್ಕವನೇ ಸರಿ.

ಆಗ ಕುಂತಿಯು ಹೇಳಿದಳು: " ಈ ಭಯದ ನಿಮಿತ್ತ ನೀನು ವಿಷಾದ ಪಡಲೇಬೇಕಾಗಿಲ್ಲ. ಆ ರಾಕ್ಷಸನ ದೆಸೆಯಿಂದ ಬಿಡುಗಡೆ ಪಡೆಯಲು ಉಪಾಯವೊಂದು ನನಗೆ ಕಂಡಿದೆ. ನಿನಗಿರುವ ಈ ಒಬ್ಬ ಚಿಕ್ಕಮಗ, ಬಡಪಾಯಿ ಮಗಳು – ಇವರುಗಳಾಗಲಿ; ನಿನ್ನ ಹೆಂಡತಿಯಾಗಲಿ, ನೀನೇ ಆಗಲಿ - ಹೋಗುವುದು ನನಗೆ ರುಚಿಸದು. ನನಗೆ ಐದು ಜನ ಗಂಡು ಮಕ್ಕಳಿದ್ದಾರೆ, ಬ್ರಾಹ್ಮಣನೇ. ನಿನಗೋಸ್ಕರವಾಗಿ (ಎಂದರೆ ನಿನ್ನ, ನಿಮ್ಮ, ಪ್ರಾಣವುಳಿಸಲಿಕ್ಕಾಗಿ) ಅವರಲ್ಲೊಬ್ಬನು ಆ ಪಾಪಿ ರಾಕ್ಷಸನಿಗೆ ಆಹಾರವನ್ನು ಹೊತ್ತುಕೊಂಡು ಹೋಗುವನು; ಆಯಿತಲ್ಲವೇ?" – ಎಂದಳು.

ಆಗ ಬ್ರಾಹ್ಮಣನು ಹೇಳಿದನು: "ನನ್ನ ಪ್ರಾಣವನ್ನುಳಿಸಿಕೊಳ್ಳಲು ಇದನ್ನು ನಾನು ಸರ್ವಥಾ ಮಾಡೆ. ಅತಿಥಿಯಾಗಿ ಬಂದಿರುವ ಬ್ರಾಹ್ಮಣನ ಪ್ರಾಣವನ್ನು ನನ್ನ ಸ್ವಾರ್ಥಕ್ಕಾಗಿ ಬಲಿಗೊಟ್ಟೇನೆಯೇ? (ಇಲ್ಲಿ ಗಮನಿಸಬೇಕಾದದ್ದೆಂದರೆ, ಕುಂತಿಯನ್ನೂ, ಅವಳ ಮಕ್ಕಳನ್ನೂ ಬ್ರಾಹ್ಮಣರೆಂದೇ ಈ ಗೃಹಸ್ಥ ಭಾವಿಸಿದ್ದಾನೆ. ದುರ್ಯೋಧನಾದಿಗಳಿಗೆ ತಾವು ಗೋಚರವಾಗಬಾರದೆಂದು ವೇಷಮರೆಸಿಕೊಂಡಿರಲು ಕುಂತ್ಯಾದಿಗಳೂ ತಮ್ಮ ಬಗ್ಗೆ ಇತರರಿಗೆ ಈ ಚಿತ್ರವನ್ನೇ ಕೊಟ್ಟುಕೊಂಡಿದ್ದಾರೆ. ಪ್ರಾಣಾಪತ್ತೇ ಬಂದಾಗ ಇವೆಲ್ಲಾ ಮಾಡಬೇಕಾದವೇ ಸರಿ.)

ಬ್ರಾಹ್ಮಣನೊಬ್ಬನನ್ನುಳಿಸಲಿಕ್ಕಾಗಿ ತನ್ನನ್ನೂ ತನ್ನ ಪುತ್ರನನ್ನೂ ತ್ಯಾಗಮಾಡಿಬಿಡುವುದೆಂಬುದು ಕುಲೀನೆಯಲ್ಲದವರಲ್ಲಿ ಕೂಡ ಇರಲಾರದು, ಧರ್ಮಿಷ್ಠೆಯಲ್ಲದವರಲ್ಲಿ ಕೂಡ ಇರಲಾರದು. (ಹಾಗಿರಲು, ನನ್ನನ್ನುಳಿಸಲೆಂದು ನಿನ್ನಂತಹ ಉತ್ಕೃಷ್ಟ ನಾರಿಯು ತನ್ನ ಮಗನನ್ನೇ ಬಲಿಗೊಡಲು ಸಂಕಲ್ಪಿಸುವುದು ಸಮಂಜಸವೇ? ಎಂದೂ ಇಲ್ಲ– ಎಂಬ ಭಾವ ಆತನದು.)

ಸೂಚನೆ : 25/12/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.