Sunday, January 1, 2023

ವೈಕುಂಠಕ್ಕೆ ಯಾನವುಂಟೆ ? (Vaikunthakke Yanavunte?)

ಶ್ರೀಮತಿ ಪದ್ಮಿನಿ ಶ್ರೀನಿವಾಸನ್ 

(ಪ್ರತಿಕ್ರಿಯಿಸಿರಿ lekhana@ayvm.in)


 ಧನುರ್ಮಾಸದ ಶುಕ್ಲ ಏಕಾದಶಿಯು, ಮಹಾವಿಷ್ಣುವಿಗೆ ಸಂಬಂಧಿಸಿದ, ಅತ್ಯಂತ ಪ್ರಮುಖ ಹರಿದಿನವಾದ ವೈಕುಂಠ ಏಕಾದಶೀ. ಜಗದಾದ್ಯಂತ ವಿಷ್ಣು ದೇವಾಲಯಗಳಲ್ಲಿ ಸರ್ಪ ಸರತಿಯ ಸಾಲುಗಳನ್ನು ಮುಂಜಾನೆ ಇಂದ ಮಧ್ಯರಾತ್ರಿಯವರೆಗೆ ಕಾಣಬಹುದು. ವ್ರತ, ಉಪವಾಸ, ಶ್ಲೋಕ- ಸ್ತೋತ್ರ - ಸಹಸ್ರನಾಮ ಜಪ - ಪೂಜೆ ಇತ್ಯಾದಿಗಳಲ್ಲಿ ತೊಡಗಿ, ದೇವಾಲಯದಲ್ಲಿ ವಿಶೇಷವಾಗಿ ಅಲಂಕರಿಸಲ್ಪಟ್ಟ ಭಗವಂತನ ದರ್ಶನ ಪಡೆದು ಉತ್ತರಾಭಿಮುಖವಾಗಿ ತೆರೆದಿರುವ ವೈಕುಂಠ ದ್ವಾರದ ಮೂಲಕ ಅಂಜಲಿಬದ್ಧರಾಗಿ ಹಿಂತಿರುಗುವುದು ಸಂಪ್ರದಾಯದಲ್ಲಿ ನಡೆದುಬಂದಿದೆ. ಬಹಿರಂಗಪೂಜೆಗೆ ಮಾತ್ರವಲ್ಲದೆ ಧ್ಯಾನಕ್ಕೂ ಪ್ರಶಸ್ತವಾದ ಪರ್ವಕಾಲ. ವೈಕುಂಠದ ಬಾಗಿಲು ಅಂದು ಮಾತ್ರ ತೆರೆಯುತ್ತದೆ ಎಂದೂ, ಈ ಬಾಗಿಲಿನಿಂದ ಪ್ರವೇಶಿಸಿದರೆ ಜನ್ಮಜನ್ಮಗಳಲ್ಲಿ ಮಾಡಿದ ಪಾಪಗಳು ನಶಿಸಿ, ಮರಣಾಂತರದಲ್ಲಿ  ಮೋಕ್ಷವನ್ನು ಪಡೆಯುತ್ತಾರೆ ಎಂದೂ  ಹೇಳಲಾಗುತ್ತದೆ. ಅಂದು ಮರಣ ಹೊಂದಿದರೆ ವೈಕುಂಠ ಲೋಕಕ್ಕೆ ತೆರಳುವರು ಎಂಬ ನಂಬಿಕೆಯೂ ಉಂಟು!   

ಈ ಪ್ರಾಶಸ್ತ್ಯಕ್ಕೆ ಹಲವಾರು ಕಥೆಗಳನ್ನು ಪುರಾಣಾದಿಗಳು ತಿಳಿಸುತ್ತವೆ. ಸಮುದ್ರ ಮಂಥನದಿಂದ ಅಮೃತ ಉಕ್ಕಿದ ದಿವಸ; ವಿಷ್ಣುವು ಮುರನೆಂಬ ಅಸುರನನ್ನು ಏಕಾದಶೀ ಎಂಬ ಸ್ತ್ರೀ ಶಕ್ತಿಯಿಂದ ಸಂಹಾರ ಮಾಡಿದ ದಿವಸ-ಇತ್ಯಾದಿ. 

ಮೋಕ್ಷ, ವೈಕುಂಠ ಎಂದರೇನು?

ಮೋಕ್ಷ ಎಂಬ ಬಿಡುಗಡೆ ಯಾರಿಗೆ? ಭಗವಂತನ ಒಂದು ಕಿಡಿಯಾಗಿ, ಕರ್ಮಾನುಸಾರ ಪೃಥಿವಿಯೊಳಗೆ ಬಂಧಿತನಾಗಿರುವ ಆತ್ಮನಿಗೆ. ಅರ್ಥ ಕಾಮಗಳನ್ನು ಧರ್ಮದೊಂದಿಗೆ ಸೃಷ್ಟಿಯಲ್ಲಿ ಅನುಭವಿಸಿ, ಈ ಬದ್ಧ ಜೀವಿಯು ಪುರುಷನ ಅರ್ಥವಾದ  ಆತ್ಯಂತಿಕ ಮುಕ್ತಿಯನ್ನು ಪಡೆಯಬೇಕೆಂಬುದು ಭಗವದ್ವಿದಿತ ಶಾಸನ. 

ವೈಕುಂಠವು ಸಗುಣ, ಸಾಕಾರ, ಅನಂತ ಕಲ್ಯಾಣ ಗುಣಗಳಿಂದ ಕೂಡಿರುವ ಮಹಾವಿಷ್ಣುವಿನ ಧಾಮ,  ಶಾಶ್ವತವಾದದ್ದು. ಭಗವದ್ರಾಮಾನುಜರು, ವೈಕುಂಠ ಗದ್ಯದಲ್ಲಿ  ನಿತ್ಯವಿಭೂತಿಯಾದ ವೈಕುಂಠವನ್ನು ವರ್ಣಿಸುತ್ತಾರೆ. ವಿಸ್ತಾರವಾದ ಶುದ್ಧ ಪ್ರಕೃತಿಯಲ್ಲಿ, ರತ್ನಭೂಷಿತವಾಗಿರುವ ಅನೇಕ ಸ್ತಂಭಗಳಿಂದ ಕೂಡಿರುವ ಆಸ್ಥಾನ ಮಂಟಪ;  ಶತ ಸಹಸ್ರಕೋಟಿ ಉದ್ಯಾನವನಗಳು - ಕಲ್ಪವೃಕ್ಷ , ವಿವಿಧ ಬಣ್ಣದ ಸುಗಂಧ ಹೂವುಗಳಿಂದ ಕೂಡಿವೆ; ಅಲ್ಲಿ ಗಿಳಿಗಳು, ಕೋಗಿಲೆಗಳು, ನವಿಲು ಇಂಪಾದ ಶಬ್ದ ಮಾಡುತ್ತಿವೆಶುದ್ಧ ನೀರಿನಿಂದ ಕೂಡಿದ ರಮಣೀಯವಾದ ಸರೋವರಗಳು, ಇತ್ಯಾದಿ; ಅನೇಕ ಬೆಟ್ಟಗಳ ಮಧ್ಯದಲ್ಲಿ  ಮಣಿಮಂಟಪದಲ್ಲಿ ಶ್ರೀಸಮೇತನಾಗಿ ವೈಕುಂಠಪತಿ ವಿರಾಜಿಸುತ್ತಿದ್ದಾನೆ;  ನಿತ್ಯಸೂರಿಗಳು, ಮುಕ್ತಾತ್ಮರು ವೈಕುಂಠದಲ್ಲಿ ವಾಸವಾಗಿರುವವರು.  

ತಲುಪಲು ಯಾನ ಯಾವುದು?

ನಮ್ಮ ಶರೀರವು ಭುವಿಯಿಂದ ದಿವಿಗೆ ಹಾರಬಲ್ಲ ಸಾಮರ್ಥ್ಯವನ್ನುಳ್ಳದ್ದು ಎಂಬುದು, ಭಾರತದ  ಮಹರ್ಷಿಗಳು ಜ್ಞಾನ  ಚಕ್ಷುಸ್ಸಿನಿಂದ ಕಂಡ  ಸತ್ಯ. ಮಾನವದೇಹದ  ಬಗ್ಗೆ  ಯೋಗೇಶ್ವರ  ಶ್ರೀರಂಗ ಮಹಾಗುರುಗಳು  ಹೇಳುತ್ತಿದ್ದರು "ನಾವು ಒಂದೆಡೆಯಿಂದ ಒಂದೆಡೆಗೆ ಹೋಗಲು ವಿವಿಧ ಯಾನಗಳನ್ನು ಉಪಯೋಗಿಸುತ್ತೇವೆ. ಭೂಮಿಯ ಮೇಲಾದರೆ ಸೈಕಲ್, ರೈಲು; ನೀರಿನಲ್ಲಿ ದೋಣಿ; ಆಕಾಶದಲ್ಲಿ ಏರೋಪ್ಲೇನ್ ಹಾಗೂ ಬಾಹ್ಯಾಕಾಶಕ್ಕೆ ರಾಕೆಟ್. ಹಾಗೆಯೇ ವೈಕುಂಠಕ್ಕೆ   ಹೋಗಲು  ಒಂದು  ಯಾನವಿರಬಹುದಲ್ಲವೇ? - ನಮ್ಮ  ದೇಹವೇ  ಆ  ರೀತಿಯಾದ  ಯಾನವಾಗಿದೆ" ಎಂದು. ಜೀವಿಗಳನ್ನು ಬೊಂಬೆಯಾಟವಾಡಿಸುವ ಸೂತ್ರಧಾರಿಯಾದ ಭಗವಂತ, ಅವನೇ ಕಟ್ಟಿದ ಪುರದೊಳಗೆ, ವೈಕುಂಠ ಲೋಕಕ್ಕೆ ಹಾರಿಸಲು  ಬೆನ್ನು ಮೂಳೆಯಲ್ಲಿ ಗುಪ್ತವಾದ ದ್ವಾರವನ್ನೂ ಇಟ್ಟು ಅದನ್ನು ಮುಚ್ಚಿದ. ಬುದ್ಧಿಜೀವಿಯಾಗಿ, ವಿಷಯಲಂಪಟನಾಗಿ, ಭ್ರಮೆಗೆ ಒಳಗಾಗಿ, ಅಂತರಂಗದ ಆ ವೈಕುಂಠದ್ವಾರವು ಮುಚ್ಚಿಕೊಂಡೇ ಇದ್ದು, ಸೃಷ್ಟಿಯಲ್ಲಿಯೇ ನಿಂತಿತು, ಜೀವಿಯ ಯಾನ. ಹಾಗಿದ್ದರೂ ಸಹ, ಎಂದಾದರೂ ಜೀವಿಗೆ ಬುದ್ಧಿಕಲಿಸಿ ತನ್ನಲ್ಲಿ ಸೇರಿಸಿಕೊಳ್ಳುವುದೇ ಆ ಭಗವಂತನ ಸಂಕಲ್ಪ. 

ಇಂಧನವನ್ನು ತಾಪದಿಂದ ದಹಿಸಿ, ಭೂಮಿಯ  ಗುರುತ್ವಾಕರ್ಷಣೆಯನ್ನು ಮೆಟ್ಟುತ್ತಾ ರಾಕೆಟ್  ಮೇಲೇರುತ್ತೆ. ಅಂತೆಯೇ ಭಗವತ್ಪ್ರೀತ್ಯರ್ಥವಾಗಿರುವ ಸತ್ಕರ್ಮಗಳಿಂದ ನಮ್ಮಲ್ಲಿರುವ ಪಾಪಗಳನ್ನು ಕಳೆದುಕೊಳ್ಳುತ್ತಾ, ಅಧ್ಯಾತ್ಮ ಕ್ಷೇತ್ರದಲ್ಲಿ ವೃದ್ದಿಯನ್ನು ಹೊಂದಬಹುದು. ದಾರಿಯಲ್ಲಿ ರಾಕೆಟ್, ಖಾಲಿಯಾದ  ಇಂಧನ  ತುಂಬಿದ್ದ  'ಟ್ಯಾಂಕ್' ಗಳನ್ನು ಕಳಚುತ್ತಾ ಹೋಗುವಂತೆ, ಪ್ರಕೃತಿಯ ತತ್ತ್ವಗಳನ್ನು  ಮೀರಿ, ಅಂಟನ್ನು ಬಿಡಿಸಿಕೊಂಡು,  ಅಂತರಂಗ ಪ್ರಪಂಚದ ದಹರಾಕಾಶದಲ್ಲಿ ವಿಹರಿಸಿ, ಹಿಂದಿರುಗಲೂ ಸಾಧ್ಯ. ಶ್ರೀಕೃಷ್ಣನೇ ಹೇಳಿರುವಂತೆ ಕಾಲವಿಶೇಷದಲ್ಲಿ ಕರ್ಮಗಳೆಲ್ಲವೂ ಜ್ಞಾನ  ರೂಪವಾದ ತಪಸ್ಸಾಗಿ ಮಾರ್ಪಟ್ಟು, ಪರತತ್ತ್ವದ ಅನುಭವವನ್ನು ಕರುಣಿಸುತ್ತವೆ. 

ಮಾನವನು ತಯಾರಿಸಿದ ರಾಕೆಟ್ ಚಂದ್ರ ಗ್ರಹಕ್ಕೆ ಹಾರಿದರೂ ಅದು ಪ್ರಕೃತಿಯ ಕ್ಷೇತ್ರವೇ. ಭಗವಂತನು ತಯಾರಿಸಿರುವ ವೈಕುಂಠಯಾನವು ಭೂಲೋಕದಿಂದ ಇಂದ್ರನ ಸುವರ್ಲೋಕವನ್ನೂ ದಾಟಿ, ಮಹಾವಿಷ್ಣುವಿನ ವೈಕುಂಠಲೋಕದವರೆಗೆ ಹಾರಬಲ್ಲದು!! ನಮ್ಮಲ್ಲಿ ಅಡಗಿರುವ ಅಸುರೀ ಭಾವನೆಗಳನ್ನು, ಪಾಪರಾಶಿಗಳನ್ನು ಸಂಹರಿಸಿ, ವೈಕುಂಠ ದ್ವಾರವನ್ನು ತೆರೆಸಿ, ಈ ಯಾನವನ್ನು ನಡೆಸಲು  ದಾರಿತೋರುವ ಸದ್ಗುರುವನ್ನು ಕರುಣಿಸಲೆಂದು, ಮುಕ್ಕೋಟಿದೇವತಾ ಸಹಿತನಾದ  ಮುರಹರನನ್ನು, ಶ್ರದ್ಧಾ ಭಕ್ತಿಯಿಂದ ಮೋಕ್ಷದಾ ಏಕಾದಶಿಯಂದು ಮುಂಜಾನೆಯಲ್ಲಿ ಪ್ರಾರ್ಥಿಸೋಣ. 

ಸೂಚನೆ : 31/12/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.