Monday, January 9, 2023

ವ್ಯಾಸ ವೀಕ್ಷಿತ - 20 ಕುಂತಿಯಿತ್ತ ಧೈರ್ಯ (Vyaasa Vikshita - 20 Kuntiyitta Dhairya)

 ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ತನ್ನೈದು ಮಕ್ಕಳಲ್ಲೊಬ್ಬನು ಬಕಾಸುರನಿಗೆ ಆಹಾರವನ್ನೊಯ್ಯುವನು - ಎಂದು ಕುಂತಿಯು ಹೇಳಿದರೂ ಆ ಗೃಹಸ್ಥನೊಪ್ಪಲಿಲ್ಲ. ಆಗ ಕುಂತಿಯೆಂದಳು:

 

"ಅಯ್ಯಾ ಬ್ರಾಹ್ಮಣನೇ, ವಿಪ್ರರನ್ನು ರಕ್ಷಿಸತಕ್ಕದ್ದೆಂಬ ವಿಷಯದಲ್ಲಿ ನನ್ನ ಮತಿಯೂ ಸ್ಥಿರವಾಗಿದೆ. ನನಗೆ ನೂರು ಮಂದಿ ಮಕ್ಕಳಿದ್ದಿದ್ದರೂ ಅವರಲ್ಲಾರೊಬ್ಬನೂ ನನಗೆ ಇಷ್ಟವಲ್ಲವೆಂದಿರುತ್ತಿರಲಿಲ್ಲ (ಎಂದರೆ ಇಷ್ಟವಿಲ್ಲದವನನ್ನು ಬಲಿಗೊಡಲು ಕಳುಹಿಸುತ್ತಿರುವೆನೆಂದುಕೊಳ್ಳಬೇಡ). ನನ್ನ ಪುತ್ರನನ್ನು ಸಾಯಿಸಲು ಆ ರಾಕ್ಷಸನು ಸಮರ್ಥನಲ್ಲ. ನನ್ನ ಮಗ ವೀರ್ಯಸಂಪನ್ನ, ಮಂತ್ರಸಿದ್ಧಿಯನ್ನು ಪಡೆದಿರುವವ, ತೇಜಸ್ವಿ; ಆ ಭೋಜನವನ್ನೆಲ್ಲ ರಾಕ್ಷಸನಿಗೆ ಒಯ್ಯುವವನೇ; ಅಷ್ಟೇ ಅಲ್ಲ, ತನ್ನನ್ನೂ ಕಾಪಾಡಿಕೊಳ್ಳುವನೇ ಸರಿ. ಈ ಬಗ್ಗೆ ನನ್ನ ಮನಸ್ಸಿನಲ್ಲಿ ದಾರ್ಢ್ಯವಿದೆ.

 

ಹಿಂದೆಯೂ ಈ ವೀರನೊಂದಿಗೆ ಸೆಣಸಿದ ರಾಕ್ಷಸರನ್ನು ನಾ ಕಂಡದ್ದುಂಟು. ಬಲಶಾಲಿಗಳೂ ಬೃಹತ್ಕಾಯರೂ ಆದ ಅಂತಹವರನ್ನು ಹಲವು ಬಾರಿ ಈತನು ಕೊಂದಿರುವುದುಂಟು.

 

ಆದರೆ ಈ ವಿಷಯವನ್ನು ಮಾತ್ರ ಯಾರೊಂದಿಗೂ ಹೇಳತಕ್ಕದ್ದಲ್ಲ, ಬ್ರಾಹ್ಮಣನೇ! ಏಕೆಂದರೆ ಕುತೂಹಲಕ್ಕಾಗಿಯಷ್ಟೆ ಈ ವಿದ್ಯೆಯನ್ನು ಬಯಸುವ ಮಂದಿ ನನ್ನ ಪುತ್ರರನ್ನು ಪೀಡಿಸಿಯೇ ತೀರುವರು. ನನ್ನ ಮಗನೇನಾದರೂ ಈ ವಿದ್ಯೆಯನ್ನು ಗುರುವಿನ ಅನುಮತಿಯಿಲ್ಲದೆ ಇತರರಿಗೆ ಬೋಧಿಸಿದನಾದರೆ, ಆ ವಿದ್ಯೆಯು ತನ್ನ ಕಾರ್ಯವನ್ನು ಇನ್ನು ಮುಂದೆ ಹಾಗೆ ಮಾಡಲಾಗದು (ಎಂದರೆ ಮಂತ್ರವು ಮುಂದೆ ಸಫಲವಾಗದು) - ಎಂಬುದೇ ಬಲ್ಲವರ ಅಭಿಪ್ರಾಯವಾಗಿದೆ."

 

ಕುಂತಿಯು ಹಾಗೆ ಹೇಳಲು, ಆ ವಿಪ್ರನೂ ಆತನ ಪತ್ನಿಯೂ ಸಂತುಷ್ಟರಾದರು. ಅವಳ ಅಮೃತಸದೃಶವಾದ ಮಾತನ್ನು ಪೂರ್ಣವಾಗಿ ಆದರಿಸಿದರು. ಆಮೇಲೆ ಕುಂತಿಯೂ ಆ ವಿಪ್ರನೂ ವಾಯುಪುತ್ರನಾದ ಭೀಮನಲ್ಲಿಗೆ ಹೋಗಿ "ಈ ಕೆಲಸವನ್ನು ಮಾಡು" ಎಂದರು. ಆತನೂ "ಹಾಗೆಯೇ ಆಗಲಿ" ಎಂದು ಹೇಳಿದನು.

 

ಇದನ್ನು ನಾ ಮಾಡುವೆ - ಎಂಬುದಾಗಿ ಭೀಮನು ಪ್ರತಿಜ್ಞೆಮಾಡಿದನಷ್ಟೆ? ಅಷ್ಟರಲ್ಲಿ ಭಿಕ್ಷೆಯನ್ನು ತೆಗೆದುಕೊಂಡು ಪಾಂಡವರೆಲ್ಲರೂ ಅಲ್ಲಿಗೆ ಬಂದರು. ಭೀಮನ 'ಆಕಾರ'ವನ್ನು ನೋಡಿಯೇ ಯುಧಿಷ್ಠಿರನಿಗೆ ಸುಳಿವು ಸಿಕ್ಕಿತು. ('ಇಂಗಿತ'-'ಆಕಾರ' ಎಂದು ಎರಡು ವಿಶಿಷ್ಟಪದಗಳಿವೆ. 'ಇಂಗಿತ'ವೆಂದರೆ ಮನಸ್ಸಿನೊಳಗಿರುವ ಆಶಯ; 'ಆಕಾರ'ವೆಂದರೆ ಇಂಗಿತವು ಹೊರಗೆ - ಎಂದರೆ ಮೈಮೇಲೆ - ವ್ಯಕ್ತವಾಗುವ ಬಗೆ. ಆಕಾರವನ್ನು ಗಮನಿಸಿಕೊಂಡು ಜಾಣರು ಇಂಗಿತವನ್ನು ಹಿಡಿಯುವರು).

 

ರಹಸ್ಯವಾದೆಡೆಯಲ್ಲಿ ತಾಯಿಯೊಂದಿಗೆ ಕುಳಿತು ಯುಧಿಷ್ಠಿರನು ಅವಳನ್ನು ಕೇಳಿದನು: "ಭಯಂಕರವಾದ ಪರಾಕ್ರಮವುಳ್ಳವನಾದ ಈ ಭೀಮನು ಮಾಡಹೊರಟಿರುವುದೇನನ್ನು? ನಿನ್ನ ಅನುಮತಿ ಪಡೆದು ಮಾಡುತ್ತಿರುವನೋ, ಅಥವಾ ಸ್ವತಃ ತಾನೇ ಮಾಡಹೊರಟಿರುವುದೋ?" ಅದಕ್ಕವಳು ಹೇಳಿದಳು: " ನನ್ನ ಮಾತಿನ ಮೇರೆಗೇ, ಶತ್ರುಭಯಂಕರನಾದ ಭೀಮನೀಗ ಕೆಲಸ ಮಾಡಹೊರಟಿರುವುದು. ಆ ದೊಡ್ಡ ಕೆಲಸವಾದರೂ ಬ್ರಾಹ್ಮಣ-ರಕ್ಷಣೆಗಾಗಿ, ಹಾಗೂ ನಗರದ ಬಿಡುಗಡೆಗಾಗಿ".

 

ಅದಕ್ಕೆ ಯುಧಿಷ್ಠಿರನು ಅವಳನ್ನು ಪ್ರಶ್ನಿಸಿದನು: "ಅಮ್ಮಾ, ಇದೇನಿದು, ತೀಕ್ಷ್ಣವೂ ದುಸ್ಸಾಧ್ಯವೂ ಆದ ಕಾರ್ಯವನ್ನು ನೀ ಮಾಡಿಬಿಟ್ಟೆ? ಪುತ್ರ-ಪರಿತ್ಯಾಗವನ್ನು (ಎಂದರೆ ಸ್ವಂತ ಮಗನನ್ನೇ ಬಲಿಗೊಡುವುದನ್ನು) ಸಜ್ಜನರು ಮೆಚ್ಚರು. ಮತ್ತೊಬ್ಬನ ಮಗನಿಗಾಗಿ ಸ್ವಪುತ್ರನನ್ನೇ ಅದು ಹೇಗೆ ತ್ಯಜಿಸಿಬಿಡುವೆ? ("ಮನೆಗೆ ಮಾರಿ, ಪರರಿಗೆ ಉಪಕಾರಿ!" ಎಂಬ ಪರಿಯಾಯಿತು ನಿನ್ನ ಕೃತ್ಯ– ಎಂಬ ಭಾವ).


ಸೂಚನೆ : 8/1/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.