Monday, January 9, 2023

ಯಕ್ಷಪ್ರಶ್ನೆ - 20 (Yaksha Prashne - 20)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ – 19 ಯಜ್ಞವನ್ನು ಯಾವುದು ವರಿಸುತ್ತದೆ ?

ಉತ್ತರ - ಋಕ್ (ಮಂತ್ರ) 

ಇಲ್ಲಿನ ಪ್ರಶ್ನೋತ್ತರದಲ್ಲಿ ಸೃಷ್ಟಿಯ ರಹಸ್ಯ ಅಡಕವಾಗಿದೆ. ಇಂತಹ ರಹಸ್ಯವನ್ನು ವಿವರಣೆ ಮಾಡಲು ಯಕ್ಷನು ಈ ಪ್ರಶ್ನೆಯನ್ನು ಕೇಳುತ್ತಾನೆ. ಯಜ್ಞದಲ್ಲಿ ಬಹಳ ಮುಖ್ಯವಾದುದು ಯಾವುದು? ಯಾವುದು ಇಲ್ಲದಿದ್ದರೆ ಯಜ್ಞವೆಂಬುದು ಅಸಾಧ್ಯವೋ ಅದನ್ನು ಮುಖ್ಯ ಎನ್ನಲಾಗಿದೆ. ಹಾಗಾದರೆ ಯಜ್ಞಕ್ಕೆ ಮಂತ್ರವನ್ನು ಬಿಟ್ಟು ಬೇರೆ ಯಾವುದನ್ನೂ ಬಳಸುವುದಿಲ್ಲವೇ? ಕೇವಲ ಮಂತ್ರ ಮಾತ್ರ ಇದ್ದರೆ ಸಾಕೆ? ಬೇರೆ ಯಾವ ಯಜ್ಞಿಯ ಪರಿಕರಗಳು ಬೇಡವೇ? ಎಂಬ ಪ್ರಶ್ನೆಗಳು ಬರುತ್ತವೆ. ಯಜ್ಞದಲ್ಲಿ ಮಂತ್ರವಿಲ್ಲದೆ ಹೋಮಿಸಬಾರದು. ಅಮಂತ್ರಕವಾಗಿ ಹೋಮ ಮಾಡಿದರೆ ಯಾವುದೇ ಬಗೆಯ ದ್ರವ್ಯವಿದ್ದರೂ ಅದು ವ್ಯರ್ಥವೇ ಸರಿ ಎನ್ನುವಷ್ಟರ ಮಟ್ಟಿಗೆ ಋಕ್ಕುಗಳ-ಮಂತ್ರಗಳ ಪ್ರಾಮುಖ್ಯವನ್ನು ಹೇಳಲಾಗಿದೆ.

ನಮ್ಮ ಜೀವನವೂ ನಡೆಯುತ್ತಿರುವುದು ಯಜ್ಞಮಯವಾಗಿಯೇ. ನಾವು ಪ್ರತಿದಿನ ಉಸಿರಾಡುತ್ತೇವೆ. ಇದನ್ನು ಪ್ರಾಣಯಜ್ಞ ಎಂಬುದಾಗಿ ಕರೆಯಲಾಗುತ್ತದೆ. 'ಹಂಸಹಂಸೇತ್ಯಮುಂ ಮಂತ್ರಂ ಜೀವೋ ಜಪತಿ ಸರ್ವದಾ' ಎಂಬಂತೆ ಈ ಜೀವವು 'ಹಂ' 'ಸಃ' ಎಂಬ ಜಪಿಸುತ್ತಿರುತ್ತದೆ. ನಾವು ಪ್ರತಿನಿತ್ಯ ಊಟ ಮಾಡುತ್ತೇವೆ. ಈ ಊಟವನ್ನೂ 'ವೈಶ್ವಾನರಯಜ್ಞ' ಎಂಬುದಾಗಿ ಹೇಳಲಾಗಿದೆ. ನಮ್ಮ ಜಠರದಲ್ಲಿರುವ ವೈಶ್ವಾನರ ಎಂಬ ಅಗ್ನಿಗೆ ಪ್ರಾಣಾಯ ಸ್ವಾಹಾ ಇತ್ಯಾದಿ ಮಂತ್ರವನ್ನು ಪಠಿಸುತ್ತಾ ಆಹುತಿಯನ್ನು ಸಮರ್ಪಿಸುತ್ತೇವೆ. ಯಾವುದೇ ಜೀವವು ಈ ಜಗತ್ತಿಗೆ ಬರಬೇಕಾದರೆ ಅಲ್ಲಿ ಸ್ತ್ರೀಪುರುಷರ ಸಂಬಂಧವಾದಾಗ ಮಾತ್ರ ಸಾಧ್ಯ. ಇದನ್ನು 'ರೇತೋಯಜ್ಞ' ಎಂದು ಕರೆದಿದ್ದಾರೆ. ಜೀವವು ಪ್ರಾಣವನ್ನು ತೊರೆದಾಗ ಶವವನ್ನು ಅಗ್ನಿಗೆ ಸಮರ್ಪಿಸಲಾಗುತ್ತದೆ. ಅದನ್ನು 'ಅಂತ್ಯೇಷ್ಟಿ' ಎಂದು ಕರೆಯುತ್ತಾರೆ. ಹೀಗೆ ಜೀವಗತಿಯ ಆರಂಭದಿಂದ ಹಿಡಿದು ಜೀವಗತಿಯ ಕೊನೆಯತನಕ ಪ್ರತಿಹೆಜ್ಜೆಯೂ ಯಜ್ಞವೇ ಆಗಿದೆ. ಯಜ್ಞವಲ್ಲದ ಬಾಳಾಟವಿಲ್ಲ. ಇಂತಹ ಯಜ್ಞದ ಎಲ್ಲೆಡೆ ಮಂತ್ರವೇ ತನ್ನ ಪ್ರಾಧಾನ್ಯವನ್ನು ವಹಿಸುತ್ತದೆ.

ಇಲ್ಲಿ ಯಜ್ಞ ಮತ್ತು ಋಕ್ಕುಗಳಿಗೆ ಸ್ತ್ರೀಪುರುಷರ ಸಂಬಂಧವನ್ನು 'ಯಜ್ಞಂ ಇಯಂ ವಾವ ಯೋಷಾ । ತ್ವಂ ತು ಪುಮಾನ್ । ತಸ್ಮಾತ್ ತಾಮ್ ಉಪಾಮಂತ್ರಸ್ವ'  ಎಂದು ವೇದದಲ್ಲಿ ಹೇಳಲಾಗಿದೆ. 'ಯಜ್ಞ' ಎಂಬ ಪುರುಷನನ್ನು 'ಋಕ್' ಎಂಬ ಸ್ತ್ರೀ ವರಿಸಿದೆ ಎಂಬುದು ವೇದಮಂತ್ರದ ಅರ್ಥ. ಅಷ್ಟೇ ಅಲ್ಲ, 'ಯಜ್ಞ' ಎಂಬ ಶಬ್ದವು ಪುಲ್ಲಿಂಗದ್ದು, 'ಋಕ್' ಎಂಬ ಶಬ್ದವು ಸ್ತ್ರೀಲಿಂಗದ್ದಾಗಿದೆ. ಸಂಪೂರ್ಣ ಸೃಷ್ಟಿಯೇ ಪ್ರಕೃತಿಪುರುಷಾತ್ಮಕವಾಗಿದೆ. ಅದರಲ್ಲಿ ಈ ಯಜ್ಞವೂ ಹೊರತಲ್ಲ. ಈ ಸೃಷ್ಟಿಯು ಬೆಳೆಯಬೇಕಾದರೆ ಸ್ತ್ರೀಪುರುಷರ ಸಂಬಂಧದಿಂದ ಮಾತ್ರ ಸಾಧ್ಯ. ಇದೇ ಹಿನ್ನೆಲೆಯಲ್ಲಿ ಯಕ್ಷನು ಕೇಳುವ ಪ್ರಶ್ನೆ "ಯಜ್ಞವನ್ನು ಯಾರು ವರಿಸುತ್ತಾರೆ?" ಎಂದು. ಅದಕ್ಕೆ ಉತ್ತರ "ಯಜ್ಞವನ್ನು ಋಕ್ ವರಿಸುತ್ತಾಳೆ"  ಎಂಬುದು ಇಲ್ಲಿನ ತಾತ್ಪರ್ಯ.

ಸೂಚನೆ : 8/1/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.