Sunday, January 29, 2023

ವ್ಯಾಸ ವೀಕ್ಷಿತ - 23 ಬಕಾಸುರನನ್ನು ಕಡುಕೆರಳಿಸಿದ ಭೀಮ (Vyaasa Vikshita - 23 Bakasuranannu Kadukeralisida Bhima)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ರಾತ್ರಿ ಕಳೆಯಿತು. ಅನ್ನವನ್ನು ತೆಗೆದುಕೊಂಡು ನರಭಕ್ಷಕನಲ್ಲಿಗೆ ನಡೆದ, ಭೀಮ. ಆ ಬಕನ ಕಾಡನ್ನು ಸೇರಿದವನೇ ಬಲಶಾಲಿಯಾದ ಭೀಮಸೇನನು ರಾಕ್ಷಸನನ್ನು ಹೆಸರುಹಿಡಿದೇ ಕರೆದನು. (ದೊಡ್ಡ ಸ್ಥಾನದಲ್ಲಿರುವವರನ್ನು ಯಾರಾದರೂ ಹೆಸರು ಹಿಡಿದು ಕರೆಯುವುದುಂಟೇ? ಅವರಿಗದು ಕೋಪವನ್ನು ತರದೇ? ಹೌದು, ಇಲ್ಲಿ ಬಕನನ್ನು ಹಾಗೆ ಕೆರಳಿಸಲೆಂದೇ ಭೀಮನು ಹಾಗೆ ಮಾಡಿರುವುದೂ.) ಆ ರಾಕ್ಷಸ ನಿಗೆಂದು ತಂದಿದ್ದ ಅನ್ನವನ್ನು ತಾನೇ ಭಕ್ಷಿಸಲಾರಂಭಿಸಿದನು. (ಏನು? ತನ್ನ ಅನ್ನವನ್ನು ಮತ್ತೊಬ್ಬನು ತಿನ್ನುವುದೇ? ಮುಟ್ಟುವುದೂ ಅಕ್ಷಮ್ಯ – ಎಂಬ ಧೋರಣೆ ರಾಕ್ಷಸನದು. ಚೆನ್ನಾಗಿ ಹಸಿದವ ಶೀಘ್ರಕೋಪಿಯೇ!  ಬಂಡಿ ಅನ್ನವನ್ನು ಬಕಬಕ ತಿನ್ನುವ ಬಕಾಸುರನಿಗೆ ಇದೋ ಮತ್ತೊಂದು ಕೆರಳಿಕೆ!) ಭೀಮನ ಮಾತಿನಿಂದ ರೊಚ್ಚಿಗೆದ್ದ ರಾಕ್ಷಸ, ಭೀಮನಿದ್ದಲ್ಲಿಗೆ ಬಂದ.

ಹೇಗಿದ್ದ ಆತ? ಮಹಾಕಾಯ, ಕೆಂಗಣ್ಣ. ಕಣ್ಣು ಮಾತ್ರವೇನು? ಆತನ ಗಡ್ಡ ಮೀಸೆಗಳೂ ತಲೆಗೂದಲೂ ಕೆಂಬಣ್ಣದವೇ! ಎಂದೇ ಭಯಂಕರ! ಶಂಕುವಿನಂತಿರುವ ಕಿವಿಗಳು; ಕಿವಿಗಳ ಪರ್ಯಂತದ ಬಾಯಿ! ಗಂಟಿಕ್ಕಿದ ಹುಬ್ಬುಗಳು. ತುಟಿ ಕಚ್ಚಿಕೊಂಡು ವೇಗವಾಗಿ ಬಂದ ಆತನಾದರೂ ಭೂಮಿಯನ್ನೇ ಸೀಳಿಬಿಡುವವನಂತೆ ತೋರುತ್ತಿದ್ದ! ಭೀಮಸೇನನೋ ಆತನಿಗೆ ಮೀಸಲಾದ ಅನ್ನವನ್ನು ತಾನೇ ತಿನ್ನುತ್ತಿದ್ದನಷ್ಟೆ? ಅದನ್ನು ಕಂಡು ರೊಚ್ಚಿಗೆದ್ದ ರಕ್ಕಸ ಕಣ್ಣಗಲಿಸಿ ಹೀಗೆಂದ: ನನಗಾಗಿ ವ್ಯವಸ್ಥೆ ಮಾಡಿಡಲಾದ ಅನ್ನವನ್ನು ನಾನು ನೋಡುತ್ತಿರುವಂತೆಯೇ ತಿನ್ನುತ್ತಿರುವ ಈತನಾವನು? ಯಮನ ಮನೆಗೆ ಹೋಗಬಯಸುತ್ತಿರುವ ದುರ್ಬುದ್ಧಿಯವ ಯಾವನಿವ?


ಅದನ್ನು ಕೇಳಿದ ಭೀಮಸೇನ ನಗುನಗುತ್ತಲೇ ರಾಕ್ಷಸನತ್ತ ಮುಖವನ್ನು ಸಹ ಮಾಡದೆ (ಅರ್ಥಾತ್, ಅವನನ್ನು ಕಡೆಗಣಿಸಿ) ಭಕ್ಷಿಸುವುದನು ಮುಂದುವರಿಸುತ್ತಲೇ ಇದ್ದ! ಭಯಂಕರವಾದ ಧ್ವನಿಯನ್ನು ಮಾಡುತ್ತಾ ತನ್ನೆರಡೂ ಕೈಗಳನ್ನೂ ಮೇಲೆತ್ತಿಕೊಂಡು, ಭೀಮಸೇನನತ್ತ ಆ ನರಭಕ್ಷಕ ಆತನನ್ನು ಕೊಲ್ಲಲೆಂದು ಧಾವಿಸಿದ. ಆದರೂ ರಕ್ಕಸನನ್ನು ಲೆಕ್ಕಿಸದೇ, ತಿರಸ್ಕಾರದೊಂದಿಗೇ ಆತನನ್ನು ಗಮನಿಸಿಕೊಳ್ಳುತ್ತಾ, ಶತ್ರುವೀರಸಂಹಾರಿಯಾದ ಭೀಮ ಆತನ ಅನ್ನವನ್ನು ತಿನ್ನುತ್ತಲೇ ಇದ್ದ. ರಾಕ್ಷಸನಿಗೋ ಅಮರ್ಷ! ತನ್ನೆರಡೂ ಕೈಗಳಿಂದ ಭೀಮಸೇನನ ಬೆನ್ನಿಗೆ ಹಿಂದಿನಿಂದ ಗುದ್ದಿದ.


ಬಲಶಾಲಿಯಾದ ರಕ್ಕಸನು ಸಿಕ್ಕಾಪಟ್ಟೆ ಇಕ್ಕಿದರೂ ರಾಕ್ಷಸನನ್ನು ಕಣ್ಣೆತ್ತಿಯೂ ನೋಡದೆ ತಿನ್ನುತ್ತಲೇ ಇದ್ದ, ಭೀಮ. ಮತ್ತೂ ಹೆಚ್ಚಾಗಿ ಕೋಪಗೊಂಡ ಬಲಿಷ್ಠ ರಾಕ್ಷಸ, ಭೀಮನಿಗೆ ಹೊಡೆಯಲೆಂದು ಮರವೊಂದನ್ನು ತಂದು ಭೀಮನತ್ತ ಧಾವಿಸಿದ. ಮಹಾಬಲನಾದ ಭೀಮನು ಏತನ್ಮಧ್ಯೇ ಸಾವಕಾಶವಾಗಿ ಆತನ ಅನ್ನವನ್ನು ತಿಂದವನಾಗಿ, ಕೈ-ಬಾಯಿಗಳನ್ನು ತೊಳೆದುಕೊಂಡು, ಹರ್ಷಾತಿರೇಕದಿಂದ ಯುದ್ಧಕ್ಕೆ ನಿಂತ! ಕ್ರೋಧದಿಂದ ಆತನೆಸೆದ ಮರವನ್ನು ವೀರ್ಯಶಾಲಿ ಭೀಮನಾದರೂ  ನಸುನಗುತ್ತಲೇ ಎಡಗೈಯಿಂದಲೇ ಹಿಡಿದುಕೊಂಡ. (ಯಾರೇ ಆಗಲಿ, ತಾನು ಒಬ್ಬರನ್ನು ಬೈಯುತ್ತಿರುವಾಗ, ಬೈಸಿಕೊಳ್ಳುತ್ತಿರುವವರು ಮರುಮಾತಾಡದೆ ತಲೆ ತಗ್ಗಿಸಿ ನಿಂತಿರಬೇಕೆಂಬ ನಿರೀಕ್ಷೆಯಿರುವುದು; ಬದಲಾಗಿ, ಬೈಸಿಕೊಂಡವರು ನಗುತ್ತಿದ್ದರೆ ಇನ್ನಷ್ಟು ಕೆರಳುವುದಷ್ಟೇ? ತಾನೇ ಬಲಿಷ್ಠನೆಂದುಕೊಂಡವನಿಗಂತೂ (ಹಾಗೆಂದು ಬೇರೆಯವರಿಂದ ಹೊಗಳಿಸಿಕೊಂಡವನಿಗಂತೂ), ಕೆರಳಿಕೆ ಮತ್ತೂ ಹೆಚ್ಚೇ! ಹಾಗಾಗಲೆಂಬುದೇ ಇಲ್ಲಿ ಭೀಮನ ಆಶಯವೂ).

 

ಅಂತೂ, ಸಿಕ್ಕಾಪಟ್ಟೆ ಸೊಕ್ಕಿದ್ದ ರಕ್ಕಸನನ್ನು ಕೆರಳಿಸಿ ಕೆಂಡವಾಗಿಸಿ ಕೆಡವುವುದೇ ಭೀಮನ ಯೋಜನೆಯಾಗಿತ್ತು.

ಸೂಚನೆ : 29/1/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.