Monday, January 16, 2023

ಅಷ್ಟಾಕ್ಷರೀ​ - 26 ಆತ್ಮಾನಂ ರಥಿನಂ ವಿದ್ಧಿ (Astakshara Darshana 26 Atmanam Rathinam Viddhi)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ವಿಜ್ಞಾನಸಾರಥಿಯಾದವನೇ ಪರಮಪದವೆಂಬ ಗುರಿಮುಟ್ಟಬಲ್ಲನು 

"ಆತ್ಮಾನಂ ರಥಿನಂ ವಿದ್ಧಿ" : ಆತ್ಮನನ್ನೇ ರಥಿಯೆಂಬುದಾಗಿ ತಿಳಿ.

ಕಠೋಪನಿಷತ್ತಿನ ಈ ಪ್ರಸಿದ್ಧರೂಪಕವು ಮನಮುಟ್ಟುವಂತಹುದು. ಗಹನವಾದ ವಿಷಯಗಳನ್ನು ತಿಳಿಯಪಡಿಸಲು ಹೋಲಿಕೆ-ರೂಪಕಗಳನ್ನು ಬಳಸುವುದರಲ್ಲಿ ಭಾರತೀಯಪರಂಪರೆಗೆ ಸಾಟಿಯುಂಟೇ?

ಎಷ್ಟೋ ಸಂದರ್ಭಗಳಲ್ಲಿ ನಮ್ಮ ಆಂತರಂಗಿಕವಿಷಯಗಳೇ ನಮಗೆ ತಿಳಿಯವಾಗಿರುತ್ತವೆ. ಹೃದಯದಲ್ಲೋ ಉದರದಲ್ಲೋ ಆಗಿರುವ ಸಮಸ್ಯೆಯನ್ನು ವೈದ್ಯನು ವಿವರಿಸಿ ಹೇಳಿದರೆ ತಿಳಿದೀತೇ ವಿನಾ, ನಮ್ಮ ಶರೀರದ ಬಗ್ಗೆ ನಾವೇ ಅರಿಯೆವು!

ಶರೀರದ ಸಮಾಚಾರವೇ ಹೀಗೆಂದಮೇಲೆ, ಕರ್ಮೇಂದ್ರಿಯ-ಜ್ಞಾನೇಂದ್ರಿಯಗಳು, ಮನೋ-ಬುದ್ಧಿಗಳು - ಇವುಗಳ ಪಾತ್ರಗಳೇನು? ಸ್ವಾತಂತ್ರ್ಯ-ಪಾರತಂತ್ರ್ಯಗಳೇನು (ಎಂದರೆ ಯಾವುದಕ್ಕೆ ಯಾವುದು ಅಧೀನ)? ಇವುಗಳ ಪ್ರಕಾರ-ವಿಕಾರಗಳೇನು? – ಎಂದರಿಯುವುದೇನು ಸುಲಭವೇ?

ಆದರೆ ರೋಚಕವಾದ ರೂಪಕವೊಂದರ ಮೂಲಕ ಕಠೋಪನಿಷತ್ತು ಈ ವಿಷಯವನ್ನು ವಿಶದೀಕರಿಸುತ್ತದೆ. ಆತ್ಮನನ್ನು ರಥಿಯೆಂದು ತಿಳಿ - ಎಂಬುದಾಗಿ ಉಪನಿಷತ್ತು ಹೇಳುತ್ತದೆ. ರಥದ ಯಜಮಾನನನ್ನು ರಥಿನ್(ರಥೀ) ಎನ್ನುತ್ತಾರೆ; ರಥಿಕ, ರಥಿನ ಎಂದರೂ ಅದೇ.

ರಥವೆಂದರೆ ಅದಕ್ಕೆ ಒಂದೋ, ನಾಲ್ಕೋ, ಐದೋ, ಏಳೋ ಕುದುರೆಗಳನ್ನು ಕಟ್ಟಿರುತ್ತದೆ – ಆವಶ್ಯಕತಾನುಸಾರ. ರಥದ ಕುದುರೆಗಳಿಗೆ ಲಗಾಮು ಹಾಕದೆ ಉಂಟೆ? ಯುದ್ಧವೋ, ದೂರಪ್ರಯಾಣವೋ, ಲಗಾಮು ಹಿಡಿದಿರುವ ಸಾರಥಿಯೊಬ್ಬನೂ ಬೇಕಾದದ್ದೇ.

ರಥವಿದೆಯೆಂದು ಸುಮ್ಮನೆ ಓಡಿಸುವುದಲ್ಲ; ಗುರಿಯಿಟ್ಟುಕೊಂಡಲ್ಲವೆ ಹೊರಡುವುದು? ಹಾಗೆಯೇ, ಕುದುರೆಗಳನ್ನು ಸುಮ್ಮನೆ ಓಟಕ್ಕೆ ಬಿಟ್ಟರಾದೀತೇ? ತಮಗೆ ಬೇಕಾದ ಆಹಾರವು ದೊರೆಯುವತ್ತ ಸಾಗುವುದಷ್ಟೇ ಪ್ರಾಣಿಗಳ ಪ್ರವೃತ್ತಿ. ಎಂದೇ, ಎತ್ತ ಓಡಬೇಕೆಂಬುದನ್ನು ನಿರ್ಧರಿಸುವುದು ಕುದುರೆಗಳಲ್ಲ. ಅವೆತ್ತ ಸಾಗಬೇಕೆಂಬುದನ್ನು ನಿರ್ಣಯಿಸುವವನು ಸಾರಥಿ. ವಾಸ್ತವವಾಗಿ ಈ ವಿಷಯದಲ್ಲಿ ಸಾರಥಿಯೂ ಪೂರ್ಣಸ್ವತಂತ್ರನಲ್ಲ. ಆತನು ಗಮನಿಸಬೇಕಾದದ್ದು ಯಜಮಾನನ ಆಶಯವೇನೆಂಬುದನ್ನು, ರಥಿಯ ಸಂಕಲ್ಪವೇನೆಂಬುದನ್ನು. ರಥವನ್ನು ಸಿದ್ಧಮಾಡಿ, ಕುದುರೆಗಳ ಲಗಾಮನ್ನು ಹಿಡಿದು, ಸರಿಯಾದ ದಾರಿಯಲ್ಲಿ ಸಾಗಿ, ರಥಿಯು ಮುಟ್ಟಬೇಕಾದ ಗುರಿಯತ್ತ ರಥವನ್ನು ಓಡಿಸುವುದಲ್ಲವೇ ಸಾರಥಿಯ ಕೆಲಸವಾದರೂ?

ಈ ಅಂಶಗಳೆಲ್ಲಾ ನಮ್ಮ ಜೀವನಕ್ಕೂ ಅನ್ವಯಿಸುವಂತಹವೇ. ನಮ್ಮ ಇಂದ್ರಿಯಗಳೇ ಕುದುರೆಗಳು. ಮನಸ್ಸೇ ಲಗಾಮು. ಬುದ್ಧಿಯೇ ಸಾರಥಿ. ಆತ್ಮನೇ ರಥಿ. ಶರೀರವೇ ರಥ. ಇಂದ್ರಿಯಗಳೆಂಬ ಕುದುರೆಗಳು ಸುಮ್ಮನೆ ಬಿಟ್ಟರೆ ಸಾಗುವುದು ತಮಗೆ ರುಚಿಸುವ 'ವಿಷಯ'ಗಳತ್ತ. ಏನು ವಿಷಯವೆಂದರೆ? ರೂಪವು ಕಣ್ಣೆಂಬ ಇಂದ್ರಿಯಕ್ಕೆ 'ವಿಷಯ'; ಹಾಗೆಯೇ ಕಿವಿಗೆ ಶಬ್ದವು ವಿಷಯ; ಮೂಗು-ನಾಲಿಗೆ-ಚರ್ಮಗಳಿಗೆ ಗಂಧ-ರಸ-ಸ್ಪರ್ಶಗಳು. ಇಂದ್ರಿಯಗಳ ಹರಿವು ಸ್ವಸ್ವವಿಷಯಗಳತ್ತ. ಅದು ತಪ್ಪೂ ಅಲ್ಲ; ಆದರೆ ಅದುವೇ ಎಲ್ಲವೂ ಅಲ್ಲ. ಕುದುರೆಗಳು ಯಥೇಷ್ಟವಾಗಿ ತಿಂದುಕೊಂಡಿರಲಿ ಎಂದಷ್ಟೇ ಆಗುವುದಾದರೆ ಅವನ್ನು ರಥಕ್ಕೆ ಹೂಡುವುದಾದರೂ ಏಕೆ? ಇತ್ತ ಅವಕ್ಕೆ ಸಲ್ಲುವ ಆಹಾರವನ್ನಿತ್ತು, ಅತ್ತ ರಥಿಯನ್ನು ಆತನ ಗುರಿಯತ್ತ ಸಾಗಿಸಲೆಂದು ತಾನೆ ಅವನ್ನು ರಥಕ್ಕೆ ಕಟ್ಟಿರುವುದು? ಕುದುರೆಗಳನ್ನು ಕೆಲಸಕ್ಕೆ ಪಳಗಿಸಬೇಕಾದೀತು. ಪಳಗಿಸಿದವು ಸದಶ್ವಗಳು; ಪಳಗದವು ದುಷ್ಟಾಶ್ವಗಳು, ತುಂಟ ಕುದುರೆಗಳು.

ಬುದ್ಧಿಯನ್ನು 'ವಿಜ್ಞಾನ' ಎಂಬ ಪದದಿಂದಲೂ ಉಪನಿಷತ್ತುಗಳಲ್ಲಿ ಕರೆದಿದೆ. ಹೀಗೆ ವಿಜ್ಞಾನಸಾರಥಿಯಾದವನು ಗುರಿಮುಟ್ಟಬಲ್ಲನು. ಗುರಿಯೇನು?: "ತದ್ ವಿಷ್ಣೋಃ ಪರಮಂ ಪದಮ್" – ಎಂಬ, ಆ ವಿಷ್ಣುವಿನ ಪರಮಪದವೇ. ಆ ಪದದತ್ತ ಸಾಗಲು ಇಂದ್ರಿಯಾಶ್ವಗಳು ವಶ್ಯವಾಗಿರಬೇಕು, ಎಂದರೆ ವಶದಲ್ಲಿರಬೇಕು. ಸದಶ್ವಗಳನ್ನು ಸಾರಥಿಯು ಲಗಾಮುಗಳ ಮೂಲಕ ನಿಯಂತ್ರಣದಲ್ಲಿಟ್ಟಿರುವನು; ಹಾಗೆಯೇ ಬುದ್ಧಿಯೆಂಬ ಸಾರಥಿಯು ಮನಸ್ಸೆಂಬ ಲಗಾಮನ್ನು ಹಾಕಿ ಇಂದ್ರಿಯಗಳೆಂಬ ಕುದುರೆಗಳನ್ನು ವಶದಲ್ಲಿಟ್ಟುಕೊಂಡು ಜೀವನದ ಲಕ್ಷ್ಯವಾದ ಪರಮಪದದತ್ತ ಸಾಗಬೇಕು.

ಮಹಾಭಾರತದ ಅರ್ಜುನನು ಭಾಗ್ಯಶಾಲಿ. ಏಕೆ? ಜೀವನವನ್ನು ತನಗಿಂತಲೂ ಚೆನ್ನಾಗಿ ಬಲ್ಲ ಸಾಕ್ಷಾತ್ ಕೃಷ್ಣನೇ ಆತನ ಸಾರಥಿಯಾಗಿದ್ದ. ಇಂತಹ ಸಾರಥಿಯು ದೊರೆತಲ್ಲಿ ನಮ್ಮ ಕೆಲಸ ಸುಗಮವಾಯಿತೆಂದೇ.

ಅರ್ಜುನನ ರಥಕ್ಕೆ ನಾಲ್ಕು ಕುದುರೆಗಳಲ್ಲವೇ? ಇಂದ್ರಿಯಪಂಚಕವೆಂಬ ಐದೇಕಿಲ್ಲ? ಇದರ ಮರ್ಮವನ್ನು ಬಿಡಿಸಿಕೊಟ್ಟವರು ಶ್ರೀರಂಗಮಹಾಗುರುಗಳು. ಮನಸ್ಸು, ಬುದ್ಧಿ, ಅಹಂಕಾರ, ಹಾಗೂ ಚಿತ್ತಗಳೆಂಬ ಅಂತಃಕರಣಚತುಷ್ಟಯವೇ ಈ ನಾಲ್ಕು ಕುದುರೆಗಳೆಂಬುದಾಗಿ ವಿವರಣೆಯನ್ನಿತ್ತಿದ್ದರು. ಪಾರ್ಥಸಾರಥಿಯೇ ನಮ್ಮ ಸಾರಥಿಯಾಗುವ ಪಕ್ಷದಲ್ಲಿ, ನಮ್ಮ ಅಂತಃಕರಣಗಳನ್ನೆಲ್ಲಾ ಆತನ ವಶಕ್ಕೆ ಒಪ್ಪಿಸಿ, ನಿನ್ನ ಧಾಮಕ್ಕೊಯ್ಯಯ್ಯಾ – ಎಂದು ಪ್ರಾರ್ಥಿಸಿಕೊಂಡರಾಯಿತಲ್ಲವೇ?

ಅಂತಃಕರಣವನ್ನು ಅಚ್ಚುಕಟ್ಟಾಗಿ ಅಣಿಮಾಡಿ ಅಚ್ಯುತನ ಅಂಕೆಯಲ್ಲಿರಿಸುವ ಅದ್ಭುತಕಲೆಯೇ ಯೋಗವೆನಿಸುವುದು. ಇಂತಹ ಯೋಗವಿದ್ಯೆ ಯಾರಿಗೆ ಬೇಡ?


ಸೂಚನೆ: 15/12/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.