Sunday, January 1, 2023

ಯಕ್ಷಪ್ರಶ್ನೆ - 19 (Yaksha Prashne - 19)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ – 18 ಯಜ್ಞದಲ್ಲಿ ಅತಿಮುಖ್ಯವಾದ ಯಜುಸ್ಸು ಯಾವುದು ?

ಉತ್ತರ - ಮನಸ್ಸು 

ಇಲ್ಲಿಯ ಪ್ರಶ್ನೋತ್ತರದಲ್ಲಿ ಹಿಂದಿನ ಪ್ರಶ್ನೆಯ ಮುಂದುವರಿಕೆಯಾದ ವಿಷಯವಿದೆ. ಈ ಹಿಂದಿನ ಲೇಖನದಲ್ಲಿ ಯಜ್ಞದ ಬಗ್ಗೆ ಕೆಲವು ವಿಷಯಗಳನ್ನು ಚರ್ಚಿಸಿದ್ದಾಗಿದೆ. ಇಲ್ಲೂ ಅದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿದೆ. ಯಜ್ಞದಲ್ಲಿ ಅತಿಮುಖ್ಯವಾದ ಅಂಗ ಯಾವುದು? ಮತ್ತು ಯಜುಸ್ಸು ಹೇಗೆ ಮನಸ್ಸಿನ ಸ್ಥಾನವಾಗಿದೆ? ಎಂಬುದು ಈ ಪ್ರಶ್ನೆಯಲ್ಲಿ ಅಡಕವಾದ ಅಂಶವಾಗಿದೆ. 

ಈ ಹಿಂದೆ ಹೇಳಿದಂತೆ ಯಜ್ಞವನ್ನು ಮಾಡುವಾಗ ನಾಲ್ಕೂ ವೇದಗಳ ಪಾತ್ರವಿದ್ದೇ ಇದೆ. ಯಜುರ್ವೇದವು ಯಜ್ಞಪ್ರಕ್ರಿಯೆಯನ್ನು ವಿವರವಾಗಿ ಸಾರುವ ವೇದವಾಗಿದೆ. ಯಾವುದೇ ಯಜ್ಞವಿರಲಿ ಅದರಲ್ಲಿ ಅಧ್ವರ್ಯುವಿನ ಪಾತ್ರ ಬಹಳಮುಖ್ಯವಾಗಿರುತ್ತದೆ. ಅವನ ನಿರ್ದೇಶನದಂತೆ ಯಜ್ಞವು ಸಾಂಗವಾಗಿ ನೆರವೇರಬೇಕಾಗುತ್ತದೆ. ಹಾಗಾಗಿ ಯಜ್ಞಪ್ರಕ್ರಿಯೆಯಲ್ಲಿ ಯಜುರ್ವೇದದ ಸ್ಥಾನ ಹಿರಿದು. ಅಂದರೆ ಉಳಿದವುಗಳ ಪಾತ್ರ ಗೌಣವೆಂಬ ಅಭಿಪ್ರಾಯವಲ್ಲ. ಸಂಗತಿಗನುಗುಣವಾಗಿ ಪ್ರಧಾನ ಮತ್ತು ಗೌಣ ಎಂಬ ವ್ಯವಹಾರವಿದೆ ಎಂಬುದೇ ತಿಳಿಯಬೇಕಾದ ತಾತ್ಪರ್ಯ. 

ಇದೇ ನೇರದಲ್ಲಿ ನಮ್ಮ ಶರೀರದ ಸಕಲ ವ್ಯವಹಾರದಲ್ಲಿ ಮನಸ್ಸಿನ ಭಾಗ ಎಷ್ಟು ಮುಖ್ಯ ಎಂಬುದು ತಿಳಿಯುತ್ತದೆ. ಜೀವನದ ಪ್ರತಿಯೊಂದು ಆಗುಹೋಗುಗಳಿಗೂ ಮನಸ್ಸೇ ಕಾರಣ- ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ' ಎಂಬುದು ಹಿರಿಯರ ಮಾತು. ಮನುಷ್ಯನು ತನ್ನ ತನವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕಾದರೆ ಅವನ ಮನಸ್ಸಿನ ನಿಯಂತ್ರಣ ಅತ್ಯಗತ್ಯ. ಅದಕ್ಕೆಂದೇ ಸರ್ವವಿಧವಾದ ಪ್ರಯತ್ನವೂ ಇರಬೇಕಾಗುತ್ತದೆ. ಈ ನೇರದಲ್ಲೇ ನಮ್ಮ ಧರ್ಮಶಾಸ್ತ್ರ, ಯೋಗ, ಜ್ಯೌತಿಷ ಮೊದಲಾದ ಶಾಸ್ತ್ರಗಳು ಬಂದಿವೆ. ಯೋಗ ಮತ್ತು ಆಯುರ್ವೇದ ಶಾಸ್ತ್ರಗಳಂತೂ ನೇರವಾಗಿ ಇಅದನ್ನೇ ಪ್ರತಿಪಾದಿಸುತ್ತವೆ. ಮನುಷ್ಯನು ಆರೋಗ್ಯವಾಗಿ ಇರಬೇಕಾದರೆ ಮಾನಸಿಕವಾದ ಆರೋಗ್ಯ ಎಷ್ಟು ಮುಖ್ಯ ಎಂಬುದುದನ್ನು ಆಯುರ್ವೇದ ಸಾರುತ್ತದೆ. ಯೋಗವು ಮನಸ್ಸನ್ನು ನಿಯಂತ್ರಿಸಲೆಂದೇ ಅಷ್ಟಾಂಗಯೋಗಗಳನ್ನು ಹೇಳಿದೆ. ಇವುಗಳೆಲ್ಲದರ ಸಾರ ಮನೋನಿಯಂತ್ರಣ. ಅದೊಂದು ಸ್ತಿಮಿತದಲ್ಲಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. 

ಮನುಷ್ಯ ಸಾಧಿಸಬೇಕಾದ ಆತ್ಮಸಾಧನೆ. ಜ್ಞಾನ ಅಥವಾ ಮೋಕ್ಷ ಎಂದೆಲ್ಲಾ ಕರೆಯುತ್ತಾರೆ. ಅದಕ್ಕೆ ಮನಸ್ಸೇ ಬೇಕು. ಈ ಕಾರಣಕ್ಕೆ ಮಾನವನಾಗಿದ್ದಾನೆ. 'ಮನ-ಅವಬೋಧನೇ' ಎಂಬ ಸಂಸ್ಕೃತದ ಮೂಲದಿಂದ ಹುಟ್ಟಿದ ಮಾನವ ಎಂಬ ಶಬ್ದವು ತನ್ನ ಮೂಲವನ್ನು ತಿಳಿಯಲು ಮಾನವ ಮಾತ್ರ ಸಾಧ್ಯ ಎಂಬುದನ್ನು ತಿಳಿಸುತ್ತದೆ. 

'ಮನೋ ಯಜುರ್ವೇದಃ' ಎಂಬ ಉಪನಿಷತ್ತಿನ ವಾಕ್ಯವು ಮನಸ್ಸನ್ನು ಯಜುರ್ವೇದದ ಸ್ಥಾನವನ್ನು ನೀಡುತ್ತದೆ. ಅಂದರೆ ಹಿಂದಿನ ಲೇಖನದಲ್ಲಿ ಹೇಳಿದಂತೆ ಪಂಚವಿಧವಾದ ಯಜ್ಞದಲ್ಲೂ ಮನಸ್ಸು ಅತಿಮುಖ್ಯವಾಗಿ ಬೇಕು. ಮನಸ್ಸನ್ನು ಉಭಯೇಂದ್ರಿಯ ಎನ್ನುತ್ತಾರೆ. ಅಂದರೆ ಬಾಹ್ಯವಾದ ಜ್ಞಾನ ಮತ್ತು ಆಂತರಜ್ಞಾನ ಇವೆರಡೂ ಬರಬೇಕಾದರೆ  ಮನಸ್ಸೇ ಕಾರಣ. ಮನಸ್ಸು ಎಷ್ಟು ಪ್ರಧಾನವಾದ ಇಂದ್ರಿಯ ಎನ್ನುವುದಕ್ಕೆ ಭಗವದ್ಗೀತೆಯಲ್ಲಿ ಕೃಷ್ಣ ಹೇಳುವ ಮಾತು " ಇಂದ್ರಿಯಾಣಾಂ ಮನಶ್ಚಾಸ್ಮಿ" ಎಂದು. ಇಷ್ಟು ಪ್ರಾಧಾನ್ಯವನ್ನು ಹೊಂದಿರುವ ಮನಸ್ಸು ಯಜ್ಞಪ್ರಕ್ರಿಯೆಯಲ್ಲಿ ಯಜುರ್ವೇದದ ಸ್ಥಾನದಷ್ಟೇ ಮಹತ್ತು ಎಂಬುದು ಇಲ್ಲಿನ ಪ್ರಶ್ನೋತ್ತರದ ಆಶಯ.   

ಸೂಚನೆ : 01/1/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.