Sunday, January 22, 2023

ಯಕ್ಷಪ್ರಶ್ನೆ - 22 (Yaksha Prashne - 22)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



ಪ್ರಶ್ನೆ – 21 ಸುಖಾಪೇಕ್ಷಿಗಳಿಗೆ ಯಾವುದು ಶ್ರೇಷ್ಠವಾದುದು? 

ಉತ್ತರ - ಹಸು - ಗೋವು


ಸುಖವನ್ನು ಇಷ್ಟಪಡುವವರಿಗೆ ಯಾವುದು ಅತಿಮುಖ್ಯವಾದ ವಿಷಯ ಎಂಬುದು ಯಕ್ಷ ಕೇಳುವ ಪ್ರಶ್ನೆ. ಇಂದು ಸುಖ ಎಂಬ ವಿಷಯವನ್ನೇ ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದೇವೆ? ಸುಖ ಎಂದರೇನು?  ಸುಖವನ್ನು ಯಾರು ತಾನೆ ಅಪೇಕ್ಷಿಸುವುದಿಲ್ಲ! ಸುಖವೆಂಬುದು ನಿಜವಾಗಿಯೂ ತಿಳಿದೂ ತಿಳಿಯದ ಸಂಗತಿಯಾಗಿದೆ. ಏಕೆಂದರೆ ನಾವು ಕೆಲವೊಮ್ಮೆ ಸುಖವಲ್ಲದ್ದನ್ನು ಸುಖವೆಂದೂ, ಯಾವುದು ನಿಜವಾಗಿಯೂ ಸುಖವೋ ಅದರ ಪರಿವೆಯೇ ಇಲ್ಲದಂತಹ ಸ್ಥಿತಿಯಲ್ಲಿ ಇದ್ದೇವೆ. 'ಸುಖಂ ಮೇ ಭೂಯಾತ್ ದುಃಖಂ ಮನಾಗಪಿ ಮಾ ಭೂಯಾತ್' ಪ್ರತಿಯೊಂದು ಜೀವಿಯೂ 'ಸುಖ ಬೇಕು, ದುಃಖ ಬೇಡ' ಎಂದು ಸಹಜವಾಗಿ ಬಯಸುತ್ತದೆ. ಯಾವುದು ಬದುಕುವುದಕ್ಕೆ ಸಾಧನವೋ ಅದನ್ನು ಸುಖವೆಂದು ಭಾವಿಸುತ್ತೇವೆ. ಯಾವುದು ಬದುಕಿಗೆ ತೊಂದರೆಯನ್ನು ಅಥವಾ ಆಪತ್ತನ್ನು ತಂದುಕೊಡುವಂತಹದ್ದೋ ಅದು ದುಃಖ ಎನ್ನುತ್ತೇವೆ. 


ನಮ್ಮ ಜೀವನವನ್ನು ಚೆನ್ನಾಗಿ ನಡೆಸಲು ಯಾವುದೆಲ್ಲಾ ಬೇಕಾಗಿದೆಯೋ ಅವುಗಳನ್ನು ಸುಖಸಾಧನ ಎನ್ನುತ್ತಾರೆ. ವಸ್ತುತಃ ನಿಜವಾದ ಸುಖ ಎಂದರೆ ಯಾವುದು ಎಂಬುದನ್ನು ನಮ್ಮ ಹಿಂದಿನವರು ಹೀಗೆ ಹೇಳುತ್ತಿದ್ದರು. "ಯಲ್ಲಾಭಾತ್ ನಾಪರೋ ಲಾಭಃ ಯತ್ಸುಖಾತ್ ನಾಪರಂ ಸುಖಮ್" ಎಂಬುದಾಗಿ. ಯಾವುದನ್ನು ಪಡೆದರೆ ಇನ್ನು ಪಡೆಯಬೇಕಾದುದು ಎಂಬುದು ಯಾವುದೂ ಇಲ್ಲವೋ ಅದನ್ನು 'ಲಾಭ' ಎಂತಲೂ, ಯಾವ ಸುಖವನ್ನು ಪಡೆದರೆ ಇನ್ನು ಪಡೆಯಬೇಕಾದ ಸುಖ ಎಂಬುದು ಇಲ್ಲದಿದ್ದರೆ ಅದನ್ನು ನಿಜವಾದ 'ಸುಖ' ಎನ್ನುತ್ತಾರೆ. ಯಾವುದನ್ನು ಪಡೆದರೆ ಮತ್ತೆ ದುಃಖದ ಲೇಶವೂ ಬರುವುದಿಲ್ಲವೋ ಅದನ್ನೇ ನಿಜವಾಗಿ 'ಸುಖ' ಎನ್ನುತ್ತಾರೆ. ಊಟ ಮಾಡಿದರೆ, ನಿದ್ರೆ ಮಾಡಿದರೆ, ಧನವನ್ನು ಸಂಪಾದನೆ ಮಾಡಿದರೆ ಸುಖ ಎಂದು ಭಾವಿಸುತ್ತೇವೆ. ಆದರೆ ಇವುಗಳನ್ನು ಪಡೆದನೆಂದರೆ ಸುಖವೇ ಲಭಿಸುತ್ತದೆ ಎನ್ನುವುದಕ್ಕೆ ಭರವಸೆ ಇಲ್ಲ. ಹಾಗಾದರೆ ಯಾವುದು ಸುಖ? ಭಗವಂತ, ದೇವರು ಪರಬ್ರಹ್ಮನ ಸಾಕ್ಷಾತ್ಕಾರವೆಂಬುದೇ ಪರಮ ಸುಖ. ಅದಕ್ಕಿಂತ ಮಿಗಿಲಾದ ಸುಖವೆಂಬುದಿಲ್ಲ. ಇದೇ ಪಡೆಯಬೇಕಾದುದು. ಈ ಸುಖದ ಅಂಶಮಾತ್ರ ಎಲ್ಲೇ ಕಂಡುಬಂದರೂ ಅದನ್ನೂ ಸುಖಸಾಧನ ಎನ್ನಬಹುದು. ಇಂತಹ ಪರಮೋಚ್ಚವಾದ ಸುಖವನ್ನು ಸಾಧಿಸುವಲ್ಲಿ ಪರಮೋಚ್ಚ ಸಾಧನ ಯಾವುದು ? ಎಂಬುದು ಯಕ್ಷನ ಪ್ರಶ್ನೆಯಲ್ಲಿರುವ ಭಾವ. 


ಅದಕ್ಕೆ ಧರ್ಮರಾಜನ ' ಗೋವು' ಎಂಬ ಉತ್ತರ ಎಷ್ಟು ಸೊಗಸಾಗಿದೆ!. ಏಕೆಂದರೆ ಹಸುವಿಲ್ಲದಿದ್ದರೆ ನಮ್ಮ ಜೀವನಕ್ಕೆ ಸರಿಯಾದ ಅರ್ಥವೇ ಇರದು. ಜೀವನಕ್ಕಾಗಿ ಹುಟ್ಟಿನಿಂದ ಮರಣದ ವರೆಗಿನ ಬದುಕಿಗೆ ಹಾಲು ಬೇಕು. ಕೆಲವು ತಿಂಗಳು ಮಾತ್ರ ಸ್ವತಃ ಅಮ್ಮನ ಹಾಲಿನಿಂದ ಬದುಕಿದರೆ, ಉಸಿರಿರುವ ತನಕ ಗೋಮಾತೆಯ ಹಾಲಿನಿಂದ ಬದುಕುತ್ತೇವೆ. ಆಹಾರವೆಲ್ಲವೂ ಪರಮೋಚ್ಚ ಸುಖವನ್ನು ನೀಡಲು ಸಮರ್ಥವಾಗಿರುವುದಿಲ್ಲ. ಆದರೆ ಹಸುವಿಂದ ಸಿಗುವ ಹಾಲು, ತುಪ್ಪ ಮೊದಲಾದ ಗವ್ಯೋತ್ಪನ್ನಗಳು ಅಂತಹ ಸುಖವನ್ನೇ ನೀಡಲು ಸಾಧನವಾಗಿವೆ. ಈ ಪರಮೋಚ್ಚ ಸುಖವು  ಸಾತ್ತ್ವಿಕವಾದ ಆಹಾರದಿಂದ ಮಾತ್ರವೇ ಅತಿ ಸುಲಭವಾಗಿ ಲಭಿಸುತ್ತದೆ. ಆದ್ದರಿಂದ ಸುಖವನ್ನು ಅಪೇಕ್ಷೆಪಡುವವನಿಗೆ ಗೋವು ಸುಖವಾಗಿ- ಅನಾಯಾಸವಾಗಿ ಸುಖವನ್ನು ನೀಡುವ ಸಾಧನವಾಗಿದೆ.  


ಸೂಚನೆ : 22/1/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.