Sunday, January 29, 2023

ಅಷ್ಟಾಕ್ಷರೀ​ - 27 ಧೈರ್ಯಧನಾ ಹಿ ಸಾಧವಃ (Astakshara Darshana 27 Dhairyadhana Hi Sadhavah)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಕನ್ನಡದ ಸಾಹಿತ್ಯಪ್ರಕಾರವೊಂದೆನಿಸುವ 'ಕಾದಂಬರಿ'ಯ ಮೂಲ, ಒಂದು ಸಂಸ್ಕೃತ ಕೃತಿ: ಬಾಣಭಟ್ಟನೆಂಬ ಸಂಸ್ಕೃತಕವಿಯ ಪ್ರಸಿದ್ಧ ಗದ್ಯಕಾವ್ಯವಾದ 'ಕಾದಂಬರೀ'. ಆ ಕೃತಿಯಲ್ಲಿಯದೇ ಮೇಲಿನ ಮಾತು. ಪುಂಡರೀಕನೆಂಬ ತಪಸ್ವಿಯು ಕಾಮಪರವಶನಾದಾಗ ಆತನನ್ನು ಸರಿದಾರಿಗೆ ತರಲೆಂದು ಪ್ರಯತ್ನಿಸುತ್ತಾ ಆತನ ಮಿತ್ರನಾಡಿದ ನುಡಿಯಿದು. "ಧೈರ್ಯವೇ ಸಾಧುಗಳ ಸಂಪತ್ತು" ಎಂಬ ಎಚ್ಚರಿಕೆಯ ಮಾತನ್ನು ಇಲ್ಲಿ ಹೇಳಿದೆ.

ಏನು ಈ ಮಾತಿನ ಅರ್ಥ? ಯಾರಾದರೂ ಪುಕ್ಕಲರಾಗಿದ್ದರೆ ಅಂತಹವರಿಗೆ "ಧೈರ್ಯ ಬೇಕಯ್ಯಾ, ಹೆದರಬಾರದಯ್ಯಾ" ಎನ್ನುವುದು ಸರಿ. ಕಾಡಿನಲ್ಲಿ ತಪಸ್ಸುಮಾಡಿಕೊಂಡಿರುವವರಿಗೆ ಈ ಮಾತೇ? ಭಯವೆಂದೊಡನೆ ಜೀವಕ್ಕೆ ಕುತ್ತೋ ಆಸ್ತಿಗೆ ಸಂಚಕಾರವೋ ಬಂದಿರಬೇಕೆಂದಂದುಕೊಳ್ಳುವೆವಲ್ಲವೇ? ಎಂದೇ 'ವ್ಯಾಘ್ರಭಯ', 'ಚೋರಭಯ' ಎಂಬ ವ್ಯಾಕರಣದ ಪ್ರಸಿದ್ಧೋದಾಹರಣೆಗಳೇ ಕಣ್ಣ ಮುಂದೆ ಬರತಕ್ಕವು.

ತಪಸ್ವಿಗಳು ನಿಃಸ್ವರು - ಎಂದರೆ ಸ್ವತ್ತು ಎಂಬುದೇ ಇಲ್ಲದವರು. ತಪೋವನದಲ್ಲಿ ಗುಡಿಸಿಲಿನಲ್ಲಿ ವಾಸಮಾಡುವವರಿಗೆ ಯಾವ ಆಸ್ತಿ? ತಪಸ್ವಿಗಳ ದರ್ಭೆ-ಕಮಂಡಲುಗಳ ಮೇಲೆ ಕಣ್ಣುಹಾಕುವ ಕಳ್ಳರುಂಟೇ? ಕಾಡುಗಳಲ್ಲೇನು ಕಳ್ಳಕಾಕರ ಭಯವೇ? ಕಳ್ಳರಿಗೆ ಬೇಕಾಗುವ ಬೇರಾವುದಾದರೂ ವಸ್ತು ಇವರಲ್ಲುಂಟೇ? ಯಾವುದೂ ಇಲ್ಲ. ಇನ್ನು ಕ್ರೂರಪ್ರಾಣಿಗಳೋ, ಅವುಗಳಿಂದ ಭಯವಿರಲಾರದ ಎಡೆಗಳಲ್ಲೇ ತಪೋವನಗಳು ತಲೆಯೆತ್ತುವುದು. ಹಾಗಿರಲು ಆ ಭಯವೂ ಅವರಿಗಿರದು. ಹಾಗಿದ್ದರೆ ಏನಿದು ಧೈರ್ಯೋಪದೇಶ?

ಯಾರಿಗೆ ಜ್ಞಾನವೇ ಧನವೋ ಅವರನ್ನು ಜ್ಞಾನಧನರೆನ್ನುತ್ತೇವೆ. ಹಾಗೆಯೇ ವಿದ್ಯೆ, ತಪಸ್ಸು, ಧರ್ಮಗಳನ್ನೇ ಹಣವನ್ನಾಗಿ ಕಾಣುವವರನ್ನು ವಿದ್ಯಾಧನ, ತಪೋಧನ, ಧರ್ಮಧನ - ಎಂಬ ಪದಗಳಿಂದ ಕರೆಯುವುದುಂಟು. ಇಲ್ಲಿ ತಪಸ್ವಿಗಳನ್ನು ಧೈರ್ಯಧನರೆಂದು ಕರೆದಿದೆ. ಏನು ಹಾಗೆಂದರೆ?

ಶೂರ-ಧೀರ-ವೀರರುಗಳಲ್ಲಿಯ ಭಾವವೇ ಶೌರ್ಯ-ಧೈರ್ಯ-ವೀರ್ಯಗಳೆನಿಸತಕ್ಕವು. ಅಲ್ಲಿಗೆ, ಧೀರರಲ್ಲಿರುವುದೇ ಧೈರ್ಯವಾದರೆ, ಧೀರನಾರು? - ಎಂಬ ಪ್ರಶ್ನೆ ತಲೆದೋರುವುದೇ ಸರಿ. ಈ ಪ್ರಶ್ನೆಗೆ ಕವಿಯೂ ಜ್ಞಾನಿಯೂ ಆದ ಕಾಳಿದಾಸನ ಅದ್ಭುತವಾದ ಉತ್ತರವಿದೆ. ಅಲ್ಲಿಯ ಪ್ರಸಂಗವೂ ತೀರ ಬೇರೆಯೇನಲ್ಲ: ಶಿವ ತಪಸ್ಸಿಗೆ ಕುಳಿತುಕೊಳ್ಳುವ ಸಂನಿವೇಶ; ಆತನ ಸೇವೆಗೆಂದು ಇನ್ನೂ ಕನ್ಯೆಯಾದ ಪಾರ್ವತಿಯು ಬಂದಿದ್ದಾಳೆ. ತಪಸ್ಸಿಗೆಂದು ಹೊರಟವರಿಗೆ/ಕುಳಿತವರಿಗೆ ನಾರಿಯರಿಂದಾಗಬಹುದಾದ ವಿಘ್ನಕ್ಕೆ ವಿಶ್ವಾಮಿತ್ರಾದಿಗಳ ಕಥೆಗಳ ಸಾಕ್ಷಿಯೇ ಉಂಟಲ್ಲವೇ? ಹೀಗಿದ್ದರೂ ಸಹ  ಅವಳ ಸೇವೆಯನ್ನು ಶಿವನು ನಿಷೇಧಿಸಲಿಲ್ಲ. ಏಕೆಂದರೆ ಆತನು ಧೀರ - ಎನ್ನುತ್ತಾನೆ ಕಾಳಿದಾಸ. ಸಂದರ್ಭದಲ್ಲೇ ಧೀರನಾರು? - ಎಂಬುದರ ಸೊಗಸಾದ ವ್ಯಾಪಕವಾದ ಲಕ್ಷಣ(definition)ವನ್ನೂ ಕೊಡುತ್ತಾನೆ.

ಎಲ್ಲವೂ ಪ್ರಕಾರವಾಗಿರುವಾಗ ಕೆಲಸಗಳು ಸುಸೂತ್ರವಾಗಿ ನಡೆಯುವವಷ್ಟೆ. ಆದರೆ ಅಲ್ಲಿ ಬದಲಾವಣೆಯುಂಟಾದರೆ, ಬದಲಾವಣೆಯು ಸ್ವಾಗತಾರ್ಹವಲ್ಲವಾದರೆ - ಎಂದರೆ ಲಕ್ಷ್ಯಸಾಧನೆಗೆ ಪೋಷಕವಲ್ಲವಾದರೆ - ವಿಕಾರವೆಂದೇ ಅದನ್ನು ಕರೆಯಬೇಕು. ನಮ್ಮ ಮನಸ್ಸೇ ಶಾಂತಿ-ಪ್ರಸನ್ನತೆಗಳಿಂದ ಕೂಡಿದ್ದರೆ ಅದು ಪ್ರಕಾರ. ಮನಸ್ಸಿನಲ್ಲಿ ಬಗ್ಗಡಗಳು ತಲೆದೋರಿದರೆ ಅದು ವಿಕಾರ. ಲೋಭ-ಮಾತ್ಸರ್ಯ ಮುಂತಾದುವಿದ್ದಲ್ಲಿ ವಿಕಾರವೇ.

ವಿಕಾರಗಳು ಸುಮ್ಮಸುಮ್ಮನೆ ಆಗಿಬಿಡುವುದಿಲ್ಲ. ಕಾರಣವಿಲ್ಲದೆ ಯಾವ ಕಾರ್ಯವಾದೀತು? ಕಾರಣವೆಂದರೂ ಹೇತುವೆಂದರೂ ಒಂದೇ. ವಿಕಾರಕ್ಕೆ ಕಾರಣಭೂತವಾದದ್ದು ವಿಕಾರಹೇತು. ವಿಕಾರಹೇತುವೇ ಇಲ್ಲದಿದ್ದಾಗ ವಿಕಾರವಾಗಲಿಲ್ಲವೆನ್ನುವುದು ಅತಿಶಯದ ನಡೆಯೇನಲ್ಲ. ಆದರೆ, ವಿಕಾರಹೇತುಗಳಿದ್ದೂ ವಿಕಾರವೇರ್ಪಡಲಿಲ್ಲವೆಂದರೆ ಅದುವೇ ನಿಜವಾದ ಅಚ್ಚರಿಯ ಹೆಚ್ಚುಗಾರಿಕೆ. ಅಂತಹ ನಿರ್ವಿಕಾರತೆಯುಳ್ಳವನನ್ನೇ ಧೀರನೆನ್ನುವುದು - ಎನ್ನುತ್ತಾನೆ ಕಾಳಿದಾಸ.

ಭಯವೂ ಒಂದು ವಿಕಾರವೇ. ಎಂದೇ, ಭಯಕ್ಕೆ ಕಾರಣವಿದ್ದೂ ಭಯಗೊಳ್ಳದವನು ಧೀರ. ಭಯಂಕರನಾದ ಅಂಗುಲಿಮಾಲನು ಎದುರ್ಗೊಂಡಾಗ ಹೆದರದೆ ನಿಂತ ಬುದ್ಧನು ಧೀರ. ಕಾಳಿದಾಸನಿತ್ತ ಲಕ್ಷಣದಂತೆ ನೋಡುವುದಾದರೆ, ಧೀರನೆಂಬುದು ಭಯವಿಲ್ಲದವನಿಗೆ ಮಾತ್ರ ಅನ್ವಯಿಸುವ ಪದವಲ್ಲ. ಯಾವುದೇ ವಿಕಾರವಿರಲಿ, ಅದಕ್ಕೊಳಪಡದವನನ್ನು ಧೀರನೆನ್ನಬಹುದು. ಕಾಮ-ಕ್ರೋಧಗಳೂ ವಿಕಾರಗಳೇ. ಕಾಮವನ್ನೋ ಕ್ರೋಧವನ್ನೋ ಉಕ್ಕಿಸುವ ಸಂನಿವೇಶಗಳಿದ್ದೂ, ಅವುಗಳಿಗೆ ಪಕ್ಕಾಗದವರೂ ಅಂತೆಯೇ ಧೀರರೇ ಸರಿ.

ಕಾಮಗಳ ಹಿಂದೆ ಓಡುವವರನ್ನು 'ಬಾಲ'ರೆಂದೂ, ಅದಕ್ಕೆ ಪ್ರತಿಯಾಗಿ ಪ್ರತ್ಯಗಾತ್ಮನತ್ತ ಸಾಗುವವನನ್ನು 'ಧೀರ'ನೆಂದೂ ಕಠೋಪನಿಷತ್ತು ಚಿತ್ರಿಸುತ್ತದೆ. ಬುದ್ಧನಿಗಿಂತಲೂ ಪ್ರಾಚೀನವೆನಿಸುವ ಉಪನಿಷತ್ಸಾಹಿತ್ಯದಲ್ಲಿಯ ಧೀರಕಿಶೋರನಾದ ನಚಿಕೇತನ ನಡೆ, ಹಾಗೂ ಕಾಳಿದಾಸನಿತ್ತ ಧೀರಲಕ್ಷಣ – ಇವುಗಳ ಉದಾತ್ತತೆಯನ್ನು ಶ್ರೀರಂಗಮಹಾಗುರುಗಳು ಮನಮುಟ್ಟುವಂತೆ ಹೇಳುತ್ತಿದ್ದರು. ಸಾಕ್ಷಾದ್ ಯಮನೇ ಹತ್ತುಹಲವು ಸಂಪತ್ತು-ಸವಲತ್ತುಗಳ ಪ್ರಲೋಭನೆಗಳನ್ನೊಡ್ಡಿದರೂ ಅವಿಚಲಿತ-ಚಿತ್ತನಾದ ಕೆಚ್ಚಿನ ನಚಿಕೇತನು ಮೇಲ್ನೋಟಕ್ಕೆ ಎಳೆಯನಾದರೂ ಒಳನೋಟಕ್ಕೆ ಪ್ರಬುದ್ಧನೇ ಸರಿ!

ಇಂತಹ ಧೈರ್ಯಧನರೇ ನಮಗೆ ಸ್ಫೂರ್ತಿಪ್ರದರಾದರೆ ಚೆನ್ನಲ್ಲವೇ?

ಸೂಚನೆ: 29/1/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.