Sunday, January 29, 2023

ವ್ಯಾಸ ವೀಕ್ಷಿತ - 19 ಕುಂತಿಗೆ ಬ್ರಾಹ್ಮಣನಿತ್ತ ಉತ್ತರVyaasa (Vikshita - 19 Kuntige Brahmananitta Uttara)

 ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)ಬಕಾಸುರನಿಗೆ ತನ್ನ ಶರೀರವನ್ನೇ ಒಪ್ಪಿಸಿಕೊಳ್ಳಬೇಕಾಗಿರುವ ಪರಿಸ್ಥಿತಿ ಆ ಬ್ರಾಹ್ಮಣನದು; ಆ ಬಗ್ಗೆ ಕುಂತಿಯು ವಿಚಾರಿಸಿದಳಾಗಿ, ಅದನ್ನಾತ ಹೇಳಿಕೊಂಡ; "ನನ್ನ ಮಕ್ಕಳು ಇದಕ್ಕೆ ಪರಿಹಾರ ನೀಡುವರು" - ಎಂದವಳೆಂದಳು. ಆಶ್ರಯವಿತ್ತವರಿಗೆ ಆಪತ್ಕಾಲವು ಅಪ್ಪಳಿಸಿದಾಗಲಂತೂ ಸರಿಯಾದ ಸಾಹಾಯ್ಯವನ್ನು ಮಾಡಬೇಕು; ಅದನ್ನು ತನ್ನ ಮಕ್ಕಳಲ್ಲೊಬ್ಬರು ಮಾಡಬಲ್ಲರು - ಎಂಬ ಧೈರ್ಯ ಅವಳಿಗುಂಟು. ಆದರೆ ಅವಳ (ಮತ್ತು ಅವಳ ಮಕ್ಕಳ) ಹಿನ್ನೆಲೆಯ ಪರಿಚಯ ಆತನಿಗಿಲ್ಲವಾಗಿ, ಅದು ಬೇಡವೆನ್ನುತ್ತಿದ್ದಾನೆ.  ಆತನಾಡಿದ ಮಾತಿದು:

"ನನಗೆ ಶ್ರೇಯಸ್ಸು ಯಾವುದು? - ಎಂಬುದನ್ನು ನಾನೇ ಅರಿತುಕೊಳ್ಳಬೇಕಾಗಿದೆ: ಬ್ರಹ್ಮಹತ್ಯೆಯು ವಾಸಿಯೋ, ಆತ್ಮಹತ್ಯೆಯು ವಾಸಿಯೋ? ಆತ್ಮಹತ್ಯೆಯೇ ವಾಸಿಯೆಂಬುದಾಗಿ ನನಗೆ ತೋರುತ್ತದೆ."

(ಕುಂತಿಯೂ ಅವಳ ಮಕ್ಕಳೂ ಬ್ರಾಹ್ಮಣರೆಂದೇ ಈತನ ಎಣಿಕೆ; ಆದ್ದರಿಂದ ಅವರ(ಲ್ಲೊಬ್ಬರ) ಸಾವಿಗೆ ತಾನು ಕಾರಣನಾದರೂ ಅದು ಬ್ರಹ್ಮಹತ್ಯೆಯಾದೀತು; ರಕ್ಕಸನಲ್ಲಿಗೆ ತಾನೇ ಹೋಗಿ ಸತ್ತಲ್ಲಿ ಅದು ಆತ್ಮಹತ್ಯೆಯಾದೀತು. ಇತ್ತ ಬ್ರಹ್ಮಹತ್ಯೆಯೂ ಪಾಪ; ಅತ್ತ ಆತ್ಮಹತ್ಯೆಯೂ ಪಾಪವೇ. ಎರಡು ಪಾಪಗಳಲ್ಲೊಂದನ್ನು ಮಾಡಲೇಬೇಕಾಗಿ ಬಂದಿದೆಯಾಗಿ, ಯಾವುದು ಕಡಿಮೆ ಪಾಪವೋ ಅದನ್ನು ಮಾಡುವುದೇ ತರವಲ್ಲವೇ? – ಎಂಬ ಧರ್ಮಮಯ ಲೆಕ್ಕಾಚಾರವಾತನದು; ಇತ್ತ ಕುಂತಿಯ ಚಿಂತನೆಯೂ ಧರ್ಮಮಯವೇ! ಹೀಗಾಗಿ, ಧರ್ಮನಿರ್ಣಯವನ್ನು ಕುರಿತಾಗಿ ಧರ್ಮಿಷ್ಠರಿಬ್ಬರಲ್ಲಿಯ ವಿವಾದವಿದಾಗಿದೆ!)

"ಬ್ರಹ್ಮಹತ್ಯೆಯು ಮಹಾಪಾಪ; ಅದಕ್ಕೆ ಪರಿಹಾರವೆಂಬುದಿರದು. ಬುದ್ಧಿಪೂರ್ವಕವಾಗಿ ಮಾಡಿಲ್ಲದಿದ್ದರೂ ಅದುವೇ ಹಿರಿದಾದ ಪಾಪ; ಎಂದೇ, ಆತ್ಮವಧವೇ ವಾಸಿಯೆಂದು ನನಗೆ ತೋರುತ್ತದೆ.

ಶುಭಳೇ, ನಾನಂತೂ ವಧೆಯನ್ನು ಸ್ವತಃ ಮಾಡಿಕೊಳ್ಳುವುದನ್ನು ಬಯಸೆ; ಆದರೆ ಮತ್ತಾರೋ ನನ್ನನ್ನು ಕೊಂದಲ್ಲಿ ನನಗೇನೂ ಪಾಪವಂಟದಷ್ಟೆ? (ಏಕೆಂದರೆ ಇದು ಸಂಕಲ್ಪಪೂರ್ವಕವಾದ ಆತ್ಮಹತ್ಯೆಯಲ್ಲವಲ್ಲಾ?)

ನಿನ್ನಪೇಕ್ಷೆಯಂತೆ ನಾನು ಮಾಡಿದರೆ ಬ್ರಾಹ್ಮಣವಧೆಯನ್ನು ಮಾಡಿದಂತೆಯೇ ಆಗುವುದು; ಮತ್ತು ಅದಕ್ಕೆ ಪರಿಹಾರವೇ ಇರದು! ಅದು ಕ್ರೂರ, ಕ್ಷುದ್ರ. ಮನೆಗೆ ಬಂದವರ ಪರಿತ್ಯಾಗವನ್ನು (ಎಂದರೆ ಸಾವಿಗಟ್ಟುವಿಕೆಯನ್ನು) ನೃಶಂಸ ಎನ್ನುವರು. (ನೃಶಂಸ ಎಂದರೆ ಘಾತುಕತನ.) ಶರಣುಕೋರಿದವನ ಪರಿತ್ಯಾಗವೂ, ರಕ್ಷಿಸೆಂದು ಬೇಡಿಕೊಳ್ಳುತ್ತಿರುವವನ ವಧವೂ ನೃಶಂಸವೇ. ಬಲ್ಲವರು ನೃಶಂಸವನ್ನು ನಿಂದಿಸುವರು. ನಿಂದಿತವಾದ ಕರ್ಮವನ್ನು ಮಾಡಬಾರದು (ಕುರ್ಯಾತ್ ನ ನಿಂದಿತಂ ಕರ್ಮ); ನೃಶಂಸವಾದುದನ್ನಂತೂ ಎಂದೂ ಮಾಡುವಂತಿಲ್ಲ. ಆಪದ್ಧರ್ಮವನ್ನು ಬಲ್ಲ ಮಹಾತ್ಮರು ಹೀಗೆಂಬುದಾಗಿ ಹೇಳಿರುವರು.

(ತೀವ್ರಾನಾರೋಗ್ಯ ಮುಂತಾದವು ಆಪತ್ಕಾಲಗಳು; ಅವೊದಗಿದಾಗ ಧರ್ಮಾಚರಣೆಯನ್ನು ಪೂರ್ಣವಾಗಿ ಮಾಡಲಾಗುವುದಿಲ್ಲ. ಎಂತಹ ಆಪತ್-ಪರಿಸ್ಥಿತಿಯೊದಗಿದಾಗ ಯಾವ ಆಚರಣೆಯನ್ನು ಎಷ್ಟು ಮತ್ತು ಹೇಗೆ ನಡೆಸಬೇಕೆಂಬ ಪರಿಯನ್ನು ಆಪದ್ಧರ್ಮವೆನ್ನುತ್ತಾರೆ).

ಒಟ್ಟಿನಲ್ಲಿ ಪತ್ನಿಯೊಂದಿಗೆ ಸ್ವತಃ ನನ್ನ ಸಾವೆಂಬುದೇ ಶ್ರೇಯಸ್ಕರ; ನನ್ನಿಂದಾಗಿ ಬ್ರಹ್ಮಹತ್ಯೆಯಾಗುವುದನ್ನು ನಾನೆಂದೂ ಸಂಮತಿಸೆ" ಎಂದನು. 

(ಸಾಧಾರಣವಾಗಿ ಎಲ್ಲರೂ ತಮ್ಮ ಪ್ರಾಣಕ್ಕೆ ಸಂಚಕಾರ ಬಂದಾಗ, ಹೇಗಾದರೂ - ಬೇರೆಯವರನ್ನು ಬಲಿಗೊಟ್ಟಾದರೂ - ಪ್ರಾಣವುಳಿಸಿಕೊಳ್ಳಲು ಹವಣಿಸುವವರೇ.  ಇಲ್ಲಿ ಕುಂತ್ಯಾದಿಗಳೇ ತಮ್ಮ ಯತ್ನದಿಂದ ಆತನನ್ನುಳಿಸಲು ಸಿದ್ಧರಿದ್ದರೂ,  ತಾನು ಬದುಕಲಿಕ್ಕಾಗಿ ಅವರ ಸಾವಿಗಾಸ್ಪದ ಕೊಡನೀತ! ಆಹಾ, ಇದೆಂತಹ ಧರ್ಮನಿಷ್ಠೆ!)

ಸೂಚನೆ : 01/1/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.