Sunday, December 11, 2022

ಯಾರೀ ಪುರವಾಸಿ? (Yari Puravasi?)

ಲೇಖಕರು : ಭಾಷ್ಯಂ ರಾಮಚಂದ್ರಾಚಾರ್

(ಪ್ರತಿಕ್ರಿಯಿಸಿರಿ lekhana@ayvm.in)


'ಪುರಂಜನ' ಒಬ್ಬರಾಜ. ಆತ ಸುಖ-ಭೋಗ್ಯಗಳನ್ನರಸುತ್ತಾ ಒಂದು ನಗರದಿಂದ ಮತ್ತೊಂದಕ್ಕೆ ತೃಪ್ತಿಯಿಲ್ಲದೆ ಅಲೆಯುತ್ತಿರುತ್ತಾನೆ. ಕೊನೆಗೂ ತನ್ನೆಲ್ಲ ಆಸೆ-ಆಮಿಷಗಳನ್ನು ತೀರಿಸಬಲ್ಲ, ಸೌಂದರ್ಯ ಮತ್ತು ಸಂಪತ್ತುಗಳಿಂದ ಕೂಡಿದ  ಒಂಭತ್ತು  ದ್ವಾರಗಳುಳ್ಳ ಒಂದು ಸುಂದರನಗರಿಯನ್ನು ಪ್ರವೇಶಿಸುತ್ತಾನೆ. ಅಲ್ಲಿ  ಸಖಿಯರು - ಭಟರಿಂದೊಡಗೂಡಿದ  ರೂಪ-ಲಾವಣ್ಯ -ತಾರುಣ್ಯಗಳ ಖನಿಯಾದ  ಒಬ್ಬ  ಯುವತಿಯನ್ನು ಕಾಣುತ್ತಾನೆ.  ಕಂಡೊಡನೆ, ಅವಳಲ್ಲಿ ಅನುರಕ್ತನಾದ  ಪುರಂಜನ ಕೇಳುತ್ತಾನೆ -"ತರುಣಿ ನೀನ್ಯಾರು? ಈ ಪುರ ಯಾರದು? ಇವರೆಲ್ಲರೂ ಯಾರು? ನಿನ್ನಲ್ಲಿ ನಾನು ಅನುರಕ್ತನಾಗಿದ್ದೇನೆ. ನನ್ನನ್ನು ವರಿಸುವೆಯಾ?"  'ಬುದ್ಧಿ' ಎಂಬ ಅವಳು ಉತ್ತರಿಸುತ್ತಾಳೆ-  "ನಾನು ಯಾರೆಂದು ನನಗೇ ತಿಳಿಯದು. ಇವರೆಲ್ಲರೂ ನನ್ನ  ಸಖ- ಸಖಿಯರು; ನನ್ನನ್ನು ರಕ್ಷಿಸುತ್ತಿದ್ದಾರೆ. ಈ ಪುರವನ್ನು  ಒಂದು ಐದು  ಹೆಡೆ ಸರ್ಪ ಹಗಲು -ಇರುಳೆನ್ನದೆ ಕಾಯುತ್ತಿದೆ.  ಇವರುಗಳ ರಕ್ಷಣೆಯಲ್ಲಿ ನಾನು ಸುಖಿ. ನನಗೂ ನಿನ್ನ ಮೇಲೆ ಒಲವು. ನಿನ್ನನ್ನು ವರಿಸುವೆ" . 


ಅವಳಿಂದೊಡಗೂಡಿದ ಪುರಂಜನ ಎಡೆಬಿಡದೆ, ಹಗಲಿರುಳೆನ್ನದೆ,  ಸುಖ- ಐಶ್ವರ್ಯಗಳನ್ನೆಲ್ಲ ಅನುಭವಿಸುತ್ತಿರುತ್ತಾನೆ. ಪುರಂಜನನಿಗೆ ಒಬ್ಬ ಸ್ನೇಹಿತ - 'ಅವಿಜ್ಞಾತ' ನೆನ್ನುವವ. ತನ್ನ ವಿಷಯ ಲೋಲುಪತೆಯಲ್ಲಿ ಪುರಂಜನ, ಅವಿಜ್ಞಾತನನ್ನು  ಪೂರ್ಣ ಮರೆಯುತ್ತಾನೆ. ಆದರೂ ಅವಿಜ್ಞಾತ ಅವಶ್ಯವಿದ್ದಾಗಲೆಲ್ಲ ಆತನ ರಕ್ಷಣೆ ಮಾಡುತ್ತಿರುತ್ತಾನೆ -ಇವನ ಅರಿವಿಗೆ ಬಾರದೆಯೇ. 

ಈ ನಗರದಮೇಲೆ 'ಚಂಡವೇಗ'ನೆನ್ನುವ ಗಂಧರ್ವರಾಜನ ಕಣ್ಣು ಬೀಳುತ್ತದೆ. ತನ್ನ ಮುನ್ನೂರ-ಅರವತ್ತು ಗಂಧರ್ವ ಪುರುಷ- ಸ್ತ್ರೀಯರೊಡಗೂಡಿ ಈ ನಗರದ ಮೇಲೆ ಸತತ ದಾಳಿ ಮಾಡುತ್ತಾನೆ. ಜೊತೆಗೆ 'ಜರಾ' ಎನ್ನುವ ಕುರೂಪಿ ಸ್ತ್ರೀಗೂ ಪುರಂಜನನ ಮೇಲೆ ಎಲ್ಲಿಲ್ಲದ ಪ್ರೀತಿ. ತಾನು ಕಣ್ಣಿಟ್ಟವರನ್ನು ವಶಪಡಿಸಿಕೊಳ್ಳಬಹುದೆಂಬ  'ವರ' ಬೇರೆ ಆಕೆಗೆ ಇತ್ತು. ಜರೆಗೆ ಯವನರಾಜನಾದ 'ಭಯ' ಎನ್ನುವವನ ಸಹೋದರ 'ಪ್ರಜ್ವಾರ' ನ ಸಹಾಯ ಬೇರೆ. ಚಂಡವೇಗ ಮತ್ತು ಪ್ರಜ್ವಾರ, ಪುರದಮೇಲೆ ಲಗ್ಗೆ ಹತ್ತಿ ಬೆಂಕಿ ಇಟ್ಟರೆ, ಜರೆ, ಪುರಂಜನನನ್ನು ಆಕ್ರಮಿಸಿಕೊಳ್ಳುತ್ತಾಳೆ. ಆಕ್ರಮಣವನ್ನೆದುರಿಸಿ,  ಭಟರು ಕ್ರಮೇಣ ಕ್ಷೀಣಿಸುತ್ತಾರೆ. ಹಾಗೂ ಎಡೆಬಿಡದ ಸಾಹಸದಿಂದ ಹೋರಾಡಿ, ಬೆಂಕಿಯಿಂದ ಮೈಯೆಲ್ಲಾ ಸುಟ್ಟ  ಸರ್ಪ, ಕೊನೆಗೂ ಪುರವನ್ನು ತ್ಯಜಿಸುತ್ತದೆ. ಇದಕ್ಕೆ ಮೊದಲೇ, ಜರೆಯ ಆಘಾತದಿಂದ ಘಾಸಿಗೊಂಡ ಬುದ್ಧಿಯು ಪುರಂಜನನನ್ನು ತ್ಯಜಿಸಿರುತ್ತಾಳೆ. ಇಷ್ಟೆಲ್ಲಾ ಆದರೂ ಇನ್ನೂ ವಿಷಯ - ಲೋಲುಪತೆಯಿಂದ ನರಳುತ್ತಿದ್ದ ಪುರಂಜನ, ಕೊನೆಗೂ  ಅಸುನೀಗುತ್ತಾನೆ.

 

ಸ್ತ್ರೀ ಚಿಂತೆಯಲ್ಲೇ ಅಸುನೀಗಿದ ಪುರಂಜನ, ಒಂದು ಸ್ತ್ರೀಯಾಗಿಯೇ ಜನ್ಮತಾಳುತ್ತಾನೆ, ವಿದರ್ಭದೇಶದ ರಾಜಕುಮಾರಿಯಾಗಿ. ಅವಳ ತಂದೆ ಆಕೆಯನ್ನು ಪಾಂಡ್ಯದೇಶದ 'ಮಲಯಧ್ವಜ' ಎಂಬ ಜ್ಞಾನಿ ರಾಜನಿಗೆ  ವಿವಾಹ ಮಾಡಿಕೊಡುತ್ತಾನೆ. ಇಹಸೌಖ್ಯವನ್ನು, ಪರ ಆನಂದಕ್ಕೆ ಧಕ್ಕೆ ಇಲ್ಲದೆ ಅನುಭವಿಸಲು  ಪರಿಣತನಾಗಿದ್ದ ಮಲಯಧ್ವಜ, ತನ್ನ ಕರ್ತವ್ಯಗಳನ್ನೆಲ್ಲ ನಿರ್ವಹಿಸಿ, ಧರ್ಮ ಆದೇಶಿಸುವ  ರೀತಿಯಲ್ಲಿ  ಕಾಲಕ್ರಮದಲ್ಲಿ ವಾನಪ್ರಸ್ಥ ಆಶ್ರಮವನ್ನು  ಸ್ವೀಕರಿಸುತ್ತಾನೆ. ತಪಸ್ಸಿನಲ್ಲಿ ಮುಳುಗಿದ್ದ ಆತ, ಅಂತ್ಯಕಾಲದಲ್ಲಿ ಸಮಾಧಿಯಿಂದ ತನ್ನ ಆತ್ಮವನ್ನು ಭಗವಂತನಲ್ಲಿ ಸಮರ್ಪಿಸುತ್ತಾನೆ - 'ಯೋಗೇನಾಂತೇ ತನುತ್ಯಜಾಮ್' ಎಂಬ ರೀತಿಯಲ್ಲಿ.  ಏನೂ ಅರಿಯದ ಆತನ ಪತ್ನಿ ರೋದಿಸುತ್ತಿರುತ್ತಾಳೆ, ದಿಕ್ಕುತೋಚದೆ. ಆಗ ಪ್ರತ್ಯಕ್ಷನಾದ ಅವಳ  ಜನ್ಮ-ಜನ್ಮಾಂತರದ ಸ್ನೇಹಿತ, ಅವಿಜ್ಞಾತ,  ಆತ ಸ್ತ್ರೀಯಲ್ಲ, ಸುಖ- ಸೌಖ್ಯಗಳನರಸುತ್ತಾ ಓಡಾಡುವ ಪುರಂಜನ ಎಂಬ ಪುರುಷ ಎಂಬುದನ್ನು ನೆನಪಿಗೆ ತಂದುಕೊಡುತ್ತಾನೆ. ಜೊತೆಗೆ " ನಾನು ನಿನ್ನ ಜನ್ಮಜನ್ಮಾಂತರದ ಸ್ನೇಹಿತ. ಎಲ್ಲ ಕಾಲಗಳಲ್ಲೂ ಆನಂದ ತುಂಬಿ, ಹಂಸಗಳು ನಲಿದಾಡುವ, ಸೂರ್ಯಾಸ್ತವಿಲ್ಲದ, ಶತ್ರುಗಳೇ ಇಲ್ಲದ ರಾಜ್ಯ ಒಂದಿದೆ.  ಬಹಳ ದೂರ ಅದು. ದಾರಿಯೂ ಸುಗಮವಲ್ಲ.  ಅದಕ್ಕೆ ನಾನು ನಿನ್ನನ್ನು ಕರೆದುಕೊಂಡು  ಹೋಗಬಲ್ಲೆ. ನಿನ್ನ ಕೆಲಸವೇನೆಂದರೆ, ಹೆಗಲಮೇಲೆ   ಬಿಗಿಯಾಗಿ, ಬಿಡದಂತೆ, ನನ್ನನ್ನೇ ಆಶ್ರಯಿಸಿ ಕುಳಿತಿರುವುದು. ಬರುತ್ತೀಯಾ?' ಎಂದೂ ಕೇಳುತ್ತಾನೆ. ಅಲೆದಲೆದು  ಬಳಲಿ ಬೆಂಡಾದ  ಪುರಂಜನ, ಅವನನ್ನು ನಂಬಿ, ದಾರಿಯನ್ನು ಅವಿಜ್ಞಾತನೊಂದಿಗೆ ಕ್ರಮಿಸಿ  ಕೊನೆಗೂ ಶಾಂತಿಯ ನೆಲೆಬೀಡನ್ನು  ತಲುಪುತ್ತಾನೆ.  

 

'ಶ್ರೀಮದ್ ಭಾಗವತಕಥಾಮೃತಸಾರದಲ್ಲಿ' ಪೂಜ್ಯ ಶ್ರೀ ಶ್ರೀರಂಗಪ್ರಿಯಸ್ವಾಮಿಯವರು ವರ್ಣಿಸಿರುವ ಈ ಭಾಗವತದ ಕಥೆಯ ಮರ್ಮವನ್ನು ಪೂಜ್ಯ ಸ್ವಾಮಿಗಳು ಅವರ ಗುರುಗಳಾದ ಶ್ರೀರಂಗಮಹಾಗುರುಗಳು ಕೊಟ್ಟ ನೋಟದಿಂದ ಅರ್ಥೈಸಿದ್ದಾರೆ. 


ಈ 'ಪುರಂಜನ' ಎನ್ನುವವನು  ನಾವೆಲ್ಲರೂ. ಸುಖ-ಸೌಖ್ಯಗಳನ್ನರಸುತ್ತಾ  ವಿಧವಿಧವಾದ  ದೇಹಗಳನ್ನು ಸೃಷ್ಟಿಸಿಕೊಂಡು ದೇಹದಿಂದ ದೇಹಕ್ಕೆ ಓಡಾಡುವವರು - 'ಪುರಂ ಜನಯತೀತಿ  ಪುರಂಜನಃ' . ಬೇರೆ ಬೇರೆ ದೇಹಗಳನ್ನು ಪಡೆದರೂ ಕೇವಲ ಮಾನವದೇಹದಲ್ಲಿ ಸ್ವಲ್ಪ ಮಟ್ಟಿಗೆ ಸುಖವನ್ನು ಬುದ್ಧಿಯೊಡಗೂಡಿ ಅನುಭವಿಸಬಹುದು.  ಎಂಟು ಚಕ್ರಗಳು - ಮತ್ತು  ಒಂಭತ್ತು ದ್ವಾರಗಳುಳ್ಳ  ಈ ಅಯೋಧ್ಯೆ ಎಂಬ ನಗರವನ್ನು  - "ಅಷ್ಟಾಚಕ್ರಾ ನವದ್ವಾರಾ ದೇವಾನಾಮ್ ಪೂರಯೋಧ್ಯಾ"-  ಎಂಬ  ಈ ದೇಹವನ್ನು ಯಾವಾಗಲೂ  ಕಾಪಾಡುತ್ತಿರುವುವು ನಮ್ಮ ಇಂದ್ರಿಯಗಳೆಂಬ ಭಟರು  ಮತ್ತು ಪಂಚಪ್ರಾಣಗಳು. ಸರ್ಪ  - ಪ್ರಜಾಗರ.  ಮುನ್ನೂರ ಅರವತ್ತು   ಹಗಲು -ರಾತ್ರಿಗಳು ಈ  ದೇಹವನ್ನು ಎಡೆಬಿಡದೆ ಲಗ್ಗೆ ಹತ್ತುತ್ತವೆ. ಜರೆ ಎಂಬ ಮುಪ್ಪು  ಬೇಡಬೇಡವೆಂದರೂ ಆಕ್ರಮಿಸಿಕೊಳ್ಳುತ್ತಾಳೆ. ಇಷ್ಟೆಲ್ಲಾ ಆದರೂ ಪುರಂಜನನನ್ನು, ಈ ಜೀವವನ್ನು,  ಕಾಣಿಸದೆ ಕಾಪಾಡುತ್ತಿರುವವ, ಅವಿಜ್ಞಾತನೇ, ದೇವನೇ;   ಯಾವಾಗಲೂ ಅವನೊಡನಿರುವ ಪರಮ ಕರುಣಾಳುವಾದ ಭಗವಂತ - ಉಪನಿಷತ್ತುಗಳು ಹೇಳುವಂತೆ "ದ್ವಾ ಸುಪರ್ಣಾ  ಸಯುಜಾ  ಸಖಾಯಾ  ಸಮಾನಂ ವೃಕ್ಷಮ್ ಪರಿಷಸ್ವಜಾತೇ" . ಅವನು  ಅಂತರಂಗದೊಳಗಿನಿಂದ ಅನೇಕಬಾರಿ, ಕೆಲವೊಮ್ಮೆ ಬಹಿರಂಗವಾಗಿ, ಜ್ಞಾತನಾಗಿ, ಗುರುವಾಗಿ,  ಕೆಲವೊಮ್ಮೆ ಜ್ಞಾನಿಗಳ ಮೂಲಕ, ಋಷಿ ಸಾಹಿತ್ಯದ ಮೂಲಕ ನಮ್ಮನ್ನು ಎಚ್ಚರಿಸುತ್ತಾನೆ. "ನನ್ನನ್ನು ನಂಬು, ನಾನು ನಿನ್ನನ್ನು ಪರಮಶಾಂತಿಯ ತಾಣಕ್ಕೆ  ಕರೆದುಕೊಂಡು ಹೋಗುತ್ತೇನೆ" ಎಂದು. ನಂಬಿ ನಡೆದರೆ ದಡ.  ಇಲ್ಲದಿದ್ದರೆ ಎಡೆಬಿಡದ ಅಲೆತ, ಎಂಬುದೇ ಈ ಕಥೆಯ ತತ್ತ್ವಾರ್ಥ.


ಸೂಚನೆ : 11/12/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.