Sunday, December 11, 2022

ಯಕ್ಷಪ್ರಶ್ನೆ - 16(Yaksha Prashne - 16)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – ೧೫ ಕ್ಷತ್ತ್ರಿಯರಿಗೆ ಮಾನುಷಭಾವ ಯಾವುದು ?

ಉತ್ತರ - ಭಯ.

ಇಲ್ಲಿ ಯಕ್ಷನು ಧರ್ಮರಾಜನಿಗೆ ಕ್ಷತ್ತ್ರಿಯನಿಗೆ ಸಂಬಂಧಿಸಿದ ವಿಷಯದಲ್ಲಿ ಪ್ರಶ್ನಿಸುತ್ತಿದ್ದಾನೆ. ಈ ಹಿಂದಿನ ಎರಡು ಪ್ರಶ್ನೆಗಳೂ ಇದಕ್ಕೆ ಸಂಬಂಧಿಸಿದ್ದೇ ಆಗಿದ್ದವು. ಇದರ ಮುಂದುವರಿಕೆಯಾಗಿ ಈ ಪ್ರಶ್ನೆಯನ್ನು ಕೇಳಿದ್ದಾನೆ. ಕ್ಷತ್ತ್ರಿಯನಾದವನು ರಣರಂಗದಲ್ಲಿ ನಿಂತು, ಹೋರಾಟ ಮಾಡಿ, ವಿಜಯಮಾಲೆಯನ್ನು ಧರಿಸಬೇಕು. ರಾಜ್ಯವನ್ನು ಶತ್ರುಗಳಿಂದ ಸಂರಕ್ಷಿಸಬೇಕು. ಪ್ರಜೆಗಳನ್ನು ಜತನ ಮಾಡುವುದು ಅವನ ಹೊಣೆಗಾರಿಕೆ. ಆದ್ದರಿಂದ ನಿಜವಾದ ಕ್ಷತ್ತ್ರಿಯನ  ಸ್ವಭಾವ ಎಂತಹದ್ದು? ಅವನು ತನ್ನ ಭಾವದಿಂದ ಮೇಲಕ್ಕೇರಲು ಅವನಲ್ಲಿರಬೇಕಾದ ಪ್ರಜ್ಞೆ ಯಾವುದು? ಎಂಬ ಅಂಶ ಕ್ಷತ್ತ್ರಿಯನ ಮಾನುಷಭಾವ ಯಾವುದು? ಎಂಬುದು  ಪ್ರಶ್ನೆಯಲ್ಲಿ ಅಡಕವಾದ ಭಾವವಾಗಿದೆ. ಅದಕ್ಕೆ ಧರ್ಮರಾಜನ ಉತ್ತರ 'ಭಯ' ಎಂಬುದು. ಈ ಭಯವು ಯಾವ ರೀತಿ ಅವನ ಮಾನುಷಭಾವದ ಪ್ರತೀಕವಾಗುತ್ತದೆ. ಅದು ಹೇಗೆ ಮೇಲಿನ ಭಾವವಾದ ದೇವತ್ವಕ್ಕೆ ಹೋಗಲು ಅಡ್ಡಿಯಾಗುತ್ತದೆ? ಎಂಬ ಅಂಶವೂ ಈ ಪ್ರಶೆಯ ಹಿಂದಿದೆ. 

ಭಯ ಎಂದರೆ ಪುಕಲುತನ. ಯುದ್ಧಕ್ಕೆ ಹೆದರಿ ಓಡಿ ಹೋಗುವ ಸ್ವಭಾವ. ಯಾವುದೇ ಕಾರಣಕ್ಕೂ ಒಬ್ಬ ಕ್ಷತ್ತ್ರಿಯನಾದವನು ಯುದ್ಧದಿಂದ ಹಿಂದೆ ಸರಿಯುವುದು ಅವನಿಗೆ ಶೋಭೆಯನ್ನು ತರುವಂತಹ ವಿಷಯವಲ್ಲ. ಎಂತಹ ಕಠಿನಪರಿಸ್ಥಿತಿಯಲ್ಲೂ ಜಗ್ಗದೆ ಕುಗ್ಗದೆ ಎದುರಾಳಿಯನ್ನು ಹಿಮ್ಮೆಟ್ಟಿಸುವುದೇ ಅವನು ಕೈಗೊಳ್ಳಬೇಕಾದ ಕ್ರಮವಾಗಿರುತ್ತದೆ. ಭಯವೆಂಬುದು ಅವನಲ್ಲಿನ ಎಲ್ಲಾ ವೀರ್ಯ ಪರಾಕ್ರಮಾದಿ ಕ್ಷಾತ್ತ್ರಬಲವನ್ನೂ ಕುಗ್ಗಿಸುವಂತಹ ದೋಷ. ಎಷ್ಟೇ ಬಲ, ವೀರ್ಯ, ಪೌರುಷವಿದ್ದರೂ ಆತನಿಗೆ ಯುದ್ಧಭೂಮಿಯಲ್ಲಿ ಭಯವೊಂದಿದ್ದರೆ ಅವೆಲ್ಲವೂ ಕ್ಷೀಣವಾಗುವವು. ಇದರ ಸ್ಪಷ್ಟವಾದ ಉದಾಹರಣೆಯನ್ನು ಅರ್ಜುನನಲ್ಲಿ ನಾವು ಕಾಣಬಹುದು. ಹಸ್ತಿನಾವತಿಯ ಎರಡು ಪ್ರಬಲವಾದ ಕುಟುಂಬಗಳ ಮಧ್ಯೆ ರಾಜ್ಯಕ್ಕಾಗಿ ಯುದ್ಧ ನಿಶ್ಚಯವಾಗಿ ಯುದ್ಧ ಆರಂಭವಾಗಿದೆ. ಎರಡು ಪಕ್ಷಗಳಿಂದಲೂ ಸೇರಿ ಹದಿನೆಂಟು ಅಕ್ಷೌಹಿಣೀಸೈನ್ಯ ಯುದ್ಧಸನ್ನದ್ಧವಾಗಿದೆ. ಅರ್ಜುನನ ಸಾರಥಿಯಾಗಿ ಭಗವಾನ್ ಶ್ರೀಕೃಷ್ಣ ಅಲ್ಲಿ ಉಪಸ್ಥಿತನಿದ್ದಾನೆ. ಆದರೆ ಅರ್ಜುನನಿಗೆ ಭಯ ಬಂತು. ಅರ್ಜುನ, ಸಾಮಾನ್ಯವೀರನಲ್ಲ! ಅವನಂತಹ ಬಿಲ್ಲುಗಾರ ಮತ್ತೊಬ್ಬನಿಲ್ಲ. ಧನುರ್ವೇದದ ಪಾರಂಗತ. ಸವ್ಯಚಾಚೀ- ಒಂದೇ ಕಾಲದಲ್ಲಿ ಎರಡೂ ಕೈಗಳಿಂದ ಬಾಣಗಳನ್ನು ಬಿಡಲು ಸಾಮರ್ಥ್ಯವುಳ್ಳವನು ಆತ. ಅಷ್ಟೇ ಅಲ್ಲ. ಭಗವಾನ್ ಚಕ್ರಪಾಣೀ ಶ್ರೀಕೃಷ್ಣನೇ ಅವನ ಸಾರಥಿ. ಹೀಗಿದ್ದೂ ಆತನಿಗೆ ಭಯ ಬಂತು. ಅದರಿಂದಾಗಿ ವಿದ್ಯಾವಂತನಾದ ಗಾಂಡೀವೀ ತನ್ನ ವಿವೇಕವನ್ನು ಕಳೆದುಕೊಳ್ಳುತ್ತಾನೆ. ಸಾಮಾನ್ಯ ಹುಲುಮಾನವನಂತೆ ಮಾತನಾಡುತ್ತಾನೆ. ತನ್ನಲ್ಲಿರುವ ವೀರಕ್ಷಾತ್ತ್ರಭಾವವನ್ನು ಮರೆಯುತ್ತಾನೆ. ಅಂದರೆ ಈ ಭಯವು ಅವನಲ್ಲಿ 'ನಾರು ಯಾರು? ನನ್ನ ಕರ್ತವ್ಯವೇನು? ಎಂಬ ಭಾವವನ್ನು ಮರೆಸಿಬಿಡುತ್ತದೆ. ಆಗ ಶ್ರೀಕೃಷ್ಣಪರಮಾತ್ಮನು ಅವನಲ್ಲಿನ ಭಯ ನಿವಾರಣೆಗಾಗಿ 'ಭಗವದ್ಗೀತೆ'ಯನ್ನು ಉಪದೇಶಿಸುತ್ತಾನೆ.  ಅನಂತರ ಗೀತೋಪದೇಶವನ್ನು ಪಡೆದ ಅರ್ಜುನ ತನ್ನ ಸಹಜಕ್ಷಾತ್ತ್ರ ತೇಜಸ್ಸನ್ನು ಪಡೆದು ಯೂಧ ಮಾಡಿ ವಿಜಯಮಾಲೆಯನ್ನು ಧರಿಸುತ್ತಾನೆ. ಒಟ್ಟಾರೆ ಹೇಳಬೇಕಾದ ವಿಷಯವಿಷ್ಟೆ - ಭಯವೆಂಬುದು ನಮ್ಮಲ್ಲಿನ ಧೃತಿಯನ್ನು ಕೆಡಿಸುತ್ತದೆ. ಪರಿಣಾಮವಾಗಿ ಮನುಷ್ಯ ಅಧೋಗತಿಗೆ ಹೋಗುತ್ತಾನೆ. ಭಯವನ್ನು ಬಿಟ್ಟರೆ ಮಾತ್ರ ವಿಜಯಿಯಾಗಿ ಊರ್ಧ್ವಲೋಕದ ಕಡೆ ಪಯಣಿಸುತ್ತಾನೆ.    

ಸೂಚನೆ : 11/12/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.