Friday, December 23, 2022

ಜೀವನದ ಮರ್ಮವನ್ನು ಸಾರುವ ಭಾರತೀಯ ಆಟಗಳು (Jivanada Marmavannu Saruva Bharatiya Atagalu)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)




ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಕ್ರಿಯೆ ಆಟ. ಆಟಗಳಿಂದ ದೈಹಿಕ ಹಾಗೂ ಮಾನಸಿಕವಾದ ತುಷ್ಟಿ ಪುಷ್ಟಿಗಳು ಉಂಟಾಗುತ್ತವೆ ಎಂಬುದು ಎಲ್ಲರ ಅನುಭವ. ಆಟಗಳಲ್ಲಿ ಅನೇಕ ವಿಧಗಳು. ಬಯಲಿನಲ್ಲಿ ಆಡುವ ಚಿನ್ನಿದಾoಡು, ಲಗೋರಿ, ಕಬಡ್ಡಿ  ಇತ್ಯಾದಿ  ಆಟಗಳು ದೈಹಿಕ ಸದೃಢತೆಯನ್ನು ತಂದುಕೊಟ್ಟರೆ, ಒಳಾoಗಣ ಕ್ರೀಡೆಗಳಾದ ಚದುರಂಗ, ಪಗಡೆ, ಚೆನ್ನೆಮಣೆ ಇತ್ಯಾದಿಗಳು ಮನಸ್ಸಿಗೆ ಮುದವನ್ನು ನೀಡುವುದರ ಜೊತೆಗೆ  ಬುದ್ಧಿಯ ಚುರುಕುತನವನ್ನು ಹೆಚ್ಚಿಸುತ್ತವೆ ಎಂಬುದು ಸಾಮಾನ್ಯವಾದ ನೋಟವಾಗಿದೆ.


ಭಾರತೀಯ ಮಹರ್ಷಿಗಳಿಂದ ಲೋಕಕ್ಕೆ ಕರುಣಿಸಲ್ಪಟ್ಟ ಸಂಸ್ಕೃತಿ ಪರಂಪರೆಯಲ್ಲಿಯೂ ಕೂಡ ಅನೇಕ ಆಟಗಳು ಸ್ಥಾನ ಪಡೆದುಕೊಂಡಿರುವುದನ್ನೂ ಹಾಗೂ ಅವುಗಳು ಹಬ್ಬ ಹರಿದಿನಗಳ ಸಂದರ್ಭದಲ್ಲಿ, ವಿವಾಹಾದಿ ಸಂಸ್ಕಾರಗಳ ಸಂದರ್ಭದಲ್ಲಿ ಯೋಜಿಸಲ್ಪಟ್ಟಿರುವುದನ್ನು ಕಾಣಬಹುದು.

 ಅವುಗಳು ಕೇವಲ ದೈಹಿಕ ಹಾಗೂ ಮಾನಸಿಕ ತುಷ್ಟಿ - ಪುಷ್ಟಿಗಳ ಜೊತೆಗೆ ಇನ್ನೂ ಆಳವಾದ ಅರ್ಥವನ್ನು ಹೊತ್ತುಕೊಂಡು ಬಂದಿರುವುದನ್ನು ಗಮನಿಸಬಹುದಾಗಿದೆ.


"ಭಾರತೀಯರ ಆಹಾರ - ವಿಹಾರ, ಉಡುಗೆ - ತೊಡಿಗೆ, ವಿದ್ಯೆ - ಕಲೆ ಎಲ್ಲವೂ ಅಷ್ಟಾoಗಯೋಗದಲ್ಲಿ ಹಾಸು ಹೊಕ್ಕಾಗಿದೆ " ಎಂಬ ಶ್ರೀರಂಗ ಮಹಾಗುರುಗಳ ವಾಣಿಯಂತೆ, ಜೀವನದ ಮೂಲವನ್ನೂ, ಅದರ ಫಲವನ್ನೂ ಚೆನ್ನಾಗಿ ಅರಿತ ಮಹರ್ಷಿಗಳು ಅದನ್ನು ಲೋಕಕ್ಕೆ ಅರ್ಥೈಸಲು ಮನುಕುಲದ ಉದ್ಧಾರಕ್ಕಾಗಿ ದಯಪಾಲಿಸಿದ ಕೊಡುಗೆಗಳಲ್ಲಿ ಭಾರತೀಯ ಸಾಂಪ್ರದಾಯಿಕ ಆಟಗಳೂ ಒಂದಾಗಿದೆ.

ಅವುಗಳಲ್ಲಿ ಕೆಲವೊಂದನ್ನು ವಿಮರ್ಶಿಸುವ ಪ್ರಯತ್ನವನ್ನು ಮಾಡುವುದಾದರೆ-


ಉಯ್ಯಾಲೆ ಆಟ - ಯುಗಾದಿ ಹಬ್ಬದಂದು ಉಯ್ಯಾಲೆಯನ್ನು ಕಟ್ಟಿ ಆಡುವ ಸಂಪ್ರದಾಯ ಬಂದಿದೆ. ಹೊಸ ವರ್ಷದ ಆರಂಭದ ದಿನದಂದು ಯೋಗ ಭೋಗಮಯವಾದ ಜೀವನವನ್ನು ಹೊಂದಲು ಯತ್ನಿಸಬೇಕು ಎಂಬುದನ್ನು ಜ್ಞಾಪಿಸುತ್ತದೆ ಈ ಆಟ. ಜೀವನವು ತೂಗುಯ್ಯಾಲೆಯಂತೆ ಎಂಬುದು ತಿಳಿದಿರುವ ನಾಣ್ಣುಡಿಯೇ ಆಗಿದೆ. ಶರೀರದಲ್ಲಿ ಪ್ರಾಣ ಹಾಗೂ ಅಪಾನಗಳು ಮೇಲಕ್ಕೂ ಕೆಳಕ್ಕೂ ಆಡುವಂತೆ ಉಯ್ಯಾಲೆಯು ಮುಂದಕ್ಕೂ ಹಿಂದಕ್ಕೂ ಆಡುತ್ತದೆ.  ಜೀವನದಲ್ಲಿ ಪ್ರವೃತ್ತಿ ಹಾಗೂ ನಿವೃತ್ತಿಗಳು ಎರಡೂ ಇರಬೇಕು ಎಂಬ ಮರ್ಮವನ್ನು ತಿಳಿಸುತ್ತದೆ. ಪ್ರಾಣಾಪಾನಗಳು ಹಾಗೂ ಮನಸ್ಸು ಇಂದ್ರಿಯಗಳ ಮೂಲಕ ಬಹಿರ್ಮುಖವಾಗಿ ಹರಿದಾಗ ಪ್ರವೃತ್ತಿಮಾರ್ಗ; ಅಂದರೆ ಭೋಗಮಯವಾದ ಜೀವನ . ಅವೇ ಹಿಮ್ಮುಖವಾಗಿ ಸಾಗಿದಾಗ  ನಿವೃತ್ತಿ ಮಾರ್ಗ ಅಥವಾ ಯೋಗಮಯವಾದ ಜೀವನ. ಪ್ರಾಣಾಪಾನಗಳನ್ನು ಸಮಸ್ಥಿತಿಯಲ್ಲಿಟ್ಟುಕೊಂಡು ಜೀವನದಲ್ಲಿ ಯೋಗ ಭೋಗಗಳನ್ನು ಸಮತೋಲನದಲ್ಲಿ ಇರಿಸಿಕೊಳ್ಳುವುದೇ ಪ್ರತಿಯೊಬ್ಬ  ಮನುಷ್ಯನೂ ಮಾಡಬೇಕಾದಂತಹ ಆದರ್ಶ ಜೀವನ. ಯೋಗಭೋಗಗಳು ಒಂದಕ್ಕೊಂದು ವಿರೋಧವಿಲ್ಲದೆ ಇರುವಂತೆ ಇಟ್ಟುಕೊಳ್ಳಬೇಕೆಂಬುದನ್ನು ಸೂಚಿಸುವುದೇ ಈ ಆಟದ ಮರ್ಮವಾಗಿದೆ..


ಗಾಳಿಪಟ - ಸೂತ್ರಧಾರನ ಅಧೀನಕ್ಕೆ ಒಳಪಟ್ಟ ಗಾಳಿಪಟವು ಮೇಲಕ್ಕೆ ಹಾರುತ್ತದೆ; ಭೂಮಿಯಿಂದ ಆಕಾಶದೆಡೆಗೆ ಹಾರುತ್ತದೆ. ಸೂತ್ರವನ್ನು ಸರಿಯಾಗಿ ಹಾಕಿದ್ದರೆ ಅದು ನೆತ್ತಿಯ ಮೇಲೆ ದೂರದಲ್ಲಿ ನಿಶ್ಚಲವಾಗಿರುತ್ತದೆ;  ಸೂತ್ರವನ್ನು ಚೆನ್ನಾಗಿ ಹಾಕಿಲ್ಲದಿದ್ದರೆ ನೆಲಕ್ಕೆ ಪತನವಾಗುತ್ತದೆ. ಅಂತೆಯೇ ನಮ್ಮಗಳ ಜೀವನವೂ ಭಗವಂತನ ಸತ್ಯ ಸೂತ್ರಕ್ಕೆ ಒಳಪಟ್ಟಾಗ ಏರಿಳಿತಗಳಿಂದ ಕೂಡಿದ ಈ ಜೀವನದಲ್ಲಿಯೂ ಭಗವಂತನ ಸ್ಮರಣೆಯೊಂದಿದ್ದರೆ ಮನೋ ನಿಶ್ಚಲತೆಯನ್ನು ಸಾಧಿಸಿ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು. ಅದೇ ಭಗವಂತನ ಸತ್ಯ ಸೂತ್ರದಿಂದ ಬೇರ್ಪಟ್ಟರೆ ಸೂತ್ರಧಾರನಿಂದ ಬೇರ್ಪಟ್ಟ ಗಾಳಿಪಟದಂತೆ ನಮ್ಮ ಜೀವನಕ್ಕೂ ಅಧಃ ಪತನವೇ ಗತಿ ಎಂಬುದು ಈ ಆಟದ ಮಾರ್ಮಿಕ ನೋಟ.


ಪರಮಪದ ಸೋಪಾನ - ಇದು ಹಾವು ಏಣಿ ಆಟ ಎಂದು ಪ್ರಸಿದ್ಧ. ಪಟವೊಂದರ ಮೇಲ್ಭಾಗದ ತುತ್ತ ತುದಿಯಲ್ಲಿ ಪರಮಪದದ ಸ್ಥಾನ. ಕೆಳಗಿನಿಂದ ಮೇಲಿನವರೆಗೂ ಹಲವು ಮನೆಗಳಿವೆ. ಮಧ್ಯ ಮಧ್ಯದಲ್ಲಿ ಚಿಕ್ಕ ದೊಡ್ಡ ಏಣಿಗಳುಂಟು. ನೇರವಾಗಿ ಹಾರಿ, ಮೇಲೆ ಹೋಗುವ ಸಾಧನಗಳು. ಅಲ್ಲಲ್ಲೇ ಬಾಯಿ ತೆರೆದ ಸರ್ಪಗಳೂ ಉಂಟು. ಸರ್ಪದ ಬಾಯಿಗೆ ಸಿಕ್ಕಿದರೆ ಒಮ್ಮೆಲೆ ಪತನ. ಹಾಗಾಗಿ, ಅತ್ಯಂತ ಜಾಗರೂಕವಾಗಿ ಮುನ್ನಡೆಸಬೇಕಾದ ಹೊಣೆಗಾರಿಕೆ ಇದೆ. ಇವು ಜೀವಿಯು ಜೀವನ ಯಾತ್ರೆಯನ್ನು ಮಾಡುವಾಗ ಕಂಡು ಅನುಭವಿಸುವ ಸುಖ ದುಃಖದ ಸ್ಮರಣೆಗೆ ಸಹಾಯವಾದವುಗಳು. ಜೀವನವೇ ಒಂದು ಆಟ; ಪರಮ ಪದದ ಪ್ರಾಪ್ತಿಯೇ ಅದರ ಗುರಿ. ಆಟ ಎಂದರೆ ಅದೊಂದು ಪುರುಷ ಪ್ರಯತ್ನ. ಪುರುಷ ಪ್ರಯತ್ನವಿಲ್ಲದೆ ಬದುಕು ಸಾಧ್ಯವಿಲ್ಲ. ಅದನ್ನು ಪ್ರತಿಯೊಬ್ಬನೂ ಜೀವನದಲ್ಲಿ ಇಟ್ಟುಕೊಳ್ಳಲೇಬೇಕು. ಮುಂದೆ ಹೋಗಬೇಕಾದರೆ ದಾಳ ಹಾಕಲೇಬೇಕು.  ಪುರುಷ ಪ್ರಯತ್ನ ಅವರವರ  ಕೈಯಲ್ಲಿದೆ.  ಆದರೆ ಫಲ ದೈವಾಧೀನ.  ಎಂದರೆ ಅವರ ಪೂರ್ವ ಕರ್ಮದ ಫಲ. ಎಷ್ಟೇ ಶ್ರದ್ಧೆಯಿಂದ ದಾಳ ಹಾಕಿದರೂ ಏನೇನು ಮನದಲ್ಲಿ ಅಂದುಕೊಂಡರೂ ನಡೆಯುವುದು ದಾಳಗಳ ಪ್ರಕಾರವೇ. ದೈವಬಲ ಹಾಗೂ ಪುರುಷ ಪ್ರಯತ್ನದಿಂದಲೇ ಜೀವನ ಸಾಗಬೇಕು. ಹೀಗೆ ಸಮಗ್ರ ಜೀವನವನ್ನು ಪರಿಚಯಿಸುವ ಆಟ ಇದಾಗಿದೆ. ಮನೋರಂಜನೆಯ ಜೊತೆ ಜೊತೆಗೆ ಆತ್ಮಾವಲೋಕನಕ್ಕೂ ಇಂತಹ ಭಾರತೀಯ ಆಟಗಳನ್ನು ಮಕ್ಕಳ ಜೊತೆಗೆ ಆಡಿ ನಲಿಯುತ್ತಾ ಜೀವನದ ಪಾಠ ಕಲಿಯೋಣ.


ಸೂಚನೆ: 22/12/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.