Tuesday, December 20, 2022

ಯಕ್ಷಪ್ರಶ್ನೆ - 13(Yaksha Prashne - 13)

 ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ – ೧೨ ದುಷ್ಟರ ಸ್ವಭಾವ ಯಾವುದು ?

ಉತ್ತರ -  ಪರರ ಪರಿವಾದ-ನಿಂದೆ.

ಬೇರೆಯವರನ್ನು ನಿಂದಿಸುವುದು ದುಷ್ಟರ ಸ್ವಭಾವವಾಗಿದೆ. ನೀಚಪುರುಷರು ಯಾವಾಗಲೂ ಮತ್ತೊಬ್ಬರನ್ನು ಹೀಯಾಳಿಸುವುದು, ಅಪಮಾನಿಸುವುದು, ಬೇರೆಯವರಲ್ಲಿ ಅಪವಾದವನ್ನು ಹೊರಿಸುವ ಕೆಲಸದಲ್ಲೇ ಮಗ್ನರಾಗಿರುತ್ತಾರೆ. ಸ್ತುತಿಗೆ ವಿರುದ್ಧವಾದ ಪದ ನಿಂದೆ. ಗುಣವಂತರಲ್ಲಿ ಇರುವ ಗುಣವನ್ನು ಎತ್ತಿ ಆಡುವುದು ಸ್ತುತಿಯೆನಿಸಿಕೊಳ್ಳುತ್ತದೆ. ಬೇರೆಯವರಲ್ಲಿನ ಗುಣವನ್ನು ಆಡುತ್ತಾ ಆಡುತ್ತಾ ಹೋದಾಗ ಆ ಗುಣಗಳು ನಮ್ಮಲ್ಲೂ ಜಾಗೃತವಾಗಲು ಆರಂಭವಾಗುತ್ತವೆ. ಕ್ರಮೇಣ ನಾವೂ ಕೂಡ ಗುಣವಂತರಾಗುತ್ತೇವೆ. ಇದು ಸ್ತುತಿಯ ಮಹಿಮೆಯಾದರೆ ಪರಿವಾದದ ಗುಣವು ಇದಕ್ಕೆ ವಿರುದ್ಧವಾದುದು. ಅಂದರೆ ಬೇರೆಯವರಲ್ಲಿದ್ದ - ಸಜ್ಜನರಲ್ಲಿದ್ದ ಗುಣವನ್ನು ಎತ್ತಿ ಹೇಳದಿರುವುದು ಅಥವಾ ದುಷ್ಟಜನರಲ್ಲಿದ್ದ ದೋಷವನ್ನು ಹೇಳದೆ, ಸದ್ಗುಣವನ್ನು ಅವರಲ್ಲಿಲ್ಲದಿದ್ದರೂ ಹೇಳುವುದು ಪರಿವಾದ ಅಥವಾ ನಿಂದಾ ಎನಿಸಿಕೊಳ್ಳುತ್ತದೆ. ಗುಣವನ್ನು ಹೇಳಿದರೆ ನಾವೂ ಗುಣವಂತರಾಗುವಂತೆ; ಗುಣವನ್ನು ಹೇಳದೆ ಇದ್ದರೆ ನಾವು ಆ ಗುಣಗಳಿಂದ ವಂಚಿತರಾಗುತ್ತಾ ಹೋಗುತ್ತೇವೆ. ಮತ್ತು ದುಷ್ಟರ ದೋಷೋತ್ಕೀರ್ತನದಿಂದ ನಮ್ಮಲ್ಲಿ ಆ ದೋಷಗಳು ಮೈಯಲ್ಲಿ ಆಡಲು ಆರಂಭವಾಗುತ್ತವೆ. ಇದೇ ನಿಂದೆಗೂ ಸ್ತುತಿಗೂ ಇರುವ ಅಂತರವಾಗಿದೆ. 

ಸಜ್ಜನರು ಬೇರೆಯವರಲ್ಲಿರುವ ಸಣ್ಣ ಪರಮಾಣು ಗುಣವನ್ನೂ  ಪರ್ವತದಷ್ಟು ಮಾಡಿ ಹೇಳುತ್ತಾರೆ. ಅದರಿಂದ ತಾವು ಹಿಗ್ಗುತ್ತಾರೆ. ಆದರೆ ಪರರ ನಿಂದೆ ಮಹಾಪಾಪ ಎಂದು ಪರಿಗಣಿತವಾಗಿದೆ. ದೊಡ್ದವರಲ್ಲಿರುವ ದೊಡ್ದತನವನ್ನು ಗೌರವಿಸದೆ ಇರುವುದು ನಿಂದೆಯೇ ಸರಿ. ಮತ್ತು ನೀಚರಲ್ಲಿರುವ ಸಣ್ಣತನವನ್ನು ಹಿರಿದಾಗಿ ಭಾವಿಸುವುದೂ ನಿಂದೆಯೇ. ನಮ್ಮ ಜೀವನವನ್ನು ಪಾವನವನ್ನಾಗಿಸುವ ಯಾವೆಲ್ಲಾ ವಿಷಯಗಳಿವೆಯೋ ಅವುಗಳನ್ನು ಗೌರವಿಸಬೇಕು. ಯಾರು ಗುರು, ದೇವ, ವೇದ ಮತ್ತು ಅದರ ವಿಸ್ತಾರವಾದ ಶಾಸ್ತ್ರಾದಿಗಳನ್ನು ಮತ್ತು ಪಂಡಿತರನ್ನು ನಿಂದಿಸುವರೋ ಅವರು ರೌರವನರಕವನ್ನು ಪಡೆಯುತ್ತಾನೆ ಎಂದು ನಿಂದೆಯಿಂದ ಆಗುವ ಪರಿಣಾಮವನ್ನು ಶಾಸ್ತ್ರದಲ್ಲಿ ಹೇಳಿದ್ದಾರೆ. ಪರರ ನಿಂದೆಯಿಂದ ಅವರ ಸ್ವಭಾವವೂ ಕೆಡುತ್ತಾ ಹೋಗುತ್ತದೆ ಮತ್ತು ದುಷ್ಟರಾದವರು ಯಾವಾಗಲೂ ಪರರ ಬಗ್ಗೆ ನಿಂದೆಯಲ್ಲೇ ಸದಾ ಪ್ರವೃತ್ತತಾಗಿರುತ್ತಾರೆ. ಈ ಎರಡೂ ಬಗೆಯಿಂದ ಅವರನ್ನು ದುಷ್ಟರು ಎನ್ನಬಹುದು. 

"ನೀಚಸಂಸರ್ಗನಿರತಾಃ ಪರವಿತ್ತಾಪಹಾರಕಾಃ । ಪರನಿಂದಾ-ಪರದ್ರೋಹ-ಪರಿವಾದಪರಾಃ ಖಲಾಃ॥" ಯಾವಾಗ ಬೇರೆಯವರನ್ನು ನಿಂದಿಸುತ್ತಾ ಹೋಗುವರೋ ಅಂತವರ ಮನಸ್ಸು ಕೂಡ ಇಲ್ಲಸಲ್ಲದ ದೋಷಗಳಿಂದ ಕೂಡುತ್ತಾ ಹೋಗಿ, ಅದರ ಪರಿಣಾಮವಾಗಿ ಅವರು ಕ್ರಮೇಣ ತಮ್ಮಂತವರ ಸಂಸರ್ಗವನ್ನೇ ಮಾಡುತ್ತಾ ಹೋಗುತ್ತಾರೆ. ಬೇರೆಯವರಿಗೆ ದ್ರೋಹವನ್ನು ಬಗೆಯುವಲ್ಲೇ ಅವರ ಕಾಲವು ಕಳೆಯುತ್ತದೆ. ಹೇಗೆ ಮತ್ತೊಬ್ಬರಿಗೆ ಮೋಸವನ್ನೋ, ವಂಚನೆಯನ್ನೋ ಮಾಡಬಹುದು ? ಎಂದು ಆಲೋಚಿಸುತ್ತಾರೆ. ಅಲ್ಲಸಲ್ಲದ ಕೆಟ್ಟವ್ಯಸನಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸ್ವತಃ ಶ್ರಮವಹಿಸಿ ದುಡಿದು ಅದರಿಂದ ಬಂದ ಸಂಪತ್ತಿನಿಂದಲೇ ಬದುಕಬೇಕೆಂಬ ವಿಚಾರ ಮಾಯವಾಗುತ್ತದೆ. ಎರಡುಹೊತ್ತಿನ ಊಟಕ್ಕೂ ಗತಿಯಿಲ್ಲದ ಪರಿಸ್ಥಿತಿ ಉದ್ಭವಿಸುತ್ತದೆ. ಆಗ ಅನಿವಾರ್ಯವಾಗಿ ಬೇರಯವರ ಸಂಪತ್ತನ್ನೇ ಲೂಟಿ ಮಾಡುವ ಪ್ರವೃತ್ತಿ ಬರುತ್ತದೆ. ವ್ಯಕ್ತಿಯ ಸಹಜ ಪ್ರವೃತ್ತಿಂದ ತಾನೆ ವ್ಯಕ್ತಿತ್ವವು ನಿರ್ಮಾಣವಾಗುವುದು! ಒಟ್ಟಾರೆ ಬೇರೆಯವನ್ನು ನಿಂದಿಸುತ್ತಾ ಹೋದಾಗ ಅವರು ದುಷ್ಟರಾಗುವರು ಎಂಬುದು ಧರ್ಮರಾಜನ ಉತ್ತರದಲ್ಲಿರುವ ಆಶಯ.  

ಸೂಚನೆ : 20/11/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.