ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್
ಪ್ರಶ್ನೆ – ೧೭ ಯಜ್ಞದಲ್ಲಿ ಹೇಳುವ ಅತಿಮುಖ್ಯವಾದ ಸಾಮ ಯಾವುದು ?
ಉತ್ತರ - ಪ್ರಾಣ.
ಇಲ್ಲಿ ಕೇಳುವ ಪ್ರಶ್ನೆಯು ಅತಿಗಹನವೂ ಮತ್ತು ಇಂದು ನಮಗೆ ಅತಿ ಅಪರಿಚಿತವೂ ಆದದ್ದಾಗಿದೆ. 'ಯಜ್ಞ' ಎಂಬ ಶಬ್ದವನ್ನು ಹೋಮ, ಹವನ ಇತ್ಯಾದಿ ಪದಗಳಿಂದ ಕೇಳಿದ್ದೇವೆ. ಆದರೆ 'ಯಜ್ಞ' ಎಂಬುದಕ್ಕೆ ಸರಿಯಾದ ರೀತಿಯಲ್ಲಿ ಪರಿಚಯ ಇಲ್ಲದಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಅಂತಹ ಯಜ್ಞದಲ್ಲಿ ಮುಖ್ಯವಾದ ಸಾಮ ಯಾವುದು? ಎಂಬ ಪ್ರಶ್ನೆಗೆ 'ಪ್ರಾಣ' ಎಂಬ ಉತ್ತರವು ನಮಗೆ ಎಷ್ಟರ ಮಟ್ಟಿಗೆ ಅರ್ಥವಾದೀತು? ಆದರೂ ಅದನ್ನು ತಿಳಿಯುವ ಮತ್ತು ತಿಳಿಸುವ ಪ್ರಯತ್ನ ಮಾಡುತ್ತೇನೆ.
ದೇವತೆಗಳನ್ನು ಉದ್ದೇಶವಾಗಿಟ್ಟುಕೊಂಡು ಹವಿಸ್ಸನ್ನು ಕೊಡುವ ಪ್ರಕ್ರಿಯೆಗೆ 'ಯಜ್ಞ' ಎಂಬುದಾಗಿ ಸಾಮಾನ್ಯವಾಗಿ ಕರೆದಿದ್ದಾರೆ. ಈ ಯಜ್ಞ ಎಂಬ ಶಬ್ದವು 'ಯಜ ದೇವತಾಪೂಜಾ-ಸಂಗತಿ -ಕರಣ- ದಾನೇಷು' ಎಂಬಂತೆ ದೇವತೆಗಳನ್ನು ಪೂಜಿಸುವುದು, ಸಂಗತಿ, ಕಾರ್ಯಕ್ಕೆ ಸಾಧನ, ದಾನ ಎಂಬ ಅರ್ಥದಲ್ಲಿ ಬಳಕೆಯಾಗಿದೆ. ನಾವಿಂದು ಹೋಮ, ಹವನ ಎಂಬ ಅರ್ಥದಲ್ಲಿ ಮಾತ್ರ ಬಳಸುತ್ತಿದ್ದೇವೆ. ಭಗವದ್ಗೀತೆಯಲ್ಲಿ ದ್ರವ್ಯಯಜ್ಞ, ತಪೋಯಜ್ಞ, ಯೋಗಯಜ್ಞ, ಸ್ವಾಧ್ಯಾಯ, ಜ್ಞಾನಯಜ್ಞ ಎಂದು ಐದು ಬಗೆಯ ಯಜ್ಞವನ್ನು ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ. ಈ ಎಲ್ಲಾ ಯಜ್ಞಗಳನ್ನು ಗಮನದಲ್ಲಿ ಇಟ್ಟುಕೊಂಡು ಯಕ್ಷನು ಧರ್ಮರಾಜನಿಗೆ ಈ ಪ್ರಶ್ನೆಯನ್ನು ಕೇಳಿರಬಹುದು ಎಂದು ಅನಿಸುತ್ತದೆ.
ಇನ್ನು 'ಸಾಮ' ಎಂದರೆ ಋಕ್, ಯಜುಸ್ಸು ಸಾಮ ಮತ್ತು ಅಥರ್ವ ಎಂಬ ನಾಲ್ಕು ವೇದಗಳಲ್ಲಿ ಒಂದು ಸಾಮ. ಒಂದು ಯಜ್ಞವನ್ನು ಮಾಡಲು ಈ ನಾಲ್ಕನ್ನೂ ಪ್ರತಿನಿಧಿಸಲು ಹೋತಾ, ಅಧ್ವರ್ಯು, ಉದ್ಗಾತಾ, ಬ್ರಹ್ಮ ಎಂಬ ನಾಲ್ಕು ಋತ್ವಿಜರನ್ನು ಆಮಂತ್ರಿಸಲಾಗುತ್ತದೆ. ಯಜ್ಞದಲ್ಲಿ ದೇವತೆಗಳನ್ನು ಆವಾಹನೆ ಮಾಡಲು ಮಂತ್ರಗಳನ್ನು ಬಳಸಲಾಗುತ್ತದೆ. ಆಗ ಋಕ್ ಮಂತ್ರಗಳನ್ನು ಉದ್ಗಾತೃವು ರಾಗವಾಗಿ ಹಾಡುತ್ತಾನೆ. ಇದಕ್ಕೆ 'ಸಾಮ' ಎನ್ನುತ್ತಾರೆ. ನಾವಿಂದು ಈ ವೇದಗಳನ್ನು ಕೇವಲ ಒಂದು ಶಬ್ದರಾಶಿ ಎಂದು ಮಾತ್ರ ಭಾವಿಸಿದ್ದೇವೆ. ಇದು ಕೇವಲ ಶಬ್ದರಾಶಿಯಲ್ಲ. ಅದೊಂದು ಜೀವನದ ಕ್ರಮವೂ ಹೌದು. ಹಾಗಾಗಿ ಇಲ್ಲಿ ಯಕ್ಷನು ಕೇಳುವ ಪ್ರಶ್ನೆ ಭೌತಿಕವಾದ ಹವನಕ್ಕೆ ಸಂಬಂಧಿಸಿದ್ದಲ್ಲ. ಮಂತ್ರಗಳಲ್ಲಿ ಯಾವುದು ಮುಖ್ಯ? ಯಾವುದು ಗೌಣ? ಎಂದು ವಿಭಾಗಿಸುವುದು ಸಾಧ್ಯವಿಲ್ಲ. ಎಲ್ಲಾ ಮಂತ್ರಗಳೂ ದಿವ್ಯವಾದವುಗಳೇ ಆಗಿವೆ. ಭಗವದ್ಗೀತೆಯಲ್ಲಿ ಹೇಳುವಂತೆ ಜ್ಞಾನಯಜ್ಞವನ್ನು ತಿಳಿಸುವ ಪ್ರಶ್ನೆ ಇದಾಗಿದೆ. ಬಹಳ ತಾತ್ತ್ವಿಕವಾದ ವಿಷಯದಿಂದ ಕೂಡಿದ ಪ್ರಶ್ನೆ. ಇಲ್ಲಿ ಆತ್ಮಯಜ್ಞಕ್ಕೆ ಮುಖ್ಯವಾದ ಸಾಮ ಪ್ರಾಣ. ಮುಖ್ಯವಾದ ಯಜುಸ್ಸು ಮನಸ್ಸು. "ಋಕ್ಕು ಮತ್ತು ವಾಕ್ಕು ಎರಡೂ ಆತ್ಮಸಾಧನೆಗೆ ಅತಿಮುಖ್ಯವಾದ ಅಂಗ" ಎಂಬ ವಿವರಣೆಯನ್ನು ಶ್ರೀರಂಗಪ್ರಿಯ ಸ್ವಾಮಿಗಳು ಕೊಟ್ಟಿರುವುದನ್ನು ನಾನಿಲ್ಲಿ ಉದ್ಧರಿಸಿದ್ದೇನೆ. ಮನಸ್ಸಿನ ಏಕಾಗ್ರತೆಯನ್ನು ಸಾಧಿಸಬೇಕಾದರೆ ಪ್ರಾಣದ ಮೇಲಿನ ನಿಯಂತ್ರಣದಿಂದ ಮಾತ್ರ ಸಾಧ್ಯ. ಮತ್ತು ಆತ್ಮಸಾಧನೆಯನ್ನು ಸಾಧಿಸಲು ಅತಿಮುಖ್ಯವಾದ ಮಂತ್ರಗಳೆಂದರೆ ಉಪನಿಷತ್ತಿನ ಮಂತ್ರಗಳು. ಯಕ್ಷನ ಪ್ರಶ್ನೆಗೆ ಸಂವಾದಿಯಾದ ಉಪನಿಷತ್ತಿನ ಮಂತ್ರವೊಂದು ಹೀಗಿದೆ " ವಾಗೇವರ್ಗ್ವೇದೋ ಮನೋ ಯಜುರ್ವೇದಃ ಪ್ರಾಣಃ ಸಾಮವೇದಃ" ಎಂದು. ಹೇಗೆ ನಮ್ಮ ನಿತ್ಯಜೀವನದಲ್ಲಿ ಪ್ರಾಣ ಮತ್ತು ಮನಸ್ಸಿನ ವ್ಯಾಪಾರವು ಅತಿಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಬಹಳ ಮಾರ್ಮಿಕವಾಗಿ ಮತ್ತು ತತ್ತ್ವಿಕವಾಗಿ ಇಲ್ಲಿ ಯಕ್ಷನ ಪ್ರಶ್ನೆಗೆ ಧರ್ಮರಾಜನು ಉತ್ತರಿಸಿದ್ದಾನೆ.
ಸೂಚನೆ : 25/12/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.