Sunday, December 4, 2022

ಯಕ್ಷಪ್ರಶ್ನೆ - 15(Yaksha Prashne - 15)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – ೧೪ ಕ್ಷತ್ತ್ರಿಯರಿಗೆ ಧರ್ಮವು ಯಾವುದು ?

ಉತ್ತರ - ಯಜ್ಞ.

ಇಲ್ಲಿ ಯಕ್ಷನು ಕೇಳುವ ಪ್ರಶ್ನೆ ಬಹಳ ವಿಚಿತ್ರವಾಗಿದೆ. ಕ್ಷತ್ತ್ರಿಯರಿಗೆ ಧರ್ಮ ಯಾವುದು? ಎಂದು. ಅದಕ್ಕೆ ಧರ್ಮಜನು ಕೊಟ್ಟ ಉತ್ತರ ಯಜ್ಞ ಎಂಬುದಾಗಿ. ಅಂದರೆ ಕ್ಷತ್ತ್ರಿಯನಿಗೆ ಯಜ್ಞವು ಹೇಗೆ ಧರ್ಮವಾಗುತ್ತದೆ? ಪ್ರಕೃತ ಧರ್ಮ ಎಂಬುದಕ್ಕೆ ಏನು ಅರ್ಥ? ಎಂಬ ವಿಷಯವನ್ನು ಇಲ್ಲಿ ಸ್ವೀಕರಿಸಲಾಗಿದೆ.  ಯಜ್ಞವು ಕ್ಷತ್ತ್ರಿಯನಿಗೆ ಅವನ ತನವನ್ನು ಉಳಿಸುವ ಕಾರ್ಯವಾಗಿದೆ. "ಧರ್ಮ ಎಂಬ ಶಬ್ದವು ಸಾಧ್ಯ ಮತ್ತು ಸಾಧನ ಎಂಬ ಎರಡು ಅರ್ಥವನ್ನು ಕೊಡುತ್ತದೆ" ಎಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ರಾಜನು ಯಾವ ಕರ್ತವ್ಯದ ಮೂಲಕ ಮಾತ್ರವೇ ರಾಜ್ಯ ರಕ್ಷಣೆಗೆ ಬೇಕಾದ ಸಜ್ಜನ್ನು ಮಾಡಿಕೊಳ್ಳಬಹುದು ಎಂದರೆ ಅದು ಸಾಧನಧರ್ಮವಾಗುತ್ತದೆ. ರಾಜನಿಗೆ ಬೇಕಾದ ಎಲ್ಲಾ ಸ್ವಭಾವ ಸ್ವರೂಪವನ್ನು ಸಾಧ್ಯಧರ್ಮ ಎಂದು ಹೇಳಬಹುದು. ರಾಜನಾದವನಿಗೆ ದೇಶದ ರಕ್ಷಣೆಯನ್ನು ಮಾಡುವುದು ಅವನ ಕರ್ತವ್ಯ. ಅವನ ಉಸಿರೇ ಅದು. ಕಾಳಿದಾಸನು ಅಭಿಜ್ಞಾನ ಶಾಕುಂತಲಾ ಎಂಬ ತನ್ನ ನಾಟಕದಲ್ಲಿ ಈ ಮಾತನ್ನು ಹೇಳುತ್ತಾನೆ. "ರಾಜ್ಯವು ತನ್ನ ಕೈಯಲ್ಲಿ ಹಿಡಿದ ಆತಪತ್ರ- ಕೊಡೆಯಂತೆ" ಎಂದು. ಇಲ್ಲಿ ಕಾಳಿದಾಸನು ಎರಡು ಮಾರ್ಮಿಕವಾದ ವಿಷಯವನ್ನು ಹೇಳುತ್ತಾನೆ. ಒಂದನೆಯದಾಗಿ ಬಿಸಿಲಿನ ತಾಪವನ್ನು ಪರಿಹರಿಸಲು ಛತ್ರಿಯನ್ನು ಧರಿಸುತ್ತಾರಷ್ಟೆ! ಆ ಛತ್ರಿಯು ಅವನಿಗೆ ಛಾಯೆಯನ್ನು ನೀಡಿ ತಂಪನ್ನು ನೀಡುತ್ತದೆ. ಅದರಿಂದ ಅವನ ಆಯಾಸ ಪರಿಹಾರವಾಗುತ್ತದೆ. ಆದರೆ ಆ ಕೊಡೆಯನ್ನು ತನ್ನ ಕೈಯ್ಯಲ್ಲೇ ಹಿಡಿಕೊಂಡಿದ್ದರಿಂದ ಅದರ ಭಾರವನ್ನೂ ಅವನೇ ಹೊರಬೇಕಲ್ಲ! ವಿಚಿತ್ರವೆಂದರೆ ಅದು ಅವನಿಗೆ ಭಾರವೆಂದೆನಿಸುವುದಿಲ್ಲ. ಭಾರವೆಂನಿಸಿದರೆ ಅವನಿಗೆ ಅದು ಒಳಿತಾಗದು. ರಾಜನಾದವನಿಗೆ ರಾಜ್ಯದ ಹೊಣೆಗಾರಿಕೆಯು  ಮನಸ್ಸಿಗೆ ಸಂತೋಷವನ್ನೇ ಕೊಡುತ್ತದೆ. ರಾಜ್ಯವನ್ನು ಅಥವಾ ರಾಜ್ಯದ ಹೊಣೆಗಾರಿಕೆಯನ್ನು ಈ ಹಿನ್ನೆಲೆಯಲ್ಲಿ ಸ್ವೀಕರಿಸಿದಾಗ ಮಾತ್ರವೇ ರಾಜನ ಧರ್ಮವಾಗುವುದು. ಇಂತಹ ಧರ್ಮವನ್ನು ಉಳಿಸಲು ಅತಿಮುಖ್ಯವಾದ ಸಾಧನವೆಂದರೆ ಯಜ್ಞ. 

ಯಜ್ಞವೆಂಬುದು ಕೇವಲ ರಾಜನ ಅಸ್ತಿತ್ವಕ್ಕೆ ಸಾಧನವಲ್ಲ. ಅದು ಸಮಸ್ತ ವಿಶ್ವದ ಒಳಿತಿನ ಸ್ರೋತಸ್ಸು. ಯಜ್ಞಕ್ಕೆ ಭಂಗ ಬಂದಲ್ಲಿ ಮಳೆ ಬೆಳೆಗಳಿಗೆ ಹಾನಿಯುಂಟಾಗಿ ರಾಜ್ಯದಲ್ಲಿ ದುರ್ಭಿಕ್ಷೆ ಉಂಟಾಗುತ್ತದೆ. ಇತಿಹಾಸ ಪುರಾಣಗಳಲ್ಲಿ ರಾಜನಾದವನು ಯಾವ ರೀತಿ ಯಜ್ಞಗಳನ್ನು ರಕ್ಷಣೆ ಮಾಡುತ್ತಿದ್ದನು? ಎಂಬುದಕ್ಕೆ ರಾಮಾದಿ ಅನೇಕ ಉದಾಹರಣೆಗಳಿವೆ. ಮಹರ್ಷಿ ವಿಶ್ವಾಮಿತ್ರರು ಯಜ್ಞರಕ್ಷಣೆಗಾಗಿಯೇ ರಾಮಲಕ್ಷ್ಮಣರನ್ನು ಕಾಡಿಗೆ ಕರೆದೊಯ್ಯುತ್ತಾರೆ. ಅಭಿಜ್ಞಾನ ಶಾಕುಂತಲಾ ನಾಟಕದಲ್ಲೂ ದುಷ್ಯಂತ ಮಹಾರಾಜನು ಅವನ ಬಳಿ ಬಂದ ಋಷಿಕುಮಾರರನ್ನು "ಯಜ್ಞಗಳೆಲ್ಲವೂ ಸಾಂಗೋಪಾಂಗವಾಗಿ ನೆರವೇರುತ್ತಿವೆಯೇ" ಎಂದು ವಿಚಾರಿಸುತ್ತಾನೆ.  ರಾಜನು ಮಹರ್ಷಿಗಳನ್ನು ಭೇಟಿ ಮಾಡಿ 'ತಮ್ಮ ಯಜ್ಞಕ್ಕೆ ಏನಾದರೂ ವಿಘ್ನಗಳು ಇವೆಯೇ?" ಎಂದು ವಿಚಾರಿಸುತ್ತಿದ್ದ. ಅಂದರೆ ಯಜ್ಞವು ರಾಜನನ್ನು ಮತ್ತು ರಾಜ್ಯವನ್ನು ರಕ್ಷಿಸುವ ಆಯುಧವಿದ್ದಂತೆ. ಭಗವದ್ಗೀತೆಯಲ್ಲಿ ಕೃಷ್ಣನು  ಯಜ್ಞದಿಂದ ಆಗುವ ಲಾಭದ ಪಟ್ಟಿ ಮಾಡುತ್ತಾನೆ. 'ಯಜ್ಞಾತ್ ಭವತಿ ಪರ್ಜನ್ಯಃ'- ಇತ್ಯಾದಿ. ಯಜ್ಞವು ದೇವತಾಶಕ್ತಿಗಳನ್ನು ಜಾಗ್ರತಗೊಳಿಸುತ್ತದೆ. ತನ್ಮೂಲಕ ವ್ಯಕ್ತಿಯಲ್ಲಿ ಸಾತ್ತ್ವಿಕಪ್ರವೃತ್ತಿಗೆ ಕಾರಣವಾಗುತ್ತದೆ. ಯಜ್ಞದಿಂದ ಮಾತ್ರವೇ ದೇಶ ಮತ್ತು ಪ್ರಜೆಗಳ ಪಾಲನೆ ಮತ್ತು ಪೋಷಣೆ. ಹಾಗಾಗಿ ಯಜ್ಞವೇ ರಾಜನ ಧರ್ಮ ಎಂಬ ಯುಧಿಷ್ಠಿರನ ಉತ್ತರ ಎಷ್ಟು ಚೇತೋಹಾರಿ!  

ಸೂಚನೆ : 04
/12/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.