Monday, December 19, 2022

ಯಕ್ಷಪ್ರಶ್ನೆ - 17(Yaksha Prashne - 17)


ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – ೧೬ ಕ್ಷತ್ತ್ರಿಯರಿಗೆ ನಿಂದಿತವಾದುದು ಯಾವುದು ?

ಉತ್ತರ - ಪರಿತ್ಯಾಗ.

ಈ ಹಿಂದಿನ ಲೇಖನದಲ್ಲಿ ಕ್ಷತ್ತ್ರಿಯನ ಕರ್ತವ್ಯವನ್ನು ವಿವರಸಿದೆ. ಪ್ರಜೆಗಳ ಪೋಷಣೆ ಮತ್ತು ರಾಜ್ಯದ ಸಂರಕ್ಷಣೆ ಎಂಬುದಾಗಿ ಸ್ಪಷ್ಟಪಡಿಸಿದೆ. ಇದಕ್ಕೆ ವಿರುದ್ಧವಾದ ಕಾರ್ಯವು ಕ್ಷತ್ತ್ರಿಯನಾದವನಿಗೆ ಶೋಭೆಯನ್ನು ತರುವುದಿಲ್ಲ ಎಂದರ್ಥ. ತನ್ನ ರಾಜ್ಯದಲ್ಲಿರುವ ಜನರನ್ನು ರಕ್ಷಿಸುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾದ ಕಾರ್ಯವೆಂದರೆ ಶರಣಾಗತರಿಗೆ ರಕ್ಷಣೆಯನ್ನು ಕೊಡುವುದು. ಶರಣಾಗತರನ್ನು ಸ್ವೀಕರಿಸದೇ, ಬಿಡುವುದು ಮೂರ್ಖರಾಜನ ಲಕ್ಷಣವಾಗುತ್ತದೆ. ರಕ್ಷಣೆಯನ್ನು ಬೇಡಿ ಬಂದ ಶತ್ರುರಾಜ್ಯದ ವ್ಯಕ್ತಿಯನ್ನೂ ಆದರಿಸಿದ ಉದಾಹರಣೆಗಳು ನಮ್ಮ ಪುರಾಣ ಇತಿಹಾಸಗಳಲ್ಲಿ ಸಾಕಷ್ಟು ಸಿಗುತ್ತವೆ.

ಕ್ಷತ್ತ್ರಿಯ ಶಬ್ದವೇ 'ಕ್ಷತಾತ್ ಕಿಲ ತ್ರಾಯತೇ- ಯಾರು ಆಘಾತಕ್ಕೊಳಗಾಗಿ ರಕ್ಷಣೆಯನ್ನು ಕೋರಿ ಬರುತ್ತಾರೋ ಅಂತವರಿಗೆ ನೆರವು ಕೊಡುವುದು' ಎಂಬರ್ಥವನ್ನು ತಿಳಿಸುತ್ತದೆ. ಕಷ್ಟಕ್ಕೆ ಸಿಲುಕಿದವನನ್ನು ಪರಿತ್ಯಜಿಸಿದರೆ ಅವನು ಹೇಗೆ ತಾನೆ ಕ್ಷತ್ತ್ರಿಯನಾಗಬಲ್ಲ? ಕ್ಷತ್ತ್ರಿಯಾಧಮನಷ್ಟೆ! 

ಅತ್ಯಂತ ಪ್ರಸಿದ್ಧವಾದ ಉದಾಹರಣೆಯೆಂದರೆ ವಿಭೀಷಣ-ಶರಣಾಗತಿ. ವಿಭೀಷಣನು ರಕ್ಕಸ ರಾವಣನ ಅನುಜ. ರಾವಣನಾದರೋ ರಾಮನ ಪ್ರಬಲ ಶತ್ರು. ಇಂಹತ ರಾವಣ ತಮ್ಮನಾದ ವಿಭೀಷಣನು ಅಣ್ಣನ ಅಸಂಗತ ಕಾರ್ಯವನ್ನು ನೋಡಿ ಬೇಸತ್ತು ರಾಜ್ಯವನ್ನು ಪರಿತ್ಯಾಗ ಮಾಡುವ ನಿರ್ಧಾರಕ್ಕೆ ಬರುತ್ತಾನೆ. ರಾಮನಿದ್ದಲ್ಲಿಗೆ ಬಂದು ತನ್ನ ಶರಣಾಗತಿಯ ಭಾವವನ್ನು ಪ್ರಕಟಪಡಿಸುತ್ತಾನೆ. ರಾಮನ ಪರಿವಾರದಲ್ಲಿ ವಿಭೀಷಣನನ್ನು ಸೇರಿಸಿಕೊಳ್ಳಬೇಕೇ? ಅಥವಾ ಬೇಡವೇ? ಎಂಬ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತದೆ. ಪರೆಂಗಿತಜ್ಞನಾದ ಶ್ರೀರಾಮನು ವಿಭೀಷಣನ ಆರ್ತಭಾವವನ್ನು - ಅಂತರ್ಭಾವವನ್ನು ಅರಿತು ತನ್ನ ಪಕ್ಷಕ್ಕೆ ಸೇರಿಸಿಕೊಂಡು ಆದರ್ಶ ರಾಜನಾದ ಶ್ರೀರಾಮ. 

ಇದೇ ರೀತಿ ಮಹಾಭಾರತದ ಯುದ್ಧದ ಸಂದರ್ಭದಲ್ಲೂ ಇಂತಹ ಒಂದು ಘಟನೆ ನಡೆಯುತ್ತದೆ. ಯುಯುತ್ಸುವು ಧೃತರಾಷ್ಟ್ರನ ಮಕ್ಕಳಲ್ಲಿ ಒಬ್ಬ. ಆತ ಯುದ್ಧಕ್ಕೂ ಪೂರ್ವದಲ್ಲಿ ಪಾಂಡವಪಕ್ಷಕ್ಕೆ ಬಂದು ಸೇರುತ್ತಾನೆ. ತನ್ನ ಪಿತೃಪಕ್ಷವನ್ನು ಬಿಟ್ಟು ದಾಯಾದಿಯ ಇನ್ನೊಂದು ಪಕ್ಷಕ್ಕೆ ಬಂದಿರುವ ಯುಯುತ್ಸುವನ್ನು ಪಾಂಡವರು ಶ್ರೀಕೃಷ್ಣನ ಅನುಮತಿಯನ್ನು ಪಡೆದು ತಮ್ಮ ಪಾಳಯಕ್ಕೆ ಸೇರಿಸಿಕೊಳ್ಳುತ್ತಾರೆ. 

ಇಂತಹದ್ದೇ ಒಂದು ಘಟನೆ ನಮ್ಮ ಇತಿಹಾಸದಲ್ಲಿ ಬರುತ್ತದೆ. ಕೆಳದಿ ರಾಜ್ಯದಲ್ಲಿ ರಾಣಿ ಚೆನ್ನಮ್ಮ ತನ ಪತಿಯಾದ ಸೋಮಶೇಖರನ ಮರಣಾನಂತರ ನಿಜಾರ್ಥದಲ್ಲಿ ಪಟ್ಟದರಸಿಯಾಗಿದ್ದಾಳೆ. ಇದೇ ಸಮಯದಲ್ಲಿ ಮೊಗಲರ ದೊರೆ ಔರಂಗಜೇಬನ ಉತ್ತರಭಾರತದಲ್ಲಿ ಆಧಿಪತ್ಯ. ಇತ್ತ ಮಹಾರಾಷ್ಟ್ರದಲ್ಲಿ ಶಿವಾಜಿಯ ಮಗ ರಾಜಾರಾಮನು ತಂದೆಯ ಅನಂತರ ರಾಜ್ಯವನ್ನು ನೋಡಿಕೊಳ್ಳುತ್ತಿದ್ದ. ಔರಂಗಜೇಬನಿಂದ ಸೋಲನ್ನು ಕಂಡ ರಾಜಾರಾಮನು ರಕ್ಷಣೆಯನ್ನು ಕೋರಿ ಚೆನ್ನಮನ ಬಳಿ ಬರುತ್ತಾನೆ. ಮೊಗಲ ಬಾದಷಾನು ರಾಜಾರಾಮನನ್ನು ಕರೆತರಲು ದೂತನನ್ನು ಚೆನ್ನಮ್ಮನ ಬಳಿ ಕಳಿಸಿಕೊಡುತ್ತಾನೆ. ಆಗ ಚೆನ್ನಮ್ಮ ಹೇಳುವ ಮಾತು "ಶರಣಾಗತರನ್ನು ರಕ್ಷಿಸುವುದು ನಮ್ಮ ಧರ್ಮ" ಎಂದು ಹೇಳಿ ರಾಜಾರಾಮನಿಗೆ ರಕ್ಷಣೆಯನ್ನಿತ್ತಳು. ಯಾರು ತಮ್ಮ ಬಳಿ ಹೀಗೆ ಸಹಾಯವನ್ನು ಕೋರಿ ಬರುತ್ತಾರೋ ಅವರಿಗೆ ಆಶ್ರಯವನ್ನು ಕೊಡುವುದು ರಾಜನ ಆದ್ಯ ಕರ್ತವ್ಯವಾಗಿರುತ್ತದೆ. ಅಂತಹ ಯಾರನ್ನೂ ಬಿಟ್ಟುಕೊಡಬಾರದು. ಅಂತಹ ರಾಜನೇ ಉತ್ತಮ ರಾಜನಾಗಬಲ್ಲ ಎಂಬುದು ಈ ಪ್ರಶ್ನೋತ್ತರದ ಆಶಯ.   

ಸೂಚನೆ : 18/12/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.