ಪ್ರಶ್ನೆ – ೧೩ ಕ್ಷತ್ತ್ರಿಯರಿಗೆ ದೇವತ್ವವನ್ನು ಉಂಟುಮಾಡುವುದು ಯಾವುದು ?
ಉತ್ತರ - ಧನುರ್ವಿದ್ಯೆಯು ಕ್ಷತ್ತ್ರಿಯರಿಗೆ ದೇವತ್ವವನ್ನುಂಟುಮಾಡುತ್ತದೆ.
ಕ್ಷತ್ತ್ರಿಯನಾದವನು ತನ್ನ ತನವನ್ನು ಇನ್ನೂ ಮೇಲೆಕ್ಕೆ ಎತ್ತುವ ಯಾವುದಾದರೂ ವಿದ್ಯೆ ಇದೆಯೆಂದಾದರೆ ಅದುವೇ ಧನುರ್ವಿದ್ಯೆ. ಮನುಷ್ಯನಾದವನು ದೇವತ್ವವನ್ನು ಹೊಂದುವುದು ಹೇಗೆ ಎಂಬುದನ್ನು ಈ ಹಿಂದಿನ ಲೇಖನದಲ್ಲಿ ವಿವರಿಸಿದ್ದೇನೆ. ಈ ಪ್ರಪಂಚಕ್ಕೆ ಬಂದಮೇಲೆ ಪ್ರತಿಯೊಬ್ಬರಿಗೂ ಒಂದೊಂದು ವಿಶೇಷ ಕಾರ್ಯ-ಕರ್ತವ್ಯವು ವಿಹಿತವಾಗಿರುತ್ತದೆ. ಕ್ಷತ್ತ್ರಿಯನಿಗೆ ಯುದ್ಧವೇ ಕರ್ತವ್ಯ. ಅವನು ಯುದ್ಧಕ್ಕಾಗಿಯೇ ಹುಟ್ಟಿದವನು. ಕ್ಷತ್ತ್ರಿಯನಾಗಿ ಹುಟ್ಟಿದ್ದರಿಂದಲೇ ಯುದ್ಧವನ್ನು ಮಾಡಬೇಕು. ಭಗವದ್ಗೀತೆಯಲ್ಲಿ ಈ ಬಗ್ಗೆ ನಮಗೆ ಸ್ಪಷ್ಟತೆ ಸಿಗುತ್ತದೆ. ಅರ್ಜುನನು ಯುದ್ಧಭೂಮಿಗೆ ಅಂದು ಯುದ್ಧವನ್ನೇ ತ್ಯಜಿಸುವುದಾಗಿ ಶ್ರೀಕೃಷ್ಣನ ಬಳಿ ಹೇಳುತ್ತಾನೆ. ಸಕಾಲ ದೇಶದಲ್ಲಿ ತನ್ನ ಕರ್ತವ್ಯಪ್ರಜ್ಞೆಯನ್ನು ಮರೆಯುತ್ತಾನೆ. ಆಮೇಲೆ ಶ್ರೀಕೃಷ್ಣನು ಕರ್ಮ ಮತ್ತು ಕರ್ಮಸನ್ಯಾಸದ ಬಗ್ಗೆ ತುಂಬಾ ವಿವರವಾಗಿ ಹೇಳಿ "ನಿನ್ನ ಹೃದಯ ದೌರ್ಬಲ್ಯವನ್ನು ಬಿಟ್ಟು ಯುದ್ಧಕ್ಕಾಗಿ ಸನ್ನದ್ಧನಾಗು" ಎಂದು ಎಚ್ಚರಿಸುತ್ತಾನೆ. ಹಾಗಾಗಿ ಯುದ್ಧವು ಎದುರು ಬಂದಾಗ ಯುದ್ಧವನ್ನು ಮಾಡುವುದೇ ಕ್ಷತ್ತ್ರಿಯನ ಧರ್ಮವಾಗಿದೆ. ಆದ್ದರಿಂದ ಕ್ಷತ್ತ್ರಿಯನ ಕರ್ತವ್ಯ ಅದುವೇ ಆಗಿದೆ. ಈ ಹಿಂದಿ ಹೇಳಿದಂತೆ ಕ್ಷತ್ತ್ರಿಯ ಎಂಬುದು ಮನುಷ್ಯನಲ್ಲಿ ಮಾತ್ರ ಇರುವ ವ್ಯವಸ್ಥೆಯಲ್ಲ. 'ಕ್ಷತ್ತ್ರಿಯ' ಎಂಬ ಶಬ್ದಕ್ಕೆ ಕಾಲಿದಾಸ ಮಹಾಕವಿಯು ವಿವರಿಸುವಂತೆ 'ಕ್ಷತಾತ್ ಕಿಲ ತ್ರಾಯತೇ' ಎಲ್ಲಿ ಕ್ಷತಿ -ಗಾಯ ವಾಗಿರುತ್ತದೋ ಅಲ್ಲಿ ಅದನ್ನು ರಕ್ಷಿಸುವ ಜವಾಬ್ದಾರಿ ಈತನಿಗೇ ಇರುವಂತಹದ್ದು. ಆದ ತೊಂದರೆಯನ್ನು ಪರಿಹರಿಸುವುದು ಒಂದಾದರೆ, ತೊಂದರೆ ಆಗದಂತೆ ನೋಡಿಕೊಳ್ಳುವುದೂ ಅವನದ್ದೇ ಹೊಣೆಗಾರಿಕೆ.
ಬೀಜಕ್ಕೆ ಕವಚವಿರುವುದನ್ನು ಗಮನಿಸಿರಬಹುದು. ಕವಚವು ಆ ಬೀಜವನ್ನು ಕೆಡದಂತೆ ರಕ್ಷಿಸುತ್ತದೆ. ಇದು ಬೀಜಕ್ಕಿರುವ ರಕ್ಷಣೀಯವಾದ ವಿಷಯ. ಕವಚದ ಭಾಗವನ್ನು ಕ್ಷತ್ತ್ರಿಯ ಎನ್ನಬಹುದು. ಅಂತೆಯೇ ನಮ್ಮ ಶರೀರದಲ್ಲಿ ತಲೆಯ ಭಾಗವನ್ನು ಬ್ರಾಹ್ಮಣ ಎಂದರೆ ಭುಜದ ಭಾಗವನ್ನು ಕ್ಷತ್ತ್ರಿಯ ಎನ್ನುತ್ತಾರೆ. ಏಕೆಂದರೆ ರಕ್ಷಣೀಯ ವಿಷಯ ಶಿರಸ್ಸು ತಾನೆ! ಯಾರಾದರೂ ನಮ್ಮ ಕಡೆಗೆ ಕಲ್ಲನ್ನು ಎಸೆದಾಗ ತಲೆಯನ್ನು ಒಡ್ಡುವುದಿಲ್ಲ. ತಲೆಯನ್ನು ರಕ್ಷಿಸಿಕೊಳ್ಳಲು ಕೈಯ್ಯನ್ನು ಮುಂದೆ ಮಾಡುತ್ತೇವೆ ಅಲ್ಲವೇ. ಮತ್ತು ಸತ್ತ್ವ ರಜಸ್ಸು ಮತ್ತು ತಮಸ್ಸು ಎಂಬ ಮೂರು ಗುಣಗಳಲ್ಲಿ ರಜಸ್ಸು ಪ್ರಧಾನವಾದ ಸೃಷ್ಟಿ ಕ್ಷತ್ತ್ರಿಯ. ಕೊನೆಗೆ ಉಳಿಯಬೇಕಾದ ಅಥವಾ ಉಳಿಯುಂತಹ ಗುಣವೇ ಸತ್ತ್ವ. ಹೀಗೆ ಎಲ್ಲೆಲ್ಲಿ ರಕ್ಷಣೆಯ ವಿಷಯ ಬರುತ್ತದೆಯೋ ಅದನ್ನೆಲ್ಲವನ್ನು ಕ್ಷತ್ತ್ರಿಯ ಎಂದೇ ಕರೆಯಬಹುದು. ಈ ಸೃಷ್ಟಿಯ ಪ್ರತಿಯೊಂದು ವಸ್ತುವೂ ತ್ರಿಗುಣಗಳ ಯಾವುದೋ ಒಂದು ಬಗೆಯ ಕಾಂಬಿನೇಷನ್ನಿಂದಲೇ ಆಗಿರುವಂತಹದ್ದು. ಅವುಗಳಲ್ಲಿ ಯಾವ ಗುಣ ಪ್ರಧಾನವಾಗಿ ಕಂಡುಬರುವುದೋ ತಾದಕ್ಕೆ ತಕ್ಕಂತೆ ವಸ್ತುವಿಗೆ ಬ್ರಾಹ್ಮನ ಕ್ಷತ್ತ್ರಿಯ ವೈಶ್ಯ ಶೂದ್ರ ಎಂಬ ವುಭಾಗ ಬಂದಿದೆ. ಹಾಗಾಗಿ ಮೊಟ್ಟಮೊದಲು ಬ್ರಹ್ಮನು ಸೃಷ್ಟಿಯನ್ನು ಮಾಡುವಾಗಲೇ ಹೀಗೆ ಸೃಷ್ಟಿಮಾಡಿದ್ದಾನೆ. ಇದಕ್ಕೆ ಭಗವದ್ಗೀತೆಯಲ್ಲೂ ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ' ಎಂದು ಶ್ರೀಕೃಷ್ಣನು ಹೇಳುವ ಮಾತು ಸಂಗತವಾಗುವುದು.
ಸೂಚನೆ : 27/11/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.