Thursday, November 10, 2022

ಯಾವುದು ಸುಖಮಯವಾದ ಜೀವನ (Yavudu Sukhamayavada Jivana)

ಲೇಖಕಿ: ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)




ಒಬ್ಬ ದರೋಡೇಕೋರ ಜನರನ್ನು ಹಿಂಸಿಸಿ ಅವರಲ್ಲಿರುವ ವಸ್ತುಗಳನ್ನು ಅಪಹರಿಸಿ ಜೀವನವನ್ನು ನಡೆಸುತ್ತಿದ್ದ.  ಹೀಗೆ ಸಾಗುತ್ತಿರುವಾಗ, ಒಬ್ಬ ಸಾಧುಗಳು ಅವನಿಗೆದುರಾಗಿ 'ಏಕಪ್ಪಾ ಈ ರೀತಿಯಾಗಿ ಮಾಡುತ್ತಿರುವೆ' ಎಂದು ಕೇಳಿದಾಗ 'ನಾನು ಸುಖವಾಗಿರಬೇಕು, ಅದಕ್ಕಾಗಿ' ಎಂದು ಉತ್ತರಿಸಿದ. ಆಗ ಸಾಧುಗಳು, ನೀನು ಸುಖವಾಗಿರಬೇಕಾದರೆ ಈ ರೀತಿ ಬೇರೆಯವರ ವಸ್ತುಗಳನ್ನು ಕಿತ್ತು ಕೊಳ್ಳುವ ಬದಲು, ಹೀಗೆ ಮಾಡು-ನಾನೊಂದು ಜಾಗ ಹೇಳುತ್ತೇನೆ, ಅಲ್ಲಿ ಎಂದೆಂದಿಗೂ ಬತ್ತದ ಐಶ್ವರ್ಯದ ನಿಧಿ ಇದೆ; ಅಲ್ಲೊಮ್ಮೆ ದರೋಡೆ ಮಾಡು; ನೀನು ಜೀವನ ಪೂರ್ತಿ ಸುಖವಾಗಿರಬಹುದು. ಆದರೆ ಅಲ್ಲಿರುವ ಸಾಧು ಸಂತರು ಆ ನಿಧಿಯನ್ನು ಕಾಯುತ್ತಿದ್ದಾರೆ.  ನೀನು ಮೊದಲು ಅವರ ಮನಸ್ಸನ್ನು ಒಲಿಸಿಕೊಳ್ಳಬೇಕು.  ಆಗ ಮಾತ್ರ ನಿನಗೆ ಆ ನಿಧಿಯ ಬಳಿಗೆ ಹೋಗಲು ಸಾಧ್ಯ ಎಂದು ಎಚ್ಚರಿಕೆಯನ್ನೂ ನೀಡಿ ಕಳುಹಿಸಿದರು.


 ಅದೊಂದು ಬೆಟ್ಟದ ತಪ್ಪಲು- ಅಲ್ಲಿ ಅನೇಕ ಸಾಧು ಸಂತರು ಜಪ,ತಪ, ಧ್ಯಾನ,ಸದ್ವಿಚಾರ ಚಿಂತನೆ ಇತ್ಯಾದಿಗಳನ್ನೊಳಗೊಂಡ ದಿನಚರ್ಯೆ ನಡೆಸುತ್ತಿದ್ದರು.  ಆಗ ಅವರ ಮನಸ್ಸನ್ನು ಒಲಿಸಿಕೊಳ್ಳಲು ನನಗೂ ಅವರಂತೆಯೇ ಇರಲು ಇಚ್ಛೆ ಇದೆಯೆಂದು ಅವರಿಗೆ ತಿಳಿಸಿದರೆ ನನ್ನನ್ನು ಅವರ ಬಳಿ ಸೇರಿಸಿಕೊಳ್ಳುತ್ತಾರೆ; ಆಗ ಅವರನ್ನು ಮೋಸಗೊಳಿಸಿ ಆ ನಿಧಿಯನ್ನು ಅಪಹರಿಸಬಹುದೆಂದು ಯೋಚಿಸಿ ಅವರ ಬಳಿ ಹೋಗಿ ಪ್ರಾರ್ಥಿಸಿಕೊಂಡ. ಅವರೂ ಕೂಡ ಕರುಣೆಯಿಂದ ತಮ್ಮ ಸಂಗಡ ಇವನನ್ನು ಸೇರಿಸಿಕೊಂಡು ತಮ್ಮ ದಿನಚರಿಯನ್ನು ಇವನಿಗೆ ಅಭ್ಯಾಸ ಮಾಡಿಸುತ್ತಾ ಬಂದರು.  ಮೊದ ಮೊದಲು ಇವನಿಗೆ ತುಂಬಾ ಕಷ್ಟವಾಯಿತು.  ಆದರೆ ಕಾಲ ಕಳೆದಂತೆ ಮಹಾತ್ಮರ ಸಾನ್ನಿಧ್ಯದಿಂದ ಇವನ ಮನಸ್ಸೂ ಪರಿವರ್ತನೆಗೊಂಡು ಅವರಂತೆಯೇ ಬಾಳಲು ಶಕ್ತನಾದ;  ಹಾಗೆಯೇ ತನ್ನೊಳಗೇ ಬೆಳಗುತ್ತಿರುವ ಸುಖದ ಸಾಗರವನ್ನು ಕಂಡು ಆನಂದ ಬಾಷ್ಪಗಳನ್ನು ಸುರಿಸಿ ತನ್ನನ್ನು ಇಲ್ಲಿಗೆ ಕಳುಹಿಸಿದ ಸಾಧುವಿನ ಸತ್ಯವಚನವನ್ನು ನೆನೆದು ಮನದಲ್ಲಿ ಅವನಿಗೆ ವಂದಿಸಿದ.


ಸಾಮಾನ್ಯರ ದೃಷ್ಟಿಯಲ್ಲಿ, ಜೀವನವೆಂದರೆ, ತಾಯಿಯ ಗರ್ಭದಿಂದ ಜನನವಾಗಿ,  ಶರೀರ ಅವಸಾನವಾಗುವವರೆಗೆ ಮಾತ್ರ.  ಹಾಗಾಗಿ  ಈ ಶರೀರವಿದ್ದಾಗ ಎಷ್ಟೆಷ್ಟು ಭೌತಿಕವಾದ ಸುಖಗಳನ್ನು ಅನುಭವಿಸಲು ಸಾಧ್ಯವೋ, ಅವೆಲ್ಲವನ್ನೂ ಪಡೆಯಲು ಹಂಬಲಿಸುವುದನ್ನು; ಅದಕ್ಕಾಗಿ ನಿರಂತರ ಪ್ರಯತ್ನಶೀಲರಾಗಿರುವುದನ್ನು ಕಾಣುತ್ತೇವೆ. ಆದರೆ ಮಹರ್ಷಿಗಳ ದೃಷ್ಟಿಯಲ್ಲಿ, ಜೀವನದ ವ್ಯಾಪ್ತಿ ಸೃಷ್ಟಿಮೂಲನಾದ ಭಗವಂತನಿಂದ ಹೊರಟ ಜೀವ ಪ್ರಕೃತಿಯಲ್ಲಿ ತನ್ನ ಯಾತ್ರೆಯನ್ನು ಮುಗಿಸಿ ಮತ್ತೆ ಹೋಗಿ ಭಗವಂತನನ್ನು ಸೇರುವವರೆಗೂ ಇರುತ್ತದೆ. ಮಹರ್ಷಿಗಳು  ಜೀವನವನ್ನು ಭೌತಿಕ,ದೈವಿಕ  ಹಾಗೂ ಆಧ್ಯಾತ್ಮಿಕವೆಂಬುದಾಗಿ ಮೂರು ಸ್ತರಗಳಾಗಿ ವಿಂಗಡಿಸಿದ್ದಾರೆ.


 ಈ ಪಂಚಭೂತಾತ್ಮಕವಾದ ಶರೀರವನ್ನು ಅವಲಂಬಿಸಿ ಮಾಡುವ ಜೀವನವು ಭೌತಿಕ ಜೀವನವಾದರೆ, ಶರೀರದ್ಲಲಿರುವ ಇಂದ್ರಿಯಗಳಿಗೆ ಶಕ್ತಿಯನ್ನು ನೀಡಿ ಅವುಗಳು ಕಾರ್ಯಪ್ರವೃತ್ತವಾಗುವಂತೆ ಮಾಡುತ್ತಿರುವವರು ಇಂದ್ರಿಯಗಳ ಹಿಂಬದಿಯಲ್ಲಿ ಶಕ್ತಿರೂಪವಾಗಿ ಬೆಳಗುತ್ತಿರುವ ದೇವತೆಗಳು.  ಆ ದೇವತೆಗಳ ಪ್ರೀತ್ಯರ್ಥವಾಗಿ, ಆರಾಧನೆಗಳ, ಯ ಜ್ಞಯಾಗಾದಿಗಳ ಮೂಲಕ ಮಾಡುವ ಜೀವನ ದೈವಿಕ ಜೀವನ.  ಹಾಗೆಯೇ ಎಲ್ಲಾ ದೇವತೆಗಳಿಗೂ ಚೈತನ್ಯವನ್ನು ನೀಡಿ  ಮೂಲದಲ್ಲಿ ಬೆಳಗುತ್ತಿರುವ ಎಲ್ಲಾ ಸುಖ ಸಂತೋಷಗಳಿಗೂ ಮೂಲಸ್ರೋತಸ್ಸಾಗಿರುವ ಪರಮಾತ್ಮನನ್ನು ಧ್ಯಾನಾದಿಗಳ ಮೂಲಕ ಸಾಕ್ಷಾತ್ಕರಿಸಿಕೊಂಡು ಅವನೊಂದಿಗೊಡಗೂಡಿ ಆ ಆನಂದದ ಮೂಲಕ ಮಾಡುವ ಯೋಗಿಗಮ್ಯವಾದ ಜೀವನವೇ ಆಧ್ಯಾತ್ಮಿಕ ಜೀವನ.  ಈ ಮೂರೂ ಸ್ತರದ ಜೀವನವನ್ನು ಅನುಭವಿಸಿ ಆಸ್ವಾದಿಸುವ ಸಾಮರ್ಥ್ಯ ಮಾನವಶರೀರಕ್ಕಿದೆ.


ಮಹರ್ಷಿಗಳು ಐಂದ್ರಿಯಕ ಸುಖಭೋಗಗಳನ್ನು ಕಡೆಗಣಿಸಲಿಲ್ಲ; ಅವುಗಳನ್ನು ತ್ಯಜಿಸಿ ಎಂಬುದಾಗಿಯೂ ಅಭಿಪ್ರಾಯಪಟ್ಟಿಲ್ಲ. ಇಂದ್ರಿಯಗಳೂ ಈಶ್ವರದತ್ತವೇ ಆಗಿವೆ.  ಧರ್ಮಕ್ಕೆ ಅವಿರೋಧವಾದ ಇಂದ್ರಿಯ  ಸುಖಗಳನ್ನು ಅನುಭವಿಸಬೇಕು.  ಆದರೆ ಜೀವನವು ಕೇವಲ ಭೋಗದಲ್ಲಿಯೇ ನಿಲ್ಲದೇ ಯೋಗದಲ್ಲಿ (ಪರಮಾತ್ಮನಲ್ಲಿ ಒಂದಾಗುವಿಕೆ)


ಪರ್ಯವಸಾನವಾಗಬೇಕೇಂಬುದೇ ಅವರ ಆಶಯವಾಗಿದೆ, ಏಕೆಂದರೆ ಸದಾ ಸುಖವನ್ನೇ ಅಪೇಕ್ಷಿಸುವ ಜೀವಿಗೆ ಶಾಶ್ವತವಾದ ಸುಖಾನುಭವವಾಗುವುದು ಪರಮಾತ್ಮನ ಮಡಿಲಿನಲ್ಲಿಯ. "ಭೂಮಿಗೆ ದಿನಂಪ್ರತಿ ತನ್ನ ಸುತ್ತಲೂ ಒಂದು ಬಾರಿ ಸುತ್ತುವ ಯೋಗ್ಯತೆ ಇರುವಂತೆಯೇ, ವರ್ಷಕ್ಕೊಮ್ಮೆ ಸೂರ್ಯನ ಸುತ್ತಲೂ ಸುತ್ತುವ ಯೋಗ್ಯತೆಯೂ ಇದೆಯಲ್ಲವೇ? ಹಾಗೆಯೇ ಲೋಕಯಾತ್ರೆಯೂ ನಡೆಯಬೇಕು; ಜೊತೆಗೆ ಆತ್ಮಯಾತ್ರೆಯೂ ನಡೆಯಬೇಕು" ಎಂಬ ಶ್ರೀರಂಗ ಮಹಾಗುರುಗಳ ವಾಣಿಯಂತೆ ಐಹಿಕ ಸುಖದ ಜೊತೆಗೆ ಮಹಾತ್ಮರ ಮಾರ್ಗದರ್ಶನದಿಂದ ಪಾರಮಾರ್ಥಿಕವಾದ ಸುಖವನ್ನೂ ಹೊಂದಲು ಯತ್ನಿಸೋಣ.


ಸೂಚನೆ: 10/11/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.