Thursday, November 24, 2022

ಅಷ್ಟಾಕ್ಷರೀ​ - 23 ದಶಕಂ ಧರ್ಮಲಕ್ಷಣಮ್ (Astakshara Darshana 23 Dashakam Dharma-lakshanam)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಮಾವಿನ ಹಣ್ಣನ್ನುಕೊಳ್ಳಲು ಹಣ್ಣಿನಂಗಡಿಗೆ ಹೋಗುತ್ತೇವೆ. ಹಣ್ಣು ಕೊಂಡುಕೊಳ್ಳುವ ಮುಂಚೆ ಮಾಲು ಹೇಗಿದೆಯೆಂಬ ಲೆಕ್ಕ ಬೇಕಾಗುವುದಲ್ಲವೆ? ಅದರ ಬಣ್ಣ ಮೊದಲ ಅಳತೆ. ಕೊಳೆಯಲಾರಂಭಿಸಿದ್ದರೆ ಇರುವ ಬಣ್ಣವೇ ಬೇರೆ. ಇನ್ನೂ ಕಾಯಿಕಾಯಿಯಾಗಿದ್ದರೆ ಇರುವ ಬಣ್ಣವೇ ಬೇರೆ. ಕೆಲವೊಮ್ಮೆ ದೋರುಗಾಯಿಗೆ ಸಹ ಒಳ್ಳೆಯ ಬಣ್ಣ ಬಂದಿರುವುದುಂಟು! ಎಂದೇ ಬರೀ ಬಣ್ಣವೊಂದೇ ಅಳತೆಯೇ? ಹೊಳಪೂ ಮುಖ್ಯವಾಗುತ್ತದೆ. ರಸ್ಯವಾದ ಹಣ್ಣಿನ ಕಾಂತಿಯೇ ಬೇರೆ. ಚರ್ಮವು ಸುಕ್ಕುಗಟ್ಟುತ್ತಿವರುವ ಫಲದ ಪರಿಯೇ ಬೇರೆ. ಸ್ಪರ್ಶದಿಂದಲೂ ತಿಳಿಯುವ ಅಂಶಗಳುಂಟು. ಮೃದುವೇ, ಅಲ್ಲವೆ? ಅಲ್ಲೂ ಏಕರೂಪವಾದ ಮೃದುತ್ವವೇ, ಅಲ್ಲಲ್ಲಿ ಸ್ವಲ್ಪ ಗಟ್ಟಿಯಾಗಿದೆಯೇ? - ಎಂದೆಲ್ಲಾ ನೋಡುವುದುಂಟು. ಹಾಗೆಯೇ ಅದರ ಸುಗಂಧವನ್ನೂ. ಹೀಗೆ ದರ್ಶನ-ಸ್ಪರ್ಶನ-ಘ್ರಾಣಗಳಿಂದ ಮೊದಲಳೆದುಕೊಂಡದ್ದು ಸರಿಯೋ ಇಲ್ಲವೋ ಎಂಬುದನ್ನು ಹಣ್ಣನ್ನು ಆಸ್ವಾದಿಸುವಾಗಿನ ರುಚಿಯೂ, ಆಮೇಲಿನ ಜೀರ್ಣಕ್ರಿಯೆಯೂ ಖಚಿತಪಡಿಸುತ್ತವೆ.


ಹೀಗೆ ಕೆಲವು ಬಾಹ್ಯಲಕ್ಷಣಗಳನ್ನು ಆಧರಿಸಿ ಒಳಗಣ ಸತ್ತ್ವದ ಬಗೆಯನ್ನು ಅರಿಯುವುದಾಗುತ್ತದೆ. ಕಣ್ಣಿಗೆ ಕಾಣುವ ಒಂದು ಹಣ್ಣು ಚೆನ್ನಾಗಿದೆಯೇ ಇಲ್ಲವೇ? - ಎಂಬುದಕ್ಕೇ ಹೀಗೆ ನಾನಾಪರೀಕ್ಷೆಗಳಾಗುವಲ್ಲಿ, ಕಣ್ಣಿಗೆ ಕಾಣದ ಧರ್ಮವೆಂಬುದು ಹೇಗಿರುವುದೆಂಬುದನ್ನು ಅಳೆದುಕೊಳ್ಳಲೂ ನಾನಾಲಕ್ಷಣಪರಿಜ್ಞಾನವು ಬೇಕಷ್ಟೆ. ಅಂತಹ ಹತ್ತು ಲಕ್ಷಣಗಳನ್ನು ಮನುವು ಉಲ್ಲೇಖಿಸುತ್ತಾನೆ. ಅವಿವು: ಧೃತಿ, ಕ್ಷಮೆ, ದಮ, ಅಸ್ತೇಯ, ಶೌಚ, ಇಂದ್ರಿಯನಿಗ್ರಹ, ಧೀ, ವಿದ್ಯೆ, ಸತ್ಯ, ಮತ್ತು ಅಕ್ರೋಧ.


ಇವಲ್ಲಿ ಕೆಲವು ಪದಗಳು ಪ್ರಸಿದ್ಧ; ಕೆಲವು ಭಾಗಶಃ ಸ್ಪಷ್ಟ. ಆದ್ದರಿಂದ ಅವನ್ನು ಸಂಕ್ಷೇಪವಾಗಿಯಾದರೂ ಒಮ್ಮೆ ಅವಲೋಕಿಸುವುದು ಅವಶ್ಯವಾಗುವುದು. ಕುಲ್ಲೂಕಭಟ್ಟನ ವ್ಯಾಖ್ಯೆಯ ಮೇರೆಗೆ ಇಲ್ಲಿ ವಿವರಣೆಯಿತ್ತಿದೆ.


ಧೃತಿಯೆಂದರೆ ಸಂತೋಷ. ಹಿಡಿದ ಕೆಲಸವನ್ನು ಮುಗಿಯುವವರೆಗೆ ಬಿಡದಿರುವ ಮನಃಸ್ಥಿತಿಯು ಧೃತಿಯಷ್ಟೆ. ಆದರದು ಏನೋ ಒಣಕಲು ಹಠಮಾರಿತನವೆನಿಸದೆ, ಸತ್ಕಾರ್ಯವನ್ನು ಸಸಂತೋಷವಾಗಿಯೇ ಸಾಧಿಸುವುದರ ಸುಲಕ್ಷಣವಿದು. ಕ್ಷಮೆಯೆಂದರೆ ಸಹನೆ: ನಮಗಾರಾದರೂ ಅಪಕಾರವೆಸಗಿದಾಗಲೂ ಅವರಿಗೆ ಪ್ರತ್ಯಪಕಾರ ಮಾಡದಿರುವುದು; ಹಾಗಾಗಲು ಮನಸ್ಸಿನ ಸಮಾಧಾನವೆಂಬುದು ಎಷ್ಟು ಆಳವಾಗಿರಬೇಕಾಗುತ್ತದೆಯೆಂದರೆ, ಅಪಕಾರಿಗೆ ಪ್ರತೀಕಾರ ಮಾಡಬೇಕೆಂಬ ಮತಿಯೇ ಜನಿಸದಿರುವಷ್ಟು!


ದಮವೆಂದರೆ ಮನಸ್ಸಿನ ಮೇಲಿನ ಹಿಡಿತ. ಹಿಡಿತದ ಕೆಡುವಿಕೆಯು ವಿಕಾರ; ವಿಕಾರಕ್ಕೆ ಕಾರಣವು ವಿಕಾರಹೇತು. ವಿಕಾರಹೇತುವಿದ್ದಾಗಲೂ ವಿಕಾರವೇರ್ಪಡದಿರುವುದು ದಮ. ಅಸ್ತೇಯವೆಂದರೆ ಕದಿಯದಿರುವಿಕೆ. ಮತ್ತೊಬ್ಬರ ಸೊತ್ತನ್ನು ನ್ಯಾಯಕ್ಕೆ ಹೊಂದದ ರೀತಿಯಲ್ಲಿ ಪಡೆದುಕೊಳ್ಳುವುದು ಸ್ತೇಯ; ಹಾಗಿಲ್ಲದಿದ್ದಲ್ಲಿ ಅದು ಅಸ್ತೇಯ. ಶೌಚವೆಂದರೆ ಶಾಸ್ತ್ರವಿಹಿತವಾದ ರೀತಿಯಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವಿಕೆ; ವಿಶೇಷತಃ ದೇಹಶುದ್ಧಿ.


ಇಂದ್ರಿಯನಿಗ್ರಹವೆಂದರೆ ಇಂದ್ರಿಯಗಳನ್ನು ತಡೆಯುವಿಕೆ. ಇಂದ್ರಿಯಗಳು ನಾನಾವಿಷಯಗಳನ್ನು ಬಯಸುತ್ತಲೇ ಇರುವುವು. ಅವುಗಳು ಬಯಸಿದ್ದೆಲ್ಲವೂ ಯುಕ್ತವೆಂದೇನಲ್ಲ; ಆದುದರಿಂದ ಇಂದ್ರಿಯಗಳನ್ನು ಅಕಾರ್ಯಗಳಲ್ಲಿ ತೊಡಗಲು ಬಿಡದಿರುವುದು ಇಂದ್ರಿಯನಿಗ್ರಹವೆನಿಸುತ್ತದೆ. ಧೀ ಎಂದರೆ ಬುದ್ಧಿಯೆಂದೇ ಪ್ರಸಿದ್ಧಾರ್ಥ; ಆದರಿಲ್ಲಿ ಶಾಸ್ತ್ರಗಳ ತತ್ತ್ವಜ್ಞಾನ ಎಂಬ ಅರ್ಥ. ಇನ್ನು ವಿದ್ಯೆಯೆಂದರೆ ಆತ್ಮಜ್ಞಾನವೇ. ಸತ್ಯವೆಂದರೆ ಯಥಾರ್ಥವನ್ನು, ಎಂದರೆ ಇರುವುದನ್ನು ಇರುವಂತೆಯೇ, ನುಡಿಯುವುದು. ಅಕ್ರೋಧವೆಂದರೆ, ಕ್ರೋಧಕ್ಕೆ ಕಾರಣವಿದ್ದಾಗಲೂ ಕೋಪವು ಉಂಟಾಗದಿರುವಿಕೆ.  ಈ ಹತ್ತಲ್ಲಿ ಹಲಕೆಲವು ಪರಸ್ಪರ ಹತ್ತಿರವೇ ಸರಿ. ಆದರೂ ಇವೆಲ್ಲವೂ ಸಹಜವಾಗಿ ಸಮಗ್ರವಾಗಿ ಹದವಾಗಿ ಸೇರಿರುವ ಒಳತಿರುಳೇ ಧರ್ಮ.


ಮೇಲೆ ಹೇಳಿದ ಹತ್ತಂಶಗಳಲ್ಲಿ ಒಂದೊಂದರಿಂದಲೂ ಮನುಷ್ಯನು ಸಾಕಷ್ಟು ಉದ್ಧಾರವಾಗಬಲ್ಲನು. ಉದ್ಧಾರವೆಂಬುದಕ್ಕೆ ಎರಡು ಅರ್ಥಗಳು: ಕೆಳಗೆ ಬಿದ್ದವನನ್ನು ಮೇಲೆತ್ತುವುದು ಎಂಬುದೊಂದು (ಉತ್+ಹಾರ). ಹಾಗೆಯೇ ಮೇಲಿರುವವನು ಕೆಳಗೆ ಬೀಳದಂತೆಯೂ ಜಾರದಂತೆಯೂ ಹಿಡಿದುಕೊಂಡಿರುವುದು (ಉತ್+ಧಾರ). ಶ್ರೀರಂಗಮಹಾಗುರುಗಳ ಕಲಶಪ್ರಾಯವಾದ ಸಾರೋಕ್ತಿ: "ಬಿದ್ದವನನ್ನು, ಬೀಳುತ್ತಿರುವವನನ್ನು, ಬೀಳುವವನನ್ನು ಮೇಲೆತ್ತುವುದೇ ಧರ್ಮ." ಹೀಗೆ ಇಂದೂ ಮುಂದೂ ಎಂದೂ ಕಾಪಾಡುವುದು ಧರ್ಮವೇ.


ಮತ್ತೊಂದು ವಿಷಯ. ಇವುಗಳೆಲ್ಲವನ್ನೂ ಮನುವು ಹೇಳಿರುವುದು ವಿಶೇಷವಾಗಿ ಬ್ರಾಹ್ಮಣನಿಗಾಗಿ. ಕ್ಷತ್ರಿಯನೇನಾದರೂ ಕ್ಷಮೆ-ಅಕ್ರೋಧಗಳನ್ನು ಅತಿಯಾಗಿ ಅಳವಡಿಸಿಕೊಂಡಲ್ಲಿ ದೇಶರಕ್ಷಣೆ-ಧರ್ಮರಕ್ಷಣೆಗಳನ್ನೆಂತು ಮಾಡಿಯಾನು? ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರಿಂದಲೇ, ಹಿಂದುಗಳು ಹೆಜ್ಜೆ ಹೆಜ್ಜೆಗೂ ಸೋಲನುಭವಿಸುವಂತಾಯಿತು, ತುರುಷ್ಕರ ಆಕ್ರಮಣದ ಕಾಲದಿಂದಲೂ.


ಸಂನ್ಯಾಸಿಗೆ ಮಾತ್ರವೇ ಸಲ್ಲತಕ್ಕ ಹಲವು ನಿಯಮಗಳನ್ನು ದೇಶವನ್ನಾಳುವವರಿಗೂ ಅನ್ವಯಿಸಹೊರಟ ಮಹಾತ್ಮಾಗಾಂಧಿಯವರು ಭಾರತೀಯಸಂಸ್ಕೃತಿಯ ಮರ್ಮವನ್ನರಿತವರೆಂದು ಹೇಳುವುದು ಮೇಲಿನ ಹಿನ್ನೆಲೆಯಲ್ಲಿ ಸ್ವಲ್ಪ ಕಷ್ಟವೇ ಸರಿ!

ಸೂಚನೆ:  20/11/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.